ಬೆಂಗಳೂರು: ವಿವಾದಾತ್ಮಕ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಚಿತ್ರಮಂದಿರಗಳಲ್ಲಿ ‘ಪೊಗರು’ ಚಿತ್ರದ ಪ್ರದರ್ಶನ ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನಕಾರಿ ದೃಶ್ಯಗಳ ಆರೋಪದ ವಿವಾದದ ಕುರಿತು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿರುವ ಕರಂದ್ಲಾಜೆ, ಹಿಂದೂಗಳನ್ನು ಅವಮಾನಿಸುವುದು, ಹಿಂದೂಗಳ ಭಾವನೆಗೆ ಧಕ್ಕೆ ತರುವುದು ಫ್ಯಾಷನ್ ಆಗಿದೆ. ಬೇರೆ ಧರ್ಮಗಳನ್ನು ಅಪಮಾನ ಮಾಡುವ ಧೈರ್ಯ ನಿಮಗಿದೆಯೇ? ಹಿಂದೂ ಧರ್ಮಗಳ ಭಾವನೆಗೆ ಧಕ್ಕೆ ತರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಫೆ.19 ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕೆ ವಿವಾದ ಅಂಟಿ ಕೊಂಡಿದೆ. ಚಿತ್ರದಲ್ಲಿ ಬ್ರಾಹ್ಮಣರಿಗೆ ಅಪಮಾನಗೊಳಿಸುವ ದೃಶ್ಯಗಳನ್ನು ತೆಗೆದು ಹಾಕುವಂತೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೇತೃತ್ವದಲ್ಲಿ ಪ್ರತಿಭಟನೆ ಕೂಡ ವ್ಯಕ್ತವಾಗಿತ್ತು. ನಿರ್ದೇಶಕರು ಕ್ಷಮೆ ಕೋರುವ ಮೂಲಕ ವಿವಾದಕ್ಕೆ ತೆರೆ ಬಿದ್ದಂತಾಗಿದೆ.