Friday, 22nd November 2024

ಎರಡನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಫೆ.13 ಶನಿವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದೆ.

ಗಾಯದ ತೊಂದರೆಗೆ ಸಿಲುಕಿರುವ ಜೋಫ್ರಾ ಆರ್ಚರ್ ಸೇವೆಯಿಂದ ಇಂಗ್ಲೆಂಡ್ ವಂಚಿತವಾಗಿದೆ. ಜೊತೆಗೆ ಮುಂಬರುವ ಸೀಮಿತ ಓವರ್‌ಗಳ ಸರಣಿಯನ್ನು ಪರಿಗಣಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಅವರಿಗೆ ವಿಶ್ರಾಂತಿ ಸೂಚಿಸಲಾ ಗಿದ್ದು, ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ.

ಅನುಭವಿ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್ ಗೈರು ಹಾಗೂ ಡಾಮ್ ಬೆಸ್ ಅವಕಾಶ ವಂಚಿತವಾಗಿದ್ದಾರೆ. ಇವರ ಬದಲಿಗೆ ಬೆನ್ ಫೋಕ್ಸ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತು ಮೊಯಿನ್ ಅಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಫೋಕ್ಸ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅಂತಿಮ ಎರಡು ಪಂದ್ಯಗಳಿಗೆ ಜಾನಿ ಬೆಸ್ಟೊ ಸ್ಪೆಷಲಿಷ್ಟ್ ಬ್ಯಾಟ್ಸ್‌ ಮನ್ ಆಗಿ ಮರಳುವ ಸಾಧ್ಯತೆಯಿದೆ ಎಂದು ರೂಟ್ ತಿಳಿಸಿದರು.

ಚೆನ್ನೈನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಸರಣಿಯ ಅಂತಿಮ ಎರಡು ಪಂದ್ಯಗಳು ಅಹಮ ಬಾದ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಆತಿಥೇಯ ಭಾರತ ತಂಡದಲ್ಲೂ ಮಹತ್ವದ ಬದಲಾವಣೆ ಸಾಧ್ಯತೆಯಿದ್ದು, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.