Sunday, 15th December 2024

ಶಾಸನಸಭೆಗಳ ಗೌರವಕ್ಕೆ ಧಕ್ಕೆ

ಕೆಲವು ರಾಜಕಾರಣಿಗಳ ವರ್ತನೆಯಿಂದ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಗೌರವಕ್ಕೆ ಕಾರಣವಾಗುತ್ತಿರುವ ನಡೆ ಗೋಚರಿಸುತ್ತಿದೆ.

ಶಾಸನಸಭೆಯಲ್ಲಿ ಶಾಸಕ ಸಂಗಮೇಶ್ವರ ಅಂಗಿ ಬಿಚ್ಚುವ ಮೂಲಕ ಪ್ರತಿಭಟಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ವರ್ತನೆ ಸರಿಯೋ, ತಪ್ಪೋ ಎಂಬ ನಿರ್ಣಯ ನಂತರದ್ದು. ಆದರೆ ಜನರಿಗೆ ಜನಪ್ರತಿನಿಧಿಗಳು ಹಾಗೂ ಶಾಸನಸಭೆಯ ಮೇಲೆ ಅಗೌರವ ಮೂಡಲು ಇಂಥ ವರ್ತನೆಗಳು ಕಾರಣವಾಗುತ್ತಿದೆ. ಇದೇ ವೇಳೆ ಮೇಲ್ಮನೆಯೂ ಮಹತ್ವವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿರುವುದು ದುರಂತದ ಸಂಗತಿ.

2020ರ ಡಿಸೆಂಬರ್ 15ರಂದು ವಿಧಾನ ಪರಿಷತ್‌ನಲ್ಲಿ ನಡೆದ ಕಾಂಗ್ರೆಸ್ – ಬಿಜೆಪಿ ಸದಸ್ಯರ ಜಟಾಪಟಿಯಿಂದ ರಾಜ್ಯದಲ್ಲಿ ಮೇಲ್ಮನೆಯ ಬಗ್ಗೆ ಗೌರವ ಕ್ಷೀಣಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಭಾಪತಿ ಬಸವರಾಜ ಹೊರಟ್ಟಿ ನೀಡಿರುವ ಹೇಳಿಕೆಗಳು ಈ ಅಭಿಪ್ರಾಯವನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ. ಇತ್ತೀಚೆಗೆ ಸದನ ಗಾಂಭೀರ್ಯತೆ ಕಳೆದು  ಕೊಳ್ಳುತ್ತಿದೆ. ಹಿಂದಿನಂತೆ ಇಂದು ಗೌರವಯುತವಾಗಿಲ್ಲ.

ಶೇ.99ರಷ್ಟು ಹಾಜರಾತಿ ಇದ್ದರೂ ಸಚಿವರುಗಳೇ ಗೈರಾದರೆ ಹೇಗೆ? ಒಂದೇ ರೀತಿಯ ಪ್ರಶ್ನೆಗಳನ್ನು ಪದೇ ಪದೆ ಕೇಳುತ್ತಾರೆ. ಕಲಾಪಗಳು ಪ್ರತಿಭಟನೆಗೆ ಬಲಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಂತಕರ ಚಾವಡಿ ಎಂಬುದಾಗಿ ಪರಿಗಣಿಸಲ್ಪಡುತ್ತಿರುವ ಮೇಲ್ಮನೆ ಇಂದು ಮಹತ್ವ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ರದ್ಧತಿ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿವೆ. ಆಂಧ್ರಪ್ರದೇಶದಲ್ಲಿ 1985ರಲ್ಲಿ ಎನ್‌ಟಿಆರ್ ಮೇಲ್ಮನೆಯನ್ನು ರದ್ದು ಗೊಳಿಸಿ ದ್ದರು. ನಂತರ 2007ರಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ ದ್ವಿಸದನ ವ್ಯವಸ್ಥೆ ಜಾರಿಗೊಳಿಸಿತು.

ಮತ್ತೊಮ್ಮೆ ಇದೀಗ ಆಂಧ್ರದಲ್ಲಿ ವಿಧಾನಪರಿಷತ್ ರದ್ದುಗೊಳಿಸುವ ಮಸೂದೆಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಂಪುಟ ಅಸ್ತು ನೀಡಿದೆ. ಇಂಥ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಪರಿಷತ್ ಕಲಾಪಗಳು ಗಂಭೀರತೆಯನ್ನು ಕಳೆದು ಕೊಳ್ಳುತ್ತಿರು ವುದು ದುರಂತದ ಸಂಗತಿ.