ಹೆಚ್ಚಿದ ಬಿಸಿಲಿ ತಾಪಮಾನ ತಂಪು ಪಾನೀಯಗಳ ಬೇಡಿಕೆ ಹೆಚ್ಚು
ವಿಶೇಷ ವರದಿ: ವೀರೇಶ ಕುರ್ತಕೋಟಿ
ಹುನಗುಂದ: ಬೇಸಿಗೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಯಾರಿಕೆಯನ್ನು ತೀರಿಸಿಕೊಳ್ಳಲು ಕೆಲವು ಜನರು ತಂಪು ಪಾನೀಯಗಳ ಮೋರೆ ಹೋಗುತ್ತಿದ್ದರೇ ಇನ್ನು ಕೆಲವರು ಗಿಡಮರಗಳ ಕೆಳಗೆ ಕುಳಿತು ಬಿಸಿಲಿನ ಧಗೆಯಿಂದ ಸ್ವಲ್ಪ ರಿಲ್ಯಾಕ್ಸ್ ಪಡೆದುಕೊಳ್ಳುವ ದೃಶ್ಯ ಕಂಡು ಬರುತ್ತಿದೆ.
ತಾಲೂಕಿನಾದ್ಯಂತ ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆ ಸೂರ‍್ಯನ ಕಿರಣಗಳು ಭೂಮಿಗೆ ತಾಕುತ್ತಿದ್ದಂತೆ ಧಗೆ ಆರಂಭವಾದರೆ ಇಡೀ ದಿನ ಬಿಸಿಲು. ಈ ಬಿಸಿಲಿನ ತಾಪಕ್ಕೆ ಜನರು ಬೇಗನೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆ ಸೇರುವುದು ಸರ್ವೇ ಸಾಮಾನ್ಯವಾಗಿದೆ.
ಬಿಸಿಲಿನ ಪ್ರಮಾಣ ತಗ್ಗಿದ ಮೇಲೆನೇ ಹೊರಗೆ ಬರುತ್ತಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಬೇಸಿಗೆಯ ಬಿಸಿಲು ಹೆಚ್ಚಾಗಿದ್ದು, ಕಳೆದ
ವರ್ಷದಲ್ಲಿ ನಿರಂತರ ಮಳೆ, ಈ ವರ್ಷದಲ್ಲಿ ಕೊರೆವ ಚಳಿ ಅದರಂತೆ ಬೇಸಿಗೆ ಬಿಸಿಲಿನ ಜಳ ಹೆಚ್ಚಾಗುವುದರಲ್ಲಿ ಯಾವ ಸಂಶ ಯವು ಇಲ್ಲ ಎನ್ನುತ್ತಿದ್ದಾರೆ ಸಾರ್ವಜನಿಕರು.
ಮಾರ್ಚ್ ಮಧ್ಯದಲ್ಲಿಯೇ 35 ಡಿಗ್ರಿ ಸೆಲ್ಷಿಯಸ್ ಬಿಸಿಲು ಇದೆ. ಇದರ ತಾಪಕ್ಕೆ ಕೆಲವರು ಛತ್ರಿಯನ್ನು ಹಿಡಿದುಕೊಂಡು ಝಳದಿಂದ ತಪ್ಪಿಸಿಕೊಂಡರೇ ಇನ್ನು ಕೆಲವರು ತಂಪು ಪಾನೀಯಗಳಾದ ಎಳನೀರು, ಮಜ್ಜಿಗೆ, ಕಲ್ಲಂಗಡಿ, ಷರಬತ್ ಸೇರಿದಂತೆ ಅನೇಕ
ಹಣ್ಣುಗಳನ್ನು ಸೇವಿಸುವುಲ್ಲದೆ ಮಣ್ಣಿನಿಂದ ತಯಾರಿಸಿದ ಬಿಂದಿಗೆಗಳನ್ನು ಖರೀದಿಸಿ ಬಿಸಿಲಿನ ತಾಪವನ್ನು ತಣ್ಣಗಾಗಿಸಿ ಕೊಳ್ಳುತ್ತಿರುವುದು ವಿಶೇಷ. ಇದೇ ರೀತಿ ಬೇಸಿಗೆ ಧಗೆ ಹೆಚ್ಚಾಗುತ್ತಾ ಸಾಗಿದರೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ಭಯಾನ ಕತೆ ಜನರನ್ನು ಕಾಡದೇ ಇರದು.
ಬಿಸಿಲಿನ ಧಗೆ ಕರೋನಾ ಎರಡನೆಯ ಅಲೆಯ ಕಾಟ: ಒಂದೆಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೇ ಇನ್ನೊಂದೆಡೆ ಕರೋನಾ ಮಹಾಮಾರಿಯ ಎರಡನೆಯ ಅಲೆಯ ಭೀತಿ ಶುರುವಾಗಿದ್ದು, ಕರೋನಾಕ್ಕೆ ವರ್ಷ ತುಂಬಿದರೂ ಬೆಂಬಿಡದ ಬೇತಾಳದಂತೆ ಜಗದ ಜನರನ್ನು ಕಾಡುತ್ತಿದೆ. ಸದ್ಯ ಇವೆರಡರಿಂದ ಜನರು ಮನೆಯಿಂದ ಹೊರ ಬರಲು ಮೀನಾಮೇಷ ಎಣಿಸು ವಂತಾಗಿದೆ.
ಬೇಸಿಗೆಯಲ್ಲಿ ತಾಪಮಾನ ಹೆಚ್ಚಳ: ಬೇಸಿಗೆ ಬಿಸಿಲು ನಿತ್ಯ ಏರಿಕೆಯಿಂದ ದಿನ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದ್ದು ಕಳೆದ ವಾರ 30 ರಿಂದ 32 ಡಿಗ್ರಿ ತಾಪಮಾನ ದಾಖಲಾದರೆ ಸದ್ಯ ಅದು 34 ರಿಂದ 35 ಡಿಗ್ರಿ ಸೆಲಿಸಿಯಸ್‌ಗೆ ಹೆಚ್ಚುತ್ತಲೆ ಇದೆ. ಮುಂದೆ ಎಷ್ಟಾಗಲಿದೆ ಎನ್ನುವ ಯಕ್ಷ ಪ್ರಶ್ನೆ ಜನರನ್ನು ಕಾಡುತ್ತಿದೆ.
ತಂಪು ಪಾನೀಯಗಳ ಬೆಲೆ ಏರಿಕೆ; ಬೇಸಿಗೆಯ ತಾಪಮಾನದಿಂದ ಜನರು ಬಸವಳಿದು ಬಿಸಿಲಿನ ತಾಪವನ್ನು ನೀಗಿಸಿ ಕೊಳ್ಳಲು ಜನರು ತಂಪು ಪಾನೀಯಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ತಂಪು ಪಾನೀಯಗಳ ಬೆಲೆಗಳು ಗಣನೀಯವಾದ ಏರಿಕೆ ಕಂಡಿದೆ. ಒಂದು ಎಳನೀರಿನ ಬೆಲೆಯು 35ರಿಂದ 40 ರು. ಮಾರಾಟವಾಗುತ್ತಿದೆ. ಇನ್ನು ಕಲ್ಲಂಗಡಿ ಬೆಲೆಯು ಒಂದು ಪ್ಲೇಟ್‌ಗೆ 15 ರಿಂದ 20 ರು. ಮಾರಾಟವಾಗುತ್ತಿದ್ದರೂ ಅದನ್ನು ತೆಗೆದುಕೊಳ್ಳುವ ಜನರು ಮಾತ್ರ ಕಡಿಮೆಯಾಗಿಲ್ಲ. ಇನ್ನು ಲಸ್ಸಿ, ಶರಬತ್, ಹಣ್ಣಿನ ರಸಗಳ ಬೆಲೆಯು ಕೂಡಾ 30 ರಿಂದ 35 ರು.ಗೆ ಮಾರಾಟವಾಗುತ್ತಿವೆ.
***
ಬಿಸಿಲಿನ ಧಗೆ ದಿನೇ ದಿನೇ ಹೆಚ್ಚುತ್ತಿರುವುದರ ಜತೆಗೆ ಕರೋನಾದ ಎರಡನೆಯ ಅಲೆಯ ಭೀತಿಯ ಬಗ್ಗೆ ಜಾಗೃತಿ ವಹಿಸುವುದು ಮುಖ್ಯ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಈ ಅವಧಿಯಲ್ಲಿ ದ್ರವರೂಪದ ಆಹಾರವನ್ನು ಸೇವಿಸಿ ಮೈಗೆ ತಳುವಾದ ಬಟ್ಟೆ ಮತ್ತು ತಲೆಗೆ ಟೋಪಿ ಧರಿಸಬೇಕು, ಹೆಚ್ಚಾಗಿ ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು.
-ಡಾ.ಪ್ರಶಾಂತ ತುಂಬಗಿ, ತಾಲೂಕ ವೈದ್ಯಾಧಿಕಾರಿ, ಹುನಗುಂದ