Monday, 13th January 2025

Anita Anand: ಕೆನಡಾ ಪ್ರಧಾನಿ ರೇಸ್‌ನಿಂದ ಅನಿತಾ ಆನಂದ್‌ ಔಟ್!

ಒಟ್ಟವಾ: ಜಸ್ಟಿನ್ ಟ್ರುಡೊ(Justin Trudeau) ಅವರು ಕೆನಡಾ(Canada) ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ನೂತನ ಪ್ರಧಾನಿ ಆಯ್ಕೆಗೆ ಲಿಬರಲ್‌ ಪಕ್ಷ ಭಾರೀ ತಯಾರಿ ನಡೆಸಿತ್ತು.ಈ ಮಧ್ಯೆ ಭಾರತೀಯ ಮೂಲದ ರಾಜಕಾರಣಿ ಹಾಗೂ ಪ್ರಸ್ತುತ ಕೆನಡಾದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವರಾದ ಅನಿತಾ ಆನಂದ್‌(Anita Anand) ಅವರು ಪ್ರಧಾನಿ ರೇಸ್‌ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಅನಿತಾ ಆನಂದ್‌ ರೇಸ್‌ನಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿಯಿದೆ.

ಕೆನಡಾ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ಅನಿತಾ ಆನಂದ್‌ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಇದೀಗ ಅವರು ರೇಸ್‌ನಿಂದ ಹೊರಗೆ ಬಿದ್ದಿದ್ದಾರೆ. ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವತಃ ಅನಿತಾ ಆನಂದ್‌ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಅನಿತಾ ಬರೆದುಕೊಂಡಿದ್ದು “ಜಸ್ಟಿನ್‌ ಟ್ರುಡೊ ಅವರು ರಾಜೀನಾಮೆ ನೀಡಿ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಾನು ಕೂಡ ಅವರನ್ನು ಅನುಸರಿಸುತ್ತೇನೆ. ಗಂಭೀರವಾಗಿ ಅಧ್ಯಯನ, ಬೋಧನೆ, ಸಂಶೋಧನೆ ಸಾರ್ವಜನಿಕ ನೀತಿ ವಿಶ್ಲೇಷಣೆಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ನಾನು ಮತ್ತೆ ವೃತ್ತಿಪರ ಜೀವನಕ್ಕೆ ಮರಳುತ್ತಿದ್ದೇನೆ” ಎಂದಿದ್ದಾರೆ. ಅನಿತಾ ಆನಂದ್ ಪ್ರಧಾನಿ ರೇಸ್‌ನಿಂದ ಅಷ್ಟೇ ಅಲ್ಲದೆ ಸಕ್ರಿಯ ರಾಜಕಾರಣದಿಂದಲೂ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.

ಕೆನಡಾದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರುಡೊ, ತಮ್ಮ 9 ವರ್ಷಗಳ ಸುದೀರ್ಘ ಆಡಳಿತವನ್ನು ಕೊನೆಗೊಳಿಸಿದ್ದಾರೆ. ಇದೀಗ ಟ್ರುಡೋ ಬದಲಾಗಿ ಕೆನಡಾದ ಪ್ರಧಾನಿ ಗದ್ದುಗೆಗೆ ಯಾರು ಏರಬಲ್ಲರು ಎಂಬ ಕುತೂಹಲದ ಪ್ರಶ್ನೆ ಎದುರಾಗಿದೆ. ಕೆನಡಾದ ಪ್ರಧಾನಿ ಸ್ಥಾನಕ್ಕೆ ಅನಿತಾ ಆನಂದ್, ಪಿಯರೆ ಪೊಲಿಯೆವ್ರೆ, ಕ್ರಿಸ್ಟಿಯಾ ಫ್ರೀಲ್ಯಾಂಡ್, ಮಾರ್ಕ್ ಕಾರ್ನಿ ಮುಂತಾದವರ ಹೆಸರುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿತ್ತು. ಭಾರತೀಯ ಮೂಲದ ಅನಿತಾ ಆನಂದ್‌ ಹೆಸರು ಪ್ರಮುಖವಾಗಿ ಕೇಳಿಬಂದಿದ್ದರಿಂದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಪ್ರಭಾವಶಾಲಿ ಆಡಳಿತ ಮತ್ತು ಸಾರ್ವಜನಿಕ ಸೇವಾ ಹಿನ್ನೆಲೆ ಹೊಂದಿರುವ 57 ವರ್ಷದ ಅನಿತಾ ಆನಂದ್‌, ವೃತ್ತಿಯಿಂದ ವಕೀಲರಾಗಿದ್ದಾರೆ. 2019ರಲ್ಲಿ ಕೆನಡಾದ ರಾಜಕೀಯಕ್ಕೆ ಪ್ರವೇಶಿಸಿದ ಅವರು ಸಮರ್ಥ ಮತ್ತು ಮಹತ್ವಾಕಾಂಕ್ಷೆಯ ಲಿಬರಲ್ ಪಕ್ಷದ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಪ್ರಧಾನಿ ಹುದ್ದೆಗೆ ಐವರು ಪ್ರಮುಖ ಸ್ಪರ್ಧಿಗಳಲ್ಲಿ ಅನಿತಾ ಆನಂದ್‌ ಹೆಸರು ಮುಂಚೂಣಿಯಲ್ಲಿತ್ತು. ಅವರು ರೇಸ್‌ನಿಂದ ಔಟ್‌ ಆಗಿದ್ದು ಕೆನಡಾದ ಮುಂದಿನ ಪ್ರಧಾನಿ ಯಾರು ಎಂಬ ಕುತೂಹಲ ಹಾಗೇ ಉಳಿದಿದೆ.

ಈ ಸುದ್ದಿಯನ್ನೂ ಓದಿ:Punjab Serial Killer: 18 ತಿಂಗಳಲ್ಲಿ 11 ಕೊಲೆ; ಸರಣಿ ಹಂತಕನ ಕೃತ್ಯ ಬಯಲಾಗಿದ್ದು ಹೇಗೆ?

Leave a Reply

Your email address will not be published. Required fields are marked *