Thursday, 19th September 2024

ಆನ್‌ಲೈನ್ ವಂಚನೆ; ಪರಿಹಾರಕ್ಕೆ ಸಮರ್ಪಕ ಮಾನದಂಡಗಳು ಅವಶ್ಯ

ನಿರೀಕ್ಷೆಗೂ ಮೀರಿ ಸಫಲತೆಯನ್ನು ಸಾಧಿಸಿರುವ ತಂತ್ರಜ್ಞಾನ, ಪ್ರಸ್ತುತ ಜನಜೀವನದ ಅಂಗವಾಗಿ ಮಾರ್ಪಟ್ಟಿದೆ. ಇಂದಿನ ಜನಜೀವನವು ಆಹಾರ, ದಿನಬಳಕೆಯ ವಸ್ತುಗಳಂತೆಯೇ ತಂತ್ರಜ್ಞಾನವಿಲ್ಲದೆ ಊಹಿಸಲೂ ಅಸಾಧ್ಯವಾದ ಸ್ಥಿತಿಯತ್ತ ಸಾಗುತ್ತಿದೆ. ಇಂಥ ವೇಳೆ ತಂತ್ರಜ್ಞಾನದ ಉಪಯೋಗದಂತೆಯೇ ದುರುಪಯೋಗವೂ ಹೆಚ್ಚುತ್ತಿರುವುದು ಆಘಾತಕಾರಿ ಬೆಳವಣಿಗೆ.

ಇಂಥದೊಂದು ದುರುಪಯೋಗದ ಬಗ್ಗೆ ಗ್ರಾಹಕರ ನ್ಯಾಯಾಲಯವು ಇತ್ತೀಚೆಗೆ ಪ್ರಕರಣವೊಂದರಲ್ಲಿ ನೀಡಿರುವ ತೀರ್ಪು ಮತ್ತಷ್ಟು ಆತಂಕ ಹೆಚ್ಚಿಸಿದೆ. ಆನ್‌ಲೈನ್ ವಂಚನೆಗೊಳಗಾದರೆ, ಅದಕ್ಕೆ ಬ್ಯಾಂಕ್‌ಗಳು ಹೊಣೆಯಲ್ಲ ಎಂಬುದು ಗ್ರಾಹಕರ ನ್ಯಾಯಾಲಯ ನೀಡಿರುವ ತೀರ್ಪು. ಬ್ಯಾಂಕ್‌ಗಳು ತಮ್ಮ ಬ್ಯಾಂಕ್ ಖಾತೆಯ ವಿವರ ಹಾಗೂ ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ
ತಿಳಿಸಬಾರದೆಂದು ಸೂಚನೆ ನೀಡುತ್ತವೆ. ಆದರೆ ಈ ಸೂಚನೆ ನಿರ್ಲಕ್ಷಿಸಿ, ಆನ್ ಲೈನ್ ವಂಚನೆಗೊಳಗಾದರೆ ಬ್ಯಾಂಕ್ ಹೊಣೆ ಯಲ್ಲ. ಇದಕ್ಕೆ ಗ್ರಾಹಕರ ಅಜ್ಞಾನವೇ ಕಾರಣ ಎಂಬುದು ನ್ಯಾಯಾಲಯ ತೀರ್ಪಿನ ಆದೇಶ.

ಹಾಗಾದರೆ ಆನ್‌ಲೈನ್ ವಂಚನೆಗಳನ್ನು ತಡೆಯುವುದು ಹೇಗೆ? ವಂಚನೆಗೊಳಗಾದವರಿಗೆ ಪರಿಹಾರ ದೊರೆಯುವುದು ಹೇಗೆ? ಎನ್ನುವ ಸಂಗತಿಗಳು ಇಂದಿಗೂ ಅಸ್ಪಷ್ಟತೆಯಿಂದ ಕೂಡಿದೆ. ತಾಂತ್ರಿಕ ನೈಪುಣ್ಯತೆಯನ್ನೇ ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಳ್ಳು ತ್ತಿರುವ ವಂಚಕರಿಂದ ಇಂದು ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ. ಇದಕ್ಕೆ ಗ್ರಾಹಕರ ಅಜ್ಞಾನ ಕಾರಣ ಎಂಬುದು ಸಮಂಜಸವೇ ಎಂಬುದು ಮತ್ತೊಂದು ವಾದ. ವಂಚನೆ ಪತ್ತೆಗೂ ತಂತ್ರಜ್ಞಾನಗಳಿವೆಯಾದರೂ, ವಂಚನೆಗೊಳಗಾದ ಗ್ರಾಹಕರು ಶೀಘ್ರ ಪರಿಹಾರ ಪಡೆಯುವುದು ಹೇಗೆ ಎಂಬುದು ಪ್ರಸ್ತುತ ಕಂಡುಬರುತ್ತಿರುವ ಪ್ರಮುಖ ಸಮಸ್ಯೆ.

ಆನ್‌ಲೈನ್ ವಂಚನೆಗಳು ಪ್ರಮುಖ ಸಮಸ್ಯೆಯಾಗಿ ಮಾರ್ಪಡುತ್ತಿರುವ ಈ ದಿನಗಳಲ್ಲಿ ಪರಿಹಾರಕ್ಕಾಗಿ ಸಮರ್ಪಕ ಮಾನ ದಂಡಗಳನ್ನು ರೂಪಿಸಬೇಕಿರುವುದು ಇಂದಿನ ಬಹುಮುಖ್ಯ ಅವಶ್ಯಕತೆ.