Friday, 29th November 2024

ವಿಶೇಷಚೇತನ ಸ್ತ್ರೀಯರಿಗೆ ಬೇಕಿದೆ ಆಸರೆ

ಆರೈಕೆ ಕೇಂದ್ರ ಅಗತ್ಯವಿದೆ

ದೌರ್ಜನ್ಯ ತಡೆಗಟ್ಟಬೇಕಿದೆ

ವಿಶೇಷ ವರದಿ: ರಂಗನಾಥ ಕೆ.ಮರಡಿ

ತುಮಕೂರು: ಜಿಲ್ಲೆಯಲ್ಲಿ ಮಾನಸಿಕ ವಿಶೇಷಚೇತನ ಮಹಿಳೆಯರನ್ನು ಆರೈಕೆ ಮಾಡುವ ಕೇಂದ್ರ ಆರಂಭವಾಗಬೇಕಿದೆ.
ಪುರುಷರಿಗೆ ನಿರಾಶ್ರಿತರ ಕೇಂದ್ರವಿದೆ. ಆದರೆ ಅನಾಥ, ಬುದ್ದಿಮಾಂದ್ಯ, ವಿಶೇಷಚೇತನ ಸ್ತೀಯರನ್ನು ಪೋಷಿಸುವ ಕೇಂದ್ರವಿಲ್ಲದೇ ಇರುವುದು ಆತಂಕದ ಸಂಗತಿ.

ವಿಶೇಷಚೇತನ ಮಹಿಳೆಯರನ್ನು ಸಮಾಜದಲ್ಲಿ ಗೌರವಿಸುವುದು ಕಡಿಮೆ. ಇವರನ್ನು ಕಂಡರೆ ದೂರು ಓಡಿಸುವವರು ಹೆಚ್ಚಾಗಿ
ಕಂಡುಬರುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಇವರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇವರನ್ನು ರಕ್ಷಿಸುವ ಕಾರ್ಯವನ್ನು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರವೇ ಮಾಡಬೇಕಿದೆ.

ಜಿಲ್ಲೆಯಲ್ಲಿ ಯಾವುದೇ ಕೇಂದ್ರವಿಲ್ಲದ ಕಾರಣ ಬೆಂಗಳೂರಿನ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಆದರೆ ಬೆರಳೆಣಿಕೆಯಷ್ಟು ಮಹಿಳೆಯರನ್ನು ಮಾತ್ರ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಊಟ, ವಸತಿ, ಆರೈಕೆಯಿಲ್ಲದೆ ಬೀದಿ ಯಲ್ಲಿ ಅನಾಥ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ವೃದ್ದರು ಆರೋಗ್ಯ ಸಮಸ್ಯೆಯಿಂದಾಗಿ ಪ್ರಾಣ ಕಳೆದು ಕೊಂಡಿರುವ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.

*ಜಿಲ್ಲೆಯಲ್ಲಿ ಅನಾಥ ಮಹಿಳೆಯರಿಗೆ ಆರೈಕೆ ಕೇಂದ್ರ.
*ಬುದ್ದಿಮಾಂದ್ಯ, ವಿಶೇಷಚೇತನ ಮಹಿಳೆಯರ ಮೇಲೆ ನಡೆಯುತ್ತಿದೆ ದೌರ್ಜನ್ಯ.
*ಬೆರಳೆಣಿಕೆಯಷ್ಟು ಮಹಿಳೆಯರನ್ನು ಮಾತ್ರ ಬೆಂಗಳೂರು ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
*ಇಂತಹ ಸ್ತ್ರೀಯರನ್ನು ಸಮಾಜ ಗೌರವಿಸುವುದು ಕಡಿಮೆ.
*ಜಿಲ್ಲೆಯಲ್ಲಿ ಪುರುಷರ ನಿರಾಶ್ರಿತರ ಕೆಂದ್ರವಿದೆ.

ಕೋಟ್ಸ್‌

ಜಿಲ್ಲೆಯಲ್ಲಿ ಮಾನಸಿಕ ವಿಶೇಷಚೇತನ, ಬುದ್ದಿಮಾಂದ್ಯ ಮಹಿಳೆಯರ ಆರೈಕೆ ಕೇಂದ್ರವಿಲ್ಲ. ಇವರಿಗಾಗಿ ಪ್ರತ್ಯೇಕ ವಸತಿ ಗೃಹ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಎಸ್. ನಟರಾಜು ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಬುದ್ದಿಮಾಂದ್ಯ, ಅನಾಥ, ವಿಶೇಷಚೇತನ ಮಹಿಳೆಯರನ್ನು ಜಿಲ್ಲೆಯಲ್ಲಿ ರಕ್ಷಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಳ್ಳಬೇಕಿದೆ. ಇಂತಹ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಮಾನವೀಯತೆಯನ್ನು ಪ್ರಶ್ನಿಸುವಂತಿದೆ.
-ಜಗದೀಶ್ ಸಾಮಾಜಿಕ ಹೋರಾಟಗಾರ