Sunday, 15th December 2024

ಒತ್ತಡ ನಿವಾರಣೆಗೆ ಜಪ

ನವೀನಶಾಸ್ತ್ರಿ ರಾ. ಪುರಾಣಿಕ

ಇಂದಿನ ವೇಗದ ದಿನಚರಿಯಲ್ಲಿ ಎಲ್ಲರಿಗೂ ಒತ್ತಡವನ್ನು ಎದುರಿಸಬೇಕಾದ ಅನಿವಾರ್ಯತೆ. ವೃತ್ತಿಯ ಅವಧಿ ಮುಗಿದ ನಂತರವೂ ಆ ಒತ್ತಡದ ದುಷ್ಪರಿಣಾಮ ನಮ್ಮನ್ನು ಕಾಡುತ್ತಿರುತ್ತದೆ. ಅದರಿಂದ ಹೊರಬರಲು ಇರುವ ಒಂದು ಉತ್ತಮ
ವಿಧಾನವೆಂದರೆ ಜಪ ಮತ್ತು ಮಂತ್ರಪಠಣ ಎನ್ನುತ್ತಾರೆ ಲೇಖಕರು.

ಪ್ರಸ್ತುತ ಆಧುನಿಕ ಯುಗದಲ್ಲಿ ನಾವು ಎಲ್ಲವನ್ನೂ ಪಡೆದಿದ್ದೇವೆ. ಅರ್ಥವಿಲ್ಲದ ಅರ್ಥ ಗಳಿಕೆಯಲ್ಲಿ ಅಲ್ಪ ಆಯುಷಿಗಳಾಗಿ, ಅನೇಕ ತರಹದ ವ್ಯಾಧಿಗಳಿಂದ ಬಳಲುತ್ತಿದ್ದೇವೆ. ಕಾರಣಗಳು ಅನೇಕ. ಇಂತಹ ಸಂದರ್ಭದಲ್ಲಿ ನಮಗೆ ಮುಖ್ಯವಾಗಿ ಬೇಕಾಗಿರು ವುದು ಮನಸ್ಸಿನ ನೆಮ್ಮದಿ. ಅದನ್ನು ಪಡೆಯಲು ‘ಜಪ’ ಎಂಬ ದಿವ್ಯ ಔಷಧಿಯನ್ನು ಪ್ರಯೋಗಿಸಬೇಕು. ಮನಸ್ಸಿನ ಮುಪ್ಪಿಗೆ ಅಧ್ಯಾತ್ಮವೆ ಊರುಗೋಲು.

ಜಪ ಎಂದರೇನು?

ಜಕಾರೋ ಜನ್ಮ ವಿಚ್ಛೇದಃ ಪಕಾರಃ ಪಾಪ ನಾಶನಂ? ತಸ್ಮಾತ್ ಜಪ ಇತಿಪ್ರೀಕ್ತೋ ಜನ್ಮಪಾಪ ವಿನಾಶಕಃ?? ಜ ಎಂಬ ಅಕ್ಷರದಿಂದ ಜನ್ಮದ ನಂಟು ಕಳೆಯತ್ತೆ. ಪ ಕಾರ ಪಾಪ ನಾಶ ಮಾಡುತ್ತದೆ. ಹಾಗಾಗಿ ಇದು ಜನ್ಮ ಪಾಪ ವಿನಾಶಕವಾದ ಪದ. ಜಪವು ನಮ್ಮನ್ನು ನಿರಂತರವಾದ ಜನನ ಮರಣ ಚಕ್ರದಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆ ಇದೆ. ದೇಶ ಕಾಲ ಹಾಗೂ ಅನುಕೂಲಕ್ಕೆ ತಕ್ಕಂತೆ ಹಲವು ವಿಧದ ಜಪಗಳನ್ನು ಹೇಳಲಾಗಿದ್ದು, ಅವು ಗಳಲ್ಲಿ ಒಂಬತ್ತು ವಿಧದ ಜಪ ವಿಧಾನಗಳನ್ನು ನಮ್ಮ ಋಷಿ ಮುನಿಗಳು ತಿಳಿಸಿದ್ದಾರೆ.

1. ನಿತ್ಯ ಜಪ: ಒಂದು ನಿಗದಿತ ಸಮಯದಲ್ಲಿ ಪ್ರತಿದಿನ ಮಾಡುವ ಜಪ. ಇದನ್ನು ಆತ್ಮೋನ್ನತಿಯ ಮಾರ್ಗವೆಂದು ಹೇಳಲಾಗಿದೆ.
2. ನೈಮಿತ್ತಿಕ ಜಪ: ಇದು ವಿಶೇಷ ದಿನಗಳಲ್ಲಿ ಮಾಡುವ ಜಪ. ಸಂಕ್ರಮಣ, ನವರಾತ್ರಿ, ಶಿವರಾತ್ರಿ ಇಂಥ ಪರ್ವ ಕಾಲದಲ್ಲಿ ಮಾಡುವ ಜಪ. ಇದು ಸಾಂದರ್ಭಿಕ ಫಲವಿಶೇಷಗಳನ್ನು ನೀಡುತ್ತವೆ ಎಂದು ಹೇಳಲಾಗಿದೆ.

3. ಕಾಮ್ಯ ಜಪ : ಇದು ಒಂದು ನಿರ್ದಿಷ್ಟವಾದ ಅಪೇಕ್ಷೆಯಿಂದ, ಬಯಕೆಯಿಂದ ಮಾಡುವ ಜಪ.
4. ಪ್ರದಕ್ಷಿಣಾ ಜಪ: ದೇವಾಲಯದಲ್ಲಿ, ಅಶ್ವತ್ಥದ ಕಟ್ಟೆಯಲ್ಲಿ ಮಾಡುವ ಪ್ರದಕ್ಷಿಣಾ ಜಪ.

5.ಅಖಂಡ ಜಪ: ಇದು ಖಂಡ ಮಾಡದೇ (ನಿಲ್ಲಿಸದೆ, ನಿರಂತರವಾಗಿ) ಮಾಡುವ ಜಪ. ಒಂದು ನಿರ್ದಿಷ್ಟ ಕಾಲದಲ್ಲಿ ಪ್ರಾರಂಭಿಸಿ ಎಡಬಿಡದೆ ನಿರ್ದಿಷ್ಟ ಕಾಲದವರೆಗೆ ಅಹೋರಾತ್ರಿ ನಿರಂತರವಾಗಿ ಮಾಡುವ ಜಪ.

6. ಅಜಪಾಜಪ: ಇದನ್ನು ಹಂಸ ಜಪ ಎನ್ನಲಾಗುತ್ತದೆ. ‘ಸೋಹಂ’ ಮಂತ್ರವು ಅಜಾಪಜಪವಾಗಿದೆ.

7. ಲಿಖಿತ ಜಪ: ಇದು ದೇವರ ನಾಮಗಳನ್ನು ಬರೆಯುತ್ತಾ ಜಪಿಸುವ ವಿಧಾನ.

8.ಅಚಲ ಜಪ: ಒಂದು ಕಡೆ ಸ್ಥಿರವಾಗಿ ಕುಳಿತು ಮಾಡುವ ಜಪ.
9.ಚಲ ಜಪ: ಓಡಾಡುತ್ತಾ ಹೇಳಿಕೊಳ್ಳಬಹುದಾದ ಜಪ. ಇದನ್ನು ಸಂಕೀರ್ತನ ಜಪ ಎಂದೂ ಕರೆಯಲಾಗುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣನು ಈ ಜಪವನ್ನು ಯಜ್ಞ ಎಂದು ಕರೆದಿದ್ದಾನೆ. ಕಲಿಯುಗದಲ್ಲಂತೂ ಜಪವೇ ಯಜ್ಞ. ನಮಗೆ ಯಾವ ಜಪ
ವಿಧಾನ ಸೂಕ್ತ ಎನ್ನಿಸುತ್ತದೆಯೋ ಅದನ್ನು ಗುರುಮುಖೇನ ಉಪದೇಶ ಪಡೆದು ಅನುಷ್ಠಾನ ಮಾಡಬಹುದಾಗಿದೆ.

ಜಪಮಾಡುವುದರಿಂದ ಅನುಕೂಲಗಳೇನು?
‘ಮನನಾತ್ ತ್ರಾಯತೇ ಇತಿ ಮಂತ್ರಃ’
ಮನಸ್ಸಿಟ್ಟು ಜಪಿಸುವದರಿಂದ ರಕ್ಷಣೆ ಕೊಡುವದೇ ಮಂತ್ರ. ಯಾವುದೇ ಮಂತ್ರವನ್ನು ಪದೇ ಪದೇ ಮನನ ಮಾಡುತ್ತಿದ್ದರೆ ಅದು ನೆನಪಿನಲ್ಲಿರುತ್ತದೆ ಮತ್ತು ಮಂತ್ರ ಸಿದ್ಧಿಯಾಗುತ್ತದೆ.

ರೀತಿಯ ಆಹ್ಲಾದತೆ, ತನ್ಮಯತೆ ಮತ್ತು ಪರವಶತೆಯನ್ನು ಅನುಭವಿಸಬಹುದು. ಮನ ಆನಂದದಿಂದ ಇದ್ದಷ್ಟೂ ರೋಗ
ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ಇನ್ನಷ್ಟು ಉತ್ತಮವಾಗುತ್ತದೆ. ಮನಸ್ಸು ನಿರಾಳವಾಗುತ್ತದೆ ಮನಸ್ಸು ಉದ್ವೇಗ ಗೊಂಡಿದ್ದಾಗ ಮನಸ್ಸಿನ ಚಿತ್ತವನ್ನು ಬೇರೆಡೆಗೆ ಹೊರಳಿಸಿ ಎಂದು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಆದರೆ ಇದು ಹೇಳಿ ದಷ್ಟು ಸುಲಭವಲ್ಲ. ಸ್ತೋತ್ರ, ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ.

ಶಕ್ತಿ ಕೇಂದ್ರಗಳ ಸಮತೋಲನ

ನಮ್ಮ ದೇಹದಲ್ಲಿ ಹಲವು ಶಕ್ತಿಕೇಂದ್ರಗಳಿವೆ. ಇವನ್ನು ಚಕ್ರಗಳು ಎಂದು ಕರೆಯಲಾಗುತ್ತದೆ. ದೇಹದ ಸಮರ್ಪಕ ಕಾರ್ಯ ನಿರ್ವಹಣೆಗಾಗಿ ಈ ಚಕ್ರಗಳಿಂದ ಸೂಕ್ತ ಪ್ರಮಾಣದ ಶಕ್ತಿ ಪ್ರವಹಿಸುತ್ತಾ ಇರಬೇಕು. ಒಂದು ವೇಳೆ ಈ ಶಕ್ತಿಗಳ ಪ್ರಮಾಣದಲ್ಲಿ ಏರುಪೇರಾದರೆ ದೇಹದ ಕಾರ್ಯ ಮಂತ್ರಗಳ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ
ಪರಿಣಾಮ ಬೀರುತ್ತದೆ.

ಶರೀರದ ತೇಜೋಶಕ್ತಿಯನ್ನು ಹೆಚ್ಚಿಸಲು, ಧ್ವನಿ, ಶ್ವಾಸ ಮತ್ತು ಲಯಬದ್ಧತೆಯಿಂದ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸಲು, ಸಂಕಷ್ಟಗಳನ್ನು ದೂರ ಮಾಡಲು ಮಂತ್ರಗಳ ಮೂಲಕ ಮಾತ್ರ ಸಾಧ್ಯ. ಪ್ರತಿ ಸ್ತೋತ್ರ, ಮಂತ್ರಗಳ ಉಚ್ಛಾರ ದೇಹದ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಚೇತೋಹಾರಿಯಾಗಿದೆ.

ಸ್ತೋತ್ರ ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎನ್ನಲಾಗಿದ್ದು, ಕೆಲವು ಮಂತ್ರಗಳ ಪಠಣ ಕಷ್ಟಕರವಾಗಿದ್ದು ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದರೊಂದಿಗೆ ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿ ಸಲು ಅಗತ್ಯವಾದ ಇತರ ಅಂಗಗಳಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಮಂತ್ರ ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮನಸ್ಸನ್ನು ಸಂತೋಷಕರವಾಗಿರಿಸಲು ಅಗತ್ಯವಿರುವ ಹಾರ್ಮೋನುಗಳೂ ಬಿಡುಗಡೆಯಾಗುತ್ತವೆ.

ಮಂತ್ರೋಚ್ಛಾರಣೆಯ ಬಳಿಕ ಒಂದು ನಿರ್ವಹಣೆಯೂ ಏರುಪೇರಾಗುತ್ತದೆ. ಮಂತ್ರ ಪಠಣದಿಂದ ಈ ಚಕ್ರಗಳನ್ನು ಸಮತೋಲನ ದಲ್ಲಿರಿಸಲು ನೆರವಾಗುತ್ತದೆ ಮತ್ತು ಚಕ್ರಗಳ ಶಕ್ತಿಗಳು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ನಿಯಮಿತವಾಗಿ ಸ್ತೋತ್ರ ವನ್ನು ಪಠಿಸುತ್ತಾ ಒತ್ತಡವನ್ನು ನಿವಾರಿಸಲು ಸಾಧ್ಯ. ಇಂಥ ದಿವ್ಯ ಮಂತ್ರೌಶದಿ ಮೂಲಕ ಮೆದುಳಿಗೆ ಮತ್ತು ದೇಹಕ್ಕೆ ಆಗಿದ್ದ ಒತ್ತಡ ಸಂಬಂಧಿ ದೋಷಗಳನ್ನು ಕಡಿಮೆಗೊಳಿಸಿ ಮೊದಲಿನ ಆರೋಗ್ಯವನ್ನು ಮತ್ತೊಮ್ಮೆ ಪಡೆಯಬಹುದು. ಖಿನ್ನತೆಯನ್ನು ನಿವಾರಿಸುತ್ತದೆ.

ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ಧವಾಗಿ ಪಠಿಸಬೇಕಾದ ಅನಿವಾರ್ಯತೆ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ತನ್ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತೇಜಸ್ಸು ಸಹಾ ಹೆಚ್ಚುತ್ತದೆ. ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುವ ಸಾಧ್ಯತೆ ಇದೆ.

ಆದ್ದರಿಂದ, ಇಂದಿನ ಒತ್ತಡ ತುಂಬಿದ ಆಧುನಿಕ ದಿನಚರಿಯಲ್ಲಿ, ಜಪ ಮತ್ತು ಮಂತ್ರಪಠಣೆ ಯು ಒಂದು ಮಟ್ಟದ ಒತ್ತಡ ನಿವಾರಣೆಯನ್ನು ನಿವಾರಿಸಿ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ನೀಡಬಲ್ಲದು.