Thursday, 31st October 2024

ಕೈಯಲ್ಲಿ ಹೂವರಳಿತು ಬದುಕು ಅರಳಲಿಲ್ಲ

ಬೀದಿ ಬದಿ ಸರಕು ಇವರ ಬದುಕು

ಹಸಿವು ನೀಗಿಸದ ಅಗ್ಗದ ವ್ಯಾಪಾರ

ವಿಶೇಷ ವರದಿ: ರವಿ ಮಲ್ಲೇದ

ಸಿಂದಗಿ: ಹೂ ನೇಯುವ ಬದುಕು ಹೂವಿನಷ್ಟು ಪ್ರಫುಲ್ಲತೆಯಿಂದ ಇರಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ
ದಂಪತಿಗಳ ಕಥೆ ಇದು.

ಅಷ್ಟಕ್ಕೂ ಅವರು ನೇಯುವುದು ಪ್ರಾಕೃತಿಕ ಹೂವಲ್ಲ. ಅದು ಪ್ಲಾಸ್ಟಿಕ್ ಹೂ. ಕಂದು, ಕೆಂಪು ಮಿಶ್ರಿತ, ಹಸಿರು ನೀಲಿ ಮಿಶ್ರಿತ ಬಣ್ಣಗಳ ಈ ಹೂವನ್ನು ಕೈಕಲೆಯ ಮೂಲಕ ಹೆಣೆದು ಹೂವಿನಂತೆ ಎಂದು ನಮ್ಮ ಬದುಕು ಅರಳಬಲ್ಲದು ಎನ್ನುವ ಪ್ರಶ್ನೆ ಇವರನ್ನು ಕಾಡುತ್ತಲೇ ಇದೆ.

ಅಂದಹಾಗೆ ಇವರು ಪಟ್ಟಣದ ಅಂಜುಮನ್ ಜಾಗೆಯಲ್ಲಿ ಕಳೆದ 16 ವರ್ಷದ ಹಿಂದೆ ಬಾಗಲಕೋಟೆಯ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದಿಂದ ಪಟ್ಟಣಕ್ಕೆ ವಲಸೆ ಬಂದಿರುವ ನಿಜಾಮ್ ಹಾಗೂ ಬೀಬಿ ಮದರಿ ಎಂಬ ದಂಪತಿಗಳು. ಲಾರಿ, ಕ್ರೂಸರ್, ಟ್ರ್ಯಾಕ್ಟರ್‌ಗಳ ಅಲಂಕಾರಕ್ಕಾಗಿ ಬಳಸುವ ಗ್ರಾಮೀಣ ಚಾಲಕರ ಮನ ಮುದಗೊಳಿಸುವ ಈ ಹೂವುಗಳು ಮಾತ್ರ ಈ ದಂಪತಿಗಳ
ಉಸಿರಾಗಿ ಸ್ಪರ್ಶಿಸಿದರೂ ಬದುಕಿನ ನಗು ಮೂಡಿಸಿಲ್ಲ.

ಬಯಲಿಗೆ ಚಿಕ್ಕ ಗುಡಿಸಲು ಹಾಕಿಕೊಂಡರೂ ಹೊಟ್ಟೆಪಾಡಿನ ಬದುಕು ಚೊಕ್ಕವಾಗಿಲ್ಲ. ದಂಪತಿಗಳಿಬ್ಬರು ತಮ್ಮ ಕೈಚಳಕದಲ್ಲಿ ಅರಳುವ ಹೂವಿನಕೊಂಡೆ ಯಾರ್ಯಾರದೋ ಮನಸ್ಸನ್ನು ಅರಳಿಸುವ ದುಡಿಮೆಗೂ ದರಿದ್ರ ಬದುಕು ಆ ಕಡೆ ಈಕಡೆ ಹೊರಳಿಲ್ಲ. ತಾಲೂಕಿನ ನಾನಾ ಸಕ್ಕರೆ ಕಾರ್ಖಾನೆಗಳಿಗೆ ಬರುವ ಗ್ರಾಮೀಣ ಟ್ರ್ಯಾಕ್ಟರ್ ಚಾಲಕರೇ ಇವರ ಹೊಟ್ಟೆ ತುಂಬಿಸುವ
ತುತ್ತಿಗೆ ಮಾಲಿಕರು.

ಹಸಿದ ಹೊಟ್ಟೆ ಲಾಭದ ವ್ಯಾಪಾರ ನೆಚ್ಚಿ ಬಂದಾಗಲೂ ಒಂದೊಮ್ಮೆ ಅಗ್ಗದ ಬೇಡಿಕೆ ಇವರ ಹಸಿವನ್ನು ನೀಗಿಸದು. ದೀಪಾವಳಿಯ ಸಂಭ್ರಮದಲ್ಲಿ ಲಾಭದ ನಿರೀಕ್ಷೆ ಹೊಂದಿದ್ದ ಈ ದಂಪತಿಗಳಿಗೆ ಕರೋನಾ ಹಾವಳಿ ನಿರಾಸೆ ಮೂಡಿಸಿದೆ.

50ರಿಂದ 60 ರುಪಾಯಿಗೆ ಮಾರುವ ನೂಲಿನ ಹೂವಿನ ಗೊಂಡೆ ವಾರಕ್ಕೊಂದೋ, ಎರಡೋ ಮಾರಿದರೆ ಮಾರಿತು ಇಲ್ಲವಾದರೆ ಇಲ್ಲ. ಕೈಯಿಂದ ದಿನಗಟ್ಟಲೆ ಸಿದ್ಧಪಡಿಸಿದ ಮಾಲು ಮಾಡಿಕೊಂಡು ಅಫಜಲಪೂರ, ಶಹಾಪೂರ, ಸುರಪುರ ಸೇರಿದಂತೆ ಸಂತೆಯಲ್ಲಿ ಮಾರಾಟಕ್ಕೆ ನಿಂತರೂ ಕೈಗೆ ದಕ್ಕುವ ಕಾಸು ಮಾತ್ರ ಖಾಲಿ ಹೊಟ್ಟೆಗೆ ಸಮ ಎನ್ನುವ ಗೋಳು ತೊಡಿಕೊಳ್ಳುವ ಇವರು ನಮ್ಮ ಬದುಕಿಗೆ ಯಾರು ದಿಕ್ಕು ಎನ್ನುವ ಪ್ರಶ್ನೆ ಇವರದ್ದು.

ಕೋಟ್ಸ್‌

ಲಾಭ ಆದಾಗ ಮಾತ್ರ ದಿಲ್ಲಿಯಿಂದ ಕಡಿಮೆ ದರದಲ್ಲಿ ಮಾಲನ್ನು ತಂದು ಕೈಚುರುಕಿನಿಂದ ಹೆಣೆದು ಹೊಟ್ಟೆ ತುಂಬಿಸಿಕೊಳ್ಳಲು ಹಳ್ಳಿ, ಸಕ್ಕರೆ ಕಾರ್ಖಾನೆ ಹಾಗೂ ವಾರದ ಸಂತೆಗಳತ್ತ ಹೆಜ್ಜೆ ಹಾಕುತ್ತೇವೆ. ಒಂದು ಬಾರಿ ತುಂಬುವ ಹೊಟ್ಟೆ ಇನ್ನೊಮ್ಮೆ ಖಾಲಿ.. ಖಾಲಿ.
– ನಿಜಾಮ್ ಮದರಿ ವ್ಯಾಪಾರಿ

ಸ್ಥಳೀಯ ಆಡಳಿತ ಇಂತಹ ಬಡಕುಟುಂಬಗಳನ್ನು ಗುರುತಿಸಿ ಭದ್ರವಾದ ನೆಲೆ ಅಥವಾ ಸೂರನ್ನು ಒದಗಿಸಬೇಕು. ಬ್ಯಾಂಕುಗಳಿಗೆ ಅರ್ಜಿ ಹಿಡಿದುಕೊಂಡು ಬಂದರಿಗೆ ಸಾಲ ನೀಡುವುದು ಮುಖ್ಯವಲ್ಲ. ಇವರ ಬದುಕಿನ ಆರ್ಥಿಕತೆಗೆ ಸಹಕಾರಿಯಾಗುವ ದಿಸೆ ಯಲ್ಲಿ ಸ್ವಇಚ್ಛೆಯಿಂದ ಮಾನವೀಯತೆ ತೋರಬೇಕು.
– ಸಂಗಮನಾಥ ಬಿರಾದಾರ ಸ್ಥಳೀಯ ನಿವಾಸಿ