ಐದಾರು ಮಂದಿ ಗುಂಪು ಪ್ರಮುಖ ಇಲಾಖೆಗಳು ಟಾರ್ಗೆಟ್
ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ರಾಜಧಾನಿಯಿಂದ ನಕಲಿ ಪತ್ರಕರ್ತರು ಪ್ರತಿದಿನ ಜಿಲ್ಲೆಗೆ ವಸೂಲಿಗೆ ಬರುತ್ತಿರುವುದು ಆತಂಕ ಮೂಡಿಸಿದೆ.
ಐದಾರು ಮಂದಿ ಗುಂಪಾಗಿ ತಾಲೂಕು, ಇಲಾಖೆಗಳನ್ನು ಆಯ್ಕೆ ಮಾಡಿಕೊಂಡು ಪ್ರಮುಖ ಅಧಿಕಾರಿಗಳನ್ನು ಟಾರ್ಗೆಟ್
ಮಾಡಿಕೊಂಡು ಹಣಪೀಕುವ ಕೆಲಸ ಮಾಡುತ್ತಿದ್ದಾರೆ.
ಬೆಳಗ್ಗೆ ಇಲಾಖೆ ಬಾಗಿಲು ತೆರೆಯುವ ಮುನ್ನವೇ ಅಧಿಕಾರಿಗಳಿಗಿಂತ ಮುಂಚೆ ಕಚೇರಿ ಮುಂದೆ ಇವರುಗಳು ಹಾಜರಿರುತ್ತಾರೆ. ನಕಲಿ ಪತ್ರಕರ್ತರ ಹಾವಳಿ, ಕಿರುಕುಳಕ್ಕೆ ಬೇಸತ್ತಿರುವ ಅಧಿಕಾರಿಗಳು ದೂರು ನೀಡಲು ನಿರ್ಧರಿಸಿದ್ದಾರೆ.
ಧಮ್ಕಿ ಹಾಕುತ್ತಾರೆ: ಕೊರಳಲ್ಲಿ ಗುರುತಿನ ಚೀಟಿ, ಕೈಯಲ್ಲಿ ಯಾವುದಾದರೊಂದು ಪತ್ರಿಕೆ, ಯೂಟ್ಯೂಬ್ ನ್ಯೂಸ್ ಲೋಗೋ
ಹಿಡಿದುಕೊಂಡು ಗುಂಪಾಗಿ ಗ್ರಾಪಂ ಕಚೇರಿ, ತಾಪಂ ಕಚೇರಿ, ಹಾಸ್ಟೆಲ್, ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆ, ಅಭಿವೃದ್ಧಿ ನಿಗಮಗಳು ಸೇರಿದಂತೆ ಪ್ರಮುಖ ಕಚೇರಿಗಳನ್ನು ಟಾರ್ಗೆಟ್ ಮಾಡಿಕೊಂಡು ಎಂಟ್ರಿ ಕೊಡುವ ನಕಲಿ ಪತ್ರಕರ್ತರು, ಹಲವು ದಾಖಲೆಗಳನ್ನು ತೋರಿಸುವಂತೆ ಧಮ್ಕಿ ಹಾಕುತ್ತಾರೆ. ಒಪ್ಪದಿದ್ದಾಗ ಹಣ ನೀಡಬೇಕು, ಇಲ್ಲದಿದ್ದರೆ ನಿಮ್ಮ ಅಕ್ರಮ ಗಳನ್ನು ಪ್ರಸಾರ ಮಾಡುತ್ತೇವೆ ಎಂದು ಹೆದರಿಸಿ ಅಷ್ಟೋ, ಇಷ್ಟೋ ಹಣ ವಸೂಲಿ ಮಾಡಿಕೊಂಡು ಹೋಗುತ್ತಾರೆ.
ಕಾರಿನ ನಂಬರ್ ಪ್ಲೇಟ್ ಬದಲಾವಣೆ: ಪ್ರತಿದಿನ ಕಿಲಾಡಿಗಳು ಕಾರಿನ ನಂಬರ್ ಫಲಕವನ್ನು ಬದಲಾಯಿಕೊಂಡು ಲಗ್ಗೆ ಯಿಡುತ್ತಿದ್ದಾರೆ. ಕಚೇರಿಗೆ ಹೋಗುವಾಗ ದೂರದಲ್ಲಿ ಕಾರು ನಿಲ್ಲಿಸಿ ಒಬ್ಬರನ್ನು ಕಾರಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಜಿಲ್ಲಾಮಟ್ಟ ಕ್ಕಿಂತ, ತಾಲೂಕು ಕೇಂದ್ರದ ಇಲಾಖೆ, ಅಧಿಕಾರಿಗಳು ಇವರ ಟಾರ್ಗೆಟ್.
ಕಠಿಣ ಕ್ರಮ ಅಗತ್ಯ: ಬೆಂಗಳೂರಿನಿಂದ ಆಗಮಿಸಿ ವಸೂಲಿ ದಂಧೆಗಿಳಿದಿರುವ ನಕಲಿ ಪತ್ರಕರ್ತರ ವಿರುದ್ಧ ಸಂಬಂಧಿಸಿದ
ಇಲಾಖೆಗಳು ಕಠಿಣ ಕ್ರಮಕೈಗೊಳ್ಳಬೇಕು.