ಸಾವಳಗಿ ಪ್ರಥಮ ದರ್ಜೆ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಶುಲ್ಕ ಮರು ಪಾವತಿ ಮಾಡದಿದ್ದಲ್ಲಿ ಪ್ರತಿಭಟನೆ ಎಚ್ಚರಿ
ವಿಶೇಷ ವರದಿ: ಸದಾಶಿವ ಭೂಪಾಲ ಅಕ್ಕಿವಾಡ
ಸಾವಳಗಿ: ಗ್ರಾಮದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡದೇ ಸಾಮಾನ್ಯ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶುಲ್ಕವಷ್ಟು ಪಡೆಯುತ್ತಿದ್ದು ಇದರಿಂದ ದಲಿತ ವಿದ್ಯಾರ್ಥಿಗಳಿಗೆ ಬಾರಿ ವಂಚನೆ ಮಾಡುತ್ತಿರುವ ಪ್ರಾಚಾರ್ಯರ ವಿರುದ್ಧ ವಿದ್ಯಾರ್ಥಿಗಳು ಹಾಗು ದಲಿತ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ 200 ಫೀ ಹಾಗು ಸಾಮಾನ್ಯ ವಿದ್ಯಾರ್ಥಿಗಳಿಗೆ 1000 ರು. ನಿಗದಿಪಡಿಸಿದ್ದಾರೆ. ಆದರೆ ಇಲ್ಲಿನ ಪ್ರಾಚಾರ್ಯರು ತಮ್ಮ ಮನಬಂದಂತೆ ಫೀ ತೆಗೆದುಕೊಂಡು ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೇಳಲು ಹೋದರೆ ಇದು ವಿಶ್ವವಿದ್ಯಾಲಯದ ಆನಲೈನ ತಪ್ಪು ಅದಕ್ಕೆ ನಾವೇನು ಮಾಡಲು ಸಾದ್ಯವಿಲ್ಲ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ವಿದ್ಯಾರ್ಥಿ ವೇತನದಲ್ಲೂ ತಾರತಮ್ಯ: ಸಮೀಪದ ಜಮಖಂಡಿ ಹಾಹೂ ಹುನ್ನೂರ ಕಾಲೇಜಿನಲ್ಲಿ ಎಸ್ಸಿ ವಿದ್ಯಾರ್ಥಿಗಳಿಗೆ 200 ರು. ಪಡೆಯುತ್ತಾರೆ. ಆದರೇ ಸಾವಳಗಿಯಲ್ಲಿ ಮಾತ್ರ 1000 ರು. ಪಡೆಯುವುದು ಏಕೆ? ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದಾದರೂ ಏಕೆ? ಎಂಬುವದು ದಲಿತ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಸೋಮವಾರ ಕಾಲೇಜು ಪ್ರವೇಶದ ಶುಲ್ಕ ತುಂಬುವ ಕೊನೆಯ ದಿನಾಂಕವಾಗಿತ್ತು. ನಂತರ ತುಂಬಿದವರಿಗೆ ದಂಡ ವಿಧಿಸ ಲಾಗುವುದೆಂದು ಕಾಲೇಜಿನ ಸಿಬ್ಬಂದಿ ತಿಳಿಸಿದಾಗ ಹಲವಾರು ವಿದ್ಯಾರ್ಥಿಗಳು 1000 ರು. ತುಂಬಿದ್ದಾರೆ.
ನಂತರ ಈ ವಿಷಯ ದಲಿತ ಸಂಘಟನೆಯ ಮುಖಂಡರ ಗಮನಕ್ಕೆ ಬಂದಾಗ ಮಧ್ಯಾಹ್ನದ ಅವಧಿಯಲ್ಲಿ 200 ಫೀ ತುಂಬಿ ಕೊಳ್ಳಲು ಪ್ರಾರಂಭಿಸಿದರು. ಈ ಹಿಂದೆ ತುಂಬಿದ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ಸಂಬಂದಿಸಿದವರು ಕ್ರಮ ಕೈಗೊಳ್ಳುತ್ತಿಲ್ಲ.
ಪ್ರಾಚಾರ್ಯರಿಂದ ಅನ್ಯಾಯ: ಪ್ರತಿ ವರ್ಷ ಬೇರೆ ಸರಕಾರಿ ಕಾಲೇಜಿನಲ್ಲಿ 5000 ರು. ವಿದ್ಯಾರ್ಥಿ ವೇತನ ಸರಕಾರದಿಂದ ಬಿಡುಗಡೆಯಾಗುತ್ತದೆ. ಆದರೇ ಇಲ್ಲಿನ ಎಸ್.ಸಿ. ವಿದ್ಯಾರ್ಥಿಗಳಿಗೆ ಕೇವಲ 3000 ವೇತನ ಜಮೆಯಾಗುತ್ತದೆ. ಸಂಬಂಧಿಸಿದ ಪ್ರಾಚಾರ್ಯರು ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಿದ್ದಾರೆ. ದಲಿತ ಕುಟುಂಬದಲ್ಲಿ ಜನಿಸಿದ ಹಲವಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿದ್ಯಾವಂತರಾಗಲಿ ಎಂದು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಕಾಲೇಜಿನವರು ಮಾತ್ರ ವಿದ್ಯಾರ್ಥಿಗಳ ಹಣಕ್ಕೆ ಕತ್ತರಿ ಹಾಕುತ್ತಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಕೂಡಲೇ ಎಸ್ಸಿ, ಎಸ್ಟಿ. ವಿದ್ಯಾರ್ಥಿಗಳಿಂದ ಪಡೆದ ಹೆಚ್ಚಿನ ಹಣವನ್ನು ವಾಪಸ್ಸು ನೀಡಬೇಕು. ಹೊಸದಾಗಿ ಶುಲ್ಕ ಕಟ್ಟುವವರಿಗೆ ಸರಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆದುಕೊಳ್ಳಬೇಕು. ಸಂಪೂರ್ಣ ವಿದ್ಯಾರ್ಥಿ ವೇತನವನ್ನು ನೀಡಬೇಕು. ಇಲ್ಲದಿದ್ದರೇ ಕಾಲೇಜು ಪ್ರಾಚಾರ್ಯರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗು ದಲಿತ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಕೋಟ್ಸ್
ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಪ್ರಾಚಾರ್ಯರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಶುಲ್ಕ, ವಿದ್ಯಾರ್ಥಿ ವೇತನದಲ್ಲಾಗುತ್ತಿರುವ ಗೋಲ್ ಮಾಲ್ ಕುರಿತು ಶಾಸಕ ಆನಂದ ನ್ಯಾಮಗೌಡ ಅವರ ಜತೆಗೆ ಚರ್ಚಿಸುತ್ತೇನೆ. ದಲಿತ ವಿದ್ಯಾರ್ಥಿಗಳಿಂದ ಪಡೆದ ಹೆಚ್ಚಿನ ಹಣವನ್ನು ಮರಳಿ ನೀಡದಿದ್ದರೇ ಕಾಲೇಜು ವಿರುದ್ಧ ಪ್ರತಿಭಟನೆ ಮಾಡುತ್ತೇವೆ.
-ಅನೀಲ ತಿಕೋಟಾ ತಾಲೂಕು ಅಧ್ಯಕ್ಷರು, ದಲಿತ ಸಂಘರ್ಷ ಸಮಿತಿಯ ಜಮಖಂಡಿ
ವಿಶ್ವವಿದ್ಯಾಲಯದ ಆನ್ಲೈನ್ ಸಮಸ್ಯೆಯಿಂದಾಗಿ ಎಸ್ಸಿ ವಿದ್ಯಾರ್ಥಿಗಳಿಗೆ 1,000 ಫೀ ಪಡೆದಿದ್ದೇವೆ. ಸೋಮವಾರ 200 ಫೀ ತುಂಬಿಕೊಳ್ಳಲು ಅವಕಾಶ ನೀಡಿದಾಗ ಉಳಿದ ವಿದ್ಯಾರ್ಥಿಗಳಿಂದ 200 ರು. ಮಾತ್ರ ಪಡೆದಿದ್ದೇವೆ. ಈ ಹಿಂದೆ 1,000 ಕೊಟ್ಟ
ವಿದ್ಯಾರ್ಥಿಗಳ ಹಣ ಮರಳಿ ನೀಡಲಾಗುತ್ತದೆ. ಇನ್ನು ವಿದ್ಯಾರ್ಥಿವೇತನ 3 ದಿನಗಳಲ್ಲಿ ಜಮೆಯಾಗಲಿದೆ.
-ದಯಾನಂದ ಬೆಳ್ಳಗಿ ಪ್ರಾಚಾರ್ಯರು,
ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾವಳಗಿ
ದಲಿತ ವಿದ್ಯಾರ್ಥಿಗಳಿದ್ದೇವೆ ಎಂಬ ಕಾರಣದಿಂದ ನಮಗೆ ಕಳೆದ ವರ್ಷದಲ್ಲಿ ಅರ್ಧ ವಿದ್ಯಾರ್ಥಿವೇತನ ಮಾತ್ರ ನೀಡಿದ್ದಾರೆ. ಈ ವರ್ಷದಲ್ಲಿ ಹೆಚ್ಚಿನ ಶುಲ್ಕ ಪಡೆದು ನಮ್ಮನ್ನು ಪದವಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಿದೆ.
-ಉಮೇಶ ವಿದ್ಯಾರ್ಥಿ