ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ರಿಚರ್ಡ್ ಬ್ರಾನ್ಸನ್ ಅದ್ಯಾವ ಮೂಡಿನಲ್ಲಿದ್ದರೋ ಏನೋ? ಕಳೆದ ವಾರ ಅವರಿಗೊಂದು ಟ್ವಿಟರಿನಲ್ಲಿ (ಟ್ವೀಟ್ ಅಲ್ಲ) ಮೆಸೇಜ್ ಮಾಡಿದ್ದೆ.ಹತ್ತು ನಿಮಿಷಗಳಲ್ಲಿ ವಾಪಸ್ ಮೆಸೇಜ್ ಮಾಡಿದರು ನನಗೆ ಅಚ್ಚರಿಯಾಯಿತು.
‘ನಮ್ಮ ಬದುಕನ್ನು ಒಂದು ವರ್ಷದಲ್ಲಿ ಬದಲಿಸಿಕೊಳ್ಳಬಹುದೇ? ಹೇಗೆ?’ ಎಂದು ಕೇಳಿದ್ದೆ. ಅದಕ್ಕೆ ಬ್ರಾನ್ಸನ್ ಅವರು
ಜಗತ್ತಿನ ಅತಿ ಶ್ರೀಮಂತ ವಾರೆನ್ ಬಫೆಟ್ ಹೇಳಿದ್ದನ್ನು ಪ್ರಸ್ತಾಪಿಸಿ ಬರೆದಿದ್ದರು.
*ಏನೇ ಮಾಡಿ ತಕ್ಷಣ ಫಲಿತಾಂಶ ಬರುವುದಿಲ್ಲ. ಎಲ್ಲದಕ್ಕೂ ಟೈಮು ಹಿಡಿಯುತ್ತದೆ.
*ನಿಮ್ಮ ಸಂತಸ, ನೆಮ್ಮದಿಗೆ ಬೇರೆಯವರನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು.
*ಕಂಪ್ಲೇನ್ ಮಾಡೋದನ್ನು ನಿಲ್ಲಿಸಿ, ನನ್ನಂಥ ಅದೃಷ್ಟವಂತ ಯಾರೂ ಇಲ್ಲ ಎಂದು ಭಾವಿಸಿ.
*ಏನು ಅಂದುಕೊಂಡಿದ್ದೀರೋ ಅದನ್ನು ಮಾಡಿ, ಎಂದಿಗೂ ಕೈಚೆಲ್ಲಬೇಡಿ.
*ನೀವು ಮಾಡುವ ತಪ್ಪುಗಳಿಂದ ನಿಮ್ಮನ್ನು ಅಳೆಯುವುದನ್ನು ನಿಲ್ಲಿಸಿ.
*ಸಕಾರಾತ್ಮಕ ಯೋಚನೆಗಳಿರುವವರನ್ನು ಹತ್ತಿರಕ್ಕೆ ಇಟ್ಟುಕೊಳ್ಳಿ.
*ನಿಮ್ಮನ್ನು ಟೀಕಿಸುವವರನ್ನು ನಿರ್ಲಕ್ಷಿಸಿ.
ಇಷ್ಟು ಮಾಡಿ, ಒಂದು ವರ್ಷದಲ್ಲಿ ನೀವು ಹೊಸ ವ್ಯಕ್ತಿಯಾಗಿರುತ್ತೀರಿ. ಅಂದ ಹಾಗೆ ಈ ಏಳೂ ಸಂಗತಿಗಳನ್ನು ನಾನಂತೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಹೀಗಾಗಿ ಪ್ರತಿದಿನವನ್ನೂ ಹೊಸದಾಗಿ, ಖುಷಿಯಾಗಿ ಕಳೆಯುತ್ತೇನೆ. ನೀವೂ ಪ್ರಯತ್ನಿಸಿ.
ಸಿಟ್ಟು ಬಂದಾಗ..!
‘ಸಿಟ್ಟನ್ನು ನಿಭಾಯಿಸುವುದು ಹೇಗೆ?’ ಎಂಬ ವಿಷಯದ ಬಗ್ಗೆ ವಾಟ್ಸಪ್ ಗುಂಪಿನಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. ‘ಸಿಟ್ಟು ಬಂದಾಗ ಮಾತಾಡಬಾರದು’ ಎಂದರು ಒಬ್ಬರು. ‘ನೀವು ಸಿಟ್ಟು ಮಾಡಿಕೊಳ್ಳುವ ವ್ಯಕ್ತಿ ನಿಮಗಿಂತ ಚಿಕ್ಕವನಾಗಿದ್ದರೆ ಒಂದರಿಂದ ಹತ್ತರವರೆಗೆ ಎಣಿಸಿ, ನಂತರ ಮಾತಾಡಿ’ ಎಂದರು ಮತ್ತೊಬ್ಬರು.
‘ಎದುರಿಗಿನ ವ್ಯಕ್ತಿ ಸಮ ವಯಸ್ಕನಾಗಿದ್ದರೆ, ಒಂದರಿಂದ ಮೂವತ್ತರವರೆಗೆ ಎಣಿಸಬೇಕು ಹಾಗೂ ನಂತರ ಮಾತಾಡಬೇಕು’ ಎಂದು ಇನ್ನೊಬ್ಬರು ಸಲಹೆ ಮಾಡಿದರು. ‘ನಿಮಗಿಂತ ಹಿರಿಯರಾಗಿದ್ದರೆ?’ ಎಂದು ಕೇಳಿದಾಗ, ‘ಒಂದರಿಂದ ಐವತ್ತರ ತನಕ’
ಎಂಬ ಸಲಹೆ ಬಂತು.
ಈ ಮಧ್ಯೆ, ಯಾರೋ ಕೇಳಿದರು- ‘ಎದುರಿಗಿರುವ ವ್ಯಕ್ತಿ ನಿಮ್ಮ ಹೆಂಡತಿಯಾಗಿದ್ದರೆ?’ ಅದಕ್ಕೆ ನಾನು ಹೇಳಿದೆ- ಒಂದೂ
ಮಾತಾಡದೇ, ಬರೀ ಎಣಿಸುತ್ತಲೇ ಇರಬೇಕು.’
‘ಅವಿ’, ‘ಪೂವಿ’ ಇಲ್ಲದೆ ವಾಕ್ಯ ರಚನೆ ಹೇಗೆ ಸಾಧ್ಯ?
ಮುಂಬೈನಿಂದ ಪ್ರಕಟ ವಾಗುತ್ತಿದ್ದ ‘ಫ್ರೀ ಪ್ರೆಸ್ ಜರ್ನಲ್’ ಎಂಬ ಆಂಗ್ಲ ದಿನಪತ್ರಿಕೆಯಲ್ಲಿ ಸ್ಟಾಲಿನ್ ಶ್ರೀನಿ ವಾಸನ್ ಎಂಬ ಸುದ್ದಿ ಸಂಪಾದಕರಿದ್ದರು. ಅಲ್ಪವಿರಾಮ ಹಾಗೂ ಪೂರ್ಣವಿರಾಮದ ಬಗ್ಗೆ ಹದ್ದಿನ ಕಣ್ಣು.
ಸ್ಪೆಲ್ಲಿಂಗ್ ದೋಷದಂತೆ ಕಾಮ, ಫುಲ್ಸ್ಟಾಪ್ ದೋಷವನ್ನು ಸಹ ಸಹಿಸುತ್ತಿರಲಿಲ್ಲ. ಅಲ್ಪವಿರಾಮ ಹಾಕ ಬೇಕಾದಲ್ಲಿ ಹಾಕದಿದ್ದರೆ ಕಾಪಿಯನ್ನು ವರದಿಗಾರರ ಮುಖಕ್ಕೆ ಬಿಸಾಕುತ್ತಿದ್ದರು. ‘ಅಲ್ಪವಿರಾಮ(ಅವಿ) ಹಾಗೂ ಪೂರ್ಣವಿರಾಮ(ಪೂವಿ) ಇಲ್ಲದೇ ವಾಕ್ಯ ರಚನೆ ಹೇಗೆ ಸಾಧ್ಯ? ನಿನಗೆ ಭಾಷೆ ಕಲಿಸಿದ ಮುಠ್ಠಾಳ ಯಾರು’ ಎಂದು ಇಡೀ ಸುದ್ದಿಮನೆ ಕಕ್ಕಾಬಿಕ್ಕಿಯಾಗುವಂತೆ ಗದರುತ್ತಿದ್ದರು. ಸ್ಟಾಲಿನ್ ಶ್ರೀನಿವಾಸನ್ ತಮ್ಮ ಟೇಬಲ್ ಮೇಲೆ ಹಾಕಿದ ಗ್ಲಾಸಿನ ಅಡಿಯಲ್ಲಿ ಖ್ಯಾತ ಅಮೆರಿಕ ಬರಹಗಾರ ಡೇನಿಯಲ್ ಕೇಯ್ಸ್ ಅಲ್ಪ ವಿರಾಮದ ಬಗ್ಗೆ ಬರೆದ ಪ್ರಸಿದ್ಧ ಸಾಲನ್ನು ಬರೆದಿಟ್ಟುಕೊಂಡಿದ್ದರು ಹಾಗೂ ಈ ಸಾಲನ್ನು ಓದುವಂತೆ ಎಲ್ಲ ವರದಿಗಾರರಿಗೆ ಮತ್ತು ಉಪಸಂಪಾದಕರಿಗೆ ಹೇಳುತ್ತಿದ್ದರು. ಆ ಸಾಲು ಹೀಗಿತ್ತು-“Today, I learned, the comma, this is, a, comma(,) a period, with, a tail, Miss Kin-nian, says its, important, because, it makes writing, better, she said, somebody, could lose, a lot of money, if a comma, isn’t in, the right, place, I got, some money, that I, saved from, my job, and what, the foundation, pays me, but not, much and, I dont, see how a comma, keeps, you from, losing, it, but she says, everybody, uses commas, so I will use them too,,,
ವುಡ್ವರ್ಡ್ ವೃತ್ತಿನಿಷ್ಠೆ!
ನೀವು ಬಾಬ್ ವುಡ್ವುರ್ಡ್ನ ಹೆಸರನ್ನು ಕೇಳಿರಬಹುದು. ಅಮೆರಿಕ ಪತ್ರಿಕೋದ್ಯಮದಲ್ಲಿ ಅತ್ಯಂತ ಜನಪ್ರಿಯ ಹೆಸರು. ಇವರು ಬರೆದ ತನಿಖಾ ವರದಿಗಳಿಂದ ೧೯೭೪ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡುವಂತಾಯಿತು. ಇದು ವಿಶ್ವದಾದ್ಯಂತ ತಲ್ಲಣ, ಸಂಚಲನ ಮೂಡಿಸಿದ ಘಟನೆ. ‘ವಾಟರ್ಗೇಟ್ ಹಗರಣ’ ಎಂದೇ ಕುಖ್ಯಾತವಾದ ಈ ಪ್ರಕರಣ,
ಅಮೆರಿಕವೊಂದೇ ಅಲ್ಲ, ಜಾಗತಿಕ ತನಿಖಾ ಪತ್ರಿಕೋದ್ಯಮದ ಮಹತ್ವದ ಮೈಲಿಗಲ್ಲು. ಅದಾದ ಬಳಿಕ ಯಾವುದೇ ಕರ್ಮಕಾಂಡ
ಬಹಿರಂಗವಾದರೂ ಅದಕ್ಕೆ ‘ಗೇಟ್’ ಎಂಬ ಬಾಲಂಗೋಚಿ ಸೇರಿಸುವ ಸಂಪ್ರದಾಯ ಮುಂದುವರಿದಿದೆ. ಉದಾಹರಣೆಗೆ
ಲಾಲೂ ಪ್ರಸಾದ ಯಾದವ್ ಭಾಗಿಯಾದ ‘ಮೇವು ಹಗರಣ’ ವನ್ನು ಇಂಗ್ಲಿಷ್ ಪತ್ರಕರ್ತರು Fodder gate ಎಂದೇ ಕರೆಯುತ್ತಿದ್ದರು. ‘ಗೇಟ್’ ಎಂಬುದು ಹಗರಣ, ಕರ್ಮಕಾಂಡ ಅಥವಾ ಭ್ರಷ್ಟಾಚಾರಕ್ಕೆ ಸಮವಾದ ಪದವಾಗಿ ಪರಿವರ್ತಿತ ವಾಗುವಷ್ಟು ವಾಟರ್ ಗೇಟ್ ಭದ್ರ ಬುನಾದಿ ಹಾಕಿಕೊಟ್ಟಿದೆ.
ಆಗ ಬಾಬ್ ವುಡ್ವರ್ಡ್ ಜತೆಗೆ ತನಿಖೆಯಲ್ಲಿ ಕಾರ್ಲ್ ಬರ್ನ್ ಸ್ಟೀನ್ ಎಂಬಾತನೂ ಇದ್ದ. ಇವರಿಬ್ಬರು ಸೇರಿ ಮಾಡಿದ ಆ ತನಿಖಾ ವರದಿಗಾರಿಕೆಯನ್ನು ಈಗಲೂ May be the single greatest reporting effort of all time ಎಂದೇ ಭಾವಿಸಲಾಗಿದೆ. ನಲವತ್ನಾಲ್ಕು ವರ್ಷಗಳ ಹಿಂದೆ ಮಾಡಿದ ಈ ತನಿಖಾ ವರದಿಯೇ ‘ತನಿಖಾ ಪತ್ರಿಕೋದ್ಯಮ ಶ್ರೇಷ್ಠ’ ಎಂಬ ಗೌರವಕ್ಕೆ ಪಾತ್ರ ವಾಗಿದೆ. ವುಡ್ವರ್ಡ್ ಹಾಗೂ ಬರ್ನ್ಸ್ಟೀನ್, ನಿಕ್ಸನ್ನ ಕರ್ಮಕಾಂಡ ಬಯಲಿಗೆಳೆದ ರೀತಿ, ತನಿಖೆಯ ಜಾಡನ್ನು ಹಿಡಿದು ಎಳೆ ಎಳೆಯಾಗಿ ಬಹಿರಂಗಪಡಿಸಿದ ವಿಧಾನ ಹಾಗೂ ಕೊನೆಯಲ್ಲಿ ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು, ಅಮೆರಿಕದ ಅಧ್ಯಕ್ಷನೇ ರಾಜೀನಾಮೆ ನೀಡುವಂತಾಗಿದ್ದು ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು.
ವಾಟರ್ಗೇಟ್ ಹಗರಣ ಬಯಲಿಗೆಳೆದಾಗ ವುಡ್ವರ್ಡ್ಗೆ ಕೇವಲ ಇಪ್ಪತ್ತೊಂಬತ್ತು ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಂಥ
ಅದ್ಭುತ ಸಾಧನೆ ಮಾಡಿದ ಶ್ರೇಯಸ್ಸು ವುಡ್ವರ್ಡ್ನದು. ಸಾಮಾನ್ಯವಾಗಿ ಆ ವಯಸ್ಸಿನಲ್ಲಿ ಪತ್ರಕರ್ತರು ಬರೆದ ವರದಿಗಳಿಗೆ ಹೆಸರನ್ನೂ ಹಾಕುವುದಿಲ್ಲ. ಆದರೆ ವುಡ್ವರ್ಡ್ ಹಾಗೂ ಬರ್ನ್ಸ್ಟೀನ್ ಅಮೆರಿಕದ ಅಧ್ಯಕ್ಷನ ಅಧಿಕಾರಕ್ಕೆ ಕುತ್ತು ತರುವಂಥ ಸೋಟಕ ವರದಿಗಳನ್ನುಬರೆದಿದ್ದರು. ಆಗ ವುಡ್ ವರ್ಡ್ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ವರದಿಗಾರರಾಗಿ ಕೆಲಸ ಮಾಡು ತ್ತಿದ್ದರು.(ಅವರಿಬ್ಬರ ತನಿಖಾ ವರದಿಗಳು ಪ್ರಕಟಗೊಂಡಿದ್ದೂ ಇದೇ ಪತ್ರಿಕೆಯಲ್ಲಿ.) ‘ವಾಷಿಂಗ್ಟನ್ ಪೋಸ್ಟ್’ ಜತೆಗೆ ಅಂದಿನಿಂದ ಆರಂಭವಾದ ವುಡ್ವರ್ಡ್ ನಂಟು – ಸಂಬಂಧ, ನಲವತ್ತೇಳು ವರ್ಷಗಳ ನಂತರವೂ ಅದೇ ಪತ್ರಿಕೆಯೊಂದಿಗೆ ಮುಂದುವರಿದು ಕೊಂಡು ಹೋಗಿರುವುದು ಗಮನಾರ್ಹ.
ಸಾಮಾನ್ಯವಾಗಿ ಪತ್ರಕರ್ತರು ಕೀರ್ತಿ, ಮಾನ್ಯತೆ, ಚೂರುಪಾರು ಜನಪ್ರಿಯತೆ ಬಂತೆಂದರೆ ಏನೋ ಮಹಾನ್ ಆದುದನ್ನು ಸಾಧಿಸಿ ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲೋ, ಆ ಮೂಲಕ ಸಹಜವಾಗಿ ಒಲಿದು ಬರುವ ಹೆಚ್ಚಿನ ಸಂಬಳದ ಚಿಲ್ಲರೆ ಆಸೆಯಿಂದಲೋ ಪ್ರತಿಸ್ಪಽ ಪತ್ರಿಕೆ ಸೇರುವುದು ಸಹಜ. ಆದರೆ ವುಡ್ವರ್ಡ್ ಹಾಗಲ್ಲ. ಅಂದಿನಿಂದ ಇಲ್ಲಿಯವರೆಗೂ ‘ಪೋಸ್ಟ್’ ಜತೆಗೆ ಇದ್ದಾರೆ. ಹಾಗಂತ ಅವನಿಗೆ ಬೇರೆ ಪತ್ರಿಕೆಗಳಿಂದ ಆಫರ್, ಆಮಿಷ ಬಂದಿಲ್ಲ ಎಂದಿದೆ. ಆದರೆ ಅವೆಲ್ಲವನ್ನೂ ಮೆಟ್ಟಿ, ಒಂದೇ ಪತ್ರಿಕೆಗೆ ತಮ್ಮ ನಿಷ್ಠೆ ಮೆರೆಯುತ್ತಾ ಬಂದಿರುವುದು ಅವನ ವೃತ್ತಿ ಬದ್ಧತೆ, ನಿಷ್ಠೆಗೆ ನಿದರ್ಶನ. ಈಗ ಆತ ಅದೇ ಪತ್ರಿಕೆಯ ಅಸೋಸಿಯೇಟ್ ಎಡಿಟರ್.
ಆದರೆ ಬರ್ನ್ಸ್ಟೀನ್ ಹಾಗಲ್ಲ. ಆಗಾಗ ಪತ್ರಿಕೆಗಳನ್ನು ಬದಲಿಸುತ್ತಾ ಬಂದವ. ವಾಟರ್ಗೇಟ್ ಖ್ಯಾತಿಯಿಂದ ಆತ ‘ಪೋಸ್ಟ್’ ಬಿಟ್ಟು ಎಬಿಸಿ ನ್ಯೂಸ್ ಸೇರಿದ. ಅದಾದ ನಂತರ ‘ಟೈಮ್’ ಮ್ಯಾಗಜಿನ್ ಸೇರಿದ. ‘ದಿ ನ್ಯೂ ರಿಪಬ್ಲಿಕ್’ ಮ್ಯಾಗಜಿನ್ ನಲ್ಲೂ ಕೆಲಕಾಲ ಇದ್ದ. ಕೆಲ ಸಮಯ ‘ನ್ಯೂಸ್ವೀಕ್’ ನಿಯತಕಾಲಿಕಕ್ಕೂ ಬರೆದ. ಈಗ ‘ವ್ಯಾನಿಟಿ ಫೇರ್’ ಮ್ಯಾಗಜಿನ್ಗೆ ಕೆಲಸ ಮಾಡುತ್ತಿದ್ದಾನೆ.
ವಾಟರ್ಗೇಟ್ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವುಡ್ ವುರ್ಡ್ ಹಾಗೂ ಬರ್ನ್ಸ್ಟೀನ್ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಭಾಜನ ರಾದರು. ೯/೧೧ ರ ಉಗ್ರರ ದಾಳಿಯಾದಾಗ ವುಡ್ ವರ್ಡ್ ಬರೆದ ಸರಣಿವರದಿ, ವಿಶ್ಲೇಷಣೆ, ಆಳ ವರದಿ ಅವರಿಗೆ ಎರಡನೆಯ ಪುಲಿಟ್ಜರ್ ಪ್ರಶಸ್ತಿ ತಂದುಕೊಟ್ಟಿತು. ರಿಚರ್ಡ್ ನಿಕ್ಸನ್ ಅವರಿಂದ ಒಬಾಮ ಹಾಗೂ ಈಗ ಡೊನಾಲ್ಡ್ ಟ್ರಂಪ್, ಒಟ್ಟು ಒಂಬತ್ತು ಅಧ್ಯಕ್ಷರನ್ನು ತೀರಾ ಹತ್ತಿರದಿಂದ ಕಂಡಿರುವ ವುಡ್ವರ್ಡ್, ಇವರೆಲ್ಲರ ಆಡಳಿತ, ಕಾರ್ಯವೈಖರಿ ಬಗ್ಗೆ ತಲಸ್ಪರ್ಶಿಯಾಗಿ ಬರೆದಿ ದ್ದಾರೆ. ಕಳೆದ ನಾಲ್ಕೂವರೆ ದಶಕಗಳ ವೈಟ್ಹೌಸ್ ಆಗು – ಹೋಗುಗಳ ಬಗ್ಗೆ ವುಡ್ವರ್ಡ್ ಅಥಾರಿಟಿಯಾಗಿ ಬರೆಯುತ್ತಾರೆ, ಮಾತಾಡುತ್ತಾರೆ.
ಅಧ್ಯಕ್ಷರ ಸುತ್ತಮುತ್ತ ನಡೆಯುವ ವಿದ್ಯಮಾನಗಳೆಲ್ಲ ವುಡ್ವರ್ಡ್ಗೆ ತಕ್ಷಣ ಗೊತ್ತಾಗುತ್ತದೆ. ಅಧಿಕಾರಿಗಳು ರಹಸ್ಯ ಮಾಹಿತಿ ಯನ್ನು ವುಡ್ವರ್ಡ್ಗೆ ನೀಡುತ್ತಾರೆ ಅಥವಾ ಹಂಚಿಕೊಳ್ಳಲು ಬಯಸುತ್ತಾರೆ. ವುಡ್ವರ್ಡ್ ಜತೆಗೆ ಮಾಹಿತಿ ಹಂಚಿಕೊಂಡರೆ ಮಾಹಿತಿ ನೀಡಿದವರ ಹೆಸರನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂಬ ವಿಶ್ವಾಸಾರ್ಹತೆ ಯನ್ನು ಆತ ಸಂಪಾದಿಸಿದ್ದಾನೆ. ಇಂಥ ಮಾಹಿತಿಯನ್ನು Deep throat ಎಂಬ ಹೆಸರಿನಲ್ಲಿ ಆತ ಬರೆಯುತ್ತಿದ್ದ. ಅದಾದ ಬಳಿಕ ಎಷ್ಟೋ ವರದಿಗಳಲ್ಲಿ ಮೂಲಗಳು ತಿಳಿಸುವ ಮಾಹಿತಿಗೆ Deep background ಎಂದೂ ಬರೆಯುತ್ತಿದ್ದ.
ವುಡ್ವರ್ಡ್ ಬಗ್ಗೆ ನಾನು ಈಗ ಇಷ್ಟೆಲ್ಲ ಪೀಠಿಕೆ ಹಾಕಿ ಬರೆದಿದ್ದೇಕೆ ಅಂದರೆ, ಆತ ಪುನಃ ಸುದ್ದಿಯಲ್ಲಿದ್ದಾನೆ. ಟ್ರಂಪ್ ಅವರ ಒಂದೂ ಮುಕ್ಕಾಲು ವರ್ಷಗಳ ಆಡಳಿತ ಕುರಿತು ಬರೆದ ಕೃತಿ, Fear: Trump in the White House ಸಾಕಷ್ಟು ಸುದ್ದಿ, ವಿವಾದವನ್ನುಂಟು ಮಾಡಿದೆ. ೨೦೧೬ರ ಮಾರ್ಚ್ ೩೧ರಂದು ಟ್ರಂಪ್, ಅಧ್ಯಕ್ಷ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ “Real Power is- I dont even want to use the word- Fear ಎಂದು ಹೇಳಿದ್ದರು. ಆದರೆ ಅದಕ್ಕೆ ಸರಿ ವ್ಯತಿರಿಕ್ತವಾಗಿ ಅವರು ನಡೆದುಕೊಳ್ಳುತ್ತಿರುವುದರಿಂದ ಈ ಕೃತಿಗೆ ಈ ಹೆಸರು.
ಈ ಪುಸ್ತಕದಲ್ಲಿ ಟ್ರಂಪ್ ಕಾರ್ಯವಿಧಾನದ ಬಗ್ಗೆ ಯಾರಿಗೂ ಗೊತ್ತಿರದ ಅನೇಕ ಕುತೂಹಲ ಮಾಹಿತಿ, ವಿಷಯಗಳನ್ನು ವುಡ್ವರ್ಡ್ ಕಟ್ಟಿಕೊಟ್ಟಿದ್ದಾನೆ. ಈಗಾಗಲೇ ವಿವಾದವೆಬ್ಬಿಸಿರುವ ಈ ಕೃತಿ ಬಗ್ಗೆ ಮುಂದೆ ಬರೆಯುತ್ತೇನೆ.
ಇದು ವುಡ್ವರ್ಡ್ ಸ್ಟೈಲ್!
‘ಫಿಯರ್’ ಕೃತಿಯಲ್ಲಿ ವುಡ್ವರ್ಡ್ ಓದುಗರಿಗಾಗಿ ಚಿಕ್ಕ ಟಿಪ್ಪಣಿ ಬರೆದಿದ್ದಾನೆ- ‘ಈ ಪುಸ್ತಕಕ್ಕಾಗಿ ಅನೇಕರನ್ನು ಸಂದರ್ಶಿಸಿದ್ದೇನೆ.
ಅವನ್ನು ಈಛಿಛಿm ಆZhಜ್ಟಟ್ಠ್ಞb ಎಂದು ಕರೆದಿದ್ದೇನೆ. ಇಲ್ಲಿ ನೀಡಿರುವ ಯಾವ ಮಾಹಿತಿಯನ್ನಾದರೂ ಪ್ರಸ್ತಾಪಿಸಬಹುದು.
ಆದರೆ ಅವನ್ನು ನೀಡಿದವರು ಯಾರು ಎಂಬುದನ್ನು ಹೇಳುವುದಿಲ್ಲ. ಈ ಕೃತಿಯಲ್ಲಿ ಪ್ರಸ್ತಾಪಿಸುವ ನೂರಾರು ಪ್ರಸಂಗ ಹಾಗೂ ವಿದ್ಯಮಾನಗಳಿಗೆ ಸಾಕ್ಷಿಯಾದವರು, ಪ್ರತ್ಯಕ್ಷದರ್ಶಿಗಳ ಜತೆಗೆ ನಾನು ನೂರಾರು ತಾಸುಗಳ ಸಂದರ್ಶನ ಮಾಡಿದ್ದೇನೆ.
ಬಹುತೇಕ ಎಲ್ಲರೂ ನಮ್ಮ ಮಾತುಕತೆಯನ್ನು ಟೇಪ್ರೆಕಾರ್ಡ್ ಮೂಲಕ ರೆಕಾರ್ಡ್ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.
ಹೀಗಾಗಿ ನಾನು ಪ್ರಸ್ತಾಪಿಸಿದ ಎಲ್ಲ ಸಂಗತಿಗಳು ನಿಖರವಾಗಿವೆ. ವೈಯಕ್ತಿಕ ಡೈರಿ, ಫೈಲ್, ಸರಕಾರಿ ದಾಖಲೆ, ವೈಯಕ್ತಿಕ
ಅಭಿಪ್ರಾಯ, ಅನಿಸಿಕೆಗಳನ್ನು ಅವುಗಳನ್ನು ನೀಡಿದವರ ಅನುಮತಿಯಿಂದ ಅವರ ಹೆಸರಿನಲ್ಲಿಯೇ ಹೇಳಿದ್ದೇನೆ. ಈ ಪುಸ್ತಕ ಕ್ಕಾಗಿ ಅಧ್ಯಕ್ಷ ಟ್ರಂಪ್ ಅವರ ಸಂದರ್ಶನಕ್ಕೆ ಕೋರಿಕೆ ಸಲ್ಲಿಸಿದ್ದೆ. ಆದರೆ ಅದನ್ನು ನಿರಾಕರಿಸಲಾಯಿತು’ ವುಡ್ವರ್ಡ್ ಪ್ರಸ್ತಾಪಿಸಿರುವ ಕೆಲವು ಪ್ರಸಂಗಗಳನ್ನುಓದಿದರೆ, ಈ ವಿಷಯ ಈತನಿಗೆ ಹೇಗೆ ಗೊತ್ತಾಯಿತು ಎಂದು ನಿಜಕ್ಕೂ ಅಚ್ಚರಿಯಾಗುತ್ತದೆ.
ಇದು ಪಕ್ಕಾ ವುಡ್ವರ್ಡ್ ಸ್ಟೈಲ್!
ಸ್ವಚ್ಛತೆ ಕಂಡು ‘ಷಾಕ್’ ಇದು ಎಲ್ಲೂ ಸುದ್ದಿಯಾಗಲಿಲ್ಲ. ಅದೇನೆಂದರೆ, ರವಾಂಡದಲ್ಲಿ ಎರಡು ದಿನ ಇದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಸ್ವಚ್ಛತೆ ನೋಡಿ ಅತೀವ ಸಂತಸ ವ್ಯಕ್ತಪಡಿಸಿದರಂತೆ. ಪ್ರಧಾನಿ ಯವರಿಗೆ ಹಿರಿಯ ರಾಜತಾಂತ್ರಿಕ ರೊಬ್ಬರು ಹೇಳಿದರಂತೆ- ‘ರಾಜಧಾನಿ ಕಿಗಾಲಿ ಮಾತ್ರ ಅಲ್ಲ, ಇಡೀ ದೇಶವೇ ಇಷ್ಟು ಸ್ವಚ್ಛವಾಗಿದೆ. ವಿದೇಶಿ ಗಣ್ಯರಿಗಾಗಿ ಈ ಸ್ವಚ್ಛತೆ ಅಲ್ಲ. ವರ್ಷದ ಯಾವುದೇ ದಿನ ಬಂದರೂ ಇದೇ ಸ್ವಚ್ಛತೆ ಕಾಣಬಹುದು.’
ಮೊದಲ ಬಾರಿಗೆ ರವಾಂಡಕ್ಕೆ ಹೋದ ಯಾರಿಗೇ ಆದರೂ ಅಲ್ಲಿನ ಸ್ವಚ್ಛತೆ ಕಂಡು ‘ಷಾಕ್’ ಆಗುತ್ತದೆ. ಇಡೀ ದೇಶದಲ್ಲಿ ಒಂದೇ ಒಂದು ಕಸ, ಕಡ್ಡಿ, ಬಾಟಲಿ, ಸಿಗರೇಟ್ ಪ್ಯಾಕ್, ಪ್ಲಾಸ್ಟಿಕ್… ಹೀಗೆ ಯಾವ ಕಸ-ಕಲ್ಮಶಗಳನ್ನು ನೋಡಲು ಸಾಧ್ಯವಿಲ್ಲ. ದಾರಿ ಯಲ್ಲಿ ಯಾರೂ ಉಗುಳುವುದಿಲ್ಲ, ಎಲೆ-ಅಡಕೆ ಪಿಚಕಾರಿ ಸಿಂಪಡಿಸುವುದಿಲ್ಲ. ಕಳ್ಳೇಕಾಯಿ ತಿಂದು ಸಿಪ್ಪೆಯನ್ನು ಬೀದಿ ಗೆಸೆಯುವುದಿಲ್ಲ. ಯಾರೂ ಸಹ ರಸ್ತೆ ಬದಿಗೆ ಮೂತ್ರ ವಿಸರ್ಜನೆಗೆ ನಿಲ್ಲುವುದಿಲ್ಲ. ತಂಬಿಗೆ ತೆಗೆದುಕೊಂಡು ಹೋಗುವುದಿಲ್ಲ.
ದೇಶಕ್ಕೆ ದೇಶವೇ ಶುದ್ಧ, ಸ್ವಚ್ಛ, ಬಡತನಕ್ಕೂ, ಕೊಳಕಿಗೂ ಅವಿ ನಾಭಾವ ಸಂಬಂಧ. ಮೊದಲನೆಯದಿದ್ದರೆ ಎರಡನೆಯದೂ
ಇರಲೇಬೇಕು. ಎರಡನೆಯದಕ್ಕೆ ಮೊದಲನೆಯದೇ ಕಾರಣ.
ಆದರೆ ರವಾಂಡದಲ್ಲಿ ಮಾತ್ರ ಬಡತನವಿದ್ದರೂ ಅಸ್ವಚ್ಛತೆಯನ್ನು ಓಡಿಸಲಾಗಿದೆ. ಇದು ಪ್ರಧಾನಿಯೋ, ರಾಷ್ಟ್ರಾಧ್ಯಕ್ಷನೋ
ಕರೆ ಕೊಡುವುದರಿಂದ ಆಗುವಂಥದ್ದಲ್ಲ. ಪ್ರತಿಯೊಬ್ಬ ದೇಶವಾಸಿಗೂ ಅನಿಸಬೇಕು. ತನ್ನ ದೇಶ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಅತೀವ ಕಾಳಜಿ ಇರಬೇಕು. ನೂರರಲ್ಲಿ ಒಬ್ಬ ಸ್ವಚ್ಛತೆ ಉಲ್ಲಂಘಿಸಿದರೆ, ಅಷ್ಟರಮಟ್ಟಿಗೆ ಹೊಲಸಾಗಿರುತ್ತದೆ. ನಂಬಿಕೆಯೆಂದರೆ ನೂರಕ್ಕೆ ನೂರು ಹೇಗೋ, ಸ್ವಚ್ಛತೆಯೆಂದರೂ ನೂರಕ್ಕೆ ನೂರೇ.
ರವಾಂಡದಲ್ಲಿ ಇದನ್ನು ಅಕ್ಷರಶಃ ಪಾಲಿಸಲಾಗುತ್ತಿದೆ. ನನ್ನ ಜತೆಗಿದ್ದ ಕನ್ನಡಿಗರೊಬ್ಬರು ‘ನಾನೂ ನೋಡ್ತಾನೇ ಇದ್ದೇನೆ,
ರವಾಂಡ ದಲ್ಲಿ ಒಂದೇ ಒಂದು ಕಸವನ್ನಾದರೂ ಹುಡುಕಲೇಬೇಕೆಂದು, ಆಗುತ್ತಿಲ್ಲ’ ಎಂದು ಉದ್ಗಾರ ತೆಗೆದರು. ಇಡೀ ದೇಶಕ್ಕೆ ದೇಶವೇ ಯಾವುದೇ ಘೋಷಣೆಗಳಿಲ್ಲದೇ, ಅದೊಂದು ಜೀವನಕ್ರಮದಂತೆ, ತೀರಾ ಸಹಜವೆಂಬಂತೆ ಸ್ವಚ್ಛತೆಯನ್ನು ಆಚರಿಸಿ ಕೊಂಡು ಬರುತ್ತಿದೆ. ಬೆಂಗಳೂರಿಗೆ ವಿದೇಶಿ ಗಣ್ಯರು ಬಂದಾಗ ವಿಮಾನ ನಿಲ್ದಾಣ ದಿಂದ ರಾಜಭವನ ಹಾಗೂ ಅವರು ಓಡಾಡುವ ಪ್ರಮುಖ ದಾರಿಗಳಿಗೆ ಮಾತ್ರ ಅಲಂಕಾರ ಮಾಡುತ್ತಿದ್ದುದು ಸಂಪ್ರದಾಯ.
ಅವರು ಹೋಗುತ್ತಿದ್ದಂತೆ ಆ ಅಲಂಕಾರಕ್ಕೆ ತಿಲಾಂಜಲಿ. ಬೆಂಗಳೂರಿನಲ್ಲಿ ಸಾರ್ಕ್ ಸಮಾವೇಶವಾದಾಗ, ಇಡೀ ನಗರವನ್ನು ಸುಣ್ಣ ಬಣ್ಣ ಬಳಿದು ಸಿಂಗರಿಸಿದ್ದರು. ರಸ್ತೆಗಳಿಗೆಲ್ಲ ಡಾಂಬರು ಹಾಕಿ ಬಿಳಿ ಪಟ್ಟಿ ಬಳಿದು ಅಲಂಕರಿಸಿದ್ದರು. ಆನಂತರ
ಒಂದೆರಡು ಸಂದರ್ಭಗಳಲ್ಲಿ ಹೀಗೆ ಮಾಡಿದ್ದುಂಟು. ಕಾರ್ಯಕ್ರಮ ಮುಗಿದ ನಂತರ ಈ ಅಲಂಕಾರ, ಸ್ವಚ್ಛತೆಗಳೆಲ್ಲ ಮಾಯ!
ಸಾರ್ವಜನಿಕವಾಗಿ ಸ್ವಚ್ಛತೆ ಕಾಪಾಡುವುದು ನಮಗೆ ಒಂದು ಸಾಂಕ ಗುಣವಾಗಿ ಬೆಳೆದು ಬಂದಿಲ್ಲ. ತಮ್ಮ ಮನೆಯನ್ನು
ಸ್ವಚ್ಛವಾಗಿ ಇಟ್ಟುಕೊಂಡವರೂ, ಸಾರ್ವಜನಿಕ ಸ್ಥಳಗಳಲ್ಲಿ ಕಂಡಲ್ಲಿ ಕಸಗಳನ್ನು ಎಸೆಯುತ್ತಾರೆ.
ಸ್ವತಃ ಪ್ರಧಾನಿಯವರೇ ಪೊರಕೆ ಹಿಡಿದರೂ, ಸ್ವಚ್ಛ ಭಾರತ ಎಂದು ಬೊಬ್ಬೆ ಹೊಡೆದುಕೊಂಡರೂ ನಮ್ಮ ಜನರಲ್ಲಿ ಇನ್ನೂ ಜಾಗೃತಿ ಮೂಡಿಲ್ಲ. ಸ್ವಚ್ಛ ಭಾರತ ಪ್ರಚಾರಕ್ಕೆಂದು, ಅರಿವು ಮೂಡಿಸಲೆಂದು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಲಾ ಗಿದೆ. ನಿತ್ಯವೂ ಬಳಸುವ ನೋಟಿನ ಮೇಲೆ ಸ್ವಚ್ಛ ಭಾರತ ಲಾಂಛನವಿಟ್ಟು ಜಾಗೃತಿ ಮೂಡಿಸ ಲಾಗುತ್ತಿದ್ದರೂ ಸಮಾಧಾನ ವಾಗುವಂಥ ಪರಿವರ್ತನೆಯಾಗಿಲ್ಲ. ಮೋದಿಯವರಿಗೆ ಕೀರ್ತಿ ಬಂದು ಬಿಡಬಹುದೆಂದು ಭಾರತ ಸ್ವಚ್ಛವಾಗುವುದು ಪ್ರತಿಪಕ್ಷ ಗಳಿಗೂ ಬೇಕಿಲ್ಲ.
ಇಂಥ ಮನಸ್ಥಿತಿ ಯಿದ್ದರೆ ಯಾವ ದೇಶ ಉದ್ಧಾರವಾದೀತು? ಪ್ರತಿಪಕ್ಷಗಳಂತೂ ಶತಾಯಗತಾಯ ಭಾರತ ಸ್ವಚ್ಛವಾಗಲೇಬಾರದು ಎಂದು ನಿರ್ಧರಿಸಿದಂತಿದೆ. ಕರ್ಮಕರ್ಮ!
ಹೀಗೊಂದು ಫನ್ ಕ್ಲಬ್!
ನಾನು ಡೆನ್ವರ್ನ ಒಂದು ಹೋಟೆಲ್ಗೆ ಹೋಗಿದ್ದೆ. ಅದರ ಹೆಸರು ಫನ್ ಕ್ಲಬ್ ಅಂತ. ಹಾಗೆ ನೋಡಿದರೆ, ಅದೊಂದು ಪಬ್.
ಅಲ್ಲಿ ಕುಳಿತಷ್ಟು ಹೊತ್ತು ಬೇಸರವಾಗುವುದಿಲ್ಲ. ಅಲ್ಲಿನ ಗೋಡೆಗಳ ಮೇಲೆ ‘ವಕ್ರತುಂಡೋಕ್ತಿ’ ಮಾದರಿಯ ಸಾಲುಗಳನ್ನು ಬರೆದು ಗೋಡೆಗೆ ತಗುಲಿ ಹಾಕಲಾಗಿದೆ. ಕೆಲವು ಸಾಲುಗಳನ್ನು ನೋಡಿ. Why do german love american? Because
American are most hated people ಯಾರಾದರೂ ಎರಡೂ ಭಾಷೆ ಮಾತಾಡಿದರೆ bilingual ಅಂತಾರೆ. ಹಲವು ಭಾಷೆಗಳನ್ನು ಮಾತಾಡಿದರೆ multi lingua ಅಂತಾರೆ. ಆದರೆ ಒಂದೇ ಭಾಷೆ ಮಾತಾಡುವವರನ್ನು ಏನಂತಾರೆ? -ಅಮೆರಿಕನ್!
ಅಮೆರಿಕನ್ಗೂ ಯೋಗರ್ಟ್(ಮೊಸರು)ಗೂ ಏನು ವ್ಯತ್ಯಾಸ? ಒಂದು ತಿಂಗಳು ಬಿಟ್ಟರೆ ಯೋಗರ್ಟ್ ತನ್ನದೇ ಆದ ಗುಣ, ಸ್ವಭಾವವನ್ನು ಬೆಳೆಸಿಕೊಳ್ಳುತ್ತದೆ. ಈ ಮಾತನ್ನು ಅಮೆರಿಕನ್ಗೆ ಹೇಳಲಾಗದು! ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ! ಗ್ರಾಹಕರು ಡಬಲ್ ಚೀಸ್ ಬರ್ಗರ್, ಲಾರ್ಜ್ ಫ್ರೆಂಚ್ ಫ್ರೈಸ್ಗಳ ಜತೆಗೆ ಡಯಟ್ ಕೋಕ್ ಆರ್ಡರ್ ಮಾಡುತ್ತಾರೆ! ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ!
ಸಾವಿರಾರು ಡಾಲರ್ನ ಕಾರನ್ನು ಮನೆಮುಂದೆ ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಬೇಡದ ಸಾಮಾನುಗಳನ್ನು ಗರಾಜ್ನಲ್ಲಿ
ಜೋಪಾನವಾಗಿ ಇಟ್ಟಿರುತ್ತಾರೆ!