ಮಹಾದೇವ ಬಸರಕೋಡ
ಕನಸುಗಳು ಬದುಕಿನ ಅವಿಭಾಜ್ಯತೆಯಾಗಿ ಮಾನವನ ಹುಟ್ಟಿನಿಂದಲೂ ಜೊತೆಯಾಗಿ ಸಾಗಿ ಬರುವುದರ ಜತೆಗೆ ಬದುಕನ್ನು ಚಲನಶೀಲಗೊಳಿಸಿ ಅದರ ಚೆಲುವು ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿವೆ.
ಮನುಷ್ಯನ ಕನಸುಗಳಿಗೆ ಅವನ ಬದುಕಿನಷ್ಟೇ ದೀರ್ಘವಾದ ಪರಂಪರೆ ಇದೆ ಎಂಬುದು ಗಮನಾರ್ಹ ಸಂಗತಿ ಯಾಗಿದೆ. ಕನಸುಗಳು ಬದುಕಿನ ಅಮೂರ್ತ ರೂಪ. ಕನಸುಗಳಿರದ ಬಾಳು ನೆರಳಿರದ ದಾರಿಯಂತೆ, ಪರಿಮಳವಿರದ ಸುಮದಂತೆ, ಸಿಹಿ ಇರದ ಕಬ್ಬಿನಂತೆ. ಕನಸುಗಳೆಲ್ಲವೂ ನಿಜವಾಗಬೇಕೆಂಬ ಯಾವ ನಿಯಮವಿಲ್ಲದಿದ್ದರೂ ಅವುಗಳನ್ನು ಹೆಣೆಯುವದರಲ್ಲಿಯೂ ಒಂದು ಸಂಭ್ರಮವಿದೆ, ಸಂತಸವಿದೆ, ಸುಖದ ಅನುಭೂತಿಯಿದೆ.
ನಿತ್ಯದ ಜೀವನದಲ್ಲಿ ಕೊರತೆ, ಬಡತನ ಅನುಭವಿಸುವ, ಅತೃಪ್ತವಾಗಿರುವ, ನಿರಾಸೆಯಿಂದ ಬಳಲುವ ಅನೇಕರಿಗೆ ಕನಸು ಕೊಂಚ ಕಾಲವಾದರೂ ನೆಮ್ಮದಿಯನ್ನು ನೀಡಬಲ್ಲದು. ಅಂತೆಯ ಕನಸುಗಳು ನನಸಾಗದಿದ್ದರೂ ಅವುಗಳಿಗೆ ಅವುಗಳದೇ ಆದ ಘನತೆಯಿದೆ. ಅಂತೆಯೆ ನಾವೂ ದಿನ ದಿನವೂ ಹೊಸ ಕನಸುಗಳನ್ನು ಹೊಸೆಯಬೇಕು. ಬದುಕನ್ನು ಮತ್ತಷ್ಟು ಚಲನಶೀಲ ಗೊಳಿಸಬೇಕು. ಶರ್ಪಾ ಜನಾಂಗಕ್ಕೆ ಸೇರಿದ ತೇನಸಿಂಗ್‌ಗೆ ಆಗಿನ್ನೂ ಸುಮಾರು ಹತ್ತು ವರ್ಷದ ಪ್ರಾಯ. ನಿತ್ಯವೂ ಮನೆಯಲ್ಲಿ
ಸಾಕಿದ ಮೇಕೆಗಳನ್ನು ಮೇಯಿಸಿಕೊಂಡು ಬರಲು ಹಿಮಾಲಯದ ಪರ್ವತದ ತಪ್ಪಲಿಗೆ ಹೋಗುತ್ತಿದ್ದ.
ಪ್ರತಿ ದಿನ ತಾಯಿ ಪರ್ವತದ ತಪ್ಪಲಿನವರೆಗೂ ಬಂದು ಕಳುಹಿಸಿ ಹೋಗುತ್ತಿದ್ದಳು. ಹಾಗೆ ಹೋಗುವಾಗ ಅಲ್ಲಿನ ಪರ್ವತಾರೋಹಿ ಗಳನ್ನು ತೋರಿಸುತ್ತಾ ‘ಮಗೂ ನಿರಂತರವಾಗಿ ಹಲವಾರೂ ವರ್ಷಗಳಿಂದ ಬೃಹತ್ ಹಿಮಾಲಯ ಪರ್ವತವನ್ನು ಏರಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೂ ಯಾರೊಬ್ಬರೂ ಕೂಡಾ ಸಫಲವಾಗಿಲ್ಲ.
ನೀನು ಈ ಪರ್ವತವನ್ನು ಏರಬಲ್ಲೆಯಾ?’ ಎಂದು ಕೇಳುತ್ತಿದ್ದಳು. ತಾಯಿಯ ಇಂತಹ ವಾತ್ಸಲ್ಯ, ಪ್ರೀತಿ ತುಂಬಿದ ಮಾತು ಅವನ ಎದೆಯಾಳದಲ್ಲಿ ಹೊಸ ಕನಸಿನ ಬೀಜ ಬಿತ್ತಿತು. ಅಂದಿನಿಂದ ಅದು ಮೊಳಕೆಯೊಡೆಯಲು ಪ್ರಾರಂಭಿಸಿತ್ತು. ಅವನನ್ನು ಅವತ್ತಿನಿಂದಲೇ ಮಾನಸಿಕವಾಗಿ ಸಿದ್ಧಗೊಳಿಸುವಲ್ಲಿ ಸಫಲವಾಗಿತ್ತು. ನಲವತ್ತನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವೇರುವ ಕನಸು ನನಸಾಗಿತ್ತು. ವಿಶ್ವದ ಅತಿ ಎತ್ತರದ ಶಿಖರ ಎವರೆಸ್ಟ್‌ನ್ನು ಏರಿ, ವಿಶ್ವದಾಖಲೆ ಮಾಡಿದನು. ಅವನೊಬ್ಬ ಯಶಸ್ವಿ ಶಿಖರಗಾಮಿಯಾಗಿದ್ದ.
ಆಗ ಅವನಿಗೆ ನಲವತ್ತರ ಪ್ರಾಯ. ಅಂದು ಅವನ ಯಶಸ್ಸಿನ ಹಿನ್ನೆಲೆ ಪತ್ರಕರ್ತರೊಬ್ಬರು ಕೇಳಿದಾಗ, ‘ನಾನು ನನ್ನ ಹತ್ತನೆ
ವಯಸ್ಸಿನಿಂದಲೆ ಮಾನಸಿಕವಾಗಿ ಪರ್ವತವೇರಲು ಪ್ರಾರಂಭಿಸಿದ್ದೆ. ದೈಹಿಕವಾದ ಸಾಫಲ್ಯ ಮಾತ್ರ ಈಗ ಲಭಿಸಿದೆ’ ಎಂಬ ಅವನ ಪ್ರಾಮಾಣಿಕ ಉತ್ತರ ಕನಸಿನ ಘನತೆಯನ್ನು ಮತ್ತೆ ಮತ್ತೆ ಸಾರಿ ಹೇಳುತ್ತದೆ. ಕನಸುಗಳು ನಮ್ಮ ಬದುಕಿಗೆ ನಿರ್ದಿಷ್ಟ ಚೌಕಟ್ಟನ್ನು ಒದಗಿಸುವಲ್ಲಿ, ತುಂಬಾ ಅವಶ್ಯಕವಾದ ಮತ್ತು ಗಣನೀಯವಾದ ವಿಷಯಗಳ ಕಡೆ ನಮ್ಮ ಮನಸ್ಸನ್ನು ಗಮನ ಹರಿಸುವಲ್ಲಿ
ಪೂರಕವಾಗಬಲ್ಲವು.
ನಮ್ಮ ಗುರಿಗಳನ್ನು ಸಾಧಿಸುವ ಚಟುವಟಿಗಳಲ್ಲಿ ಮಾತ್ರ ನಮ್ಮ ಮನಸ್ಸು, ಶ್ರಮ, ಶಕ್ತಿಯನ್ನು ಕೇಂದ್ರಿಕರಿಸಲು, ತನ್ಮೂಲಕ ಆತ್ಮ ನಿಯಂತ್ರಣಕ್ಕೆ ರಹದಾರಿ ಒದಗಿಸಬಲ್ಲವು. ನಮ್ಮ ಬದುಕನ್ನು ಸಾಫಲ್ಯದತ್ತ ಕೊಂಡೊಯ್ಯಲು ಅಗತ್ಯವಾದ ಏಕಾಗ್ರತೆ ರೂಪಿಸಿಕೊಳ್ಳುವ ದಿಸೆಯಲ್ಲಿ, ಯೋಗ್ಯವಾದ ವಿಷಯಗಳಲ್ಲಿ ಮಾತ್ರ ನಮ್ಮ ಆತ್ಮ ನಿಯಂತ್ರಣ ಕೇಂದ್ರಿಕರಿಸಿಕೊಳ್ಳಲು ಸಹಾಯಕಾರಿಯಾಗಬಲ್ಲವು. ಮಾಂಟೈನ್ ಹೇಳಿದಂತೆ ಮನುಷ್ಯರ ಶ್ರೇಷ್ಠ ಮತ್ತು ಭವ್ಯ ಕಲೆಯೆಂದರೆ ಅಂದುಕೊಂಡಂತೆ ಬದುಕುವುದು.
ಕನಸುಗಳು ಒಂದಿನಿತಾದರೂ ಇಂತಹ ಬದುಕನ್ನು ಕಟ್ಟಿ ಕೊಳ್ಳುವಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸಾಂಧರ್ಬಿಕವಾಗಿ ಬದಲಾವಣೆಗೆ ಒಳಗಾಗದೆ ನಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಲು, ಸಾಮಾಜಿಕ ಒತ್ತಡಗಳ ರಭಸಕ್ಕೆ ತೆಲೆಬಾಗದೆ ಗಟ್ಟಿಯಾಗಿ ತಲೆ ಎತ್ತಿ ನಿಲ್ಲುವ ಸಾಮರ್ಥ್ಯವನ್ನು ಬೆಳೆಸುತ್ತವೆ. ಹೃದಯದ ಪಿಸುಮಾತಿಗೆ ಕಿವಿಗೊಡಲು, ಎದೆಯಾಳದ ನಿಲುವುಗಳಿಗೆ ದನಿ ಯಾಗಲು ಕನಸುಗಳು ತುಂಬಾ ಅವಶ್ಯಕವಾಗಿವೆ. ಒಳ್ಳೆಯ ಕನಸುಗಳನ್ನು ಒಟ್ಟು ಗೂಡಿಸಿ ಮುಂದೆ ಸಾಗುವದರಿಂದ ನಮ್ಮ ಯೋಚನಾ ಲಹರಿ ಸಕಾರಾತ್ಮಕ ಸಂಗತಿಗಳತ್ತ ಸಾಗುತ್ತದೆ.
ಕುವೆಂಪು ಹೇಳುವಂತೆ ನಮ್ಮ ಇಂದಿನ ಕನಸು, ನಿಮ್ಮ ನಾಳೆಯ ಮನಸು ಕನಸುಗಳನ್ನು ಹೊಸೆಯದಿದ್ದರೆ ನಾವು ನಮ್ಮ ಸಾಮರ್ಥ್ಯಕ್ಕೆ ನಾವೇ ಪರಿಮಿತಿ ಹಾಕಿಕೊಂಡಂತಾಗುತ್ತದೆ.