Sunday, 5th January 2025

ಭಗವಂತನ ಕೃಪೆಯ ತಂಪನ್ನು ಹಂಚಿದ ಸಂತ – ರಾಮಾನುಜಾಚಾರ್ಯ

ತನ್ನಿಮಿತ್ತ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಸೂರ್ಯ ಚಂದ್ರರು ಹೇಗೆ ಎಲ್ಲಾ ಕಾಲದಲ್ಲೂ ಪ್ರಸ್ತುತರೋ ಹಾಗೆ ವೇದಾಂತ ಅಂದರೆ ತತ್ವಜ್ಞಾನ ಪ್ರಸರಣ ಮಾಡಿದ ರಾಮಾನುಜ ಆಚಾರ್ಯರು ನೀಡಿದ ಜ್ಞಾನ – ಭಕ್ತಿಗಳ ಪ್ರಕಾಶವೂ ಸರ್ವಕಾಲಕ್ಕೂ ಪ್ರಸ್ತುತ.

ಸಾವಿರ ವರ್ಷ ಕಳೆದರು ಅಚ್ಚಳಿಯದ ಪ್ರಭಾವವನ್ನು ಉಳಿಸಿಹೋಗಿರುವ ಮಹಾನುಭಾವರು ರಾಮಾನುಜಾಚಾರ್ಯರು. ಭರತಖಂಡವು ಬಹಳ ಸಂದಿಗ್ದ ಕಾಲದಲ್ಲಿದ್ದಾಗ ನವಗ್ರಂಥ ರಚನೆಯ ಮೂಲಕ ವಿಶಿಷ್ಟಾದ್ವೈತವೆಂಬ ಆಧ್ಯಾತ್ಮಿಕ ಸಿದ್ಧಾಂತವನ್ನು ಪಸರಿಸಿದ ಭಾರತದ ಧ್ರುವತಾರಾ ಸದೃಶ ಆಚಾರ್ಯತ್ರಯರಲ್ಲಿ ಮಧ್ಯದವರು ಸಂತ ರಾಮಾನುಜರು. ಮೋಕ್ಷಪ್ರಾಪ್ತಿಯ ಅವಕಾಶವನ್ನು ಸರ್ವರಿಗೂ ಸಮಾನವೆಂದು ಸಾರಿದ ಸಾಮಾಜಿಕ ಕ್ರಾಂತಿ ತೇಜ.

ಶೇಷಾವತಾರಿಗಳಾಗಿ ಧರ್ಮೋದ್ಧಾರಕ್ಕಾಗಿ ಇಳೆಯಲ್ಲಿ ಆವತರಿಸಿದ ಆಚಾರ್ಯರದು ಸಂಘರ್ಷಮಯ ಜೀವನ , ಅವರ ಭಕ್ತಿ ಮಾರ್ಗ ಇಡೀ ಭಾರತದಲ್ಲಿ ಹೆಚ್ಚಿನ ಪ್ರಭಾವ ಬೀರಿ ಸನಾತನ ಧರ್ಮವನ್ನು ಕಾಪಾಡಿದ್ದು ಅವಿಸ್ಮರಣೀಯ. ಇಂದಿದ್ದರೆ
ಅದೇ ಹೆಚ್ಚು ನಾಳೆ ಏನೋ ತಿಳಿಯದು ಎಂಬಂಥ ತಾತ್ಕಾಲಿಕ ಪ್ರಜ್ಞೆಯಲ್ಲಿ ಜೀವಿಸುತ್ತಿರುವ ಜಸಹಸ್ರಮಾನೋತ್ಸವವನ್ನು ಆಚರಿಸುವುದೇ? ಆಶ್ಚರ್ಯ ವೆನಿಸಬಹುದು. ಆದರೂ ಸತ್ಯ.

ಏಕೆಂದರೆ ಸಾವಿರ ವರ್ಷ ಕಳೆದರೂ ಅಚ್ಚಳಿಯದ ಪ್ರಭಾವವನ್ನು ಉಳಿಸಿ ಹೋಗಿರುವ ಮಹಾನುಭಾವರು ರಾಮಾನುಜಾಚಾ
ರ್ಯರು ಪೂರ್ಣ ಆಯಸ್ಸನ್ನು 120 ವರ್ಷ ಈ ಭೂಮಿಯ ಮೇಲೆ ಕಳೆದದ್ದು ಅವರ ಭಕ್ತರ, ಶಿಷ್ಯರ, ಸಾಮಾನ್ಯಜನರ, ಅವರ ಕೃಪೆಗೆ ಪಾತ್ರರಾದ ದೀನದ ಲಿತರ ಭಾಗ್ಯವೇ ಸರಿ. ಲಕ್ಷ್ಮಣ ಮುನಿ, ಎಂಬೆರು ಮಾನಾರ್, ಶ್ರೀ ಭಾಷ್ಯಕಾರರು, ತಿರುಪ್ಪಾವೈ ಜೀಯರ್, ರಾಜಹಂಸ, ಒಡೆಯವರ್ ಮುಂತಾದ ಹದಿನೇಳು ಸಾರ್ಥಕವಾದ ನಾಮಧೇಯಗಳಿಂದ ಭೂಷಿತರಾದ ರಾಮಾನು ಜಾಚಾರ್ಯರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಎಂದರೆ ಭಕ್ತಿಯ ನೆಲೆಯಲ್ಲಿ ಸಾಮಾಜಿಕ ಏರುಪೇರುಗಳನ್ನು ಸಮಗೊಳಿಸಿ ವರ್ಣ ಜಾತಿ ವರ್ಗಗಳ ಅನ್ಯೋನ್ಯತೆಯನ್ನು ಬೆಳೆಸಿದ್ದು.

ಅವರ ಶ್ರೀ ಭಾಷ್ಯ ಅಂದರೆ ಬ್ರಹ್ಮ ಸೂತ್ರಗಳಿಗೆ ಬರೆದಿರುವ ವ್ಯಾಖ್ಯಾನದ ಮಂಗಳ ಶ್ಲೋಕವೇ ಅವರು ಭಕ್ತಿಗೆ ನೀಡಿದ ಪಾರಮ್ಯತೆ ಯನ್ನು ಎತ್ತಿ ತೋರುತ್ತದೆ. ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳೆಂಬ ಲೀಲಾವಿನೋದದಲ್ಲಿ ನೆಲೆಸಿರುವ ಸಕಲ ಲೋಕನಾಯಕನೂ ಪರಬ್ರಹ್ಮನೂ ಆದ ಶ್ರೀನಿವಾಸನಲ್ಲಿ ನನ್ನ ಬುದ್ಧಿಯೆಲ್ಲವೂ ಭಕ್ತಿಯಾಗಿ ಮಾರ್ಪಡಲಿ, ಎಂದು ಹಾಡಿದ್ದಾರೆ ಆಚಾರ್ಯರು.
ಭಗವದ್ರಾಮಾನುಜರು ಆಧ್ಯಾತ್ಮ ಕ್ಷೇತ್ರದ ದಿಗ್ಗಜರು.

ಸ್ವತಃ ಪರಮಾತ್ಮನನ್ನು ಕಂಡು ಆ ದಿವ್ಯವೈಭವವನ್ನು ಅನುಭವಿಸಿ ಪರವಶರಾಗಿ ಹಾಡಿದವರು. ರಾಜಾಶ್ರಯದಲ್ಲಿದ್ದ ಅಂದಿನ ಧರ್ಮ ಮತ್ತು ಸಮಾಜ ವ್ಯವಸ್ಥೆಯನ್ನು ದೇವಸ್ಥಾನದ ತೆಕ್ಕೆಗೆಳೆದು ಅದನ್ನೆ ಸಾಮಾಜಿಕ ಕೇಂದ್ರವಾಗಿ ಪರಿವರ್ತಿಸಿ ಅವರ್ಣಿ ಯರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಾನ ಕಲ್ಪಿಸಿದರು.

ಆದರೂ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿರುವ ಅವರ ಸಾಮಾಜಿಕ ಕಳಕಳಿಯಿಂದ, ಸಾಮಾನ್ಯಾತಿಸಾಮಾನ್ಯರಿಗೆ ಅವರು ಮಾಡಿದ ಚಿರಂತನವಾದ ಉಪಕಾರದಿಂದ, ಕೀಳರಿಮೆಯಲ್ಲಿ ನರಳುತ್ತಿದ್ದವರನ್ನು ಮೇಲೆತ್ತಿ ಅವರಿಗೆ ಉದ್ಧಾರದ ದಾರಿ ತೋರಿದ್ದರಿಂದ ಅವರು ಸಮಾಜ ಸುಧಾರಕರಾಗಿಯೂ ಎಂದೆಂದೂ ಸ್ಮರಣೀಯರಾಗಿರುವ ಆಚಾರ್ಯ ರಾಮಾನುಜರ
ಜನ್ಮಸಹಸ್ರಮಾನೋತ್ಸವ ವರ್ಷ ನಡೆದಿದ್ದರೂ ಆಧುನಿಕ ಭಾರತದ ಚರಿತ್ರೆಯಲ್ಲಿ ಇದು ಮಹತ್ವ ಪೂರ್ಣರಾಷ್ಟ್ರೀಯ ಘಟನೆ. ಈ ಅನನ್ಯ ಆಧ್ಯಾತ್ಮ ಸಾಧಕನ ಜನ್ಮಸಹಸ್ರಾಬ್ದಿ ಸಮಗ್ರ ಸಾಮಾಜಿಕ – ಸಾಂಸ್ಕೃತಿಕ ರಾಷ್ಟ್ರೀಯ ಉತ್ಸವವಾಗಿ ವಿಜೃಂಭಿಸ ಬೇಕಿತ್ತು.

ದಲಿತೋದ್ಧಾರಕ್ಕಾಗಿ ಕನ್ನಡನಾಡಿನ ಮೇಲುಕೋಟೆಯಲ್ಲಿ ಮೂಲ ಬೀಜ ಬಿತ್ತಿದ ಈ ಹರಿಕಾರನ ಬಗ್ಗೆ ಸರಕಾರವೂ ದಿವ್ಯ ಮೌನ ತಳೆದಿರುವುದು ವಿಷಾದನೀಯ. ರಾಮಾನುಜ ನಮನ: ಭಗವದ್ ಭಕ್ತಿಯ ನೆಲೆಯಲ್ಲಿ ವರ್ಣ-ಜಾತಿ-ವರ್ಗಗಳ ಅನ್ಯೋನ್ಯತೆ ಯನ್ನು ಸಮಾಜದಲ್ಲಿ ಬೆಳೆಸಿದುದು. ಕೇವಲ ಸಂಸ್ಕೃತ ವೇದಗಳು ಮಾತ್ರವಲ್ಲದೆ ಜಾನಪದ ದ್ರಾವಿಡ ವೇದಗಳಿಗೂ ದೇವರ ಪೂಜೆಯಲ್ಲಿ ದೇವಾಲಯಗಳಲ್ಲಿ ಸ್ಥಾನಮಾನವನ್ನು ದೃಢಪಡಿಸಿದುದು.

ಭಗವದ್ ಭಕ್ತಿಯಿರುವಂತಹ ಚಂಡಾಲಜಾತಿಯವರಿಗೆ ಮೇಲುಕೋಟೆ ಚೆಲುವನಾರಾಯಣನ ಸೇವೆ ಮಾಡಲು ಶಾಸ ವಿರೋಧವಿಲ್ಲದಂತೆ ವ್ಯವಸ್ಥೆ ಮಾಡಿದುದು. ಶ್ರೀ ರಂಗದಲ್ಲಿ ಆರೋಗ್ಯ ಶಾಲೆಯನ್ನು ಏರ್ಪಡಿಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಔಷಧಗಳಿಗೆ ವ್ಯವಸ್ಥೇ ಮಾಡಿದುದು. 74 ಗೃಹಸ್ಥಪೀಠಗಳನ್ನು ಏರ್ಪಡಿಸಿ ನಾನಾ ರಾಜ್ಯದ ಜನಸಾಮಾನ್ಯರಿಗೆ ಭಕ್ತಿ ಪ್ರಪತ್ತಿ ವಿಚಾರಗಳನ್ನು ಪ್ರಚುರ ಪಡಿಸುವಂತೆ ಸಂಚಾರಿ ಗುರುಗಳನ್ನು ಏರ್ಪಡಿಸಿದುದು.

ಜಾನಪದ ನಾನಾ ಜಾತಿಗಳಲ್ಲೂ ದಾಸಯ್ಯನೆಂಬುವರಿಗೆ ದೀಕ್ಷೆ ಕೊಟ್ಟು ಆಯಾ ಜಾತಿಯವರನ್ನು ಜಾತಿ ಕೆಡಿಸದೇ ಸ್ವಧರ್ಮ ದಲ್ಲಿ ಪರಿಶುದ್ಧವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿದುದು. ತೊಣ್ಣೂರು ಮುಂತಾದ ಕಡೆ ದೊಡ್ಡ ಕೆರೆಗಳನ್ನು ಕಟ್ಟಿಸಿ ಕೃಷಿಕರಿಗೂ ಸ್ಥಾನಾಣುಷ್ಠಾನಪರರಿಗೂ ತೀರ್ಥಶುದ್ಧಿಯ ಜತೆ ಧಾನ್ಯ ಸಮೃದ್ಧಿಯೂ ಆಗುವಂತೆ ಮಾಡಿದುದು.

ತಿರುಪತಿಯ ಬಳಿ ಮಂಡಯಂ ಎಂಬ ಐದು ಅಗ್ರಹಾರಗಳನ್ನು ಏರ್ಪಡಿಸಿ ಕಾಡುಗಳನ್ನು ನಾಡನ್ನಾಗಿ ಮಾಡಿದುದು. ಇದನ್ನು ರಾಮಾನುಜರು ತಮ್ಮ ಪಾದಕಾಣಿಕೆಯಾಗಿ ಬಂದ ಹಣದಿಂದ ಭೂಮಿಯನ್ನು ಖರೀದಿಸಿ ಮಾಡಿದರು. ಬಿಳಿಗಿರಿರಂಗನಬೆಟ್ಟದ
ಸೋಲಿಗರಿಗೆ ಅನುಗ್ರಹಿಸಿ ಅವರ ಮೂಲದೇವರಾದ ಕಂಕಣಲಕ್ಷ್ಮಿಗೆ ರಂಗನೊಡನೆ ಮದುವೆ ಮಾಡಿಸಿ ಉಚ್ಛ ನೀಚ ಕುಲಗಳಲ್ಲಿ ಭಗವದ್ ಭಕ್ತಿಯಿಂದ ಅನ್ಯೋನ್ಯತೆ ಏರ್ಪಡಿಸಿದುದು. ಅಷ್ಟಾಕ್ಷರವೆಂಬ ಮಂತ್ರಕ್ಕೆ ವೈದಿಕ ಅವೈದಿಕ ಭೇದವಿಲ್ಲದಂತೆ ಪ್ರಯೋಗವಿರುವುದನ್ನು ಅಗಮ ಕಲ್ಪಗಳಿಂದ ನಿರ್ಣಯಿಸಿ, ಅರ್ಹರಾದ ಎಲ್ಲರಿಗೂ ಮಂತ್ರೋಪದೇಶ ಮಾಡಿ, ಮಂತ್ರದ ವಿವರ
ಣೆಯ ಮೂಲಕ ವೇದಂತಾರ್ಥಗಳನ್ನು ತಿಳಿಸಿದುದು.

ತಮ್ಮ ಜೀವಿತಾವಧಿಯ ಮೂರನೆಯ ಒಂದು ಭಾಗ ಸಮಯವನ್ನು ಸುಮಾರು 36 ವರ್ಷಗಳನ್ನು ಕನ್ನಡನಾಡಿನ ಜನತೆಯ ಏಳಿಗೆಗಾಗಿ ಮೀಸಲಿರಿಸಿ ಸಂಚರಿಸಿದುದು. (ಕೋಣನಕಲ್ ಬೆಟ್ಟದ ಶಾಸನ) ಮೇಲುಕೋಟೆಯ ಚೆಲುವನಾರಾಯಣದ ಸೇವೆ
ಗಾಗಿ ೧೮ ಜಾತಿಯ ಜನರಿಗೂ ನಿವಾಸ ಶ್ರೇಣಿಗಳನ್ನು ಏರ್ಪಡಿಸಿ ಹಳೆಯ ಕೋಟೆಯ ಒಳಗೂ ಹೊರಗೂ ‘ತಿರುನಾರಾಯಣಪುರ’ ನಗರವನ್ನು ಏರ್ಪಡಿಸಿದುದು.

ದೆಹಲಿಯ ಧಿಲು ಎಂಬ ಪ್ರದೇಶದಲ್ಲಿದ್ದ ರಾಮಪ್ರಿಯ ದೇವಮೂರ್ತಿಯನ್ನು ಯಾದಗಿರಿಗೆ ಹಿಂತಿರುಗಿಸಿ ಕರೆತಂದು ಧಿಲುವಿನ ಮ್ಲೇಚ್ಛರಾಜನ ಮಗಳ ಭಗವದ್ ಭಕ್ತಿಗೆ ಮೆಚ್ಚಿ ದೇವರ ಪಾದದಲ್ಲಿ ಲಕ್ಷ್ಮೀ ರೂಪದಲ್ಲಿ ಅವಳ ವಿಗ್ರಹ ಸ್ಥಾಪಿಸಿದುದು ಮತ್ತು
ಮ್ಲೇಚ್ಛರಿಗೂ ದೇವರ ಸೇವೆಗಳಿಗೆ ಅವಕಾಶ ಮಾಡಿದುದು. ಏಳುನೂರು (700) ಸನ್ಯಾಸಿಗಳನ್ನು 12000 ನಾನಾ ವರ್ಣ ಜಾತಿಗಳ ಏಕಾಂಗಿ ಸ್ವಯಂ ಸೇವಕರನ್ನು ಭಕ್ತಿಮಾರ್ಗದ ವಿಸ್ತರಣೆಗೆ ಜೊತೆಗಿಟ್ಟು ಕೊಂಡು ಮೂರು ಸಲ ಭಾರತದಾದ್ಯಂತ ಸಂಚರಿಸಿ  ದುದು.

Leave a Reply

Your email address will not be published. Required fields are marked *