Monday, 6th January 2025

ಆರಕ್ಷಕರ ಅಚಲ ಕರ್ತವ್ಯ ನಿಷ್ಠೆಯ ಅಭಿನಂದನೆಗೊಂದು ಆಚರಣೆ

ತನ್ನಿಮಿತ್ತ

ಮೌಲಾಲಿ ಕೆ.ಆಲಗೂರ

ಪ್ರತಿ ವರ್ಷವೂ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯನ್ನು ಕೋರಮಂಗಲದ ಕೆಎಸ್‌ಆರ್‌ಪಿ ಪೊಲೀಸ್ ಮೈದಾನ ದಲ್ಲಿ ಆಚರಿಸಲಾಗುತ್ತದೆ. ಈ ದಿನ ಮಾನ್ಯ ಮುಖ್ಯಮಂತ್ರಿಗಳು ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸುತ್ತಾರೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಹಾಗೂ ಅಪರಾಧಗಳನ್ನು ಆಗದೆ ರೀತಿಯಲ್ಲಿ ನಾಗರಿಕರ ಜತೆಗೆ ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡುತ್ತಾರೆ. ಅದರಂತೆ ರಾಜ್ಯ ಪೊಲೀಸ್ ಇಲಾಖೆ ಕೂಡ ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚುವಲ್ಲಿ ಹಾಗೂ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಲ್ಲಿ ದೇಶಕ್ಕೆ ಮಾದರಿಯಾಗಿದೆ.

ಅಲ್ಲದೆ ಇತರ ರಾಜ್ಯ ಪೊಲೀಸ್ ಇಲಾಖೆಗಿಂತಲೂ ಸಾಕಷ್ಟು ಪ್ರಗತಿ ಸಾಧಿಸುವುದರ ಜತೆಗೆ ಎಲ್ಲಾ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ರಾಷ್ಟ್ರಕ್ಕೆ ಮುಂಚೂಣಿಯಲ್ಲಿದೆ. ಈ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿನೂತನ ಮತ್ತು ವಿಶಿಷ್ಟ ಸಾಧನೆ ಗೈದು, ಮುನ್ನಡೆಯುತ್ತಿದೆ. ಹೀಗೆ ತನ್ನದೆಯಾದ ಶ್ರೇಷ್ಠ ಇತಿಹಾಸ ಹೊಂದಿರುವ ರಾಜ್ಯ ಪೊಲೀಸ್ ಇಲಾಖೆ ಆಗಿನ ಮೈಸೂರು ಸಂಸ್ಥಾನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಆರಂಭಗೊಂಡಿತು.

ಇದಾದ ನಂತರ ಬ್ರಿಟಿಷ್ ಸರಕಾರವು 1853 ರಲ್ಲಿ ಪೊಲೀಸ್ ಕಾಯಿದೆಯನ್ನು ಜಾರಿಗೊಳಿಸಿತು. ಈ ವೇಳೆ ಲಾರ್ಡ್ ಕಬ್ಬನ್ ಪೊಲೀಸ್ ಕಮಿಷನರ್ ಹುದ್ದೆ ಸ್ವೀಕರಿಸಿದ. ಬಳಿಕ 1892 ರಲ್ಲಿ ಪೊಲೀಸ್ ಇಲಾಖೆಗೆ ಸೇರುವ ಅಧಿಕಾರಿ ಮತ್ತು ಸಿಬ್ಬಂದಿ ಗಳಿಗಾಗಿ ವಿಶೇಷ ತರಬೇತಿ ಪ್ರಾರಂಭವಾಯಿತು. ಹೀಗೆ ಹಲವು ವರ್ಷಗಳು ಕಳೆದಂತೆ ಮಹತ್ತರ ಬದಲಾವಣೆಯನ್ನು ರಾಜ್ಯ
ಪೊಲೀಸ್ ಇಲಾಖೆ ಕಂಡಿತು. ಸ್ವಾತಂತ್ರ್ಯ ದೊರೆತ ನಂತರ ಅಂದರೆ 1956ರಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಒಂದೆ ಬಗೆಯ ಸಮವಸ ಧರಿಸುವಂತೆ ಆದೇಶ ಹೊರಡಿಸಲಾಯಿತು.

ವರ್ಷದಿಂದ ವರ್ಷಕ್ಕೆ ಹೊಸ ಸ್ಪರ್ಶ ಪಡೆದುಕೊಂಡ ಗೃಹ ಇಲಾಖೆ 1963ರಲ್ಲಿ ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ತಂದು
ರಾಜ್ಯದಲ್ಲಿ ಒಂದೆ ಬಗೆಯ ಕಾನೂನು ವ್ಯವಸ್ಥೆಯನ್ನು ರೂಪಿಸಿತು. ಬಳಿಕ 1972ರಲ್ಲಿ ಅಂದಿನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ದೇವರಾಜ್ ಅರಸ್ ರವರು ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆಯೊಂದಿಗೆ ನೂತನ ರೂಪ ನೀಡಿದರು. ಪೊಲೀಸ್ ಇಲಾಖೆಗೆ ಬೇಕಾದ ಎಲ್ಲಾ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟರು.

ಇದರೊಂದಿಗೆ ಪೊಲೀಸ್ ಇಲಾಖೆಯನ್ನು ರಾಜ್ಯದಲ್ಲಿ ಮತ್ತಷ್ಟು ಬಲ ಪಡಿಸಿದರು. ಅಲ್ಲಿಂದ ಇಲ್ಲಿಯವರೆಗೂ ರಾಜ್ಯ ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನಿಂದ ತನ್ನ ಪ್ರಾಮಾಣಿಕ ಕರ್ತವ್ಯವನ್ನು ನಿರ್ವಹಿಸುತ್ತಾ ಮುನ್ನುಗ್ಗುತ್ತಿದೆ. ನಾಗರಿಕ ಸಮಾಜದೊಂದಿಗೆ
ಸೌಹಾರ್ದ ಸೇತುವೆಯಾಗಿ ನಿಂತಿದೆ. ಅದೆಂಥಾ ಕಠಿಣ ಅಪರಾಧ ಪ್ರಕರಣಗಳೇ ಇರಲಿ ಧೈರ್ಯ ಮತ್ತು ಸಾಹಸದಿಂದ ಭೇದಿಸಿ, ಅನ್ಯಾಕ್ಕೆ ಒಳಗಾದ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಟ್ಟಿದೆ.

ಕಲುಷಿತಗೊಳ್ಳುತ್ತಿರುವ ಪ್ರಸ್ತುತ ಸಮಾಜವನ್ನು ಶಾಂತಿಯುತವಾಗಿ ಮುನ್ನಡೆಲು ಅತ್ಯಂತ ಚಾಣಾಕ್ಷತನದಿಂದ ತನ್ನ
ಪ್ರಾಮಾಣಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಹಗಲು ರಾತ್ರಿ ಶ್ರಮಿಸುತ್ತಿದೆ. ನಮ್ಮೊಳಗೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕಿ, ಕೊಲೆ, ಸುಲಿಗೆ, ದರೋಡೆಕೋರನ್ನು ಬೆನ್ನಟ್ಟಿ, ರೌಡಿಗಳಿಗೆ ಚಟ್ಟ ಕಟ್ಟಿ, ಸತ್ಯ ಮೇವ ಜಯತೆ ಘೋಷ್ ತತ್ತ್ವದ ಅಡಿಯಲ್ಲಿ ನೊಂದವರ ಬದುಕಿಗೆ ನೆರಳಾಗಿ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿ ದಕ್ಷತೆಯಿಂದ ನಿತ್ಯ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ಪೊಲೀಸ್ ಇಲಾಖೆ ಭಯ ಅಲ್ಲ ಭರವಸೆ ಎಂಬ ಸದಾಶಯ ಜನರ ಮನದಲ್ಲಿ ಮೂಡಿಸಿದೆ.

ದೇಶದ ಗಡಿ ಭಾಗದಲ್ಲಿ ನಮ್ಮ ವೀರ ಯೋಧರು ವೈರಿ ರಾಷ್ಟ್ರಗಳಿಂದ ನಮ್ಮ ದೇಶವನ್ನು ಹೇಗೆ ರಕ್ಷಣೆ ಮಾಡುತ್ತಿರುವರೋ ಹಾಗೆಯೇ ನಮ್ಮ ಸಮಾಜದ ಆಂತರಿಕ ವ್ಯವಸ್ಥೆಯಲ್ಲಿ ನಡೆಯುವ ಗಲಭೆ, ಹಿಂಸೆ, ಗುಂಪು ಘರ್ಷಣೆ, ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ ಸೇರಿದಂತೆ ಇನ್ನಿತರ ಅಪರಾಧ ಎಸಗುವ ಸಮಾಜಘಾತಕರ ಹೆಡೆ ಮುರಿಯಲು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ನಮಗಾಗಿ ನಮ್ಮ ಒಳಿತಿಗಾಗಿ ದುಡಿಯುವ ನಮ್ಮೊಳಗಿನ ರಕ್ಷಕರೇ ಈ ನಮ್ಮ ಆರಕ್ಷಕರು.

ಒಂದು ಸುಂದರ ಸುವ್ಯವಸ್ಥಿತ ಸಮಾಜ ನಿರ್ಮಾಣ ಆಗಬೇಕೇಂದರೆ ಅಲ್ಲಿ ಪೊಲೀಸರ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ.
ಇಂಥ ಶಾಂತಿ, ಸೌಹಾರ್ದತೆ, ಸಹೋದರತೆಯ ಸಮಾಜ ಕಟ್ಟಲು ಪ್ರತಿದಿನವೂ ದುಡಿಯುತ್ತಿರುವ ದಣಿವರಿಯದ ಸೇವಕರು ನಮ್ಮ ಪೊಲೀಸರು. ಇಂಥ ದಕ್ಷ, ಪ್ರಾಮಾಣಿಕ, ನಿಸ್ವಾರ್ಥ ಪೊಲೀಸ್ ಇಲಾಖೆ ಕುರಿತು ತಿಳಿದುಕೊಳ್ಳುವ ಒಂದಿಷ್ಟು ಪ್ರಯತ್ನ ನಾವೆಲ್ಲರೂ ಮಾಡಬೇಕಲ್ಲವೆ.?. ಬನ್ನಿ ಪೊಲೀಸ್ ಇಲಾಖೆ ಮತ್ತು ಹುzಯ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸ್ಥಾಪನೆಯಾಗಿದ್ದು 1885/1965ರಲ್ಲಿ. ಪೊಲೀಸ್ ಇಲಾಖೆಯ ಮುಖ್ಯಸ್ಥರು ಪೊಲೀಸ್ ಮಹಾ ನಿರ್ದೇಶಕರಾಗಿರುತ್ತಾರೆ (ಡಿಜಿಪಿ). ನಂತರದಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ, ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ
(ಎಸ್ಪಿ), ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಸಹಾಯಕ (ಎಸ್ಪಿ ) ಐಪಿಎಸ್, ಉಪ ಪೊಲೀಸ್ ಅಧೀಕ್ಷಕ, ಕೆ. ಎಸ್.ಪಿ.ಎಸ್, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಸಹಾಯಕ ಸಬ್ ಇನ್ಸ್‌ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ಹಿರಿಯ ಕಾನ್ಸ್ಟೇಬಲ್, ಕಾನ್ಸ್ಟೇಬಲ್ ಈ
ಅನುಕ್ರಮವಾಗಿ ಇಲಾಖೆ ತನ್ನ ಹುದ್ದೆಗಳನ್ನು ಹೊಂದಿವೆ.

ಸದ್ಯ ಪ್ರವೀಣ್ ಸುಧ್ (ಐಪಿಎಸ್) ರವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಸೇವೆಯಲ್ಲಿದ್ದಾರೆ. ರಾಜಧಾನಿಯಾದ ಬೆಂಗಳೂರಿನ ಕಮೀಷನರ್ ಆಗಿ ಕಮಲ್ ಪಂಥ್ ಕರ್ತವ್ಯ ನಿರ್ವಹಿಸುತ್ತಿzರೆ. ರಾಜ್ಯ ಪೊಲೀಸ್ ಕೇಂದ್ರ ಪ್ರಧಾನ ಕಚೇರಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿದೆ. ಕರ್ನಾಟಕದಲ್ಲಿ ಒಟ್ಟು 932 (2013-14) ಪೊಲೀಸ್ ಠಾಣೆಗಳಿವೆ. 80 ಸಾವಿರಕ್ಕೂ ಅಧಿಕ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾರೆ.

ಏಳು ಪೊಲೀಸ್ ವಲಯಗಳು ಇದ್ದು, ದಕ್ಷಿಣ ವಲಯ (ಮೈಸೂರು), (ಪಶ್ಚಿಮ) ವಲಯ ಮಂಗಳೂರು, ಪೂರ್ವ ವಲಯ
(ದಾವಣಗೆರೆ), ಕೇಂದ್ರ ವಲಯ (ಬೆಂಗಳೂರು), ಉತ್ತರ ವಲಯ (ಬೆಳಗಾವಿ), ಈಶಾನ್ಯ ವಲಯ (ಕಲಬುರಗಿ), ಬಳ್ಳಾರಿ ವಲಯ ಎಂದು ವಿಂಗಡಿಸಲಾಗಿದೆ. ಈ ಏಳು ವಲಯಗಳಿಗೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಜಿಗೂ ಒಬ್ಬರು ಉಪ ಪೊಲೀಸ್ ಆಯುಕ್ತರು (ಎಸ್ಪಿ) ಇರುತ್ತಾರೆ.

ಪೊಲೀಸ್ ಇಲಾಖೆಯಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ದಿನದ ಇಪ್ಪತ್ತನಾಲ್ಕು ಘಂಟೆಗಳ ಕಾಲ ಸಮಾಜದ ಒಳಿತಿಗಾಗಿ ಕರ್ತವ್ಯ ನಿರ್ವಹಿಸುವ ಏಕೈಕ ಸರಕಾರಿ ನೌಕರರು ಎಂದರೆ ಅದು ನಮ್ಮ ಪೊಲೀಸರು ಮಾತ್ರ. ವರ್ಷಕ್ಕೆ 15 ಗಳಿಕೆ ರಜೆ, 30 ಪರಿವರ್ತಿತ ರಜೆ ಇರುತ್ತವೆ. ವಾರದ ರಜೆ ಕಡ್ಡಾಯವಿದ್ದರೂ ಕೂಡಾ ಒತ್ತಡದ ಕರ್ತವ್ಯ ಇದ್ದ ಸಮಯದಲ್ಲಿ ಅದು
ಸಿಗುವುದಿಲ್ಲ. ಒಂದೇ ಒಂದು ದಿನ ಪೊಲೀಸರು ಕರ್ತವ್ಯ ನಿರ್ವಹಿಸದೇ ಹೋದರೆ ಸಮಾಜ ಯಾವ ಹಂತಕ್ಕೆ ತಲುಪುತ್ತದೆ ಎಂದು ಊಹಿಸಿಕೊಳ್ಳಲು ಸಾಧ್ಯವೆ? ಸಾಧ್ಯವೇ ಇಲ್ಲ.

ಸಿವಿಲ್, ಸಿಎಆರ್, ಡಿಎಆರ್, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಪ್, ಹೀಗೆ ಹಲವು ವಿಭಾಗಗಳಾಗಿ ವಿಂಗಡಿಸಲಾಗಿದೆ. ಆದರೆ
ಇಲಾಖೆಯ ಧ್ಯೇಯ ಮಾತ್ರ ಒಂದೇ ಅದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು. ಒಬ್ಬ ಜನ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ವಿವಿಐಪಿ ವರೆಗೂ ಪೊಲೀಸರ ರಕ್ಷಣೆ ಅತ್ಯಗತ್ಯವಾಗಿ ಬೇಕೇ ಬೇಕು. ಕೊಲೆ, ಸುಲಿಗೆ, ದರೋಡೆ, ಕಳ್ಳತನ,
ಅತ್ಯಾಚಾರ, ಭ್ರಷ್ಟಾಚಾರ, ಸಭೆ ಸಮಾರಂಭ, ಹಬ್ಬ, ಹರಿದಿನ, ಜಾತ್ರೆ, ಉತ್ಸವ, ಸಂತೆ, ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಅಧಿವೇಶನ, ಗುಂಪು ಗಲಭೆ, ಜನ ಪ್ರತಿನಿಧಿಗಳ ಬೆಂಗಾವಲು, ಸಮಾಜದ ಇನ್ನಿತರೆ ಗಣ್ಯ ವ್ಯಕ್ತಿಗಳ ರಕ್ಷಣೆ, ಬಾಂಬ್ ಸ್ಫೋಟ,
ಸಿನಿಮಾ, ಕ್ರೀಡೆ, ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣ, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಸೇರಿದಂತೆ ಸಮಾಜದಲ್ಲಿ ನಡೆಯುವ ಒಳ್ಳೆಯ ಅಥವಾ ಕೆಟ್ಟ ಘಟನೆಗಳು ಸಂಭವಿಸಿದರೆ ಅಲ್ಲಿ ಪೊಲೀಸರ ಕರ್ತವ್ಯ ಅವಿಸ್ಮರಣೀಯವಾಗಿರುತ್ತದೆ.

ಪೊಲೀಸರು ಇಲ್ಲದೇ ಯಾವ ಬಂದೂಬಸ್ತ್ ಇಲ್ಲದೆ ಯಾವುದೇ ಕಾರ್ಯ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಒಬ್ಬ ವಿವಿಐಪಿ ಹಿಡಿದು ಸಾಮಾನ್ಯ ವ್ಯಕ್ತಿ ನೆಮ್ಮದಿ ಜೀವನ ನಡೆಸುತಿದ್ದೇನೆ ಎಂದರೆ ಅಲ್ಲಿ ಪೊಲೀಸರ ಕಾರ್ಯ ಕ್ಷಮತೆ ಅತ್ಯಂತ ಮಹತ್ವ ಪಾತ್ರವಹಿಸಿರುತ್ತದೆ. ಸಮಾಜದಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸಿದರೆ ಮೊದಲು ಕರೆ ಮಾಡುವುದೇ ಪೊಲೀಸ್
ಇಲಾಖೆಗೆ. ಏಕೆಂದರೆ ನಮ್ಮ ಪೊಲೀಸ್ ಇಲಾಖೆಯ ಮೇಲೆ ಜನರಿಗೆ ಅಷ್ಟೊಂದು ಭರವಸೆ ಇದೆ. ಪೊಲೀಸ್ ಇಲಾಖೆಯಲ್ಲಿ ಎಲ್ಲಾ ಒಬ್ಬಿಬ್ಬ ಅಧಿಕಾರಿ ಅಥವಾ ಸಿಬ್ಬಂದಿಗಳಲ್ಲಿ ಅಧಿಕಾರ ದುರ್ಬಳಕೆ, ದುರ್ನಡತೆ, ಲೋಪ ದೋಷಗಳು ಕಂಡು ಬಂದಿರಬಹುದು, ಆದರೆ ನೂರಕ್ಕೆ ತೊಂಬತ್ತಕ್ಕಿಂತ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸಮಾಜದ ಹಿತಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ.

ವೀರಪ್ಪನ್ ಕಾರ್ಯಚರಣೆ, ಕರೀಮ್ ಲಾಲ್ ತೆಲಗಿಯ ಚಾಪಾಕಾಗದ ಹಗರಣ, ಗೌರಿ ಲಂಕೇಶ್ ಹಂತಕರ ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರ ಸೇವೆ ಬಣ್ಣಿಸಲು ಅಸದಳ. ಇನ್ನೂ ಅಕ್ರಮ ಮರಳುಗಾರಿಕೆ, ವೇಶ್ಯಾವಾಟಿಕೆ, ಡ್ರಗ್ಸ್, ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಪೊಲೀಸ್ ಇಲಾಖೆಯ ಅನೇಕ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಸಮಾಜದ ಕಣ್ಣಾಗಿ, ಜನರ ಕಾಯುವ ಕಾವಲುಗಾರರಾಗಿ ಕರ್ತವ್ಯ ನಿರತರಾಗಿದ್ದಾರೆ.

ಶಂಕರ್ ಬಿದರಿ, ಕೆಂಪಯ್ಯ, ಸಾಂಗ್ಲಿಯಾನ, ಮಧುಕರ ಶೆಟ್ಟಿ, ಅಣ್ಣಾಮಲೈ ಸೇರಿದಂತೆ ಅನೇಕ ದಕ್ಷ ಅಧಿಕಾರಿ ಮತ್ತು
ಸಿಬ್ಬಂದಿಗಳನ್ನು ಕಂಡಿರುವ ಪೊಲೀಸ್ ಇಲಾಖೆ ಸದ್ಯ ಪ್ರವೀಣ್ ಸೂದ್, ಅಲೋಕ್ ಕುಮಾರ್, ಭಾಸ್ಕರ ರಾವ್, ಎಂ.ಎ. ಸಲಿಮ, ಡಿ.ರೂಪಾ, ಸಂದೀಪ್ ಪಾಟೀಲ, ಲಾಬುರಾಮ, ರವಿ ಡಿ. ಚನ್ನಣ್ಣನವರ, ಎಂ.ಎನ್. ಅನುಚೇತ್, ಗಿರೀಶ್, ಶಶಿಕುಮಾರ್,
ಅಬ್ರಾಹಂ ಜಾರ್ಜ್ ಸೇರಿದಂತೆ ಅನೇಕ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ನಿಸ್ವಾರ್ಥ ಸೇವೆಯಿಂದ ರಾಜ್ಯ ಪೊಲೀಸ್ ಇಲಾಖೆ ಸಮಾಜಕ್ಕೆ ಕೈಗನ್ನಡಿಯಾಗಿದೆ. ಸರಕಾರ ಕೂಡ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದೆ.

ಆದರೆ ಇತರ ರಾಜ್ಯಕ್ಕೆ ಹೋಲಿಸಿದರೆ ರಾಜ್ಯ ಪೊಲೀಸರ ಸಂಬಳ ತುಂಬಾ ಕಡಿಮೆಯಾಗಿದೆ. ಆದರೂ ಧೃತಿಗಡದೆ ನಮ್ಮ
ಪೊಲೀಸರು ಕರ್ತವ್ಯ ನಿಷ್ಠೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಜಗತ್ತನ್ನೆ ಬೆಚ್ಚಿ ಬೀಳಿಸಿರುವ ಮಹಾಮಾರಿ ಕರೋನಾ ವೇಳೆಯಲ್ಲಿ ಪೊಲೀಸರು ತಮ್ಮ ಜೀವ ಮತ್ತು ಜೀವನ ಪಟಕ್ಕಿಟ್ಟು ಸೇವೆಗೈದಿದ್ದಾರೆ.

ಕರ್ತವ್ಯ ನಿರತ ನೂರಾರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕರೋನಾ ರೋಗಕ್ಕೆ ತುತ್ತಾಗಿ ನಮ್ಮಗಾಗಿ ನಮ್ಮ ಸಮಾಜದ ಜನರಿಗಾಗಿ ಹುತಾತ್ಮರಾಗಿದ್ದಾರೆ. ಸಾವಿರಾರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಈ ಕರೋನಾ ರೋಗ ಕಂಡು
ಬಂದರೂ ಭಯ ಪಡದೆ ಕೂಡ ಪುನಃ ಚೇತರಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜನರಿಗಾಗಿ ಸದಾ ಆತ್ಮ ವಿಶ್ವಾಸದಿಂದ ಯಾವುದಕ್ಕೂ ಹೆದರದೆ, ದುಡಿಯುತ್ತಿರುವ ರಾಜ್ಯ ಪೊಲೀಸ್ ಇಲಾಖೆಯ ಕಾರ್ಯ ಸ್ತುತ್ಯಾರ್ಹ.

ಇಂಥ ಜನ ಸ್ನೇಹಿ, ಕರುಣಾಮಯಿ ಕರ್ನಾಟಕ ರಾಜ್ಯ ಪೊಲೀಸರು ಸಮಾಜಕ್ಕೆ ಪೊಲೀಸ್ ಎಂದರೆ ಭಯ ಅಲ್ಲ ಭರವಸೆ
ಎಂಬ ಸದಾಶಯದೊಂದಿಗೆ ಕಾನೂನು ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿದು, ಸಮಾಜದ ಸಂರಕ್ಷಣೆ ಮಾಡುತ್ತಿದೆ. ಆದ್ದರಿಂದ ಏಪ್ರಿಲ 2ರಂದು ಪೊಲೀಸ್ ಧ್ವಜ ದಿನಾಚರಣೆಯಂದು ಮುಖ್ಯಮಂತ್ರಿ ಪದಕ ವಿಜೇತರಾದ ಎಲ್ಲಾ ಅಧಿಕಾರಿ ಮತ್ತು
ಸಿಬ್ಬಂದಿಗಳಿಗೆ ಗೌರವ ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತಾ ರಾಜ್ಯ ಪೊಲೀಸ್ ಇಲಾಖೆ ಸಮಾಜದಲ್ಲಿ ಮುಂದೆಯೂ ಕೂಡಾ ಯಶಸ್ವಿ ಕಾರ್ಯಚರಣೆ ಕೈಗೊಂಡು, ಸಮಾಜಕ್ಕೆ ಇನ್ನಷ್ಟು ಒಳ್ಳೆಯ ಆಡಳಿತ ನೀಡಲಿ ಎಂಬ ಸದಾಶಯ.

Leave a Reply

Your email address will not be published. Required fields are marked *