Friday, 22nd November 2024

ಮೊಹಮ್ಮದ್ ಶಮಿಗೆ ಆರು ವಾರ ರೆಸ್ಟ್, ಟೀಂ ಇಂಡಿಯಾಗೆ ಆಘಾತ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯದ ಸಮಸ್ಯೆಗೊಳಗಾಗಿರುವ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಆರು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ. ಈ ಬೆಳವಣಿಗೆ ಟೀಂ ಇಂಡಿಯಾಕ್ಕೆ ಆಘಾತವನ್ನುಂಟು ಮಾಡಿದೆ.

ಆಸೀಸ್‌ ಮಾತ್ರವಲ್ಲ, ಇಂಗ್ಲೆಂಡ್ ವಿರುದ್ಧ ಫೆಬ್ರವರಿನಲ್ಲಿ ತವರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಲಭ್ಯರಾಗುವ ಸಾಧ್ಯತೆ ಕ್ಷೀಣವೆನಿಸಿದೆ.

ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ ಪ್ಯಾಟ್ ಕಮಿನ್ಸ್ ದಾಳಿ ಎದುರಿಸುವಲ್ಲಿ ವಿಫಲರಾಗಿದ್ದ ಮೊಹಮ್ಮದ್ ಶಮಿ ಮುಂಗೈಗೆ ಗಾಯ ಮಾಡಿಕೊಂಡಿದ್ದರು. ಬಳಿಕ ಸ್ಕ್ಯಾನ್ ವೇಳೆಯಲ್ಲಿ ಫ್ರಾಕ್ಚರ್ ಆಗಿರುವುದು ಕಂಡುಬಂದಿತ್ತು.

ಆಸ್ಟ್ರೇಲಿಯಾ ವಿರುದ್ಧದ ಉಳಿದಿರುವ ಮೂರು ಪಂದ್ಯಗಳಿಗೆ ಅಲಭ್ಯವಾಗಿರುವ ಮೊಹಮ್ಮದ್ ಶಮಿ ಮಂಗಳವಾರ ತಾಯ್ನಾಡಿಗೆ ಮರಳಿದ್ದರು. ಮೊಹಮ್ಮದ್ ಶಮಿ ವಿಶ್ರಾಂತಿ ಹಾಗೂ ಪುನಶ್ಚೇತನವು ಆರು ವಾರ ತೆಗೆದುಕೊಳ್ಳಲಿರುವುದರಿಂದ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡುವುದು ಅನುಮಾನವೆನಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.

ಇಂಗ್ಲೆಂಡ್ ವಿರುದ್ದದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನ ಚಿದಂಬರಂ ಮೈದಾನದಲ್ಲಿ ಫೆಬ್ರವರಿ 5ರಂದು ಆರಂಭವಾಗಲಿದೆ.