Monday, 25th November 2024

ಕಾಶ್ಮೀರದಲ್ಲಿ ಶೀತ ಅಲೆ: ಮೈನಸ್‌ 7.6 ಡಿಗ್ರಿ ತಾಪಮಾನ

ಶ್ರೀನಗರ: ಶ್ರೀನಗರದಲ್ಲಿ ಭಾನುವಾರ ಕನಿಷ್ಠ ತಾಪಮಾನ ಮೈನಸ್‌ 7.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಶ್ಮೀರದ ‍ಪ್ರಸಿದ್ಧ ದಾಲ್‌ ಸರೋವರ ಹೆಪ್ಪುಗಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜನವರಿ ತಿಂಗಳ ಮೊದಲ ವಾರದಿಂದಲೇ ಶೀತ ಅಲೆ ಬೀಸುತ್ತಿದೆ. ಅಲ್ಲದೆ ಭಾರೀ ಹಿಮಪಾತದಿಂದಾಗಿ ವಿಮಾನಯಾನ ಮತ್ತು ಸಾರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗಿತ್ತು. ಜನವರಿ 13 ಮತ್ತು 14 ರ ಮಧ್ಯರಾತ್ರಿ ಶ್ರೀನಗರದಲ್ಲಿ ಕನಿಷ್ಠ ತಾಪಮಾನವು ಮೈನಸ್‌ 8.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

1893ರಲ್ಲಿ ಕನಿಷ್ಠ ತಾಪಮಾನವು ಮೈನಸ್‌ 14.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದು ಈವರೆಗಿನ ಅತಿ ಕನಿಷ್ಠ ತಾಪಮಾನ ವಾಗಿದೆ. ‘ಕಾಶ್ಮೀರದಲ್ಲಿ ಜನವರಿ 21 ರವರೆಗೆ ಒಣ ಹವೆ ಮುಂದುವರಿಯಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.