Monday, 25th November 2024

ಕಮಿಷನ್ ವಿಚಾರದಲ್ಲಿ ಬಿಎಸ್ವೈ-ಈಶು ಜಗಳ: ಸಿದ್ದರಾಮಯ್ಯ ಆರೋಪ

ಬಸವಕಲ್ಯಾಣ : ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳ ವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.‌

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಈಶ್ವರಪ್ಪ ಅವರು ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲು ಇದೇ ಕಾರಣ ಎಂದರು.‌

ಈಶ್ವರಪ್ಪ ಅವರ ಗಮನಕ್ಕೆ ತಾರದೆ ಅವರ ಇಲಾಖೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕಮಿಷನ್ ಹೊಡೆಯುವ ವಿಷಯ ದಲ್ಲಿ ವಿಜಯೇಂದ್ರ ಮತ್ತು ಈಶ್ವರಪ್ಪ ನಡುವೆ ಜಗಳವಾಗಿದೆ. ಕಮಿಷನ್ ದಂಧೆ 30-35 ಪರ್ಸೆಂಟ್ ವರೆಗೂ ಹೋಗಿದೆ. ನಾ‌ ಕಾವುಂಗ ನಾ ಕಾನೇದೂಂಗ ಎನ್ನುವ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ಹೇಳಿದರು.

ತರಕಾರಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗಿದೆ. ಬೆಲೆ ಏರಿಕೆಯೇ ಅಚ್ಛೇ ದಿನ ಆಗಿದೆ.  ಬೆಲೆ ನಿಯಂತ್ರಣದಲ್ಲಿ  ಪ್ರಧಾನಿ ಮೋದಿ ಸೋತಿದ್ದಾರೆ. ರೈತರಿಗೆ ಸ್ಪಂದಿಸುವಲ್ಲಿಯೂ ಅವರು ವಿಫಲರಾಗಿದ್ದಾರೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ  ಮೋದಿಯವರ ಸುಳ್ಳು ಕೇಳಿ ಕೇಳಿ ಜನರಿಗೆ ಬೇಸರ ಬಂದಿದೆ.‌

ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷ ಕಳೆದಿದೆ.  ಅವರ ಆಡಳಿತ ನೋಡಿದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಈ ಮಟ್ಟದಲ್ಲಿ ದಿವಾಳಿ ಆಗಿರಲಿಲ್ಲ ಎಂಬುದು ಗೊತ್ತಾಗುತ್ತದೆ.

ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ ಸವಾಲು
ಸಾಲದ ಸುಳಿಗೆ ಸಿಲುಕಿ ರಾಜ್ಯ ನರಳುತ್ತಿದೆ.‌ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೆ  ಈ ವರೆಗೆ ನಯಾಪೈಸೆ ಖರ್ಚು ಮಾಡಿಲ್ಲ.‌ ಈ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚೆಗೆ ಸಿದ್ಧ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು.

ಜಿಎಸ್ ಟಿ ವಿಚಾರದಲ್ಲಿ ರಾಜ್ಯಕ್ಕೆ ಸಿಗಬೇಕಾದ ಹಣಕಾಸು ನೆರವು ಕೇಂದ್ರದಿಂದ ಸಿಗುತ್ತಿಲ್ಲ. ಯಡಿಯೂರಪ್ಪ ಅವರಿಗೆ ಭಯ ವಾದರೆ  ಮೋದಿವರ ಬಳಿ ನಾವು ಮಾತಾಡ್ತೇವೆ. ರಾಜ್ಯದ ಜನ ಮೋದಿ, ಯಡಿಯೂರಪ್ಪ ಬಗ್ಗೆ ಭ್ರಮ ನಿರಸನಗೊಂಡಿದ್ದಾರೆ. ಹೀಗಾಗಿ ಬಸವಕಲ್ಯಾಣದಲ್ಲಿ ನಮ್ಮ ಅಭ್ಯರ್ಥಿ  ಮಾಲಾ ನಾರಾಯಣ ರಾವ್ ಗೆಲುವು ಸಾಧಿಸಲಿದ್ದಾರೆ ಎಂದರು.

ಮೊದಲು ಯತ್ನಾಳಗೆ ಬುದ್ದಿ ಹೇಳಿ ಯಡಿಯೂರಪ್ಪ ಅವರನ್ನು ಟೀಕಿಸಿದ್ದಕ್ಕಾಗಿ ಕೆಲ ಸಚಿವರು ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಅವರು ದಿನಬೆಳಗಾದರೆ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಾರೆ. ಸಚಿವರು ಮೊದಲು ಯತ್ನಾಳ್ ಅವರಿಗೆ ಬುದ್ಧಿ ಹೇಳುವ ಕೆಲಸ ಮಾಡಲಿ.

ಯತ್ನಾಳ್ ಅವರು ಸಿಎಂ ವಿರುದ್ಧ ಪದೇ ಪದೇ ಮಾತನಾಡುವ ಯತ್ನಾಳ್ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷರು ಈವರೆಗೆ ಕ್ರಮ ಕೈಗೊಂಡಿಲ್ಲ. ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಸಮರ್ಥ ನಾಯಕ ಎಂದು ದೂರಿದರು.