ಟೆಕ್ ಮಾತು
ಇಂದುಧರ ಹಳೆಯಂಗಡಿ
ಇದು ಬದಲಾವಣೆಯ ಯುಗ. ಹಳೆಯದೆಲ್ಲವನ್ನೂ ತ್ಯಜಿಸಿ, ಹೊಸದನ್ನು ಕೊಂಡುಕೊಳ್ಳುವ ಯುಗ ಇದು. ಹಳೆಯ ಸ್ಮಾರ್ಟ್ ಫೋನ್ನ್ನು ಮಾರಾಟ ಮಾಡಿ, ಹೊಸದನ್ನು ಕೊಳ್ಳುವುದು ಒಳ್ಳೆಯದೇ. ಅದಕ್ಕಿಂತ ಮುಂಚೆ ಹಳೆಯ ಸ್ಮಾರ್ಟ್ಫೋನ್ಗೆ ಏನೆಲ್ಲಾ ‘ಸಂಸ್ಕಾರ’ ಮಾಡಬೇಕು, ಯಾವೆಲ್ಲಾ ಮಾಹಿತಿಯನ್ನು ಅದರಿಂದ ತೆಗೆದು ಹಾಕಬೇಕು? ಓದಿ ನೋಡಿ.
ನೀವೇನಾದರೂ ಹೊಸ ಮೊಬೈಲ್ ಫೋನ್ ಕೊಂಡುಕೊಳ್ಳಲು ಹೊರಟಿದ್ದೀರಾ? ಇದಕ್ಕಾಗಿ ನಿಮ್ಮ ಹಳೇಯ ಸ್ಮಾರ್ಟ್ ಫೋನ್ ಮಾರಬೇಕೆಂದಿದ್ದೀರಾ? ಒಳ್ಳೆಯ ವಿಚಾರ. ಆದರೆ, ನಿಮ್ಮ ಫೋನ್ನಲ್ಲಿರುವ ಈಗಾಗಲೇ ತುಂಬಿಕೊಂಡಿರುವ ಸಂಪರ್ಕ, ಸಂದೇಶ ಗಳು ಇತ್ಯಾದಿ ಮಾಹಿತಿ ಗಳನ್ನು ಏನು ಮಾಡುವುದು? ಹೇಗೆ ಸಂರಕ್ಷಿಸುವುದು? ನಿಮ್ಮ ಯಾವುದೇ ಮೊಬೈಲ್ ಫೋನ್ ಅನ್ನು ಮಾರಾಟ ಮಾಡುವ ಮುನ್ನ ಇದರ ಕುರಿತು ಎಚ್ಚರಿಕೆ ವಹಿಸಲೇಬೇಕು. ನಿಮ್ಮ ಅಗತ್ಯತೆಯ ದೃಷ್ಟಿಯಿಂದ, ಜತೆಗೆ ನಿಮ್ಮ ಮಾಹಿತಿಯು ಬೇರೆಯವರ ಕೈ ತಲುಪದಂತೆ ನೋಡಿಕೊಳ್ಳುವ ದೃಷ್ಟಿಯಿಂದಲೂ ಈ ಕುರಿತು ಗಮನ ವಹಿಸಬೇಕು.
ಸಂಪರ್ಕಗಳನ್ನು ಬ್ಯಾಕ್ಅಪ್ ಮಾಡಿ ನೀವು ಆಂಡ್ರಾಯ್ಡ್ ಬಳಕೆದಾರರಾದರೆ, ಅದರಲ್ಲೂ ಗೂಗಲ್ ಆ್ಯಪ್ಗಳನ್ನು ಅತಿಯಾಗಿ ಬಳಸುವವರಾದರೆ, ನಿಮ್ಮ ಮೊಬೈಲ್ನಲ್ಲಿರುವ ಎಲ್ಲಾ ಸಂಪರ್ಕಗಳನ್ನು ಜೀಮೇಲ್ಗೆ ಬ್ಯಾಕ್ಅಪ್ ಮಾಡಿ ಬಿಡಿ. ಎಲ್ಲರ ಸಂಖ್ಯೆೆಯು ಸಿಮ್ ಕಾರ್ಡ್ನಲ್ಲಿ ಸೇವ್ ಆಗಿದ್ದರೆ ಏನೂ ತೊಂದರೆ ಆಗುವುದಿಲ್ಲ.
ಬದಲಿಗೆ ಫೋನ್ನಲ್ಲಿಯೇ ಸೇವ್ ಆಗಿದ್ದರೆ, ಅದನ್ನು ಟ್ರಾನ್ಸ್ಫರ್ ಮಾಡಲು ಸ್ವಲ್ಪ ಕಷ್ಟವಾದೀತು. ಅದಲ್ಲದೆ, ಇನ್ನು ಮುಂದೆ ಹೊಸಬರ ಸಂಖ್ಯೆಯನ್ನು ಸೇವ್ ಮಾಡಲು ಇದ್ದರೆ, ನಿಮ್ಮ ಜೀಮೇಲ್ನಲ್ಲಿಯೇ (https://contacts.google.com/)ಸೇವ್ ಮಾಡಿ ದರೆ ಉತ್ತಮ.
ಫೋಟೋ ಮತ್ತು ವೀಡಿಯೋ
ಹಲವರಿಗೆ ಇದು ಗೊತ್ತಿರಲಿಕ್ಕೂ ಇಲ್ಲ. ನಾವು ಸಾಮಾನ್ಯವಾಗಿ ಹೊಸ ಫೋನ್ ಖರೀದಿಸಿದಾಗ, ಒಂದು ಮೊಬೈಲ್ನಿಂದ
ಮತ್ತೊಂದಕ್ಕೆ ಎಲ್ಲಾ ಫೋಟೋ-ವೀಡಿಯೋಗಳನ್ನು ಶೇರ್ ಮಾಡುತ್ತೇವೆ. ಇದರ ಬದಲಿಗೆ, ಹಳೇ ಫೋನ್ನಲ್ಲಿಯೇ ಇದನ್ನು ಗೂಗಲ್, ಮೈಕ್ರೋಸಾಫ್ಟ್ ಅಥವಾ ಇತರ ಕ್ಲೌಡ್ ಸ್ಟೋರೇಜ್ಗೆ ಬ್ಯಾಕ್ಅಪ್ ಮಾಡಿಟ್ಟರೆ, ಹೊಸ ಫೋನ್ಗೆ ಶೇರ್ ಮಾಡುವ ಮೊದಲೇ, ನೀವು ಅಪ್ಲೋಡ್ ಮಾಡಿದ ಡ್ರೈವ್ನ ಅಕೌಂಟ್ ಹಾಕಿದ ಕೂಡಲೆ ನಿಮಗೆ ಅದರ ಎಕ್ಸೆಸ್ ಸಿಗುವುದು.
ಎಲ್ಲವೂ ಆನ್ಲೈನ್ನಲ್ಲಿಯೇ ಸಿಗುವುದರಿಂದ ನಿಮಗೆ ಬೇಕಾಗಿರುವುದನ್ನು ಮಾತ್ರ ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು. ಅದೆಷ್ಟೋ ಫೋಟೋಗಳು ಮತ್ತು ವಿಡಿಯೋಗಳು ಎಲ್ಲರಿಗೂ ಬಹಳ ಪ್ರಾಮುಖ್ಯ ಎನಿಸುತ್ತವೆ. ಭಾವನಾ ತ್ಮಕ ಸಂಬಂಧವೂ ಕೆಲವು ಫೋಟೋಗಳೊಂದಿಗೆ ಇರುತ್ತವೆ. ಅಂತಹ ಫೋಟೋಗಳನ್ನು ರಕ್ಷಿಸುವಲ್ಲಿ ಕ್ಲೌಡ್ ಸ್ಟೋರೇಜ್ ಬಹಳ ಸಹಾಯ ಮಾಡುತ್ತದೆ.
ಲಾಗ್ಔಟ್ ಆಗುವುದು ಬಹು ಮುಖ್ಯ
ಪ್ರಸ್ತುತ ಕಾಲಘಟ್ಟದಲ್ಲಿ ಓದಲು, ಬರೆಯಲು ಬರುವುದಕ್ಕಿಂತ ನೀವು ಸಾಮಾಜಿಕ ಮಾಧ್ಯಮ-ಜಾಲತಾಣಗಳಲ್ಲಿ ಎಷ್ಟು ಸಕ್ರಿಯ ರಾಗಿದ್ದೀರ ಎಂಬುವುದರ ಮೇಲೆ ಕೆಲವರು ಸಾಕ್ಷರತೆಯನ್ನು ಹೊಸ ಮಾನದಂಡದಿಂದ ಅಳೆಯುತ್ತಾರೆ. ಓದಲು ಬರೆಯಲು ಬರುವುದು ಒಳ್ಳೆಯದೇ, ಜತೆಯಲ್ಲೇ ಸಾಮಾಜಿಕ ಜಾಲತಾಣದ ನಿಮ್ಮ ಸಾಕ್ಷರತೆಯು ಈಗಿನ ಯುಗಮಾನದಲ್ಲಿ ನಿಮ್ಮ ಇರವನ್ನು ಹೆಚ್ಚು ಪ್ರಮುಖವಾಗಿಸುತ್ತದೆ. ಆದ್ದರಿಂದ ಹೆಚ್ಚಿನವರು ತಮ್ಮ ಸ್ಮಾರ್ಟ್ಫೋನ್ ನಲ್ಲಿ ಸಾಮಾಜಿಕ ಜಾಲತಾಣಗಳನ್ನು ಉಪ ಯೋಗಿಸುತ್ತಾರೆ.
ಈ ಸಂದರ್ಭದಲ್ಲಿ ಒಂದನ್ನು ನೆನಪಿಡಬೇಕು. ಸ್ಮಾಟ್ ಫೋರ್ನ್ನಲ್ಲಿ ಒಮ್ಮೆ ಲಾಗ್ಇನ್ ಆದಾಗ, ಸಾಮಾನ್ಯವಾಗಿ ಲಾಗ್ಇನ್ ನಿರಂತರವಾಗಿ ಮುಂದುವರಿದಿರುತ್ತದೆ. ಹೀಗಿರುವಾಗ, ನಿಮ್ಮ ಸ್ಮಾರ್ಟ್ಫೋನ್ನನ್ನು ಮಾರುವುದೇ ಆದಲ್ಲಿ, ಅದರಲ್ಲಿ ಯಾವೆಲ್ಲಾ ಆ್ಯಪ್ಗಳಿವೆಯೋ, ಯಾವುದೆಲ್ಲಾ ಜಾಲತಾಣಗಳೊಳಗೆ ಲಾಗ್ಇನ್ ಆಗಿದ್ದೀರೋ, ಅದರಿಂದ ಲಾಗ್ಔಟ್ ಆಗಿ. ಇದು ಮುಖ್ಯ. ಸಾಮಾನ್ಯವಾಗಿ ನಿಮ್ಮ ಫೋನ್ ಸೆಟ್ಟಿಂಗ್ನಲ್ಲಿ ‘ಅಕೌಂಟ್ಸ್’ ಎಂದು ಸರ್ಚ್ ಮಾಡಿದಾಗ ಯಾವುದೆಲ್ಲಾ ಜಾಲತಾಣ ಗಳಲ್ಲಿ ನೀವು ಲಾಗ್ ಇನ್ ಆಗಿದ್ದೀರಿ ಎಂಬುವುದನ್ನು ನೋಡಬಹುದಾಗಿದೆ.
ಲಾಗ್ಔಟ್ ಆಗದೇ ಮಾರಾಟ ಮಾಡಿದ್ದೇ ಆದಲ್ಲಿ, ನಿಮ್ಮ ಫೋನ್ಅನ್ನು ಖರೀದಿಸುವವರು ನಿಮ್ಮ ಅಕೌಂಟ್ ಅನ್ನು ದುರುಪ ಯೋಗ ಪಡಿಸುವ ಅವಕಾಶ ಇದೆ.ನಿಮ್ಮ ಹೆಸರಿರುವ ಖಾತೆಯಿಂದ ನಿಮಗೇ ಗೊತ್ತಿಲ್ಲದೆ ಏನಾದರೂ ಅನಪೇಕ್ಷಿತ ಚಟುವಟಿಕೆ ಗಳು ಆಗಬಹುದು. ಹಾಗಾಗಿ ಲಾಗ್ಔಟ್ ಆಗುವುದು ಉತ್ತಮ ಮತ್ತು ಅತ್ಯಗತ್ಯ.
ಎಸ್ಡಿ ಕಾರ್ಡ್, ಸಿಮ್ ಕಾರ್ಡ್ ತೆಗೆದಿಡಿ
ಹಲವರು ಇದನ್ನು ಮರೆತುಬಿಡುತ್ತಾರೆ. ಯಾವಾಗಲೂ ನಿಮ್ಮ ಮೊಬೈಲ್ ರಿಪೇರಿಗೆ ಕೊಡುವಾಗ ಅಥವಾ ಅದನ್ನು ಯಾರಿ ಗಾದರೂ ಮಾರಾಟ ಮಾಡುವಾಗ, ಅದರಿಂದ ಎಸ್ಡಿ ಕಾರ್ಡ್ ಹಾಗೂ ಸಿಮ್ ಕಾರ್ಡ್ಗಳನ್ನು ಹೊರತೆಗೆಯಿರಿ. ಇಲ್ಲದಿದ್ದರೆ, ನಿಮ್ಮ ಖಾಸಗಿ ಮಾಹಿತಿಗಳು, ಸಂಪರ್ಕ ಪಟ್ಟಿ ಇತ್ಯಾದಿ ವಿಷಯಗಳು ಇತರರಿಗೆ ಸಿಗುವ ಸಾಧ್ಯತೆ ಇರುತ್ತದೆ.
ವಾಟ್ಸಾಪ್ ಬ್ಯಾಕ್ಅಪ್
ಒಂದೆರಡು ಅಪರೂಪದ ಮುತ್ತುಗಳನ್ನು ಹೊರತುಪಡಿಸಿದರೆ, ಈಗಿನ ಕಾಲದಲ್ಲಿ ವಾಟ್ಸಾಪ್ ಇಲ್ದಿರೋರು ಯಾರಾದ್ರೂ ಇದ್ದಾರಾ! ವಾಟ್ಸಾಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಅದಲ್ಲದೆ, ಹಲವು ಬಹುಮುಖ್ಯ ಮಾಹಿತಿಗಳು, ಚಾಟಗಳು, ಫೋಟೋಗಳು, ವಿಡಿಯೋಗಳು ಅದರಲ್ಲಿರಲೂಬಹುದು. ಹಾಗಾಗಿ ನಿಮ್ಮ ಸ್ಮಾರ್ಟ್ಫೋನ್ ರೀಸೆಟ್ ಮಾಡುವ ಮುನ್ನ ವಾಟ್ಸಾಪ್ ಅನ್ನು ಯಾವುದಾದರೂ ಕ್ಲೌಡ್ ಸ್ಟೋರೇಜ್ನಲ್ಲಿ ಬ್ಯಾಕ್ ಅಪ್ ಮಾಡಿ. ವಾಟ್ಸಾಪ್ಗೆ ಹೋಗಿ, ಮೋರ್ (ಮೂರು ಚುಕ್ಕಿಗಳು) ಆಪ್ಷನ್ ನಲ್ಲಿ ಸೆಟ್ಟಿಂಗ್ – ಚಾಟ್ಸ್ – ಚಾಟ್ಸ್ ಬ್ಯಾಕ್ಅಪ್ – ಬ್ಯಾಕ್ಟಪ್ ಟು ಗೂಗಲ್ ಡ್ರೈವ್ ಮೆನು ವನ್ನು ಕ್ಲಿಕ್ ಮಾಡಿ. ಆಗ, ಹೊಸ ಸ್ಮಾರ್ಟ್ಫೋನ್ನಲ್ಲಿ ವಾಟ್ಸಾಪ್ ಇನ್ಸ್ಟಾಲ್ ಮಾಡಿದಾಗ, ಹಳೆಯ ಚಾಟ್ಗಳನ್ನು ಸಂಪೂರ್ಣವಾಗಿ ಪುನಃ ಪಡೆಯಬಹುದು.
ಫ್ಯಾಕ್ಟರಿ ರೀಸೆಟ್
ಎಲ್ಲಾ ಮುಖ್ಯ ಮಾಹಿತಿಗಳನ್ನು ಬ್ಯಾಕ್ಅಪ್ ಮಾಡಿ ಮುಗಿದ ಬಳಿಕ ಹಾಗೂ ಫೋನ್ ಒಳಗಿನಿಂದ ಸಿಮ್ ಹಾಗೂ ಎಸ್ಡಿ ಕಾರ್ಡ್ ಹೊರತೆಗೆದ ಬಳಿಕ, ನಿಮ್ಮ ಫೋನನ್ನು ರೀಸೆಟ್ ಮಾಡಿ. ಸೆಟ್ಟಿಂಗ್ಸ್ನಲ್ಲಿ ಫ್ಯಾಕ್ಟರಿ ರೀಸೆಟ್ ಅಥವಾ ಇರೇಸ್ ಆಲ್ ಡೇಟಾ ಅನ್ನೋ ಆಪ್ಷನ್ ಸರ್ಚ್ ಮಾಡಿ, ಎಲ್ಲವನ್ನೂ ಇರೇಸ್ ಮಾಡಿಬಿಡಿ. ಆಗ ನಿಮ್ಮ ಫೋನ್, ಹೊಸದಾಗಿ ಕೊಂಡ ಸ್ಥಿತಿಯಲ್ಲಿದ್ದಂತೆ ಕಂಡುಬರುವುದು.
ಹಳೆಯ ಎಲ್ಲಾ ಮಾಹಿತಿ, ಡಾಟಾಗಳನ್ನು ಅಳಿಸಿ ಹಾಕಿದ ನಂತರವಷ್ಟೇ ಮೊಬೈಲ್ನ್ನು ಇತರರಿಗೆ ಮಾರಾಟ ಮಾಡುವುದು ಅಗತ್ಯ. ನಿಮ್ಮ ಮಾಹಿತಿಯು ಬೇರೆಯವರು ಕೈಯಲ್ಲಿ ಸಿಗುವುದು ಇಂದಿನ ಡಿಜಿಟಲ್ ಯುಗದಲ್ಲಿ ತುಸು ಅಪಾಯಕಾರಿ. ಇವಿಷ್ಟು ಮಾಡಿದರೆ, ಮೊಬೈಲ್ ಸ್ಕ್ರೀನ್ನಲ್ಲಿ ಯಾವುದೇ ಡ್ಯಾಮೇಜ್ ಆಗಿರದಿದ್ದರೆ ನಿಮ್ಮ ಸ್ಮಾರ್ಟ್ಫೋನ್ ಹೊಸತರಂತೆ ಕಾಣುವ ಸಾದ್ಯತೆ ಹೆಚ್ಚಿರುತ್ತದೆ. ಆಗ, ನೀವು ಅದನ್ನು ಎಕ್ಸ್’ಚೇಂಜ್ನಲ್ಲಿ ಅಥವಾ ಹೇಗಾದರೂ ಮಾರಾಟ ಮಾಡಿದರೆ ಒಳ್ಳೆಯ ಮೌಲ್ಯ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.