Saturday, 23rd November 2024

ಕೊನೆ ಓವರಿನಲ್ಲಿ ವಿಕೆಟ್‌ ಕಿತ್ತ ಬೂಮ್ರಾ: ಇಂಗ್ಲೆಂಡ್‌ ಕಳಾಹೀನ

ಚೆನ್ನೈ: ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್‌ಗೆ ಕಡೇ ಓವರ್‌ನಲ್ಲಿ ಬೂಮ್ರಾ ಆಘಾತ ನೀಡಿದರು. 87 ರನ್‌ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂ ರಿದ್ದ ಸಿಬ್ಲಿ ಅವರನ್ನು ಜಸ್ಪ್ರಿತ್‌ ಬೂಮ್ರಾ ಎಲ್‌ಬಿ ಬಲೆಗೆ ಕೆಡವಿದರು. ಈ ಮೂಲಕ ಇಂಗ್ಲೆಂಡ್‌ಗೆ ಕೊನೆ ಗಳಿಗೆಯಲ್ಲಿ ಪೆಟ್ಟು ಬಿತ್ತು. ಜೋ ರೂಟ್‌ ಎರಡನೇ ದಿನಕ್ಕೆ ವಿಕೆಟ್‌ ಉಳಿಸಿಕೊಂಡಿದ್ದಾರೆ.

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವಿಡೀ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್, ನಾಯಕ ಜೋ ರೂಟ್‌ ಅಜೇಯ ಶತಕ (128*) ಮತ್ತು ಡಾಮಿನಿಕ್ ಸಿಬ್ಲಿ (87) ನೆರವಿನೊಂದಿಗೆ ಮೊದಲ ದಿನದಾಟದ ಅಂತ್ಯಕ್ಕೆ 89.3 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿದೆ.

ಊಟದ ವಿರಾಮಕ್ಕೆ ಸ್ವಲ್ಪ ಮೊದಲು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಎದುರಾಳಿಗಳಿಗೆ ಮೊದಲ ಆಘಾತ ನೀಡಿದರು. ರೋರಿ ಬರ್ನ್ಸ್ (33) ಹೊರದಬ್ಬುವಲ್ಲಿ ಅಶ್ವಿನ್‌ ಯಶಸ್ವಿಯಾದರು. ಅದರ ಹಿಂದೆಯೇ ಬೌಲಿಂಗ್‌ ದಾಳಿಗೆ ನಿಂತ ಜಸ್ಪ್ರಿತ್‌ ಬೂಮ್ರಾ ಅವರ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿದ ಡ್ಯಾನಿಯಲ್ ಲಾರೆನ್ಸ್ ಖಾತೆ ತೆರೆಯಲಾಗದೇ ಪೆವಿಲಿಯನ್‌ಗೆ ಮರಳಿದರು.

ಭಾರತದ ಪರ ಜಸ್ಪ್ರಿತ್‌ ಬೂಮ್ರಾ 18.3 ಓವರ್‌ ಮಾಡಿ, 40 ರನ್‌ ನೀಡಿ ಎರಡು ವಿಕೆಟ್ ಕಿತ್ತಿದ್ದಾರೆ. 24 ಓವರ್‌ ಮಾಡಿ 68 ರನ್‌ ನೀಡಿ ರವಿಚಂದ್ರನ್‌ ಅಶ್ವಿನ್‌ ಅವರು 1 ವಿಕಟ್‌ ಗಳಿಸಿದ್ದಾರೆ.