ನಿರಂಜನಾರಾಧ್ಯ ವಿ.ಪಿ. ಶಿಕ್ಷಣ ತಜ್ಞ
ದೇಶದ ಅಭಿವೃದ್ಧಿಗೆ ಪೂರಕವಾಗಿ ಭವಿಷ್ಯದ ಜನಾಂಗವನ್ನು ರೂಪಿಸುವ ಶಿಕ್ಷಣ ಇಲಾಖೆಯನ್ನು ಕೇಂದ್ರ ಸರಕಾರ ಮತ್ತೊಮ್ಮೆ ನಿರ್ಲಕ್ಷಿಸಿದೆ.
ಕರೋನಾ ಸಂಕಷ್ಟದ ವೇಳೆ ದೇಶದ ವಿವಿಧ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಅನೇಕ ತೊಂದರೆಯಾಗಿತ್ತು. ಭವಿಷ್ಯದಲ್ಲಿ ಆನ್‌ಲೈನ್‌ಗೆ ಸಂಬಂಧಿಸಿದಂತೆ ಯೋಜನೆ ರೂಪಿಸುವ ವಿಶ್ವಾಸವಿತ್ತು. ಆದರೆ ಆ ನಿಟ್ಟಿನಲ್ಲಿ
ಸ್ಪಷ್ಟ ಯೋಜನೆ ರೂಪಿಸಿಲ್ಲ.
ಕೋವಿಡ್ 19ರ ಸನ್ನಿವೇಶದಲ್ಲಿ, ಎಲ್ಲಾ ಶಾಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಕೆಯ ನಷ್ಟವನ್ನು ಅನುಭವಿಸಿದ ಬಡ ಹಾಗೂ ಅವಕಾಶ ವಂಚಿತ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶೈಕ್ಷಣಿಕ ಬೆಂಬಲ ವನ್ನು ಒದಗಿಸಲು ಹಾಗೂ ಶಾಲೆಗಳನ್ನು ಸುರಕ್ಷಿತವಾಗಿ ತೆರೆಯಲು ಅಗತ್ಯ ಯೋಜನೆ ರೂಪಿಸುವಂತೆ ಮನವಿ ಮಾಡಲಾಗಿತ್ತು. ಇದರೊಂದಿಗೆ ಶಾಲೆಗಳಲ್ಲಿ ನೈರ್ಮಲ್ಯ ಮತ್ತು ಕೈ ತೊಳೆಯುವ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಹಣವನ್ನು ಒದಗಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿತ್ತು.
ಕರ್ನಾಟಕ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯದಲ್ಲಿ ಶಿಕ್ಷಣದ ಅಭ್ಯುದಯಕ್ಕಾಗಿ ಯೋಜನೆಯ ಅಗತ್ಯವಿತ್ತು. ಆದರೆ ಈ ಬಗ್ಗೆ
ಸ್ಪಷ್ಟ ಯೋಜನೆಗಳಿಲ್ಲ. ಸಾರ್ವಜನಿಕ ಶಿಕ್ಷಣ ವಲಯವು ತನ್ನ ಆದ್ಯತೆಯ ಕ್ಷೇತ್ರವಲ್ಲ ಎಂದು ಕೇಂದ್ರ ಸರಕಾರ ಈ ಆಯವ್ಯಯದ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಒಟ್ಟಾರೆ, ಶಾಲಾ ಶಿಕ್ಷಣಕ್ಕಾಗಿ ನಿಗದಿಪಡಿಸಿದ ಆಯವ್ಯಯ ತೀರಾ ಕಡಿಮೆ
ಮತ್ತು ನಿರಾಶಾದಾಯಕವಾಗಿದ್ದು, ಸಾರ್ವಜನಿಕ ಶಿಕ್ಷಣದಲ್ಲಿ ತಾರತಮ್ಯ ಮತ್ತು ಅಸಮಾನತೆ ಮುಂದುವರಿಯಲಿದೆ.
ಅನಿಯಂತ್ರಿತ ಖಾಸಗೀಕರಣ ಹಾಗೂ ವ್ಯಾಪಾರೀಕರಣ ಮತ್ತಷ್ಟು ಹೆಚ್ಚಲಿದೆ. ಕೇಂದ್ರ ಸರಕಾರದಿಂದ ಶಿಕ್ಷಣ ಇಲಾಖೆಗೆ ಇನ್ನಷ್ಟು ಅನುದಾನ ಹಾಗೂ ಕರೋನಾ ನಂತರ ಶಿಕ್ಷಣ ಇಲಾಖೆ ಮತ್ತಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಯೋಜನೆ ರೂಪಿಸುವ ಭರವಸೆ ಈಡೇರಿಲ್ಲ.