Friday, 25th October 2024

ರೆಮಿಡಿಸಿವಿರ್‌ ಕೊರತೆ: ಪರದಾಟ

ಕಾಳಸಂತೆಯಲ್ಲಿ ನಾಲ್ಕು ಪಟ್ಟುದರದಲ್ಲಿ ಮಾರಾಟ

ನಾಲ್ಕು ಡೋಸ್‌ಗೆ 60 ಸಾವಿರ ಕೇಳುತ್ತಿರುವ ಖದೀಮರು

ಇನ್ನು ನಾಲ್ಕು ದಿನ ಸಮಸ್ಯೆ ಮುಂದುವರಿಯುವ ಸಾಧ್ಯತೆ

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ ಬೆಂಗಳೂರು

ರಾಜ್ಯದಲ್ಲಿ ಎರಡನೇ ಅಲೆ ಕರೋನಾ ನಿಯಂತ್ರಣಕ್ಕೆ ಸಿಗದಂತೆ ಹಬ್ಬುತ್ತಿರುವ ಈ ವೇಳೆ, ರಾಜಧಾನಿಯಲ್ಲಿ ರೆಮಿಡಿಸಿವಿರ್ ಲಸಿಕೆಯ ಕೊರತೆ ಎದುರಾಗಿರುವುದು ಭಾರಿ ಆತಂಕವನ್ನು ಸೃಷ್ಟಿಸಿದೆ.

ಕರೋನಾ ಸೋಂಕಿಗೆ ಒಳಗಾದ ವ್ಯಕ್ತಿಯ ಶ್ವಾಸಕೋಶಕ್ಕೆ ಸೋಂಕು ತಗುಲಿ ನ್ಯುಮೋನಿಯಾಕ್ಕೆ ತಿರುಗಿದರೆ ರೆಮಿಡಿಸಿವಿರ್ ಲಸಿಕೆ ಅನಿವಾರ್ಯ. ನಾಲ್ಕು ಡೋಸ್ ರೆಮಿಡಿಸಿವಿರ್ ಲಸಿಕೆ ನೀಡಿದರೆ, ಮಾತ್ರ ಸೋಂಕು ನಿಯಂತ್ರಣಕ್ಕೆ ಸಾಧ್ಯ. ಆದರೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಈ ಲಸಿಕೆಯ ಕೊರತೆಯಾಗಿದೆ.

ಅದರಲ್ಲಿಯೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆೆ ಹೆಚ್ಚಾಗಿರುವುದರಿಂದ ಅಭಾವ ಸೃಷ್ಟಿಯಾಗಿದೆ. ಆದರೆ ಈ ಅಭಾವವನ್ನೇ ಕೆಲವರು ಬಳಸಿಕೊಂಡು, ಕೃತಕವಾಗಿ ಅಭಾವವನ್ನು ಸೃಷ್ಟಿಸಿ, ನಿಗದಿತ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿದೆ. ಬೆಂಗಳೂರಿನ ಬಹುತೇಕ ಆಸ್ಪತ್ರೆಗಳಲ್ಲಿ,  ಮೆಡಿಕಲ್ ಶಾಪ್‌ಗಳಲ್ಲಿ ಈ ಲಸಿಕೆ ಖಾಲಿಯಾಗಿರುವುದರಿಂದ ಕೆಲವರು ಈ ರೀತಿ ವಂಚನೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಡೋಸ್‌ಗೆ 60 ಸಾವಿರ ರು. ಚಾರ್ಜ್: ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿರುವವರಿಗೆ ನಾಲ್ಕು ಇಂಜೆಕ್ಸನ್ ನೀಡ ಬೇಕಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಬ್ಲಾಕ್ ಮಾರ್ಕೆಟ್‌ನಲ್ಲಿ ರೆಮಿಡಿಸಿವಿರ್ ಲಸಿಕೆಯನ್ನು ಮಾರಾಟ ಮಾಡುತ್ತಿದ್ದಾರೆ.

ಒಂದು ಡೋಸ್‌ಗೆ 2,500ರಿಂದ 3,500 ರು.ವರೆಗೆ ಇರುವ ಲಸಿಕೆಯನ್ನು 12ರಿಂದ 15 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ ಪ್ಯಾಕೇಜ್ ರೀತಿ ನಾಲ್ಕು ಡೋಸ್‌ಗೆ 60 ಸಾವಿರ, 35 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ
ಕೇಳಿಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿ ಖಾಲಿಯಾಗಿರುವುದರಿಂದ ಮೈಸೂರಿನಿಂದಲೂ ಲಸಿಕೆ ಮಾರಾಟ ಮಾಡುತ್ತಿದ್ದಾರೆ.

ಆದರೆ ಸರಕಾರ ಈ ಲಸಿಕೆಗೆ 2,500ರಿಂದ 3,500 ರು. ಮಾತ್ರ ನಿಗದಿ ಮಾಡಿದ್ದು, ಪರಿಸ್ಥಿತಿಯನ್ನು ಬಳಸಿಕೊಂಡು ನಾಲ್ಕೈದು ಪಟ್ಟು ಹೆಚ್ಚು ಮಾರಾಟ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಾಗುವ ಬಹುತೇಕ ಸೋಂಕಿತರಿಗೆ ನೀವೇ ರೆಮಿಡಿಸಿವಿರ್ ಲಸಿಕೆ ತಂದುಕೊಟ್ಟರೆ, ಅದನ್ನು ಕೊಡುತ್ತೇವೆ. ಇಲ್ಲದಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ ಎನ್ನುವ ಅಸಹಾಯಕತೆಯನ್ನು
ವ್ಯಕ್ತಪಡಿಸಿದ್ದಾರೆ.

ಸರಕಾರದಿಂದ ನೋಡಲ್ ಅಧಿಕಾರಿಗಳ ನೇಮಕ
ರೆಮಿಡಿಸಿವಿರ್ ಲಸಿಕೆ ಕೊರತೆ ನೀಗಲು ಕನಿಷ್ಠ ಇನ್ನು ಒಂದು ವಾರ ಅಗತ್ಯವಿದೆ. ಈಗಾಗಲೇ ಲಸಿಕೆ ತಯಾರಿಕೆ ಪ್ರಕ್ರಿಯೆ ವೇಗವಾಗಿ ನಡೆದಿದ್ದು, ಇನ್ನೊಂದು ವಾರದಲ್ಲಿ ಅಗತ್ಯವಿರುವಷ್ಟು ಲಸಿಕೆ ಸಿಗುತ್ತದೆ. ಆದರೆ ಅಲ್ಲಿಯವರೆಗೆ ಲಸಿಕೆ ಸಾರ್ವ ಜನಿಕರಿಗೆ ಸಿಗುವ ನಿಟ್ಟಿನಲ್ಲಿ ಸರಕಾರ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಅಧಿಕಾರಿಗಳ ವಿವರ ಹೀಗಿದೆ ಕೆಂಪಯ್ಯ ಸುರೇಶ್(ರಾಜ್ಯ ನೋಡಲ್ ಅಧಿಕಾರಿ) : 9035796385, ನಜೀರ್ ಅಹಮದ್(ಮೈಸೂರು, ಮಂಗಳೂರು ವಿಭಾಗ ) : 9448075042, ಶಂಕರಜ್ಯೋತಿ (ಕಲಬುರಗಿ, ಬಳ್ಳಾರಿ ವಿಭಾಗ) : 9880137371.