Saturday, 23rd November 2024

ಸಾರ್ವಜನಿಕ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು 

ಸರ್ಕಾರಿ ಅಸ್ಪತ್ರೆ ಬಳಿ ಪೋಷಕರ ಆಕ್ರಂದನ

ಜೆಡಿಎಸ್ ಯುವ ಘಟಕದಿಂದ ಪ್ರತಿಭಟನೆ

ವೈದ್ಯರ ವಿರುದ್ದ ಕ್ರಮಕ್ಕೆ ಆಗ್ರಹ

ಸ್ಥಳಕ್ಕೆ ಸಿಪಿಐ ವೆಂಕಟೇಶ್ ಭೇಟಿ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಿಚ್ ಆಫ್ ಮಾಡಿಕೊಂಡು ಮಕ್ಕಳ ವೈದ್ಯ ನಾಪತ್ತೆ

ಪಾವಗಡ : ಹಾಲಿ ಕರ್ತವ್ಯ ನಿರತ ವೈದ್ಯರ ಬೇಜಾವಾಬ್ದಾರಿ ಪರಿಣಾಮ 10 ತಿಂಗಳ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮೃತ ಮಗುವಿನ ಪೋಷಕರು ವೈದ್ಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ರಾಜವಂತಿ ಗ್ರಾಮದ ವಾಸಿ ಗ್ರಾಪಂ ಸದಸ್ಯ ರಾಜಪ್ಪ ಹಾಗೂ ಭಾರತಿ ಎಂಬುವರ 10 ತಿಂಗಳ ಮಗು ಸತೀಶ್ ಸಂಡಿಗೆ ತುಂಡೊದನ್ನು ಬಾಯಲ್ಲಿ ಇಟ್ಟುಕೊಂಡಿದೆ. ಅದು ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ಮಗುವಿನ ಚೀರಾಟದಿಂದ ಗಾಬರಿಗೊಂಡು ತಾಯಿ ಮಗುವಿನ ಬಾಯಿಂದ ಸಂಡಿಗೆ ತುಂಡು ಹೊರ ತೆಗೆಯಲು ಎಲ್ಲಾ ರೀತಿಯ ಪ್ರಯತ್ನ ಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಕೂಡಲೇ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಲ್ಲಿ ಕರ್ತವ್ಯ ನಿರತ ವೈದ್ಯ ಡಾ.ರಮೇಶ್ ನಿರ್ಲಕ್ಷ್ಯ ಮಾಡಿ ವಿಳಂಬ ಮಾಡಿದ್ದಾರೆ. ಪರಿಣಾಮ ಉಸಿರಾಟ ಸಮಸ್ಯೆ ಉಲ್ಬಣವಾಗಿ ಮಗು ಆಸ್ಪತ್ರೆಯಲ್ಲಿಯೇ ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ.

ಮಗು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ತಂದೆ, ತಾಯಿ ಹಾಗೂ ಇತರೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದರು. ಇದರ ಬೆನ್ನಲ್ಲೇ ಸರ್ಕಾರಿ ಅಸ್ಪತ್ರೆ ಬಳಿ ಆಗಮಿಸಿದ್ದ ಜೆಡಿಎಸ್ ಯುವ ಘಟಕ ಹಾಗೂ ಕೆಲ ಸಂಘಸಂಸ್ಥೆಗಳ ಪದಾಧಿಕಾರಿಗಳು ಮಗು ಸಾವಿನ ಬಗ್ಗೆ ಮಾಹಿತಿ ಪಡೆದಿದ್ದು, ಬಳಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ನಿರ್ವಹಣೆ ವಿರುದ್ದ ಕಿಡಿ ಕಾರಿ ವೈದ್ಯರು ನಿರ್ಲಕ್ಷ್ಯ ವಿರುದ್ದ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಯುವ ಘಟಕದ ರೈತಮೋರ್ಚಾ ಅಧ್ಯಕ್ಷ ಕೆಂಚಗಾನಹಳ್ಳಿ ಗಂಗಾಧರನಾಯ್ಡು ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಹಲವಾರು ಸಮಸ್ಯೆ ಎದುರಾಗುತ್ತಿವೆ. ಆಸ್ಪತ್ರೆಗೆ ಕರೆತಂದಿದ್ದ ಮಗುವನ್ನು ಕೂಡಲೇ ದಾಖಲಿಸಿ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿತ್ತು. ಆದರೆ ವೈದ್ಯರ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿದೆ.

ಏ.11ರಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕರ್ತವ್ಯ ಮುಗಿಸಿ ಹೋದವರು ಮತ್ತೆ ಆಸ್ಪತ್ರೆಗೆ ಬಂದಿಲ್ಲ. ತಾಲೂಕಿನ ವೈದ್ಯಾಧಿ ಕಾರಿಗೂ ಮಾಹಿತಿ ನೀಡಿಲ್ಲ. ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ನಾಪತ್ತೆಯಾದ ಪರಿಣಾಮ ಸಮಯಕ್ಕೆ ಚಿಕಿತ್ಸೆ  ದೊರೆ ಯದೇ ಮಗು ಮೃತಪಟ್ಟಿದೆ.

ಒಬ್ಬ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡ ಕಾರಣ ಮಕ್ಕಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಸ್ಪತ್ರೆಗೆ ಹೆಚ್ಚಿನ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾ ಉಸ್ತುವರಿ ಸಚಿವ ಹಾಗೂ ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಅವರು ಒತ್ತಾಯಿಸಿದರು.

ಯುವ ಮುಖಂಡ ಟಿಎನ್ ಪೇಟೆ.ರಮೇಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬೇಜಾವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಬಂದರೆ ಮಕ್ಕಳ ತಜ್ಞರು ಸಿಗುವುದೇ ಅಪರೂಪ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸ್ಥಳಕ್ಕೆ ಸಿಪಿಐ ವೆಂಕಟೇಶ್ ಹಾಗೂ ಪೊಲೀಸರು ಭೇಟಿ ನೀಡಿದರು.