Sunday, 15th December 2024

ಕಾಡುವ ಎಡಬಿಡಂಗಿ ಹುಡುಗಿಗೆ…

ಅರ್ಜುನ್ ಶೆಣೈ ಗಾವಳಿ

ಹಾಯ್ ಎಡಬಿಡಂಗಿ,

ನಿನ್ನನ್ನೀಗ ಹೀಗೆ ಕರೀಬೇಕಿದೆ. ಯಾಕೆ ಗೊತ್ತಾ? ಅಲ್ಲಾ, ಈ ಪ್ರಪಂಚದಲ್ಲಿ ಯಾರಾದರೂ ಚಪ್ಪಲಿಯನ್ನು ತಿರುವು ಮುರುವು
ಹಾಕಿಕೊಳ್ಳುತ್ತಾರೇನು? ನಿನ್ನನ್ನು ನೋಡಿದಾಗಲೇ ನನಗೆ ಅಂತಹಾ ವಕ್ರವ್ಯಕ್ತಿ ನನಗೆ ತಕ್ಕುದಾದದ್ದು ಎಂದು ಅನ್ನಿಸಿದ್ದು. ಅದಕ್ಕಾಗಿಯೇ ನಿನಗೆ ಪ್ರೀತಿಯಿಂದ ಎಡಬಿಡಂಗಿ ಎಂದು ನಾಮಕರಣ ಮಾಡಿದ್ದೇನೆ, ಖುಷಿಪಡು.

ಮೊನ್ನೆಯಷ್ಟೇ ನಿನ್ನ ಗೆಳತಿ ಸಿಕ್ಕಿದ್ದಳು. ನಿನ್ನ ಬಾಯ್ತುಂಬಾ ಹೊಗಳಿದಳು(!). ಎಸ್‌ಎಸ್‌ಎಲ್‌ಸಿಯಲ್ಲಿ ನೀನು ಗಣಿತ ಪರೀಕ್ಷೆ ದಿನ, ವಿಜ್ಞಾನ ಓದಿಕೊಂಡು ಹೋಗಿದ್ದಿಯಂತೆ. ಅದನ್ನು ಕೇಳಿ ಒಂದರೆಕ್ಷಣ ಎದೆಬಡಿತ ನಿಂತುಹೋಗಿತ್ತು ನನಗೆ. ಆದಾಗ್ಯೂ 100ಕ್ಕೆ 46ಅಂಕಗಳು ಬಂದುವೆಂದು ಕೇಳಿದಾಗಲೇ ಹೋದ ಉಸಿರು ಮತ್ತೆ ಮರುಕಳಿಸಿದ್ದು.

ಮುಖಕ್ಕೊಂದಿಷ್ಟೂ ಮೇಕಪ್ ಮಾಡದ ನೀನು ನೈಸರ್ಗಿಕ ಪ್ರೇಮಿಯೆಂದು ನಿನ್ನ ಗೆಳತಿ ತಿಳಿಸಿದಳು. ನಿನ್ನ ಬಗ್ಗೆ ನಿನಗಿಂತಲೂ
ಹೆಚ್ಚಾಗಿ ಈಗೀಗ ನಾನು ತಿಳಿದುಕೊಂಡಿದ್ದೇನೆ ಎನ್ನಲು ನಾಚಿಕೆಭರಿತ ಹೆಮ್ಮೆ ನನಗುಂಟಾಗುತ್ತದೆ. ಆಗಾಗ್ಗೆ ತಲೆಗೆ ಮೆಹಂದಿ ಹಾಕಿಕೊಂಡೇ ಪೇಟೆಗೆ ತರಕಾರಿ ತರಲು ಹೋಗುತ್ತೀಯ, ಕಣ್ಣು ಕಾಣದಿದ್ದರೂ ಕನ್ನಡಕ ಹಾಕುವುದಿಲ್ಲ, ನಿನಗೆ ಲಾರಿ ಬಿಡಬೇಕು ಎನ್ನುವಾಸೆಯಿದೆ, ನವಿಲಿಗೆ ನೃತ್ಯ ಕಲಿಸುವಾಸೆಯಿದೆ, ಆಗಾಗ ಆಕಾಶ ನೋಡುವುದು ನಿನ್ನ ಖಯಾಲಿ, ಸಮುದ್ರಕ್ಕೆ ಹೋದಾಗೆಲ್ಲ ಕಡಲ ಮಧ್ಯದಲ್ಲಿ ಧ್ಯಾನ ಮಾಡುವುದು ನಿನ್ನ ಅಭ್ಯಾಸ, ಮಳೆಗಾಲದಲ್ಲಿ ನೀನು ಕೊಡೆ ಉಪಯೋಗ ಮಾಡುವುದಿಲ್ಲ, ನಿನ್ನ ನಿದ್ರೆಯ ಕನಸುಗಳೆಲ್ಲವೂ ಸಮುದ್ರದಾಳದ ಪ್ರಪಂಚದ್ದು, ಸಾಯಂಕಾಲ ಹಕ್ಕಿಗಳ ಸರಸ ನೋಡುವುದು ನಿನ್ನ
ಕೆಟ್ಟ ಚಟಗಳಲ್ಲೊಂದು, ಪ್ರತಿರಾತ್ರಿ ಚಂದ್ರನಿಗೆ ಲೈನ್ ಹೊಡೆಯದೇ ನಿದ್ರೆ ಆವರಿಸುವುದಿಲ್ಲ.

ಕಂಡಕ್ಟರ್ ಬೈದ ಆ ಕ್ಷಣ
ಮೊನ್ನೆಯಷ್ಟೇ ಮೈಸೂರಿಗೆ ಹೋಗಬೇಕಾದವಳು ಬಸ್ಸಿನ ಬೋರ್ಡು ಕಾಣದೆ ಬೆಂಗಳೂರಿನ ಬಸ್ಸು ಹತ್ತಿ ಕಂಡಕ್ಟರನ ಬಳಿ ಉಗಿಸಿಕೊಂಡಿದ್ದನ್ನು ಕೇಳಿ ಮನಸಾರೆ ನಕ್ಕೆ.  ಅದೊಂದು ದಿನ ನೀನು ನಿನ್ನ ಗೆಳತಿಯ ಬಳಿ ಕಾಲಿಗೆ ತೊಡುವ ಗೆಜ್ಜೆಯನ್ನು ಕಿವಿಗೆ ಹಾಕಿದರೆ ಹೇಗಿರುತ್ತದೆಯೆಂದು ಕೇಳಿದಕ್ಕೆ ನಿನ್ನ ಗೆಳತಿ ಪರಿಚಯ ಇರುವ ಎಲ್ಲ ಮಾನಸಿಕ ವೈದ್ಯರಿಗೆ ಕರೆ ಮಾಡಿದ್ದು ನೆನೆಸಿ ಈಗಲೂ ನಗೆಯುಕ್ಕುತ್ತದೆ.

ನಿನಗಿಂತಹ ಯೋಚನೆಗಳು ಹೇಗೆ ಬರುತ್ತದೆಯೆಂಬುದೇ ನನಗೆ ದೊಡ್ಡ ಪ್ರಶ್ನೆ. ಈಗೀಗ ನಿನ್ನದೇ ಗುಂಗಿನಲ್ಲಿ ನನಗೂ ಚಿತ್ರವಿಚಿತ್ರ
ಆಸೆಗಳು ಮೊಳೆಯತೊಡಗಿವೆ. ನಿನ್ನ ಗುಳಿಗೆನ್ನೆಯೊಳಗೆ ಒಂದು ಬೊಗಸೆ ನೀರು ಹಾಕಿದರೆ ಏನಾಗಬಹುದೆಂಬ ದಿವ್ಯ ಕುತೂಹಲ ನನ್ನದು. ನಿನ್ನ ಪೋಕರಿತನವನ್ನೂ ಮೀರಿಸಿ ನಿನ್ನಲ್ಲೊಂದು ಹಸಿನಾಚಿಕೆ ಮೂಡಿಸಿಬಿಟ್ಟರೆ ಜಗತ್ತೇ ಗೆದ್ದಷ್ಟು ಸಂತೋಷ ನನಗಾದೀತು ಎಂಬ ಭ್ರಮೆ ನನ್ನದು.

ಬರುವ ಶುಕ್ರವಾರ ನಿನ್ನಿಷ್ಟದ ಗೋಲ್ ಗಪ್ಪ ಅಂಗಡಿಯ ಎದುರು ಕೊಡೆ ಹಿಡಿದು ನಿಂತಿರುತ್ತೇನೆ. ಕೊಡೆಯೊಳಗೆ ನೀನೂ
ಅಡಗುವೆಯೆಂಬ ಹಸಿಹುಸಿಹುಚ್ಚ ಆಸೆಯೊಂದಿಗೆ….