ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಇಬ್ಬರೂ ಬಹಳ ದಿನಗಳ ನಂತರ ‘ರಂಗನಾಯಕ’ ಚಿತ್ರದಲ್ಲಿ ಜತೆಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಬುಲ್ ಟೆಂಪಲ್ ರಸ್ತೆಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು. ನಾಯಕ ನಟ ಜಗ್ಗೇಶ್ ರಾಯರ ಮುಂದೆ ನಿಂತು ಪ್ರಾರ್ಥನೆ ಮಾಡುತ್ತಿರುವ ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ದೇವೇಂದ್ರ ರೆಡ್ಡಿ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ವಿಖ್ಯಾತ್ ಫಿಲಂಸ್ ಬ್ಯಾನರ್ ಮೂಲಕ ‘ಪುಷ್ಪಕ ವಿಮಾನ’, ‘ಇನ್ಸ್ ಪೆಕ್ಟರ್ ವಿಕ್ರಂ’ ಚಿತ್ರಗಳ ನಂತರ ವಿಖ್ಯಾತ್ ನಿರ್ಮಿಸುತ್ತಿಿರುವ ಮೂರನೇ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಮಠ ಗುರುಪ್ರಸಾದ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಬರೀ ಹೊಡಿಯೋದು, ಬಡಿಯೋದಷ್ಟೇ ಹೀರೋಯಿಸಂ ಅಲ್ಲ, ಪ್ರೇಕ್ಷಕರನ್ನು ನಗಿಸೋದು ಕೂಡ ಹೀರೋಯಿಸಂ’ ಎನ್ನುವ ಗುರುಪ್ರಸಾದ್ ತಮ್ಮ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಲೇ ಸಮಾಜದ ಅಂಕುಡೊಂಕುಗಳನ್ನು, ಕಂದಾಚಾರ ಗಳನ್ನು ವಿಡಂಬನಾತ್ಮಕವಾಗಿ ಹೇಳುತ್ತಾರೆ.
ಯಕ್ಷಗಾನ ಪ್ರಸಂಗದಲ್ಲಿ ಸಾಮಾನ್ಯವಾಗಿ ಬಳಸುವ ಪದ ‘ರಂಗನಾಯಕ’. ಈ ಚಿತ್ರದಲ್ಲಿ ‘ರಂಗನಾಯಕ’ ಆಗಿರುವುದು ಜಗ್ಗೇಶ್. ಆದರೆ ಈ ‘ರಂಗನಾಯಕ’ ಆಡಿಸುವ ಸೂತ್ರದ ಗೊಂಬೆಗಳು ಯಾರಾಗಿರುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಷ್ಟೇ ಗೊತ್ತಾಗ ಲಿದೆ. ಜನವರಿ 15ರ ಸಂಕ್ರಾಂತಿಯ ದಿನದಿಂದ ‘ರಂಗನಾಯಕ’ನ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಇನ್ನು ಈ ಚಿತ್ರದಲ್ಲಿ ರಂಗಾಯಣ, ನೀನಾಸಂ, ಬಿಂಬ ಸೇರಿದಂತೆ ಹಲವಾರು ರಂಗಶಾಲೆಯ ನೂರಾರು ಕಲಾವಿದರುಗಳು ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳನ್ ಸಂಗೀತ ನಿರ್ದೇಶನವಿದ್ದು, ಮನೋಹರ್ ಜೋಷಿ ಛಾಯಾಗ್ರಹಣವಿದೆ. ಚಿತ್ರದ ಕಥೆ, ಚಿತ್ರಕಥೆಯ ಜತೆ ಸಂಭಾಷಣೆ ಹಾಗೂ ಸಾಹಿತ್ಯ ಕೂಡ ಗುರುಪ್ರಸಾದ್ ಅವರೇ ರಚಿಸಿದ್ದಾರೆ. ‘ವೀರಂ’ ಖ್ಯಾತಿಯ
ಶಶಿಧರ್ ಹಾಗೂ ದೇವೇಂದ್ರ ರೆಡ್ಡಿ ಈ ಚಿತ್ರದ ಸಹನಿರ್ಮಾಪಕರಾಗಿದ್ದಾರೆ.