Saturday, 23rd November 2024

60 ದಿನ ಶಾಂತ, ಗಣರಾಜ್ಯ ದಿನ ಉಗ್ರರೂಪ

ವಿಶೇಷ ವರದಿ: ಎಸ್.ಆರ್.ಶ್ರೀಧರ್

ಕೇಂದ್ರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಆರಂಭವಾದ ರೈತರ ಪ್ರತಿಭಟನೆ ಭಾರಿ ಸುದ್ದಿ ಪಡೆಯಿತು. ವಿಶ್ವಾದ್ಯಂತ ಈ ಬಗ್ಗೆೆ ಚರ್ಚೆಗಳಾದವು. ಮನೆ ಮಠ ಬಿಟ್ಟು ಕುಟುಂಬ ಸಮೇತ ರೈತರು ಪ್ರತಿಭಟನೆ ಮಾಡಲು ದೆಹಲಿ ಗಡಿ ಭಾಗಕ್ಕೆ ಜಮಾಯಿಸಿದ್ದರು. ರೈತ ಚಳವಳಿ, ಹೋರಾಟ ಎಲ್ಲಿಗೆ ಎಲ್ಲಿ ಆರಂಭವಾಗಿ, ಎಲ್ಲಿಗೆ ಬಂದು ತಲುಪಿದೆ ಎಂಬತ್ತ ಒಂದು ಸುತ್ತು.

ಕೇಂದ್ರದ ಮೂರು ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ವರ್ಷ ನ.26ರಂದು ರಾಜಧಾನಿ ಗಡಿಯಲ್ಲಿ ಆರಂಭವಾದ
ಸಾವಿರಾರು ರೈತರ ಶಾಂತಿಯುತ ಪ್ರತಿಭಟನೆ, 2021ರ ಜ.26ರಂದು ಹಿಂಸಾತ್ಮಕ ತಿರುವು ಪಡೆಯಿತು. ಒಂದೂವರೆ ವರ್ಷಗಳ ವರೆಗೆ ಕಾಯಿದೆಗಳನ್ನು ಅಮಾನತಿನ ಕೇಂದ್ರದ ಪ್ರಸ್ತಾಪಕ್ಕೂ ರೈತರು ಜಗ್ಗಲಿಲ್ಲ.

ಮೂರು ಕಪ್ಪು ಕಾನೂನು (ಬ್ಲಾಕ್ ಲಾಸ್)ಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಹಾಗೂ ತಮ್ಮ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಸರಕಾರ ಕಾನೂನು ಖಾತರಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ನವೆಂಬರ್ 26
ನವೆಂಬರ್ 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ (ಚಕ್ಕಾ ಜಾಮ್) ನಂತರ, ಪಂಜಾಬ್ ಮತ್ತು ಹರಿಯಾಣದ ರೈತ ಸಂಘಟನೆಗಳು
ದೆಹಲಿ ಚಲೋ ಆಂದೋಲನಕ್ಕೆ ಕರೆ ನೀಡಿ, ಕೃಷಿ ಕಾಯಿದೆಗಳ ವಿರುದ್ಧ ತಮ್ಮ ಪ್ರತಿಭಟನೆ ತೀವ್ರಗೊಳಿಸಿದವು. ಸಿಂಘು ಗಡಿ ಯಲ್ಲಿ ಪ್ರತಿಭಟನೆ ಮಾಡಿದ ನಂತರ, ದೆಹಲಿ ಪೊಲೀಸರು ರೈತರಿಗೆ ದೆಹಲಿಗೆ ಪ್ರವೇಶಿಸಲು ಮತ್ತು ಬುರಾರಿಯ ನಿರಂಕಾರಿ
ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರು.

ಡಿಸೆಂಬರ್ 1
ಕೃಷಿ ಕಾಯಿದೆಗಳ ಬಗ್ಗೆೆ ಚರ್ಚಿಸಲು ಸಮಿತಿ ರಚಿಸುವ ಕೇಂದ್ರದ ಪ್ರಸ್ತಾವನೆಯನ್ನು ರೈತರು ಒಪ್ಪಲು ನಿರಾಕರಿಸಿದರು. ನಂತರ 35 ಒಕ್ಕೂಟಗಳ ಮುಖಂಡರು, ಕೃಷಿ ಸಚಿವ ನರೇಂದ್ರ ತೋಮರ್ ನಡುವೆ ಮೊದಲ ಸುತ್ತಿನ ಮಾತುಕತೆ ನಡೆಯಿತು. ಆದರೆ, ರೈತರು ಕಾಯಿದೆಗಳನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದರು.

ಡಿಸೆಂಬರ್ 3
ಸತತ ಎಂಟು ಗಂಟೆಗಳ ಮ್ಯಾರಥಾನ್ ಸಭೆಯ ನಂತರ ಮಾತುಕತೆ ಯಾವುದೇ ಪ್ರತಿಫಲ ನೀಡಲಿಲ್ಲ. ಎಂಎಸ್‌ಪಿ ಮತ್ತು ಖರೀದಿ
ವ್ಯವಸ್ಥೆ ಬಗ್ಗೆ ಕೇಂದ್ರವು ಅನೇಕ ಪ್ರಸ್ತಾಪ ನೀಡಿದ್ದರೂ ಸಹ ಹಲವಾರು ಲೋಪದೋಷ ಹಾಗೂ ಕಾನೂನುಗಳಲ್ಲಿನ ನ್ಯೂನತೆ ಗಳ ಬಗ್ಗೆ ಪರಿಶೀಲನೆಗೆ ಯೂನಿಯನ್ ನಾಯಕರು ಒಪ್ಪಿಗೆ ಸೂಚಿಸಿದರು.

ಡಿಸೆಂಬರ್ 5
ಐದನೇ ಸುತ್ತಿನ ಮಾತುಕತೆಯಲ್ಲಿ ಕೃಷಿ ಸಂಘಟನೆಗಳ ಮುಖಂಡರು ಮೌನ ವ್ರತಕ್ಕೆ ಮುಂದಾದರು. ಕೇಂದ್ರ ಸರಕಾರದಿಂದ
ಹೌದು ಅಥವಾ ಇಲ್ಲ ಎಂಬ ಸ್ಪಷ್ಟ ಉತ್ತರ ಕೋರಿ ಡಿಸೆಂಬರ್ 9ರಂದು ಮತ್ತೊಂದು ಸಭೆ ಕರೆಯುವಂತೆ ಒತ್ತಾಯಿಸಿದರು.

ಡಿಸೆಂಬರ್ 8
ಪ್ರತಿಭಟನಾನಿರತ ರೈತರು ಭಾರತ್ ಬಂದ್‌ಗೆ ಕರೆ ನೀಡಿದರು. ಇದು ಪಂಜಾಬ್ ಮತ್ತು ಹರಿಯಾಣದಲ್ಲಿ ಭಾರಿ ಪರಿಣಾಮ
ಬೀರಿತು. ರಸ್ತೆ ತಡೆ ನಡೆಯಿತು, ಮಾರುಕಟ್ಟೆಗಳು ಮುಚ್ಚಲ್ಪಟ್ಟವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆಯ್ದ ರೈತ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಮೂರು ಕಾಯಿದೆಗಳ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ರೈತ ನಾಯಕರು ತಿರಸ್ಕರಿಸಿದರು.

ಡಿಸೆಂಬರ್ 16
ಪ್ರತಿಭಟನೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿದ್ದರಿಂದ ರೈತರನ್ನು ಕೂಡಲೇ ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ. ಅರ್ಜೀ ಆಲಿಸಿದ ಸುಪ್ರೀಂ ಕೋರ್ಟ್, ಕೇಂದ್ರವು ನೂತನ ಕೃಷಿ ಕಾಯಿದೆಗಳ ಅನುಷ್ಠಾನ ತಡೆ ಹಿಡಿಯುವಂತೆ ತಿಳಿಸಿತು. ಈ ಸಂಬಂಧ ತಜ್ಞರ ಸಮಿತಿ ರಚಿಸುವಂತೆ ಸೂಚಿಸಿತು. ಅಹಿಂಸಾತ್ಮಕ ಮಾರ್ಗದಲ್ಲಿ ಪ್ರತಿಭಟನೆ ನಡೆಸುವ ರೈತರ ಹಕ್ಕನ್ನು ನ್ಯಾಯಾಲಯ ಒಪ್ಪಿಕೊಂಡಿತು.

ಡಿಸೆಂಬರ್ 30
ಸರಕಾರ ಮತ್ತು ರೈತ ಮುಖಂಡರ ನಡುವಿನ ಆರನೇ ಸುತ್ತಿನ ಮಾತುಕತೆ ಸ್ವಲ್ಪ ಮಟ್ಟಿಗೆ ಮುನ್ನಡೆ ಸಾಧಿಸಿತು. ರೈತರ ವಿರುದ್ಧ
ಪ್ರಕರಣಗಳನ್ನು ಸುಗ್ರೀವಾಜ್ಞೆಯಲ್ಲಿ ಕೈಬಿಡಲು ಹಾಗೂ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಕಾಯಿದೆಯನ್ನು ತಡೆಹಿಡಿಗೆ ಕೇಂದ್ರ
ಒಪ್ಪಿಕೊಂಡಿತು.

ಜನವರಿ 4
ಮೂರು ನೂತನ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ರೈತ ಮುಖಂಡರು ಒತ್ತಡ ಹೇರುತ್ತಿದ್ದರಿಂದ ಏಳನೇ ಸುತ್ತಿನ ಮಾತುಕತೆ ಸರಕಾರದ ಅನಿಶ್ಚಿತ ಟಿಪ್ಪಣಿಯಲ್ಲಿ ಕೊನೆಗೊಂಡಿತು.

ಜನವರಿ 12
ಮೂರು ಕೃಷಿ ಕಾಯಿದೆಗಳ ಅನುಷ್ಠಾನವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿಯಿತು. ಕೂಲಂಕಷವಾಗಿ ಪರಿಶೀಲಿಸಿ ಬದಲಾವಣೆ ಗಳ ಅಗತ್ಯವಿದ್ದರೆ ಎರಡು ತಿಂಗಳಲ್ಲಿ ಸೂಚಿಸುವಂತೆ ಸಮಿತಿ ನೇಮಿಸಿತು. ಈ ಸಮಿತಿಗೆ ಭಾರತೀಯ ಕಿಸಾನ್ ಯೂನಿಯನ್ ಮತ್ತು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯ ರಾಷ್ಟ್ರಾಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಕೃಷಿ ಅರ್ಥಶಾಸ್ತ್ರಜ್ಞ ಮತ್ತು ದಕ್ಷಿಣ ಏಷ್ಯಾ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಹಾಗೂ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಮಾಜಿ ಅಧ್ಯಕ್ಷ ಅಶೋಕ್ ಗುಲಾಟಿ ಹಾಗೂ ಶೆಟ್ಕರಿ ಸಂಘಟನಾ ಅಧ್ಯಕ್ಷ ಅನಿಲ್ ಘನ್ವತ್ ಅವರನ್ನು ನೇಮಿಸಿತು.

ಜನವರಿ 15
ಒಂಬತ್ತನೇ ಸುತ್ತಿನ ಮಾತುಕತೆ ವಿಫಲ. ತಾವು ಬಯಸುವ ಅಗತ್ಯ ಕಾಯಿದೆಗಳ ತಿದ್ದುಪಡಿ ಮಾಡುವುದಾಗಿಯೂ ಕೇಂದ್ರ ಇಚ್ಛೆ
ವ್ಯಕ್ತಪಡಿಸಿತು. ಆದರೂ ಪ್ರಯೋಜನವಾಗಲಿಲ್ಲ.

ಜನವರಿ 21
ಹತ್ತನೇ ಸುತ್ತಿನ ಮಾತುಕತೆಯಲ್ಲಿ ಮೂರು ಕೃಷಿ ಕಾಯಿದೆಗಳನ್ನು ಒಂದೂವರೆ ವರ್ಷಗಳ ಕಾಲ ಅಮಾನತುಗೊಳಿಸಲು ಸರಕಾರ ಪ್ರಸ್ತಾಪಿಸಿತು. ಜಂಟಿ ಸಮಿತಿಯನ್ನು ರಚಿಸಿ ಈ ಕುರಿತು ಚರ್ಚಿಸುವುದಾಗಿ ಹೇಳಿತು.

ಜನವರಿ 26
ದೆಹಲಿಯ ಸಿಂಘು, ಟಿಕ್ರಿ ಮತ್ತು ಗಾಜಿಪುರ ಗಡಿಭಾಗಗಳಲ್ಲಿ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿಗೆ ಕಾಯುತ್ತಿದ್ದ ರೈತರ
ಗುಂಪುಗಳು ದೆಹಲಿ ಪೊಲೀಸರು ಅನುಮತಿ ನೀಡಿದ್ದ ಸಮಯಕ್ಕೂ ಮೊದಲೇ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿಗೆ
ಪ್ರವೇಶಿಸಿದರು. ಮಧ್ಯ ದೆಹಲಿಯ ಐಟಿಒದಲ್ಲಿ ಪ್ರತಿಭಟನಾ ನಿರತ ರೈತರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಟ್ರ್ಯಾಕ್ಟರ್ ರ್ಯಾಾಲಿಯಿಂದ ರಾಷ್ಟ್ರ ರಾಜಧಾನಿ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಉದ್ರಿಕ್ತ ರೈತರು ಡಿಟಿಸಿ ಬಸ್ ಅನ್ನು ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಸಿಡಿಸಿ ಲಾಠಿಚಾರ್ಜ್ ಮಾಡಿದರು.

ರೈತರ ಪ್ರತಿಭಟನೆಗೆ ಕಾರಣ ಏನು?
ಪಂಜಾಬ್‌ನಲ್ಲಿ 36,000 ಪರವಾನಗಿ ಪಡೆದ ಕಮಿಷನ್ ಏಜೆಂಟರು ಮತ್ತು ಇನ್ನೂ ಅನೇಕ ಉಪ ಏಜೆಂಟರಿದ್ದಾರೆ. ಈ ಪರವಾ
ನಗಿ ಏಜೆಂಟರನ್ನು ಅರ್ಹ್ತಿಯಾಸ್39; ಎಂದು ಕರೆಯಲಾಗುತ್ತದೆ.
*ಈ ಪರವಾನಗಿ ಏಜೆಂಟರು ಕಳೆದ ವರ್ಷ ಗಳಿಸಿದ ಕಮಿಷನ್ 1,600 ಕೋಟಿ ರು. ಅವರು ರೈತರಿಗೆ, ಇತರರಿಗೂ ಸಾಲ ನೀಡು
ತ್ತಾರೆ. ಬಡ್ಡಿ ದರ ಮಾಸಿಕ ಶೇ.1.5 (ಅಥವಾ ವರ್ಷಕ್ಕೆ ಶೇ.18).

*ಈ ಆದಾಯವು ಅಧಿಕೃತ ಆದಾಯಕ್ಕಿಂತ ಅನೇಕ ಪಟ್ಟು ಹೆಚ್ಚು. ಆದ್ದರಿಂದ ಅವರು ರೈತರ ಮೇಲೆ ನೇರ ನಿಯಂತ್ರಣ ಹೊಂದಿರುತ್ತಾರೆ. ಇದರಲ್ಲಿ ರಾಜಕೀಯ ಹಣ ಹೂಡಿಕೆ ಮಾಡಲಾಗುತ್ತದೆ.

*ವಿದೇಶದಲ್ಲಿರುವವರ ಜಮೀನಿಗೆ ಇವರೇ ಒಡೆಯರು, ಶೇಕಡಾವಾರು ಲಾಭವನ್ನು ನೀಡುವ ಮೂಲಕ ಅವರ ಹೊಲಗಳನ್ನು
ನಿರ್ವಹಿಸುತ್ತಾರೆ. ಇವರು ಪಂಜಾಬ್‌ನ ಗ್ರಾಮೀಣ ಆದಾಯದ ನಿಯಂತ್ರಕರು.

*ಇವರು ಗುರುದ್ವಾರಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತಾರೆ. ಗುರುದ್ವಾರಗಳು ನಿಹಾಂಗ್‌ಗಳ ನಿಯಂತ್ರಣಲ್ಲಿರುವುದರಿಂದ
ಅವರು ಈಗ ನಿಹಾಂಗ್‌ಗಳಿಗೆ ಹತ್ತಿರವಾಗಿದ್ದಾರೆ.

*ಕಾನೂನು ಬದಲಾದರೆ ಜೀವನೋಪಾಯ ಕಷ್ಟ ಎಂದು ಮೊದಲು ಮಂಡಿ ಕಾರ್ಮಿಕರಲ್ಲಿ ಭಯ ಹುಟ್ಟಿಸಿದರು. ಮಂಡಿ
ಗಳಲ್ಲಿ ಸುಮಾರು ಮೂರು ಲಕ್ಷ ಕಾರ್ಮಿಕರು ಲೋಡಿಂಗ್ ಮತ್ತು ಅನ್‌ಲೋಡಿಂಗ್ ಚಟುವಟಿಕೆಗಳಲ್ಲಿ ನಿರತರಾಗಿದ್ದು,
ಅವರ ಆದಾಯ ಕಳೆದ ವರ್ಷ 1,100 ಕೋಟಿ ರು.

*ಎಪಿಎಂಸಿಯಿಂದ ಹೊರಗುಳಿದಿರುವ ಕಾಂಗ್ರೆಸ್, ಅನ್ಯ ಮಾರ್ಗ  ಹುಡುಕುತ್ತಿದ್ದ ಆರ್ಹ್ತಿಯಾಸ್‌ಗಳ ಮೂಲಕ ನೂತನ ಕಾಯಿದೆ
ರದ್ದುಗೊಳಿಸುವ ಕಿಚ್ಚು ಹೊತ್ತಿಸಿತು.

*ಎಪಿಎಂಸಿಗಳನ್ನು ಹೆಚ್ಚಾಗಿ ಅಕಾಲಿ ದಳದಿಂದ ನಿಯಂತ್ರಿಸುವುದರಿಂದ ಅವರು ಅರ್ಹ್ತಿಯರನ್ನು ಭದ್ರಪಡಿಸಿಕೊಳ್ಳಲು ಎನ್
ಡಿಎಯಿಂದ ಹೊರಬಂದರು.