ಹರ್ಷಿತಾ ಹೆಬ್ಬಾರ್
ಓ ನನ್ನ ಪ್ರೀತಿಯ ಗೆಳೆಯ, ಮಳೆಯಾಗಲಿ ಬಿಸಿಲಾಗಲೀ ನನ್ನ ಜೊತೆ ಎಂದಿಗೂ ಇರುತ್ತೀಯ. ಎಲ್ಲರಿಗೂ ಸ್ನೆೆಹಿತರಿರುತ್ತಾರೆ. ಆದರೆ ನಿನ್ನಂತವರು ಇರಲು ಅಸಾಧ್ಯ. ನಿನ್ನನ್ನು ಪಡೆದ ನಾನು ಪುಣ್ಯವಂತೆ. ಬಣ್ಣ ಬಣ್ಣದ ಪ್ರೀತಿಯ ಈ ನಿನ್ನ ಮನಸ್ಸಲ್ಲಿ ನಾನು ಇರುವೆನಾ? ಅದೆಷ್ಟೊಂದು ಸಹಾಯಪ್ರಜ್ಞೆ!
ನಿನ್ನಂತವನಿಗೆ ಬೆಲೆ ಕಟ್ಟಲು ಅಸಾಧ್ಯ. ಮಳೆ ಬಂದ ಕೂಡಲೇ ನನ್ನ ಈ ಕೈ ಹಿಡಿದು ನನಗೆ ಮಳೆ ನೀರು ತಾಕಬಾರದೆಂದು ಅದೆಷ್ಟು ರಕ್ಷಣೆ ಮಾಡುತ್ತೀ, ಬಿಸಿಲು ಬಂದಾಗ ಕೂಡ ಸುಡು ಬಿಸಿಲಿನಿಂದ ನಿನ್ನ ಗೆಳತಿಯಾದ ನನ್ನನ್ನು ಬಣ್ಣದ ಕೊಡೆ ಹಿಡಿದು
ರಕ್ಷಿಸುತ್ತೀ. ಈ ಬಣ್ಣದ ಜಗತ್ತಿನಲ್ಲಿ ನೀನು ಕೂಡ ರಂಗು. ಒಮ್ಮೊಮ್ಮೆ ನಿನ್ನನ್ನು ಮರೆತು ಎಲ್ಲಿಯಾದರೂ ಬಿಟ್ಟು ಹೋಗಿ ನಂತರ ಓಡಿ ಬಂದು ನನ್ನ ಜೊತೆ ಕರೆದುಕೊಂಡು ಹೋದ ಎಷ್ಟೋ ಉದಾಹರಣೆ ಕೂಡ ಇದೆ.
ಅದಕ್ಕೆ ದಯವಿಟ್ಟು ನನ್ನ ಕ್ಷಮಿಸಿಬಿಡು. ಒಮ್ಮೊಮ್ಮೆ ನಾನು ನಿನ್ನನ್ನು ತುಂಬಾ ನೆನಪು ಮಾಡಿಕೊಳ್ಳುತ್ತೇನೆ. ಆಗ ನೀನು ನನ್ನಲ್ಲಿ ಬರಬಾರದೇ ಓ ನನ್ನ ಗೆಳೆಯ, ನಿನ್ನನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ನನ್ನ ಹೃದಯದಲ್ಲಿ ಕಾಪಿಟ್ಟುಕೊಳ್ಳುವೆ. ನಿನಗೆ ಸ್ವಲ್ಪ ಪೆಟ್ಟಾದರೂ, ನಿನ್ನ ಬಟ್ಟೆ ಹರಿದು ಹೋದರೂ ಸರಿಪಡಿಸಿ ಹೊಸ ರೀತಿಯ ಬಟ್ಟೆಯನ್ನು ನಾ ನಿನಗೆ ತೋಡಿಸುವೆ.
ಅಂಗಡಿಗಳಿಗೆ ಹೋದಾಗ ನಿನ್ನ ಹೊರಗೆ ಬೇರೆಯವರ ಜೊತೆ ಬಿಟ್ಟುಹೋಗಲು ಮನಸ್ಸೇ ಇರುವುದಿಲ್ಲ.
ಒಲ್ಲದ ಮನಸ್ಸಲ್ಲಿ ನಿನ್ನ ಬಿಟ್ಟು ಬೇಗ ಅಂಗಡಿಗೆ ಹೋಗಿ ಬರುತ್ತೇನೆ. ಈ ಪ್ರಪಂಚದಲ್ಲಿ ನಿನ್ನ ಹಾಗೆಯೇ ಹಲವಾರು ಇದ್ದಾರೆ. ಆದರೆ ಅಷ್ಟು ಮಂದಿಯ ಮಧ್ಯದಲ್ಲೇ ನಾ ನಿನ್ನ ಹುಡುಕುವೆ. ನನ್ನ ಕೈಯನ್ನೇೇ ನೀ ಭದ್ರವಾಗಿ ಹಿಡಿದಾಗ ನನಗದು ತುಂಬಾ ಖುಷಿ, ಜಂಬ. ಸುಂದರನಾದ ನಿನಗೆ ಇರುವ ಹೆಸರುಗಳು ಹಲವು.
ಈ ನನ್ನ ಗೆಳೆಯನನ್ನು ಎಂದು ನಾ ಮರೆಯಲಾರೆ ಹಾಗೂ ಕೈ ಬಿಡಲಾರೆ. ನೀನು ನಿಯುತ್ತಿನ ಮಹಾರಾಜ. ಎಷ್ಟು ಜನ ನಿನ್ನಲ್ಲಿ ಬಂದು ಸಹಾಯ ಕೇಳಿದರೂ ನೀನು ಹಿಂಜರಿಯದೆ ಸಹಕರಿಸುತ್ತಿಯ. ಒಮ್ಮೊಮ್ಮೆ ನಿನ್ನನ್ನು ಎಲ್ಲೆಲ್ಲೋ ಬೀಳಿಸಿರುತ್ತೇನೆ, ಒಮ್ಮೊಮ್ಮೆ ಓಡಿಬಂದು ನಿನ್ನ ತಬ್ಬಿಕೊಂಡು ಸಹಾಯ ಕೇಳಿದಾಗ ಮುನಿಸಿಕೊಳ್ಳದೆ ನನ್ನ ಈ ಕಾಯನ್ನು ಹಿಡಿದುಕೊಳ್ಳುತ್ತಿಯ. ಥಾಂಕ್ ಯೂ ಗೆಳೆಯಾ….. ನೀ ನನ್ನ ಮಳೆಯ, ಬಿಸಿಲಿನ ನೆನಪಿನಂಗಳದಲ್ಲಿ ತೇಲಿಸಿ, ಆಡಿಸಿ ಸಹಾಯ ಮತ್ತು ಮಮತೆಯ ತುತ್ತನ್ನು ತಿಂದಿಸಿದ್ದೀಯ.
ನನಗೆ ಒಂದು ಸಂಶಯ. ಇಷ್ಟೊಂದು ಪ್ರೀತಿ ತೋರಿಸುವವ ನನಗೆ ನೀನು ಗೆಳೆಯನೋ? ಇನಿಯನೋ? ಎಂದು ತಿಳಿಯುತ್ತಿಲ್ಲ. ನನ್ನ ಗೆಳೆಯನಾಗಿಯೇ ನಿನ್ನನ್ನು ಸ್ವೀಕರಿಸುತ್ತೇನೆ. ನನಗೆ ಮಾತ್ರವಲ್ಲದೆ ನನ್ನ ಸ್ನೇೇಹಿತೆಯರಿಗೂ ಸಹಾಯ ಮಾಡುವ ಮನಸ್ಸು ಈ ನನ್ನ ಪುಟ್ಟ ಗೆಳೆಯನ ಮನಸ್ಸು, ನೀನಂದ್ರೆ ನನಗಿಷ್ಟ. ಎಂದೆಂದೂ ನಿನ್ನ ಈ ಗೆಳತಿಯನ್ನು ಬಿಟ್ಟು ಹೋಗದಿರು , ಓ ನನ್ನ ಪ್ರೀತಿಯ ಗೆಳೆಯ ‘ಛತ್ರಿ’.