Monday, 28th October 2024

ಸಾರ್ವಕಾಲಿಕ ದಾಖಲೆ: 50 ಸಾವಿರದ ಗಡಿ ದಾಟಿದ ಸಂವೇದಿ ಸೂಚ್ಯಂಕ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ನ ಷೇರುಗಳು ಉತ್ತಮ ವಹಿವಾಟು ನಡೆಸುತ್ತಿವೆ. ಮುಂಬೈ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ 300.09 ಅಂಕಗಳಷ್ಟು ಏರಿಕೆಯಾಗಿ 50 ಸಾವಿರದ 126.73ಕ್ಕೆ ಸೂಚ್ಯಂಕ ತಲುಪಿತು. ಶೇಕಡಾ 0.60 ಶೇಕಡಾದಷ್ಟು ಏರಿಕೆಯಾಗಿ 50 ಸಾವಿರದ 092.21ರಷ್ಟಾಗಿತ್ತು.

ನಿಫ್ಟಿ ಸಹ 85.40 ಅಂಕ ಅಥವಾ ಶೇಕಡಾ 0.58ರಷ್ಟು ಏರಿಕೆಯಾಗಿ 14 ಸಾವಿರದ 730ರಲ್ಲಿ ವಹಿವಾಟು ನಡೆಸುತ್ತಿದೆ.
ಇತ್ತೀಚಿನ ವರದಿ ಪ್ರಕಾರ, ಸೆನ್ಸೆಕ್ಸ್ 50 ಸಾವಿರದ 056.10ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 14 ಸಾವಿರದ 719.60ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ಮಧ್ಯೆ, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.30ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರಲ್ ಗೆ 55.91 ಡಾಲರ್ ಆಗಿದೆ.