Monday, 13th January 2025

Mahakumbh: ಪಾಕಿಸ್ತಾನ ಕೂಡ ಪ್ರಭಾವಿತವಾಗಿದೆ; ಮಹಾ ಕುಂಭಮೇಳವನ್ನು ಹಾಡಿ ಹೊಗಳಿದ ಮುಸ್ಲಿಂ ಧರ್ಮಗುರು!

ಲಖನೌ: ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳ(Mahakumbh) ಉತ್ತರಪ್ರದೇಶದ(Uttar Pradesh) ಪ್ರಯಾಗ್‌ರಾಜ್(‌Prayagraj) ನಗರದ ಪವಿತ್ರ ತ್ರಿವೇಣಿ ಸಂಗಮದಲ್ಲಿ ಇಂದು ಬೆಳಗ್ಗೆ ಆರಂಭವಾಗಿದೆ.

ಈ ಮಹಾ ಕುಂಭಮೇಳವು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ. ಬರೋಬ್ಬರಿ ಹತ್ತು ಸಾವಿರ ಎಕರೆ ಭೂಮಿಯಲ್ಲಿ ಕುಂಭಮೇಳಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಂದಿನಿಂದ ಫೆ.26ರವರೆಗೆ ಅಂದರೆ 45 ದಿನಗಳು ಕುಂಭಮೇಳ ನಡೆಯಲಿದ್ದು, 45 ಕೋಟಿಗೂ ಹೆಚ್ಚು ಭಕ್ತಾಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಮಹಾಕುಂಭಮೇಳವನ್ನು ಕಣ್ತುಂಬಿಕೊಂಡಿರುವ ಮುಸ್ಲಿಂ ಧರ್ಮ ಗುರುಗಳು ವ್ಯವಸ್ಥೆಯ ಅಚ್ಚುಕಟ್ಟುತನವನ್ನು ಹಾಡಿ ಹೊಗಳಿದ್ದಾರೆ.

ಕುಂಭಮೇಳ ನಡೆಯುತ್ತಿರುವ ಅಷ್ಟೂ ಜಾಗ ಮುಸ್ಲಿಂ ವಕ್ಫ್‌ ಬೋರ್ಡಿಗೆ ಸೇರಿದ್ದು ಎಂಬ ಸಾಕಷ್ಟು ವಿವಾದಗಳ ಮಧ್ಯೆಯೇ ಕುಂಭಮೇಳವನ್ನು ಮುಸ್ಲಿಂ ಧರ್ಮ ಗುರುವೊಬ್ಬರು ಶ್ಲಾಘಿಸಿದ್ದಾರೆ. ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ( Barelvi) ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಪ್ರಶಂಸಿಸಿದ್ದು, ಭಕ್ತರಿಗೆ ಊಟ, ವಸತಿ ಮತ್ತು ಸ್ನಾನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದಿದ್ದಾರೆ.

ವಕ್ಫ್ ಭೂಮಿಯಲ್ಲಿ ಮಹಾಕುಂಭವನ್ನು ನಡೆಸಲಾಗುತ್ತಿದೆ ಎಂದು ಪ್ರತಿಪಾದಿಸಿದ್ದ ಪ್ರಮುಖ ಮುಸ್ಲಿಂ ಧರ್ಮಗುರು ಭಾನುವಾರ(ಜ.12) ಕುಂಭಮೇಳದ ವ್ಯವಸ್ಥೆಗಳನ್ನು ಶ್ಲಾಘಿಸಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಮೂಲಕ ಮಾತನಾಡಿರುವ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ “ಈ ಅದ್ಧೂರಿ ಕಾರ್ಯಕ್ರಮವು ದೇಶದ ಜನರನ್ನು ಮಾತ್ರವಲ್ಲದೆ ಇಡೀ ವಿಶ್ವವನ್ನು ಮೆಚ್ಚಿಸುತ್ತದೆ. ಭಾರತವನ್ನು ಆಗಾಗ್ಗೆ ಟೀಕಿಸುವ ಪಾಕಿಸ್ತಾನ ಕೂಡ ಮಹಾಕುಂಭದ ಸಿದ್ಧತೆಗಳನ್ನು ವಿಶೇಷವಾಗಿ ಪ್ರಶಂಸಿಸುತ್ತಿದೆ. ಯೋಗಿ ಆದಿತ್ಯನಾಥ್ ಅವರು ಭಕ್ತರಿಗೆ ಊಟ, ವಸತಿ, ಸ್ನಾನದ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಕಾರ್ಯಕ್ರಮದ ಭವ್ಯತೆ ಮತ್ತು ಸುಗಮ ನಿರ್ವಹಣೆಯು ಅವರ ದೂರದೃಷ್ಟಿಯ ಯೋಜನೆಯ ಫಲಿತಾಂಶ” ಎಂದು ಹೇಳಿದ್ದಾರೆ.

ಬರೇಲ್ವಿ ಅವರು ಒಂದು ವಾರದ ಹಿಂದೆ ವಕ್ಫ್ ಭೂಮಿಯ ಬಗ್ಗೆ ಹಕ್ಕು ಮಂಡಿಸಿದ್ದರು. ಬೃಹತ್ ‘ಘರ್ ವಾಪಸಿ’ ಉಪಕ್ರಮದ ಭಾಗವಾಗಿ ಮುಸ್ಲಿಮರ ಸಾಮೂಹಿಕ ಮತಾಂತರವನ್ನು ನಿಲ್ಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಧರ್ಮಗುರುಗಳ ಹೆಸರು ಹೇಳದೆ ಯೋಗಿ ಆದಿತ್ಯನಾಥ್, ವಕ್ಫ್ ಹೆಸರಿನಲ್ಲಿ ಕಬಳಿಸಿರುವ ಪ್ರತಿಯೊಂದು ಇಂಚು ಭೂಮಿಯನ್ನು ಮರಳಿ ಪಡೆಯಲಾಗುವುದು ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ:Ajith Kumar: ದುಬೈ ಕಾರ್‌ ರೇಸ್‌ನಲ್ಲಿ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ‌ ನಟ ಅಜಿತ್; ಪ್ರೀತಿಯ ಹೆಂಡತಿಗೆ ಮುತ್ತಿಟ್ಟು ಸಂಭ್ರಮ!

Leave a Reply

Your email address will not be published. Required fields are marked *