Monday, 13th January 2025

Bomb Hoax: ರಾಮೇಶ್ವರಂ ಕೆಫೆಯಂತೆ ಮತ್ತಷ್ಟು ಬಾಂಬ್ ಸ್ಪೋಟದ ಬೆದರಿಕೆ ಕರೆ, ಎಫ್‌ಐಆರ್

police

ಬೆಂಗಳೂರು: ರಾಜಧಾನಿಯಲ್ಲಿ ಕಳೆದ ವರ್ಷ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಪೋಟಿಸಿದಂತೆ ಬೆಂಗಳೂರಿನ (Benagaluru news) ವಿವಿಧೆಡೆ ಬಾಂಬ್‌ ಸ್ಫೋಟ (Bomb Hoax) ನಡೆಸುವುದಾಗಿ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಜನವರಿ 26ರಂದು ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಪೋಟಿಸುವುದಾಗಿ ಅಪರಿಚಿತನ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಪಚಿತನ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣರಾಜೋತ್ಸವದ ಸಂದರ್ಭದಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟವಾಗಲಿದೆ ಎಂದು ಜನವರಿ 9ರಂದು ಸಂಜೆ 5:30ರ ಸುಮಾರಿಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೊಲ್ ರೂಮ್‌ಗೆ ಅಪರಿಚಿತನೊಬ್ಬ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈತ 6 ಜನರ ಹೆಸರು ಹಾಗೂ ವಿಳಾಸಗಳನ್ನು ತಿಳಿಸಿ ರಾಮೇಶ್ವರಂ ಕೆಫೆಯಲ್ಲಿ ಈ ಹಿಂದೆ ಬಾಂಬ್ ಸ್ಫೋಟವಾದಂತೆ ಆರು ಜನರು ಗಣರಾಜ್ಯೋತ್ಸವದ ದಿನ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸಲು ಉದ್ದೇಶಿಸಿದ್ದಾರೆ ಎಂದು ಹೇಳಿದ್ದಾನೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಎಂದು ಕಂಡುಬಂದಿದ್ದು, ಪೊಲೀಸ್ ಕಂಟ್ರೋಲ್ ರೂಮ್ ಪಿಎಸ್ಐ ಓರ್ವರು ನೀಡಿರುವ ದೂರಿನನ್ವಯ ಅಪರಿಚಿತನ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಫೋಟ, 7 ಮಂದಿಗೆ ಗಂಭೀರ ಗಾಯ

ಬೆಂಗಳೂರು: ದಾಸರಹಳ್ಳಿಯ ಚೊಕ್ಕಸಂದ್ರದ ಮನೆಯೊಂದರಲ್ಲಿ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡು (Cylender Blast) ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಿಲಿಂಡರ್‌ ಸ್ಫೋಟದಿಂದ ದಿಜುಧಾರ್ (34), ಅಂಜಲಿದಾಸ್ (31), ಮನುಶ್ರೀ (3), ಮನು(25), ತಿಪ್ಪೇರುದ್ರಸ್ವಾಮಿ (50), ಪಕ್ಕದ ಮನೆ ಶೋಭ (60) ಮತ್ತು ಕರೀಬುಲ್ಲ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ದಿಜುಧಾರ್​ ಎಂಬವರ ಮನೆಯಲ್ಲಿ ಗ್ಯಾಸ್​ ಸಿಲಿಂಡರ್​ ಸೋರಿಕೆಯಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಎದುರು ಮನೆಯವರಿಗೂ ಗಾಯವಾಗಿದೆ.

ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೀಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಗಸಂದ್ರದಲ್ಲಿನ ಆರ್​.ಎ ಫ್ಯಾಷನ್ ಗಾರ್ಮೆಂಟ್ಸ್​ನಲ್ಲಿ​​ ಶಾರ್ಟ್ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿದೆ. 40 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಬಟ್ಟೆ ಸೇರಿದಂತೆ ಹಲವು ವಸ್ತುಗಳು ಸುಟ್ಟು ಭಸ್ಮವಾಗಿವೆ. R.A.ಫ್ಯಾಷನ್ ಗಾರ್ಮೆಂಟ್ಸ್​​ ಅರುಣ್ ಮತ್ತು ಶಿವು ಎಂಬುವರಿಗೆ ಸೇರಿದೆ.

ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *