ವಿಶಾಖಪಟ್ಟಣಂ: ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಆರೋಪದ ಮೇಲೆ ಇಬ್ಬರು ಆರೋಪಿ ಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್ಪೋಸ್ಟ್ನಲ್ಲಿ ಬಂಧಿಸಲಾಗಿದ್ದು, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಅಂತಾರಾಜ್ಯ ದಂಧೆಕೋರರು ಎಂಬುದಾಗಿ ತಿಳಿದುಬಂದಿದೆ. ಛತ್ತೀಸ್ಗದ ರಾಯ್ಪುರದಿಂದ ಆಂಧ್ರದ ವಿಶಾಖ ಪಟ್ಟಣಂ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸುಂಕಿ ಔಟ್ಪೋಸ್ಟ್ನಲ್ಲಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದಾಗ 500 ರೂ. ನೋಟಿನ ಕಂತೆಗಳ ಒಟ್ಟು 7.9 ಕೋಟಿ ರೂ. ನಕಲಿ ಹಣ ಪತ್ತೆಯಾಗಿದೆ.
ಆಂಧ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಹ ಘೋಷಣೆಯಾಗಿದ್ದು, ಮಾರ್ಚ್ 10ರಂದು ಮತದಾನ ನಡೆಯಲಿದೆ. ಇದರ ಬೆನ್ನಲ್ಲೇ ನಕಲಿ ಹಣ ಪತ್ತೆಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದೇ ವೇಳೆ ಆಂಧ್ರ, ಛತ್ತೀಸ್ಗಢ ಮತ್ತು ಒಡಿಶಾ ಮೂರು ರಾಜ್ಯಗಳ ಪೊಲೀಸರು ತಂಡವೊಂದನ್ನು ರಚಿಸಿ ಗ್ಯಾಂಗ್ನ ಉಳಿದ ಸದಸ್ಯರಿಗಾಗಿ ಬಲೆ ಬೀಸಿದೆ.