Thursday, 12th December 2024

ಜನಪ್ರತಿನಿಧಿಗಳ ನಡೆ ಕಳವಳಕಾರಿ

ದೇಶದಲ್ಲಿ ಕೋವಿಡ್ ಸೋಂಕಿನ ಹರಡುವಿಕೆ ಜತೆಗೆ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಈ ವೇಳೆ ಪರಿಹಾರ
ಮಾರ್ಗೋಪಾಯಗಳ ಬಗ್ಗೆ ಸರಕಾರ ಇಂದಿಗೂ ಯಾವುದೇ ಸ್ಪಷ್ಟ ಆದೇಶಗಳನ್ನು ಜಾರಿಗೊಳಿಸದಿರುವುದು ಮತ್ತಷ್ಟು ಆತಂಕ ಕಾರಿ ಬೆಳವಣಿಗೆ.

ದಿನಂಪ್ರತಿ ಸಾವಿನ ಸಂಖ್ಯೆ ಸಾವಿರ ತಲುಪುತ್ತಲಿದೆ ಎಂದು ತಿಳಿಸುತ್ತಿವೆ ಮಾಹಿತಿಗಳು. ಈ ವೇಳೆ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ನೀಡಿರುವ ಹೇಳಿಕೆಯೊಂದು ಗಮನ ಸೆಳೆದಿದೆ. ದೇಶದಲ್ಲಿ ಕರೋನಾ ಸೋಂಕು ಬಹಳ ವೇಗವಾಗಿ ಹಬ್ಬುತ್ತಿರುವ ಕಾರಣ ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಜಾರಿಗೊಳಿಸಬೇಕೆಂಬುದು ಸಿಬಲ್ ಅವರ ಒತ್ತಾಯ.

ಈ ಸಂದರ್ಭದಲ್ಲಿ ಚುನಾವಣಾ ರ‍್ಯಾಲಿ ನಿಷೇಧಿಸುವಂತೆಯೂ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಪಕ್ಷಾತೀತವಾಗಿ ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿರುವುದು ಶ್ಲಾಘನೀಯ ಸಂಗತಿ. ಆದರೆ ರಾಜ್ಯದಲ್ಲಿನ ಜನಪ್ರತಿನಿಧಿಗಳು ಕರೋನಾ ಕ್ರಮಗಳ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ನಿಜಕ್ಕೂ ಅಚ್ಚರಿ ಮೂಡುತ್ತದೆ. ಇವರು ಕರೋನಾ ಪರಿಸ್ಥಿತಿ ಎಂದರೆ ಕೇವಲ ಲಾಕ್‌ಡೌನ್ ಎಂದಷ್ಟೇ ಅರ್ಥೈಸಿಕೊಂಡಂತೆ ಗೋಚರವಾಗುತ್ತಿದೆ.

ಜನರ ಸಾವಿನ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆ ಕಂಡುಬರುತ್ತಿದ್ದರೂ ರಾಜ್ಯದ ಜನಪ್ರತಿನಿಧಿಗಳು ಮುಂದೆ ಅನುಸರಿಸಬೇಕಾದ ಕ್ರಮಗಳ ಬಗೆಗಿಂತಲೂ ಹೆಚ್ಚಾಗಿ ಲಾಕ್‌ಡೌನ್ ವಿಷಯವನ್ನೇ ಪ್ರಸ್ತಾಪಿಸುತ್ತಿರುವುದು ಪ್ರಸ್ತುತ ಕಳವಳಕಾರಿ ಸಂಗತಿ.