ವಿಶ್ವವಾಣಿ ಸಂದರ್ಶನ: ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರು
ಕರೋನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಜನತೆಯ ನಿರ್ಲಕ್ಷ್ಯ ಮನೋಭಾವದಿಂದ ಸೋಂಕು ತೀವ್ರ ಸ್ವರೂಪ ಪಡೆಯುತ್ತಿದೆ. ಸರಕಾರಕ್ಕೆ ಸಹಕಾರ ನೀಡಿದರೆ ಮಾತ್ರ ಕರೋನಾ ಅಂತ್ಯಕ್ಕೆ ನಾಂದಿ. ರೂಪಾಂತರ ವೈರಸ್ನ ಆಯಸ್ಸು ಮುಂದಿನ 6 ತಿಂಗಳಿಗೆ ಮುಗಿಯಲಿದೆ. ಆದ್ದರಿಂದ ಎಚ್ಚರಿಕೆ ವಹಿಸಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಸೋಂಕಿನ ವಿರುದ್ಧ ಹೋರಾಡಬಹುದಾಗಿದೆ. ಇಲ್ಲದಿದ್ದರೆ ಮುಂದೆ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ‘ವಿಶ್ವವಾಣಿ’ಯೊಂದಿಗಿನ ಸಂದರ್ಶನದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕರೋನಾ ಎರಡನೇ ಅಲೆ ರಾಜ್ಯದಲ್ಲಿ ಕ್ರಮೇಣವಾಗಿ ಹೆಚ್ಚಾಗುತ್ತಿದೆಯಲ್ಲಾ?
ರಾಜ್ಯದಲ್ಲಿ ಜನ ಕರೋನಾ ಇನ್ನಿಲ್ಲ ಎಂದು ಪರಿಗಣಿಸಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವಲ್ಲಿ ಎಡವಿದ್ದ ಪರಿಣಾಮದಿಂದ ಕರೋನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಜನರು ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ, ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡುವುದು, ಕೈಗಳನ್ನು ತೊಳೆದುಕೊಳ್ಳುವುದು, ಸ್ಯಾನಿ ಟೈಸ್ ಮಾಡಿಕೊಳ್ಳುವುದು ಎಲ್ಲವನ್ನು ಇನ್ನಷ್ಟು ತಿಂಗಳುಗಳ ಕಾಲ ಮುಂದುವರಿಸಬೇಕಿದೆ. ಇಲ್ಲವಾದರೆ ಸಮುದಾಯ ಹಂತಕ್ಕೆ ಹರಡುವ ಕರೋನಾ ವೈರಸ್ ತಡೆ ಅಸಾಧ್ಯವಾಗಲಿದೆ.
ರಾಜ್ಯದಲ್ಲಿ ಕರೋನಾ 2ನೇ ಅಲೆ ತೀವ್ರತೆಯ ಸ್ವರೂಪ ಪಡೆಯಲಿದೆಯೇ?
ಕರೋನಾ ವೈರಸ್ ಇತಿಹಾಸ ನೋಡಿದರೆ ಹೊರ ದೇಶದಲ್ಲಿ ಕೆಲ ಪ್ರದೇಶಗಳಲ್ಲಿ ಕಡಿಮೆಯಾಗಿನಾಲ್ಕು ತಿಂಗಳ ನಂತರ ಹೆಚ್ಚಾಗಿ ರುವ ನಿದರ್ಶನಗಳಿವೆ. ಇದೇ ಪ್ರಯಾಸ ನಮ್ಮ ದೇಶದಲ್ಲೂ ಮುಂದುವರಿದಿದೆ. ಕಳೆದ 10-12 ದಿನಗಳ ವರದಿ ಗಮನಿಸಿದಾಗ ಕರೋನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿದೆ. ವೈಜ್ಞಾನಿಕ ವರದಿ ಪ್ರಕಾರ ಈ ಸೋಂಕಿನ ಆಯಸ್ಸು 2 ವರ್ಷ ಮಾತ್ರ. ಮುಂದಿನ ಆರು ತಿಂಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
*ಬೆಂಗಳೂರುಕರೋನಾ ಸುಳಿಯಲ್ಲಿ ಸಿಲುಕಲಿದೆಯೇ?
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸೋಂಕಿನ ತೀವ್ರತೆ ಹೆಚ್ಚಿದೆ. ಜನಸಂದಣಿ ಹೆಚ್ಚಿರುವ ಪ್ರದೇಶವಾದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೆಂಗಳೂರಿನಲ್ಲಿ ಕಳೆದ ಎರಡು ಅಥವಾ ಮೂರು ದಿನಗಳಲ್ಲಿ ಪತ್ತೆಯಾದ ಕರೀನಾ ಸೋಂಕು ಪ್ರಕರಣಗಳನ್ನು ಗಮನಿಸಿದರೆ ಜನರು ಕರೋನಾ ನಿಯಂತ್ರಣಕ್ಕೆ ಸಹಕಾರ ನೀಡದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದಲ್ಲದೆ ಕರೋನಾದಿಂದ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ರೂಪಾಂತರಿ ಕರೋನಾ ವೈರಸ್ ತೀವ್ರತೆ ಕಡಿಮೆ ಇದ್ದರೂ
ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದೆ.
ಕರೋನಾದಿಂದ ಮುಕ್ತಿಪಡೆಯಲು ಸಲಹೆಗಳು ನೀಡುವಿರಾ?
ವೈರಸ್ಗಳು ಸ್ವಾಭಾವಿಕವಾಗಿ ರೂಪಾಂತರಗೊಳ್ಳುತ್ತದೆ. ರೂಪಾಂತರಗೊಂಡ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ.
ಕರೋನಾ ಮೊದಲ ಅಲೆಯಲ್ಲಿ ಕೆಲವರಲ್ಲಿ ಬಂದು ಹೋಗಿದೆ. ಸೋಂಕಿತ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಯಾಗುತ್ತದೆ. ಜನಸಂದಣಿ, ಕರೋನಾ ಸೋಂಕಿತರ ಪತ್ತೆ, ರೂಪಾಂತರಗೊಂಡ ಕರೋನಾ ಪ್ರಭಾವದಿಂದ ನಮ್ಮ ರಾಜ್ಯದಲ್ಲಿ ಕರೋನಾ ಸಂಕಷ್ಟಕ್ಕೆ ಸಿಲುಕಿದ್ದೇವೆ. ರಾಜ್ಯದಲ್ಲಿ ಎರಡನೇ ಅಲೆ ಬರುತ್ತಿದೆ ಎಂದು ಮುನ್ಸೂಚನೆ ಇದ್ದರೂ ಜನ ಇದ್ಯಾವು ದನ್ನೂ ಲೆಕ್ಕಿಸದೆ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಕಾರಣದಿಂದ ಎರಡನೆ ಅಲೆಗೆ ದಾರಿಯಾಗಿದೆ. ಸಭೆ-ಸಮಾ ರಂಭಗಳು, ಮದುವೆಗಳು, ಪ್ರತಿಭಟನೆಯಿಂದ ಕರೋನಾ ಹೆಚ್ಚಾಗಿದೆ. ಸರಕಾರ ಕರೋನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಗಳನ್ನು ಕೈಗೊಂಡಿದೆ. ಮಾರ್ಗಸೂಚಿ ಹೊರಡಿಸಿ, ವ್ಯಾಕ್ಸಿನ್ ನೀಡುವ ಕೆಲಸ ಮಾಡುತ್ತಿದೆ.
ಕರೋನಾ ಮಿತಿಮೀರಿದರೆ ಮತ್ತೊಮ್ಮೆ ಲಾಕ್ಡೌನ್ ಅನಿವಾರ್ಯವೇ?
ಕರೋನಾ ಎರಡನೇ ಅಲೆ ರಾಜ್ಯದಲ್ಲಿ ಶುರುವಾಗಿದ್ದು, ಜನರೇ ಇದರ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದ್ದು, ಇನ್ನೂ ಆರು ತಿಂಗಳು ಇದೇ ರೀತಿಯ ಪರಿಸ್ಥಿತಿ ಮುಂದುವರಿಯಲಿದ್ದು, ಇದರ ಕಡಿವಾಣಕ್ಕೆ ಲಾಕ್ ಡೌನ್ ಅಂತಿಮ ಪರಿಹಾರವಲ್ಲ, ಇದರ ಅಗತ್ಯತೆಯೂ ಇಲ್ಲ. ಕರೋನಾ ಮಿತಿ ಮೀರಿದರೆ ಸರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಜನರ ಸಹಕಾರದಿಂದ ಮಾತ್ರ ಕರೋನಾ ನಿಯಂತ್ರಣ ಮಾಡಲು ಸಾಧ್ಯ.
ಕರೋನಾ ವ್ಯಾಕ್ಸಿನ್ ಪಡೆದರೂ ಕೆಲವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆಯಲ್ಲಾ?
ವ್ಯಾಕ್ಸಿನ್ ತೆಗೆದುಕೊಂಡ ಮಾತ್ರಕ್ಕೆ ಕರೋನಾ ಬರುವುದಿಲ್ಲ ಎಂಬ ನಂಬಿಕೆ ವಾಸ್ತವಕ್ಕೆ ದೂರವಾದದು. ಕರೋನಾ ಸೋಂಕಿತರ ಸಂಪರ್ಕ ಹೊಂದಿದ್ದರೆ ವ್ಯಾಕ್ಸಿನ್ ತೆಗೆದುಕೊಂಡಿದ್ದರೂ ಅದು ತಗಲುವ ಸಾಧ್ಯತೆ ಇರುತ್ತದೆ. ವ್ಯಾಕ್ಸಿನೇಷನ್ ಮಾಡುವ ಉದ್ದೇಶ ಹರಡುವಿಕೆ ನಿಲ್ಲಿಸುವುದು. ವ್ಯಾಕ್ಸಿನ್ ಹಾಕಿಸಿಕೊಂಡವರು ಕರೋನಾ ಮಾರ್ಗಸೂಚಿ ಪಾಲನೆ ಮಾಡಬೇಕು. ಕೆಲವರು ಹಾಗಾದರೆ ವ್ಯಾಕ್ಸಿನ್ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನೆ ಮಾಡುತ್ತಾರೆ. ವ್ಯಾಕ್ಸಿನ್ ತೆಗೆದುಕೊಳ್ಳುವ ಉದ್ದೇಶ ಕರೋನಾ ಸೋಂಕು ತೀವ್ರತೆ ಹಾಗೂ ಸಾವು ನೋವಿನ ಪ್ರಮಾಣ ಕಡಿಮೆ ಇರುವುದು. ಬ್ಲಡ್ ಥಿನ್ಸರ್ ಇರುವವರೂ ತೆಗೆದುಕೊಳ್ಳಬಹುದು.
ಕರೋನಾ ಹೆಚ್ಚಾದರೆ ಕೈಗೊಳ್ಳಬೇಕಾದ ಕ್ರಮಗಳೇನು?
ರ್ಯಾಂಡಮ್ ಪರೀಕ್ಷೆ ಇನ್ನಷ್ಟು ಮತ್ತಷ್ಟು ಹೆಚ್ಚಳವಾಗಬೇಕಿದೆ. ಪ್ರಯೋಗಾಲಯಗಳ ಸಾಮರ್ಥ್ಯವೂ ಹೆಚ್ಚಾಗಬೇಕಿದೆ. ಅಷ್ಟೇ ಅಲ್ಲ, ಇನ್ನಷ್ಟು ಐಸಿಯು ಬೆಡ್ಗಳು ಬೇಕಿವೆ. ಹೀಗಾಗಿ, ಖಾಸಗಿ ಆಸ್ಪತ್ರೆಗಳಲ್ಲೂ ಕರೋನಾ ಸೋಂಕಿತರ ಚಿಕಿತ್ಸೆ ಪುನಃ ನಡೆಯ ಬೇಕಿದೆ. ಮುಂದಿನ ಆರು ತಿಂಗಳು ದೇಶದಲ್ಲಿ ಕರೋನಾ ವೈರಸ್ ಉತ್ತುಂಗ ತಲುಪಿ ನಂತರ ಇಳಿಮುಖವಾಗುತ್ತದೆ. ಕರೋನಾ ನಿಯಂತ್ರಣಕ್ಕೆ ಈಗಾಗಲೇ ತಾಂತ್ರಿಕ ಸಮಿತಿ ವರದಿ ನೀಡಿದೆ. ಕಟ್ಟುನಿಟ್ಟಾಗಿ ಪಾಲಿಸಿದರೆ ಕರೋನಾದಿಂದ ಬೇಗ ಮುಕ್ತಿ ಪಡೆಯ ಬಹುದಾಗಿದೆ.