Sunday, 22nd December 2024

ತೆಲಂಗಾಣ ಹೆದ್ದಾರಿ ಯೋಜನೆ: ₹1,039.90 ಕೋಟಿಗೆ ಅದಾನಿ ತೆಕ್ಕೆಗೆ

ನವದೆಹಲಿ: ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆದ್ದಾರಿ ಯೋಜನೆಯನ್ನು ₹1,039.90 ಕೋಟಿಗೆ ಅದಾನಿ ರೋಡ್‌ ಟ್ರಾನ್ಸ್‌ಪೋರ್ಟ್‌ ಲಿಮಿಟೆಡ್‌ ತನ್ನದಾಗಿಸಿಕೊಂಡಿದೆ.

ತೆಲಂಗಾಣದಲ್ಲಿ ಕೊದಾಡ್‌ನಿಂದ ಖಮ್ಮಂ ವರೆಗೂ ನಾಲ್ಕು ಪಥದ ಎನ್‌ಎಚ್‌-365ಎ ರಸ್ತೆ ನಿರ್ಮಾಣಕ್ಕೆ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಯೋಜನೆಯ ಗುತ್ತಿಗೆ ದೊರೆತಿದೆ’ ಎಂದು ಕಂಪನಿ ಮಾಹಿತಿ ನೀಡಿದೆ.

ಯೋಜನೆಯ ಬಿಡ್‌ ಮೊತ್ತ ₹ 1,039.90 ಕೋಟಿ ರೂಪಾಯಿ ಎಂದು ಕಂಪನಿ ಹೇಳಿದೆ. ಯೋಜನೆಯ ನಿರ್ಮಾಣದ ಅವಧಿ ಎರಡು ವರ್ಷಗಳು ಹಾಗೂ ಕಾರ್ಯಾಚರಣೆಯ ಅವಧಿ 15 ವರ್ಷಗಳು ಎಂದು ತಿಳಿಸಿದೆ. ಎಆರ್‌ಟಿಎಲ್‌, ಅದಾನಿ ಗ್ರೂಪ್‌ನ ಭಾಗವಾಗಿರುವ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ನ (ಎಇಎಲ್‌) ಅಂಗಸಂಸ್ಥೆಯಾಗಿದೆ.

ಯೋಜನೆಯ ಮೂಲಕ ಅದಾನಿ ಗ್ರೂಪ್‌, ಎನ್‌ಎಚ್‌ಎಐನ ಒಟ್ಟು ಎಂಟು ರಸ್ತೆ ಯೋಜನೆಗಳನ್ನು ತನ್ನದಾಗಿಸಿ ಕೊಂಡಂತಾಗಿದೆ. ಅದಾನಿ ಗ್ರೂಪ್‌ ಛತ್ತೀಸ್‌ಗಢ, ತೆಲಂಗಾಣ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಕೇರಳ ಹಾಗೂ ಗುಜರಾತ್‌ನಲ್ಲಿ ಟೋಲ್‌ ಕಾರ್ಯಾಚರಣೆ ನಡೆಸುತ್ತಿದೆ.