ವಿಶ್ವಮಟ್ಟದಲ್ಲಿ ಭಾರತ ಸ್ಪರ್ಧಿಸಬೇಕು ಎಂದರೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ನೂತನ ಕೈಗಾರಿಕೆಗಳಿಗೆ ಅವಕಾಶ ನೀಡುವುದು ಅವಶ್ಯಕ. ಆದರೆ ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ನಾಶ ಮಾಡುತ್ತ ಹೋದರೆ, ಭವಿಷ್ಯದಲ್ಲಿ ಅನುಭವಿಸ ಬೇಕಾದವರೂ ನಾವೇ ಆಗಿರುತ್ತೇವೆ.
ಭಾನುವಾರ ಉತ್ತರಾಖಂಡ್‌ನಲ್ಲಿ ಸಂಭವಿಸಿದ ಹಿಮಸ್ಫೋಟದಿಂದ ನೂರಾರು ಮಂದಿ ನಾಪತ್ತೆಯಾಗಿದ್ದು, ಹಲವರು ಅಸುನೀಗಿದ್ದಾರೆ. ಕೇಂದ್ರ ಸರಕಾರ ಈ ಘಟನೆಯಾಗುತ್ತಿದ್ದಂತೆ ಸೇನೆಯನ್ನು ಕಳುಹಿಸಿ, ಸಂತ್ರಸ್ಥರ ನೆರವಿಗೆ ಬಂದಿದೆ. ಇದರೊಂದಿಗೆ ಮೃತಪಟ್ಟವರಿಗೆ ಪರಿಹಾರವನ್ನು ಘೋಷಿಸಿದೆ. ಆದರೆ ಈ ಘಟನೆಯೇ ನಡೆಯದ ರೀತಿಯಲ್ಲಿ ಎಚ್ಚರವಹಿಸಬೇಕಾ
ಗಿರುವುದು ಆಡಳಿತ ನಡೆಸುವ ಸರಕಾರಗಳ ಕರ್ತವ್ಯವಾಗಿದೆ.
ಹಿಮಸ್ಫೋಟಗೊಂಡಿರುವ ಪ್ರದೇಶದಲ್ಲಿ ಕೇಂದ್ರ ಸರಕಾರ ಜಲವಿದ್ಯುತ್ ಉತ್ಪಾದನೆಗೆ ಅನುಕೂಲವಾಗಲೆಂದು ಬೃಹತ್ ಯೋಜನೆಯನ್ನು ರೂಪಿಸಿದೆ. ಈ ವೇಳೆ ಸುತ್ತಮುತ್ತಲಿನ ಕಾಡು ನಾಶವಾಗುವುದಷ್ಟೇ ಅಲ್ಲದೇ ಗುಡ್ಡ ಪ್ರದೇಶವನ್ನು ಕತ್ತರಿಸಲಾಗಿದೆ. ಇದರೊಂದಿಗೆ ಜಾಗತಿಕ ತಾಪಮಾನದಲ್ಲಿಯೂ ಗಣನೀಯವಾಗಿ ಏರಿಕೆ ಕಂಡಿರುವುದರಿಂದ ಹಿಮಗಲ್ಲುಗಳು ಕರಗಿ ಈ ರೀತಿಯ ದುರಂತ ಸಂಭವಿಸಿದೆ.
ಉತ್ತರಾಖಂಡ್‌ನಲ್ಲಿ ಸಂಭವಿಸಿರುವ ಈ ದುರಂತ ಇದೇ ಮೊದಲು ಸಂಭವಿಸಿರುವುದಲ್ಲ. ಈ ಹಿಂದೆ ಕೆಲ ವರ್ಷದ ಹಿಂದೆಯೂ ಇದೇ ರೀತಿ ಹಿಮಗಲ್ಲು ಕರಗಿ, ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಮಯದಲ್ಲಿಯೇ ಪರಿಸರ ತಜ್ಞರು ಈ ಭಾಗದಲ್ಲಿ ಯಾವುದೇ ಬೃಹತ್ ಯೋಜನೆಗಳನ್ನು ತರುವುದು ಸರಿಯಲ್ಲ ಎನ್ನುವ ವರದಿಯನ್ನು ನೀಡಿದ್ದರು. ಆದರೂ ಅಭಿವೃದ್ಧಿಯ ನೆಪದಲ್ಲಿ ಬೃಹತ್ ಜಲವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗಿದೆ.
ಇದರಿಂದ ಒತ್ತಡ ಹೆಚ್ಚಾಗಿ ಈ ರೀತಿಯ ಅನಾಹುತ ಸಂಭವಿಸಿರಬಹುದು. ಈ ಘಟನೆ ಕೇವಲ ಉತ್ತರಾಖಂಡಕ್ಕೆ ಮಾತ್ರ ಸೀಮಿತ ವಾಗಿ ನೋಡಬಾರದು. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಅಭಿವೃದ್ಧಿಯ ಹೆಸರಲ್ಲಿ ಪರಿಸರವನ್ನು ನಾಶಪಡಿ ಸಲು ಅನೇಕ ಬಾರಿ ಸರಕಾರಗಳು ಮುಂದಾಗುತ್ತಿವೆ. ಪರಿಸರ ಸಂರಕ್ಷಣೆ ಒಂದು ಭಾಗವಾದರೆ, ಪರಿಸರದ ರಕ್ಷಣೆಯನ್ನು ಇನ್ನೊಂದು ಭಾಗ. ಆದ್ದರಿಂದ ಈ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟ ನಿಲುವು ಪಡೆದು, ಜಾಗತಿಕ ತಾಪಮಾನವನ್ನು ನಿಯಂತ್ರಿಸಿದಾಗ ಮಾತ್ರ ಇಂಥ ದುರ್ಘಟನೆಗಳು ಕೊನೆಯಾಗಲು ಸಾಧ್ಯ.