ಮುಂಬಯಿ: ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಸೋಮವಾರ ಬೆಳಗ್ಗೆ ನಷ್ಟಕ್ಕೀಡಾಗಿವೆ. ಬೆಳಗ್ಗೆ 11.30ರ (Stock market crash) ವೇಳೆಗೆ ಸೆನ್ಸೆಕ್ಸ್ 576 ಅಂಕ ಕಳೆದುಕೊಂಡು 76,791ಕ್ಕೆ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 204 ಅಂಕ ಕಳೆದುಕೊಂಡು 23,230ರಲ್ಲಿ ವಹಿವಾಟು ನಡೆಸುತ್ತಿತ್ತು. ಮತ್ತೊಂದು ಕಡೆ ಡಾಲರ್ ಎದುರು ರೂಪಾಯಿ ಮೊದಲ ಬಾರಿಗೆ 86 ರೂ.ಗೆ ಇಳಿದಿದೆ(Stock market crash).
ಬ್ಲೂ ಚಿಪ್ ಈಕ್ವಿಟಿ ಇಂಡೆಕ್ಸ್ ಕುಸಿತಕ್ಕೀಡಾಗಿದ್ದು, ಹೂಡಿಕೆದಾರರಿಗೆ 5 ಲಕ್ಷ ಕೋಟಿ ರೂ. ನಷ್ಟವಾಯಿತು. ಅಮೆರಿಕದಲ್ಲಿ ಉದ್ಯೋಗ ಪರಿಸ್ಥಿತಿ ಪ್ರಬಲವಾಗಿ ಚೇತರಿಸಿದ್ದು, ಬಡ್ಡಿ ದರ ಇಳಿಕೆಯ ಸಾಧ್ಯತೆ ಕ್ಷೀಣವಾಗಿದೆ. ಇದು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಗಳ ಮಾರಾಟವನ್ನು ಮುಂದುವರಿಸಿದ್ದರೆ, ಅಮೆರಿಕದ ಬಾಂಡ್‌ಗಳ ಉತ್ಪತ್ತಿ ಕೂಡ ವೃದ್ಧಿಸಿತು. ಕಚ್ಚಾ ತೈಲ ದರ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿತು. ಕಾರ್ಪೊರೇಟ್ ಕಂಪನಿಗಳ ತ್ರೈಮಾಸಿಕ ಫಲಿತಾಂಶ ದುರ್ಬಲವಾಗುವ ನಿರೀಕ್ಷೆಯೂ ಸೂಚ್ಯಂಕ ಇಳಿಕೆಗೆ ಕಾರಣವಾಯಿತು. ಕಳೆದ ನಾಲ್ಕು ವರ್ಷಗಳಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿದ್ದ ಕಾರ್ಪೊರೇಟ್ ಕಂಪನಿಗಳ ಆದಾಯ ಕಳೆದ ಆರು ತಿಂಗಳಿನಿಂದ ಇಳಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ ಕಳೆದ ಜುಲೈನಿಂದ 23% ಇಳಿಕೆಯಾಗಿದೆ. ರಿಟೇಲ್ ಬಿಸಿನೆಸ್ ದುರ್ಬಲವಾಗಿರುವುದು ಇದಕ್ಕೆ ಕಾರಣ. ಈಗ 2020ರ ಕೋವಿಡ್ ಕಾಲದ ಕೆಳ ಮಟ್ಟಕ್ಕೆ ದರ ಇಳಿದಿದೆ. ಹೀಗಿದ್ದರೂ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ದರ ಏರಿಕೆಯಾಗುವ ವಿಶ್ವಾಸವನ್ನು ರೇಟಿಂಗ್ ಏಜೆನ್ಸಿಗಳು ವ್ಯಕ್ತಪಡಿಸಿವೆ.
ಈ ನಡುವೆ ಸ್ಟ್ಯಾಂಡರ್ಡ್ ಗ್ಲಾಸ್ ಲೈನಿಂಗ್ ಕಂಪನಿಯ ಷೇರು ಸೋಮವಾರ ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್ ಆಗಿದ್ದು, ಐಪಿಒ ದರಕ್ಕಿಂತ (140 ರೂ.) 25% ಹೆಚ್ಚಿನ ದರದಲ್ಲಿ, ಅಂದರೆ 176ರೂ.ಗೆ ಬಿಎಸ್‌ಇನಲ್ಲಿ ಲಿಸ್ಟ್ ಆಗಿದೆ. ಎನ್‌ಎಸ್‌ಇನಲ್ಲಿ 172 ರೂ.ಗೆ ಲಿಸ್ಟ್ ಆಗಿದೆ. ಇದರೊಂದಿಗೆ ಐಪಿಒದಲ್ಲಿ ಷೇರು ಗಳಿಸಿದವರಿಗೆ ಲಾಭವಾಗಿದೆ.
ಲಿಸ್ಟಿಂಗ್‌ಗೆ ಮುನ್ನ ಗ್ರೇ ಮಾರ್ಕೆಟ್‌ನಲ್ಲಿ ಷೇರಿನ ಜಿಎಂಪಿ 50 ರೂ. ಇತ್ತು. ಕಂಪನಿಯು 200 ಕೋಟಿ ರೂ.ಗಳ ಆಫರ್ ಫಾರ್ ಸೇಲ್ ಮತ್ತು ಹೊಸತಾಗಿ 210 ಕೋಟಿ ರೂ. ಮೌಲ್ಯದ ಈಕ್ವಿಟಿ ಷೇರು ಮಾರಾಟ ಮಾಡಿತ್ತು.
ಡಿ-ಮಾರ್ಟ್ ಷೇರು ದರ 6% ಇಳಿಕೆ: ಡಿ-ಮಾರ್ಟ್ ಕಂಪನಿಯ ಪ್ರವರ್ತಕ ಸಂಸ್ಥೆಯಾದ ಅವೆನ್ಯೂ ಸೂಪರ್‌ಮಾರ್ಟ್‌ನ ಷೇರು ದರದಲ್ಲಿ 5.7% ಇಳಿಕೆಯಾಗಿದೆ. ಕಂಪನಿಯ ಮೂರನೇ ತ್ರೈಮಾಸಿಕ ಫಲಿತಾಂಶ ದುರ್ಬಲವಾಗಿರುವುದು ಇದಕ್ಕೆ ಕಾರಣ. ಮೂರನೇ ತ್ರೈಮಾಸಿಕದಲ್ಲಿ ಕಂಪನಿ 785 ಕೋಟಿ ರೂ. ಲಾಭ ಗಳಿಸಿದೆ. 15,656 ಕೋಟಿ ರೂ. ಆದಾಯ ಗಳಿಸಿದೆ. ಸ್ಮಾಲ್ ಮತ್ತು ಮಿಡ್ ಕ್ಯಾಪ್ ವಲಯದ ಷೇರುಗಳ ದರ ಇಳಿದಿತ್ತು.
ಈ ಸುದ್ದಿಯನ್ನೂ ಓದಿ: Market Outlook: ವಿಶಾಲ್ ಮೆಗಾ ಮಾರ್ಟ್ ಐಪಿಒ; ಸ್ಟಾಕ್ ಮಾರ್ಕೆಟ್ ಹೈ ಜಂಪ್?