ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ಮೊದಲ ಬಾರಿಗೆ ಕಾಶ್ಮೀರದಲ್ಲಿ ಬಿಜೆಪಿ ಖಾತೆ ತೆರೆದಿದೆ. ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ) ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಕಾಕ್‌ಪೋರಾದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ಹಾ ಲತೀಫ್, ಖೋನ್‌ಮೋಹ್ 2ನಲ್ಲಿ ಇಜಾಜ್ ಹುಸೇನ್, ತುಲೈಲ್ ಕ್ಷೇತ್ರದಲ್ಲಿ ಇಜಾಜ್ ಅಹ್ಮದ್ ಖಾನ್ ಜಯಭೇರಿ ಬಾರಿಸಿದ್ದಾರೆ. 280ಕ್ಷೇತ್ರಗಳ ಪೈಕಿ ನ್ಯಾಷನಲ್‌ಕಾನ್ಫರೆನ್ಸ್ ವರಿಷ್ಠ ಫಾರೂಕ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲರೇಷನ್ (ಪಿಎಜಿಡಿ)103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ 75, ಕಾಂಗ್ರೆಸ್ 24, ಅಪ್ನಿ ಪಾರ್ಟಿ 10, ಇತರರು 66 ಕ್ಷೇತ್ರಗಳಲ್ಲಿ ಮುಂದಿವೆ.
ಜಮ್ಮು ಪ್ರಾಂತ್ಯದಲ್ಲಿ, ಬಿಜೆಪಿಯು 73 ಸೀಟುಗಳ ಮುನ್ನಡೆ ಕಾಯ್ದುಕೊಂಡಿದ್ದರೆ, ಗುಪ್ಕಾರ್ ಮೈತ್ರಿ 37 ರಲ್ಲಿ ಗೆಲುವು ಸಾಧಿಸಿದೆ. ಕಾಶ್ಮೀರದಲ್ಲಿ, ಗುಪ್ಕಾರ್ ಬರೋಬ್ಬರಿ 71 ಸೀಟುಗಳಲ್ಲಿ ಮುಂದಿದ್ದು, ಬಿಜೆಪಿ 3 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.