Wednesday, 20th November 2024

ಫುಟ್ಬಾಲಿನ ಮೆಸ್‌ಮರೈಸಿಂಗ್‌ ಮೆಸ್ಸಿ

ವಿಶೇಷ ಲೇಖನ: ವಿರಾಜ್.ಕೆ.ಅಣಜಿ

ತನ್ನ ಇಚ್ಛಾಶಕ್ತಿಯ ಬಲದಿಂದ ದೇಹದ ಬಲಹೀನತೆಯನ್ನು ಮೆಟ್ಟಿನಿಂತು, ಜಗತ್ತೇ ಎದ್ದು ತನಗೆ ಚಪ್ಪಾಳೆ ಹೊಡೆಯು ವಂತೆ ಮಾಡಿದ ಮೆಸ್ಸಿಯ ಸಾಧನೆ ನಿಜಕ್ಕೂ ಮಿರ್ಯಾಕಲ್

ಫುಟ್ಬಾಲ್ ಆಟದಲ್ಲಿ ಫಾರ್ವಡ್ ಪ್ಲೇಯರ್ ಎಂಬ ಆಟಗಾರರಿರುತ್ತಾರೆ. ಎದುರಾಳಿ ತಂಡದ ಗೋಲ್ ಬಾಕ್ಸ್‌ ಸಮೀಪವೇ
ಅವರನ್ನು ಪ್ಲೇಸ್ ಮಾಡಲಾಗಿರುತ್ತದೆ. ಈ ಆಟಗಾರರಿಗೆ ಎಲ್ಲಿಲ್ಲದ ಮಹತ್ವ. ಏಕೆಂದರೆ, ಎದುರಾಳಿಯ ‘ಕಾಲ್ತಪ್ಪಿಸಿ’ ತಂದ ಚೆಂಡನ್ನು ಇದೇ ಪ್ಲೇಯರ್ ಗಳು ಗೋಲ್ ಡಬ್ಬಿಗೆ ಸೇರಿಸುತ್ತಾರೆ.

ಆದರಿದು ಹೇಳಿದಷ್ಟು ಸುಲಭವೂ ಅಲ್ಲ, ಸಲೀಸೂ ಅಲ್ಲ. ಆದರೂ, ಕೆಲ ಆಟಗಾರರು ಇದಕ್ಕೆ ಅಪವಾದ, ಅದಕ್ಕೆ ‘ದಿ ಬೆಸ್ಟ್’ ಉದಾಹರಣೆ ಎಂದರೆ ಲಿಯೋನೆಲ್ ಮೆಸ್ಸಿ, ಅಭಿಮಾನಿಗಳ ಪ್ರೀತಿಯ ‘ಲಾ ಪುಲ್ಗ’ (ಕೊಹ್ಲಿಗೆ ಚೀಕು ಎನ್ನುವಂತೆ ಮೆಸ್ಸಿಯ ನಿಕ್‌ನೇಮ್).

ಈಗ ಮತ್ತೆ ಲಿಯೋನೆಲ್ ಮೆಸ್ಸಿ ಬಗ್ಗೆ ಮಾತನಾಡಲು ಕಾರಣವಿಷ್ಟೆ. ಈವರೆಗೂ ಹದಿನೈದು ವಿಶ್ವದಾಖಲೆಯ ಒಡೆಯನಾಗಿದ್ದ ಮೆಸ್ಸಿ, ಈಗ ಹದಿನಾರನೇ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಫುಟ್ಬಾಲ್ ಅಂಗಳದ ಇನ್ನೊಬ್ಬ
ಅನಭಿಷಕ್ತ ದೊರೆ ಪೀಲೆ ಬಾರಿಸಿದ್ದ ಗೋಲ್‌ಗಳ ಸಂಖ್ಯೆಯನ್ನು ದಾಟಿ, ಮೆಸ್ಸಿ ಮುನ್ನಡೆದಿದ್ದಾರೆ. ಒಂದೇ ತಂಡದ ಪರವಾಗಿ ಆಡಿ, 643 ಗೋಲ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದ ಪೀಲೆ ದಾಖಲೆ ಈಗ ಬಾರ್ಸಿಲೋನಾ ಪರ ಆಡುತ್ತಿರುವ ಮೆಸ್ಸಿಯ ಪಾಲಾಗಿದೆ.

ಸಾಧಕರ ಹುಟ್ಟು ಚಿಕ್ಕ ಹಟ್ಟಿಯಲ್ಲಿ ಎಂಬುದು ಜನಜನಿತ. ಏಕೆಂದರೆ ಸಾಧಕರು ಸಾಮಾನ್ಯರಾಗಿ ಹುಟ್ಟಿ, ನಂತರ ಅಸಾಮಾನ್ಯ
ಎನಿಸಿಕೊಳ್ಳುತ್ತಾರೆ. ಇದೇ ಸಾಲಿನಲ್ಲಿ ಮೆಸ್ಸಿಯೂ ಇದ್ದಾರೆ. 1984ರ ಜೂನ್ 24ರಂದು ಅರ್ಜೆಂಟೀನಾದಲ್ಲಿ ಹುಟ್ಟಿದ ಮೆಸ್ಸಿಯ ತಂದೆ ಕಾರ್ಖಾನೆಯಲ್ಲಿ ಸ್ಟೀಲ್ ಕೆಲಸಗಾರ, ತಾಯಿ ಕಾರ್ಖಾನೆಯಲ್ಲಿ ಕ್ಲೀನರ್. ಆದರೆ, ಮೆಸ್ಸಿಗೆ ಕಾಲ್ಚೆಂಡಿನಾಟ ದೈವದತ್ತವಾಗಿ ಒಲಿದಿತ್ತು.

ಎಳೆ ವಯಸ್ಸಿನಲ್ಲಿಯೇ ಕ್ರೀಡಾಂಗಣದಲ್ಲಿ ಚಮಕ್ ನೀಡುತ್ತಿದ್ದ ಮೆಸ್ಸಿ ಆಟಕ್ಕೆ ಎಲ್ಲರೂ ಫಿದಾ ಆಗಿದ್ದರು. ಆದರೆ, ವಿಧಿ ಬೇರೆ
ಹೊಂಚು ಹಾಕಿತ್ತು. 11ನೇ ವಯಸ್ಸಿನಲ್ಲಿ ಮೆಸ್ಸಿಗೆ Growth Harmone Deficiency ಇರುವುದು ಪತ್ತೆಯಾಗಿತ್ತು. ಅಂದರೆ, ದೇಹದ ಬೆಳವಣಿಗೆಯೇ ಕುಂಠಿತ ಆಗುವ ಚಾನ್ಸ್ ದುಪ್ಪಟ್ಟಿತ್ತು. ಇಲ್ಲಿಯವರೆಗೂ ಮೆಸ್ಸಿ ಆಟ ಹೊಗಳುತ್ತಿದ್ದ ತಂಡಗಳೆಲ್ಲ ಮೆಸ್ಸಿಯ ಚಿಕಿತ್ಸೆಗೆ ಸಹಾಯ ಮಾಡಲು ಹಿಂದೇಟು ಹಾಕಿದರು.

ಕೊನೆಗೆ ಬಾರ್ಸಿಲೋನಾ ತಂಡ ಮೆಸ್ಸಿಯನ್ನು ಒಂದು ಪೇಪರ್ ನ್ಯಾಪ್‌ಕಿನ್ ಮೇಲೆ ಒಪ್ಪಂದ ಬರೆದುಕೊಟ್ಟು, ಚಿಕಿತ್ಸೆಗೆ ಸಹಾಯ
ಮಾಡಿತ್ತು. 2004ರಲ್ಲಿ ಚಿಕಿತ್ಸೆ ಪಡೆದ ನಂತರ, ಬಾರ್ಸಿಲೊನಾ ಕಿರಿಯರ ತಂಡದ ಪರ ಆಡಿದ್ದ ಮೆಸ್ಸಿ, ಟೂರ್ನಿಯ ಇತಿಹಾಸ ದಲ್ಲೇ ಗೋಲ್ ಬಾರಿಸಿದ ಅತಿ ಕಿರಿಯ ಎಂಬ ಮೊದಲ ದಾಖಲೆ ಬರೆದಿದ್ದರು. ನಂತರ ಮೆಸ್ಸಿ ಫುಟ್ಬಾಲ್ ಅಂಗಳದಲ್ಲಿ ಓಡಿದ್ದು,
ಆಡಿದ್ದು ಎಲ್ಲವೂ ಇತಿಹಾಸ.

ಫುಟ್ಬಾಲ್ ಆಟಗಾರನಾಗಬೇಕು ಎಂದುಕೊಂಡಿದ್ದವನಿಗೆ ದೇಹದ ಬೆಳವಣಿಗೆಯೇ ಆಗದು ಎಂಬಲ್ಲಿಂದ ಹಿಡಿದು ‘ಫೀಫಾ ನೀಡುವ ವಿಶ್ವಕಪ್ ಗೋಲ್ಡನ್ ಬಾಲ್’ ಪ್ರಶಸ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಪಡೆದ ಏಕೈಕ ಆಟಗಾರ ಎಂಬುವವರೆಗೂ ಮೆಸ್ಸಿ
ಮಾಡಿದ್ದೆಲ್ಲವೂ ಮ್ಯಾಜಿಕ್. ಮೆಸ್ಸಿಗೆ ನನ್ನ ಸ್ಥಾನವನ್ನು ತುಂಬುವ ಸಾಮರ್ಥ್ಯವಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನನ್ನ
ಅನಿಸಿಕೆಯಲ್ಲಿ ಅದು ನಿಜವಲ್ಲ. ಏಕೆಂದರೆ, ಮೆಸ್ಸಿ ನನಗಿಂತಲೂ ಚೆನ್ನಾಗಿ ಆಡುವ ಆಟಗಾರ. ಅವರ ಕಾಲ್ಚಳಕ ಕಣ್ತುಂಬಿ ಕೊಳ್ಳುವುದೇ ಸೋಜಿಗ. ನಿಜಕ್ಕೂ ಆತ ಜೀನಿಯಸ್ ಪ್ಲೇಯರ್ ಎಂಬುದು ಅರ್ಜೆಂಟೀನಾದ ಇನ್ನೊಬ್ಬ ದಂತಕತೆ, ಡಿಯಾಗೋ ಮರಡೋನಾ ಅವರ ಮಾತು. ದಂತಕತೆ ಆಗಿದ್ದವರಿಂದ ಇಂತಹ ಮೆಚ್ಚುಗೆ ಪಡೆದಿದ್ದಾರೆ ಎಂದರೆ ಮೆಸ್ಸಿಯ ಆಟ ವರ್ಣಿಸಲು ನಮಗೆ ಪದಗಳ ಕೊರತೆ ಕಾಡುವುದು ಖಂಡಿತ.

ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ ಅತ್ಯಧಿಕ ಗೋಲ್, ಲಾ ಲೀಗಾ ಪಂದ್ಯವಾಳಿಯಲ್ಲಿ ಎಲ್ಲ ಎದುರಾಳಿಗಳ ವಿರುದ್ಧ ಸತತವಾಗಿ ಗೋಲ್ ಯುಇಎಫ್‌ಎ ಟೂರ್ನಿಯಲ್ಲಿ ಐದು ವರ್ಷ ಅತ್ಯಧಿಕ ಗೋಲ್, ಯುಇಎಫ್‌ಎ ಟೂರ್ನಿಯಲ್ಲಿ 100 ಪಂದ್ಯ ಗಳನ್ನು ಪೂರೈಸಿದ ಅತಿ ಕಿರಿಯ(28ವರ್ಷ), ಲಾ ಲೀಗ ಟೂರ್ನಿಯಲ್ಲಿ ಹೆಚ್ಚು ಗೋಲ್ ಗಳಿಕೆ(312)….
ಇೆಲ್ಲವೂ ಮೆಸ್ಸಿಯ ಸಾಧನೆಗಳ ಪಟ್ಟಿಯ ಟ್ರೇಲರ್ ಅಷ್ಟೇ. ಮೆಸ್ಸಿ ಒಂದೇ ದಿನ ಹೀರೊ ಆದವರಲ್ಲ. ಫುಟ್ಬಾಲ್ ಸಿಂಪಲ್ ಆದ ಕ್ರೀಡೆಯೂ ಅಲ್ಲ. ಜಿಂಕೆಗಳನ್ನೇ ಮೀರಿಸುವೆಂ ಮೈದಾನದ ತುಂಬ ಕಾಲ್ಚಳಕ ತೋರಬೇಕು. ಅದಕ್ಕೆ ದೈಹಿಕ ಕ್ಷಮತೆ ಬೇಕೇಬೇಕು.
ಒಂದೂವರೆ ದಶಕಗಳ ಕಾಲ, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿ ಕೊಳ್ಳುವುದು ಸುಲಭದ ಮಾತಲ್ಲ. ಈವ ರೆಗೂ ವಿಶ್ವಭೂಪಟದಲ್ಲಿ ಎಷ್ಟೋ ಮಂದಿ ಆಟಗಾರರು ಬಂದಿದ್ದಾರೆ, ಹೋಗಿದ್ದಾರೆ.

ಆದರೆ, ಪೀಲೆ, ಮರ ಡೋನಾ, ರೊನಾಲ್ಡೋ, ನೇಮರ್, ಭಾರತದವರಾದ ಸುನಿಲ್ ಚೆಟ್ರಿ, ಬೈಚುಂಗ್ ಭುಟಿಯಾ ರಂತಹ ಹೆಸರುಗಳು ಅಜರಾಮರ ಆಗಲು ಅವರೆಲ್ಲ ತೋರಿದ ಇಚ್ಛಾಶಕ್ತಿಯಲ್ಲದೇ ಬೇರೇನೂ ಕಾರಣವಲ್ಲ.