Friday, 1st November 2024

ಬಿಳಿಯಾನೆ ಆದ ಎಸಿಬಿ

4 ವರ್ಷದಲ್ಲಿ ಬೆರಳೆಣಿಕೆಯಷ್ಟು ವಿಲೇವಾರಿ

ಪ್ರತಿವರ್ಷ ಕೋಟಿ ಕೋಟಿ ವೆಚ್ಚ

ಬಹುತೇಕ ಪ್ರಕರಣಗಳು ಇಲಾಖಾ ತನಿಖೆ ಹೆಸರಲ್ಲಿ ಕ್ಲೋಸ್

ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ಬಂದ ಎಸಿಬಿಯಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವುದಕ್ಕಿಂತ ಹೆಚ್ಚಾಗಿ, ಅನವಶ್ಯಕವಾಗಿ ದುಂದುವೆಚ್ಚ ಮಾಡುವ ಸಂಸ್ಥೆಯಾಗುತ್ತಿದೆ ಎನ್ನುವ ಆರೋಪ ಶುರುವಾಗಿದೆ.

ಹೌದು, ಕರ್ನಾಟಕದ ಭ್ರಷ್ಟಾಚಾರಿಗಳಿಗೆ ಒಂದು ಮಟ್ಟಿಗೆ ಸಿಂಹಸ್ವಪ್ನವಾಗಿದ್ದ ‘ಲೋಕಾಯುಕ್ತ’ಕ್ಕೆ ಪರ್ಯಾಯವಾಗಿ ಆರಂಭಿಸಿದ ಎಸಿಬಿ, ಇದೀಗ ಭ್ರಷ್ಟಾಚಾರ ಅಧಿಕಾರಿಗಳ ವಿರುದ್ಧ ದಾಳಿ ಮಾಡುವ ಯಂತ್ರವಾಗಿದೆ ಹೊರತು, ಈ ಪ್ರಕರಣ
ಗಳನ್ನು ತಾರ್ತಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಂಪೂರ್ಣ ವಿಫಲ ವಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಬೆರಳೆಣಿಕೆ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ: 2016ರಲ್ಲಿ ಸ್ಥಾಪನೆಗೊಂಡ ಎಸಿಬಿ ಕಳೆದ ನಾಲ್ಕು ವರ್ಷದಲ್ಲಿ ರಾಜ್ಯಾದ್ಯಂತ ಸಾವಿರಾರು ದಾಳಿಯನ್ನು ನಡೆಸಿದೆ. ಅದೇ ರೀತಿ ಕಳೆದ ನಾಲ್ಕು ವರ್ಷದಲ್ಲಿ ಸುಮಾರು 19ಸಾವಿರಕ್ಕೂ ಹೆಚ್ಚು ದೂರು ಗಳನ್ನು ಪಡೆದಿದೆ. ಆದರೆ, ಇದರಲ್ಲಿ ಬೆರಳೆಣಿಕೆ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ನೀಡಿದ್ದು, ಇನ್ನುಳಿದ ಪ್ರಕರಣಗಳು ಪೆಂಡಿಂಗ್ ‌ನಲ್ಲಿವೆ ಎನ್ನುವ ಆರೋಪ ಕೇಳಿ ಬಂದಿದೆ.

ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಭಾಗದಲ್ಲಿ ದಾಳಿ ನಡೆಸುತ್ತಿದ್ದಾರೆ. ಆದರೆ, ಈ ದಾಳಿಯ ಬಳಿಕ ಈ ಪ್ರಕರಣವನ್ನು
ಇಲಾಖಾ ತನಿಖೆಯ ನೆಪದಲ್ಲಿ ಇಲಾಖೆಗಳಿಗೆ ವರ್ಗಾಯಿಸುತ್ತಾರೆ. ಇಲ್ಲವೇ ನ್ಯಾಯಾಲಯದ ಮುಂದೆ ಪ್ರಕರಣವನ್ನು ದಾಖಲಿಸಿ ದ್ದಾರೆ. ಈ ಪ್ರಕರಣಗಳು ಪೂರ್ಣಗೊಳ್ಳಲು ವರ್ಷಗಟ್ಟಲೇ ಹಿಡಿಯುವುದರಿಂದ, ಅಧಿಕಾರಿಗಳು ಯಾವುದೇ ಸಮಸ್ಯೆಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಕೇವಲ 3 ಪ್ರಕರಣಗಳು ಇತ್ಯರ್ಥ: ರಾಜ್ಯದಲ್ಲಿ ಲೋಕಾಯುಕ್ತ ಬಲಿಷ್ಠವಾಗಿದ್ದಾಗ ಡಿ ಗ್ರೂಪ್ ನೌಕರನಿಂದ, ಐಎಎಸ್ ಅಧಿ
ಕಾರಿ ಸೇರಿದಂತೆ ಹಲವು ಸಚಿವರ ವಿರುದ್ಧ ದಾಳಿ ನಡೆಸಿ ಪ್ರಕರಣ ದಾಖಲಿಸ ಲಾಗಿತ್ತು. ಲೋಕಾಯುಕ್ತದ ಪ್ರಕರಣದಿಂದಲೇ ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಭಾರಿ ಸಮಸ್ಯೆಯಾಗಿತ್ತು. ಆದರೀಗ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದರೂ, ಅದನ್ನು ಎಸಿಬಿ ವಿಚಾರಣೆ ನಡೆಸಬೇಕಿದೆ. ಇದರಿಂದ ಭ್ರಷ್ಟಾಚಾರಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವುದು ತಿಳಿದುಬಂದಿದೆ.

2016ರಲ್ಲಿ ರಚನೆಯಾದ ಎಸಿಬಿಗೆ ಇಲ್ಲಿಯವರೆಗೆ ಒಟ್ಟು 19,909 ದೂರುಗಳು ಬಂದಿವೆ. ಇದರಲ್ಲಿ ಹಿರಿಯ-ಕಿರಿಯ ಅಧಿಕಾರಿಗಳ ವಿರುದ್ಧ ದೂರುಗಳಿವೆ. ಈ ಪೈಕಿ 11,996 ಪ್ರಕರಣ ಅನಾಮಧೇಯವಾಗಿರುವುದರಿಂದ ಕೈಬಿಡಲಾಗಿದೆ. ಒಟ್ಟು 1027 ದೂರು ಗಳನ್ನು ಪರಿಗಣಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು 2604 ಪ್ರಕರಣಗಳು ಬಾಕಿಯಿವೆ.

ಭ್ರಷ್ಟಾಚಾರದ ದೂರು ಕೇಳಿಬರುತ್ತಿದ್ದಂತೆ, ದಾಳಿ ನಡೆಸಿದರೆ ಮಾತ್ರ ಈ ಪ್ರಕರಣಗಳು ತಾರ್ತಿಕ ಅಂತ್ಯ ಕಾಣುತ್ತವೆ. ಇಲ್ಲದಿದ್ದರೆ, ಅಧಿಕಾರಿಗಳು ಬಚಾವ್ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಎಸಿಬಿ ಇಲ್ಲಿಯವರೆಗೆ ನಡೆಸಿರುವ ಸಾವಿರಾರು ದಾಳಿ ಪೈಕಿ ಕೆಲದರಲ್ಲಿ ಮಾತ್ರ ಎಫ್‌ಐಆರ್ ದಾಖಲಾಗಿದ್ದು, ಈ ಪೈಕಿ ಕೇವಲ ಮೂರು ಪ್ರಕರಣಗಳಲ್ಲಿ ಮಾತ್ರ ಸರಕಾರಿ ಸಿಬ್ಬಂದಿಗೆ
ಶಿಕ್ಷೆಯಾಗಿದೆ. ಈ ಮೂವರು ಸಹ ಕಿರಿಯ ಶ್ರೇಣಿಯ ಅಧಿಕಾರಿಗಳಾಗಿದ್ದಾರೆ. ಆದ್ದರಿಂದ ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಲೋಕಾಯುಕ್ತವನ್ನು ಬಲಪಡಿಸುವ ಭರವಸೆಯನ್ನು ನೀಡಲಾಗಿತ್ತು. ಇದೀಗ ಈ ಮಾತನ್ನು ಉಳಿಸಿಕೊಳ್ಳಬೇಕಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಸರಕಾರ ಬಂದರೆ ಲೋಕಯುಕ್ತರಿಗೆ ಪರಮಾಧಿಕಾರ ನೀಡಿ ಎಸಿಬಿ ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತಿದ್ದರೂ, ಈ ಕೆಲಸಕ್ಕೆ ಸರಕಾರ ಕೈಹಾಕುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಭಯವಿಲ್ಲ. ಆದರೆ, ಇನ್ನೂ ರಾಜ್ಯದಲ್ಲಿ ಭ್ರಷ್ಟಾಚಾರ ನಿಂತಿಲ್ಲ.

– ಮರಿಲಿಂಗಗೌಡ ಮಾಲಿಪಾಟೀಲ್
ಸಾಮಾಜಿಕ ಕಾರ್ಯಕರ್ತ