Friday, 22nd November 2024

ಶಿಲಾ ಬೆಟ್ಟದ ಸೊಬಗು ಪುರಾತನ ಹೆಜ್ಜೆಗಳ ಬೆರಗು

ಶಶಿಧರ ಹಾಲಾಡಿ

ಜನರಿಗೆ ಸಾಕಷ್ಟು ಪರಿಚಿತ ಎನಿಸಿರುವ ರಾಮದೇವರ ಬೆಟ್ಟದಲ್ಲಿ ಹುಡುಕುತ್ತಾ ಹೋದರೆ ಹಲವು ಕುತೂಹಲಕಾರಿ
ಸಂಗತಿಗಳು ಗಮನ ಸೆಳೆಯುತ್ತವೆ, ಆ ಸುತ್ತಲಿನ ಬೃಹತ್ ಬಂಡೆಗಳು ಬೆರಗು ಮೂಡಿಸುತ್ತವೆ.

ಆಕರ್ಷಕ ವಿನ್ಯಾಸದ ಬೃಹತ್ ಬಂಡೆಗಳು, ಬೆಟ್ಟ, ಕುರುಚಲು ಕಾಡು, ಹುಲ್ಲು ಹೂಗಳು, ಮಧ್ಯೆ ಮಧ್ಯೆ ದೊಡ್ಡ ಮರಗಳು, ಬಳ್ಳಿ, ವಿಶಾಲ ಭೂ ದೃಶ್ಯ, ಐತಿಹಾಸಿಕ ಕೋಟೆಯ ಸಾಲು, ಶುದ್ಧ ಗಾಳಿ, ಕಡಿದಾದ ಮೆಟ್ಟಿಲುಗಳು, ಪೌರಾಣಿಕ ಹಿನ್ನೆಲೆಯ ದೇಗುಲಗಳು, ಮಧ್ಯಮ ಶ್ರಮದ ಚಾರಣ – ಇವೆಲ್ಲ ವನ್ನೂ ಕಂಡು ಅನುಭವಿಸಲು ರಾಮದೇವರ ಬೆಟ್ಟ ಸೂಕ್ತ ತಾಣ.

ಬೆಂಗಳೂರಿನಿಂದ ಒಂದು ಗಂಟೆಯ ಪಯಣ, ರಾಮನಗರ ಪಟ್ಟಣದ ಪಕ್ಕ ದಲ್ಲೇ ಎಂಬಂತೆ ಈ ಬೆಟ್ಟವಿರುವುದರಿಂದ, ವಾರಾಂತ್ಯ ದಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರ ದಂಡು. ಶೋಲೆ ಸಿನಿಮಾದ ಶೂಟಿಂಗ್ ಈ ಬೆಟ್ಟದ ಸರಹದ್ದಿನಲ್ಲೇ ನಡೆದಿದ್ದು, ಆ ವಿಚಾರ ಸಹ ಪ್ರವಾಸಿ ಆಕರ್ಷಣೆ ಎನಿಸಿದೆ. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತರದ ಕುರಿತು ಸಾಕಷ್ಟು ಐತಿಹ್ಯಗಳು ಈ ಬೆಟ್ಟದ ತುಂಬಾ ತುಂಬಿಕೊಂಡಿವೆ!

ಆಂಜನೇಯನ ಐದು ಪೂಜಾ ಸ್ಥಳಗಳು, ಪಟ್ಟಾಭಿರಾಮ, ರಾಮಲಿಂಗೇಶ್ವರ ಮೊದಲಾದ ದೇವಾಲಯಗಳು ಇಲ್ಲಿವೆ. ಸುತ್ತಮುತ್ತ ಲಿನ ಗ್ರಾಮಸ್ಥರು ಅಕ್ಷರಶಃ ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಿರುವ ಈ ಪೂಜಾಸ್ಥಳಗಳು, ಈಚಿನ ದಶಕಗಳಲ್ಲಿ ಸಣ್ಣ ಪ್ರಮಾಣದ ಆಧುನಿಕ ನಿರ್ಮಾಣಕ್ಕೆ ತಮ್ಮನ್ನು ಒಡ್ಡಿಕೊಂಡಿವೆ. ಸುತ್ತಲಿನ ಹಳ್ಳಿಯವರ ಜನಪ್ರಿಯ ದೇವತೆಗಳು ಈ ಬೆಟ್ಟಸಾಲಿನಲ್ಲಿ ವಾಸವಾಗಿರುವುದರಿಂದಲೋ ಏನೊ, ದೇಗುಲದ ಸಮಿತಿಯವರು ಬಂದವರಿಗೆಲ್ಲಾ ಮಧ್ಯಾಹ್ನದ ಊಟವನ್ನು ಮುಫತ್ತಾಗಿ ನೀಡುತ್ತಿದ್ದಾರೆ!

ಬೆಟ್ಟ, ಕಾಡು ನೋಡಲು ಬಂದವರಿಗೆ ಅದೊಂದು ಬೋನಸ್. ಬೆಟ್ಟವೇರಲು ಮೆಟ್ಟಿಲುಗಳನ್ನು ಹತ್ತುತ್ತಾ, ಸಣ್ಣ ಪ್ರಮಾಣದ
ಚಾರಣ ಮಾಡಬೇಕು. ದೇವಾಲಯಗಳ ಬಳಿ ಇರುವ ಪುರಾತನ ದೊಣೆ ಅಥವಾ ನೀರಿನ ಸಂಗ್ರಹತಾಣ ಕುತೂಹಲಕಾರಿ. ಎರಡು ಬೃಹತ್ ಬಂಡೆಗಳ ನಡುವೆ ನೈಸರ್ಗಿಕವಾಗಿ ನಿರ್ಮಾಣಗೊಂಡಂತೆ ಕಾಣುವ ಆ ಕೊಳದಲ್ಲಿ ಸಂಗ್ರಹ ವಾಗುವ ನೀರು, ಸಾವಿರಾರು ವರ್ಷಗಳಿಂದ ಜನರ ದಾಹ ತಣಿಸಿರಲೇ ಬೇಕು. ಜತೆಗೆ, ಅಲ್ಲಿನ ಕಾಡು ಪ್ರಾಣಿಗಳಿಗೂ ಅದು ಪ್ರಮುಖ ನೀರಾಶ್ರಯ. ಆದರೆ, ಅದೇಕೋ ಈ ಪುರಾತನ ಕೊಳಕ್ಕೆ ಈಚೆಗೆ ತಂತಿಬೇಲಿ ಹಾಕಿಸಿದ್ದು, ಕಾಡು ಪ್ರಾಣಿಗಳ ಏಕೈಕ ನೀರಾಶ್ರಯವನ್ನು ಬೇಲಿಯ ನಡುವೆ ಬಂಧಿಸಿಟ್ಟಿದ್ದಾರೆ!

ರಾಮನ ಹೆಜ್ಜೆ ಗುರುತು
ರಾಮ ದೇವರ ಬೆಟ್ಟವು ಮೊದಮೊದಲಿನ ದಿನಗಳಲ್ಲಿ ಜನರ ಗಮನ ಸೆಳೆದದ್ದು ಬಹುಷಃ ಆ ಬೆಟ್ಟದಲ್ಲಿದ್ದ ರಾಮ, ಸೀತೆಯರದು ಎನ್ನಲಾದ ಹೆಜ್ಜೆ ಗುರುತುಗಳಿಂದಲೇ ಇರಬೇಕು. ಈಗಿನ ದೇಗುಲದಿಂದ ಎರಡು ಕಿಮೀ ದೂರದಲ್ಲಿ, ಬಂಡೆಯ ಮೇಲೆ ನಾಲ್ಕು ಹೆಜ್ಜೆ ಗುರುತುಗಳಿವೆ. ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡ ಶಿಲಾಪದರದ ಮೇಲೆ ಕಂಡು ಬರುವ ಈ ಎರಡು ಜೊತೆ ಹೆಜ್ಜೆಗುರುತುಗಳು ಪುರಾತನ ಮಾನವನಲ್ಲಿ ಬೆರಗು ಮೂಡಿಸಿ, ಪೂಜ್ಯ ಎನಿಸಿರಬೇಕು. ಎರಡು ಸುತ್ತು ಕೋಟೆ ದಾಟಿ, ಕುರುಚಲು ಕಾಡಿನಲ್ಲಿ ಕಡಿದಾಗಿ ಸಾಗುವ ನಿರ್ಜನ ದಾರಿಯಲ್ಲಿ ಕೆಳಗಿಳಿದರೆ, ಈ ಪುರಾತನ ಪಾದುಕೆಗಳಿರುವ ಸ್ಥಳ ತಲುಪಬಹುದು.

ಭೂಮಿಯ ಮತ್ತು ಜೀವವಿಕಾಸದ ಕಾಲಮಾನದ ಗಣನೆಯಲ್ಲಿ ವಿಶ್ಲೇಷಿಸಿದರೆ, ಈ ಶಿಲಾಪಾದುಕೆಗಳು ತರ್ಕಕ್ಕೆ ಸಿಗದ ರಹಸ್ಯ. ಅದೆಷ್ಟೋ ಕೋಟಿ ವರ್ಷಗಳ ಹಿಂದೆ ಘನೀಭೂತಗೊಂಡು, ಬಂಡೆಯಾಗಿ ಮಾರ್ಪಟ್ಟ ಲಾವಾ ರಸದ ಮೇಲೆ, ತಾರ್ಕಿಕವಾಗಿ ಮನುಷ್ಯನ ಹೆಜ್ಜೆಗುರುತು ಮೂಡಲು ಸಾಧ್ಯವೇ ಇಲ್ಲ. ಏಕೆಂದರೆ, ಮನುಷ್ಯ ಈ ಭೂಮಿಯಲ್ಲಿ ವಿಕಸನಗೊಂಡು ಕೇವಲ ಎರಡರಿಂದ ಮೂರು ಲಕ್ಷ ವರ್ಷಗಳೂ ದಾಟಿಲ್ಲ.

ಕ್ಲೋಸ್‌ಪೇಟೆ ಗ್ರಾನೈಟ್ ಸುಮಾರು 2450 ಮಿಲಿಯ ವರ್ಷಗಳ ಹಿಂದೆ ರೂಪುಗೊಂಡಿದೆ! ಇಂತಹ ನಿಗೂಢ ಶಿಲಾ ಹೆಜ್ಜೆಗುರುತು ಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಕಂಡು ಬಂದಿವೆ. ಅಂತಹ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿ, ಪೂಜ್ಯ ಭಾವನೆಯಿಂದ ನೋಡಿದ್ದರು. ನಮ್ಮ ಹಿಂದಿನವರು. ರಾಮದೇವರ ಬೆಟ್ಟದಲ್ಲಿರುವ ಶಿಲಾ ಹೆಜ್ಜೆಗುರುತುಗಳು ಇರುವ ಜಾಗವು ಕಾಡು ಪ್ರದೇಶ ಮತ್ತು ನಿರ್ಜನ ಎನಿಸಿದ್ದು, ಅಲ್ಲಿಗೆ ಹೋಗುವವರು ವೈಯಕ್ತಿಕ ರಕ್ಷಣೆಯತ್ತ ಹೆಚ್ಚಿನ ಗಮನವಹಿಸಿವುದು ಅತಿ ಅಗತ್ಯ.

ಕೊನೆಯ ಕೋಡುಗಲ್ಲು
ರಾಮದೇವರ ಬೆಟ್ಟದ ದೇಗುಲದ ಹಿಂಭಾಗದಲ್ಲಿ ಹತ್ತಿ ಹೋದರೆ, ಕೋಟೆಯ ಬುರುಜಿ ನಂತಹ ರಚನೆ ದೊರೆತು, ಅಲ್ಲಿಂದಾಚೆಗೆ ಕಡಿದಾದ ಕಲ್ಲು ಎದುರಾಗುತ್ತದೆ. ಅದನ್ನು ಏರಲು ಮೆಟ್ಟಿಲಿನ ರೀತಿ ರಚನೆಯನ್ನು ಆ ಕಲ್ಲಿನ ಮೇಲೆ ನೂರಾರು ವರ್ಷಗಳ ಹಿಂದೆಯೇ ಕೆತ್ತಲಾಗಿದ್ದು, ಅದರಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಮೇಲೇರಬಹುದು.

ಈಚೆಗೆ ಕಬ್ಬಿಣದ ಸರಳಿನ ಆಧಾರವನ್ನೂ ಅಳವಡಿಸಿದ್ದಾರೆ. ತುಸು ಎಚ್ಚರಿಕೆಯಿಂದ ತುದಿಯನ್ನು ತಲುಪಿದಾಗ ಕಾಣುವ ನೋಟ ವಿಹಂಗಮ. ಅಲ್ಲಿರುವ ಐತಿಹಾಸಿಕ ನೀರಿನ ಸಂಗ್ರಹಾಲಯದ ಅವಶೇಷಗಳನ್ನು ಕಂಡರೆ, ಈ ಬೆಟ್ಟ ಪ್ರಮುಖ ಕಾವಲು ಗೋಪುರದ ಸ್ವರೂಪವನ್ನು ಪಡೆದಿತ್ತು ಎನ್ನಬಹುದು. ಅಲ್ಲಿಂದ ಕಾಣುವ ನೋಟ, ಅನತಿ ದೂರದಲ್ಲಿ ಸುತ್ತಲೂ ಹರಡಿರುವ ಹಲವು ಬೃಹತ್ ಬಂಡೆಗಳು, ಬೀಸುವ ತಂಗಾಳಿ ಎಲ್ಲವೂ ಮನಸ್ಸಿಗೆ ಹೊಸತನ ಸ್ಪರ್ಷವನ್ನು ನೀಡುವುದು ನಿಜ.

ರಣಹದ್ದುಗಳಿಗೆ ರಾಮನ ರಕ್ಷಣೆ
ರಾಮದೇವರ ಬೆಟ್ಟ ಒಂದು ಪುರಾತನ ಪೂಜ್ಯ ಸ್ಥಳ. ಆದರೆ ಕಳೆದ ಆರೆಂಟು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು
ಈ ದೇವಾಲಯಕ್ಕೆ ಸಾಗುವ ದಾರಿಗೆ ಅಡ್ಡಲಾಗಿ ಒಂದು ಗೇಟ್ ಅಳವಡಿಸಿ, ಚೆಕ್‌ಪೋಸ್ಟ್‌ ನಿರ್ಮಿಸಿ, ಬೆಟ್ಟ ಏರುವ ಎಲ್ಲರಿಂದಲೂ ರು.25/- ಶುಲ್ಕ ವಸೂಲಿ ಮಾಡುತ್ತಿದ್ದಾರೆ!

ಕಾರಣ? ಈ ಬೆಟ್ಟ ಮತ್ತು ಸುತ್ತಮುತ್ತಲಿನ 800 ಪ್ಲಸ್ ಎಕರೆ ಪ್ರದೇಶವನ್ನು ‘ರಾಮದೇವರ ಬೆಟ್ಟ ರಣಹದ್ದು ವನ್ಯಜೀವಿ ಧಾಮ’ ಎಂದು ಗುರುತಿಸಲಾಗಿದ್ದು, ಇಂದು ದೇಗುಲದ ಭಕ್ತರಿಂದಲೂ ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಅದೇನೇ ಇದ್ದರೂ, ಅಳಿವಿನಂಚಿನಲ್ಲಿರುವ ರಣಹದ್ದು ಸಂತತಿಗೆ, ರಾಮನ ಹೆಸರಿನಲ್ಲಿ ರಕ್ಷಣೆ ನೀಡಲು ಸರಕಾರ ಮನಸ್ಸು ಮಾಡಿದ್ದು ಸ್ತುತ್ಯರ್ಹ. ಕೆಲವೇ ದಶಕಗಳ ಹಿಂದೆ (1980) ಸಾವಿರಾರು ಸಂಖ್ಯೆಯಲ್ಲಿದ್ದ ರಣಹದ್ದುಗಳು, 2010ರ ಸಮಯಕ್ಕೆ ಕೇವಲ ಹತ್ತಿಪ್ಪತ್ತು ಮಾತ್ರ ಉಳಿದುಕೊಂಡಿದ್ದವು.

ರಣಹದ್ದುಗಳ ಈ ಭೀಕರ ಮಾರಣಹೋಮಕ್ಕೆ ಮನುಷ್ಯನೇ ನೇರ ಕಾರಣ. ರಣಹದ್ದು ಮರಿ ಮಾಡುವ ಕಾಡುಪ್ರದೇಶಗಳಲ್ಲಿ ಕುರಿ, ಮೇಕೆ ಮೇಯಿಸಿ ತೊಂದರೆ ನೀಡಿದ್ದು ಒಂದೆಡೆಯಾದರೆ, ಸಾಕುಪ್ರಾಣಿಗಳಿಗೆ ಪಶು ಇಲಾಖೆಯ ಮಾರ್ಗದರ್ಶನದಲ್ಲಿ
ನೀಡುವ ಔಷಧ ‘ಡಿಕ್ಲೋಫೆನಾಕ್’ನಿಂದ, ರಣಹದ್ದುಗಳು ನಿರ್ನಾಮದ ಅಂಚಿಗೆ ತಲುಪಿದವು!

ಪಶುವೈದ್ಯರು ಪಶುಗಳಿಗೆ ನೀಡುವ ಡೆಕ್ಲೋಫೆನಾಕ್ ಅಂಶ ಅವುಗಳ ದೇಹದಲ್ಲಿ ಉಳಿದುಕೊಂಡು, ಅಂತಹ ಪಶುಗಳು ಸತ್ತಾಗ,
ಅದನ್ನು ತಿನ್ನುವ ರಣಹದ್ದುಗಳಿಗೆ ಆ ರಸಾಯನಿಕ ವಿಷವಾಗಿ ಮಾರ್ಪಟ್ಟು, ಆ ಹಕ್ಕಿಗಳು ಅವನತಿಯ ಹಾದಿ ಹಿಡಿದವು.
2012ರಲ್ಲಿ ಇಲ್ಲಿ ರಣಹದ್ದುಗಳ ‘ರಕ್ಷಣಾ ಧಾಮ’ ರೂಪುಗೊಂಡು, ಇಡೀ ಬೆಟ್ಟಪ್ರದೇಶದಲ್ಲಿ ಅವುಗಳಿಗೆ ರಕ್ಷಣೆ ದೊರಕಿತು. ಆದರೆ, ಹತ್ತಾರು ಕಿಮೀ ವ್ಯಾಪ್ತಿಯಲ್ಲಿ ಸತ್ತ ಸಾಕುಪ್ರಾಣಿಗಳನ್ನು ತಿನ್ನುವ ಆ ಬಡಪಾಯಿ ರಣಹದ್ದುಗಳಿಗೆ, ಡಿಕ್ಲೊಫೆನಾಕ್ ಎಂಬ ನೋವು ನಿವಾರಕ ರಸಾಯನಿಕವು ಇಂದಿಗೂ ಕಾರ್ಕೋಟಕ ವಿಷವಾಗಿ ಪರಿಣಮಿಸುತ್ತಿದೆ.

ಆದ್ದರಿಂದ, ಈ ಬೆಟ್ಟಗಳಲ್ಲಿ ರಕ್ಷಣೆ ಇದ್ದರೂ, ಅವುಗಳ ಸಂತಾನಾಭಿವೃದ್ಧಿ ಗಮನಾರ್ಹ ಮಟ್ಟದಲ್ಲಿ ಆಗಿಲ್ಲ. ಆದರೂ, ರಾಮ ದೇಗುಲದ ವ್ಯಾಪ್ತಿಯಲ್ಲಿ, ಅರಣ್ಯ ಇಲಾಖೆಯು ಈ ಹಕ್ಕಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬುದೇ ತುಸು ನೆಮ್ಮದಿ ನೀಡುವ ಸಂಗತಿ.

ಯಾರ ನಿರ್ಮಾಣ ಈ ಕೋಟೆ?
ರಾಮ ದೇವರ ಬೆಟ್ಟ ಏರುವಾಗ ಪುರಾತನ ಕಲ್ಲಿನ ಕೋಟೆ ಕಾಣಸಿಗುತ್ತದೆ. ನಾಲ್ಕಾಾರು ಸುತ್ತು ರಕ್ಷಣೆ ಹೊಂದಿರುವ ಈ ಕೋಟೆಗೆ ಅಲ್ಲ ಲ್ಲಿ ಬಾಗಿಲುಗಳು, ಬುರುಜುಗಳೂ ಇವೆ. ಕೆಂಪೇಗೌಡರ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಹೇಳಿದರೂ, ಯಾವ ಪಾಳೆಗಾರ ನಿರ್ಮಿಸಿದ ಎಂಬುದು ಸ್ಪಷ್ಟವಿಲ್ಲ.

ಹೊರನೋಟಕ್ಕೆ ಈ ಕೋಟೆ ಇನ್ನೂ ಹಳೆಯ ಕಾಲದ್ದು ಎಂಬಂತೆ ಗೋಚರವಾಗುತ್ತಿದೆ. ಆದರೆ, ಅದೇಕೋ ನಮ್ಮವರಿಗೆ ಇತಿಹಾಸದ ವಿವರಗಳನ್ನು ದಾಖಲಿಸುವ ಅಭಿರುಚಿ ಇಲ್ಲ ಎಂದೇ ಪ್ರಚಾರವಾಗಿದೆ. ಇಂತಹ ಕುತೂಹಲಕಾರಿ ನಿರ್ಮಾಣಗಳ ಐತಿಹಾಸಿಕ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುತ್ತಾ, ಪ್ರವಾಸ, ಚಾರಣ ಮಾಡಿದರೆ, ಇನ್ನಷ್ಟು ಮಜಾ ದೊರೆಯುತ್ತದೆ, ಅಲ್ಲವೆ?