Sunday, 5th January 2025

ಸಾರಿಗೆ ಸಚಿವರೇ, ಇತ್ತ ಗಮನಿಸಿ…

ಅಭಿಮತ

ಸುಜಯ ಆರ್‌.ಕೊಣ್ಣೂರ್‌

ಈಗೊಂದೆರಡು ದಿನಗಳಿಂದ ಶ್ರೀ ರವೀಂದ್ರ ಜೋಶಿಯವರು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಹರತಾಳದ ಬಗ್ಗೆ ವಿವರವಾಗಿ ಹೇಳಿದ ವಿಡಿಯೋ ಎ ಕಡೆ ಹರಿದಾಡ್ತಾ ಇದೆ. ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ. ಸಾರಿಗೆ ಸಂಸ್ಥೆ ನಷ್ಟದಲ್ಲಿ ನಡೆಯುವು ದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಲಂಚ.. ಲಂಚ….ಲಂಚ. ಪ್ರತಿಯೊಂದಕ್ಕೂ ಲಂಚ.

ನನಗೆ ಈ ವಿವರಗಳನ್ನು ಒಂದೆರಡು ವರ್ಷಗಳ ಹಿಂದೆ ವಿಷದವಾಗಿ, ಬಹಳ ವಿಷಾದದಿಂದ ಒಬ್ಬ ಕಂಡಕ್ಟರ್ ಹೇಳಿದ್ದರು. ಅವರನ್ನು ಒಂದು ತಾಸು ಸಂದರ್ಶನ ಮಾಡಿದ್ದೆ. ಪಾಪ, ಚಿಕ್ಕ ಚಿಕ್ಕ ಸಂಬಳ ತೆಗೆದುಕೊಳ್ಳುವ ಡ್ರೈವರ್ ಕಂಡಕ್ಟರ್ ಹತ್ತಿರ, ವರ್ಗಾವಣೆಗೆ, ಬಸ್ ರಿಪೇರಿಗೆ, ಬಸ್ ಬದಲಾವಣೆ ಮಾಡಬೇಕೆಂದರೆ, ಹೀಗೆ ಎಲ್ಲದಕ್ಕೂ ಲಂಚ ಕೇಳಿದರೆ ಅವರೇನು ಮಾಡ್ಬೇಕು?
ಅವ್ರಿಗೆ ಸಿಗುವ ಸಂಬಳ ಅವರ ಸಂಸಾರ ನಿರ್ವಹಣೆಗೇ ಸಾಕಾಗುವುದಿಲ್ಲ.

ಅದರಲ್ಲಿ ಲಂಚ ಕೊಟ್ಟರೆ, ಅವರು ಜೀವನ ಹೇಗೆ ನಡೆಸಬೇಕು? ಒಮ್ಮೆ ಪ್ರಾಕ್ಟಿಕಲ್ ಆಗಿ ಯೋಚಿಸಿ, ಆ ಸಂಬಳದ ಹಣ ನಿಮ್ಮ ತಿಂಗಳ ಯಾವ ಖರ್ಚಿಗೆ ಬರುತ್ತದೆ ಎಂದು.ನಾನು ಬೆಂಗಳೂರಿಗೆ ಬಂದು 30 ವರ್ಷಗಳಾದವು. ಅಂದಿನಿಂದ ಇಂದಿನವರೆಗೂ
ಬಿಎಂಟಿಸಿ ಬಸ್ಸಿನಲ್ಲಿ ನನ್ನ ಪಯಣ. ಹೆಚ್ಚಾಗಿ ಎಲ್ಲರೂ ಮಾಸಿಕ ಪಾಸ್ ತೆಗೆದುಕೊಳ್ತಾರೆ. ಮುಖ್ಯ ಕಾರಣ ಚಿಲ್ಲರೆ ಸಮಸ್ಯೆ ಇರುವುದಿಲ್ಲ.

ಅಷ್ಟೆ ಪಾಸ್‌ಗಳು ತಿಂಗಳ ಶುರುವಲ್ಲಿ ಖಾಲಿಯಾಗಿದ್ದರೂ ಕೂಡ ಮತ್ತೆ ಕಂಡಕ್ಟರ್‌ಗಳಿಗೆ ಕಲೆಕ್ಷನ್ ಇಲ್ಲ ಅಂತ ಹಿಂಸೆ ಕೊಡೋದು, ರೂಟ್ ನಿಲ್ಲಿಸ್ತೀವಿ ಅಂತ ಹೆದರಿಸೋದು, ಒತ್ತಡ ತರೋದು, ಹೀಗೆ ಮಾಡಿ ಅವರು ಮಾನಸಿಕವಾಗಿ ಬಳಲುತ್ತಾರೆ. ಡ್ರೈವರ್ ಮತ್ತೆ ಕಂಡಕ್ಟರ್ ಬುಕ್ ಮಾಡುವ ಆಸಾಮಿಯಿಂದ ಹಿಡಿದು, ಸಾರಿಗೆ ಸಚಿವರವರೆಗೆ ಲಂಚದ ಕೂಪ. ಅವರಿಗೆ ಸಂಬಳ
ಕೊಡುತ್ತಿರುವುದಾದರೂ ಏಕೆ? ಸರಕಾರದ ಐಷಾರಾಮಿ ಸವಲತ್ತುಗಳು ಏಕೆ? ಪಾಪ, ಬಡಪಾಯಿ ಡ್ರೈವರ್, ಕಂಡಕ್ಟರ್‌ಗಳ ಹತ್ರ ಚಿಕ್ಕ ಚಿಕ್ಕ ವಿಷಯಕ್ಕೂ ಗಿಂಜುವ ಇವರಿಗೆ ಏನು ಹೇಳೋಣ? ಚಿಕ್ಕ ಸಂಬಳದಲ್ಲಿ ಕಷ್ಟ ಪಟ್ಟು ದುಡಿವ ಡ್ರೈವರ್ ಕಂಡಕ್ಟರ್‌ ಗಳಿಗೆ, ನೆಮ್ಮದಿಯ ಜೀವನ ಇಲ್ಲ.

ಪ್ರಯಾಣಿಕರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಅವರಿಗೆ ಈ ರೀತಿ ಹಿಂಸೆ ಕೊಟ್ಟರೆ, ಅವರು ಕೆಲಸ ಮಾಡುವುದು ಹೇಗೆ? ಸಚಿವರ ಇಚ್ಛೆ/ ಆಜ್ಞೆ ಮೇರೆಗೆ, ಕಲೆಕ್ಷನ್ ಇರದ ರೂಟ್‌ಗಳಲ್ಲಿ ಬಸ್‌ಗಳನ್ನು ಹಾಕದೇ, ಜನರ ಬೇಡಿಕೆ ಇರುವಲ್ಲಿ ಬಸ್‌ಗಳನ್ನು
ಹಾಕಿ, ಅನುಕೂಲ ಮಾಡಿಕೊಡಿ. ನನಗೆ ಸದಾ ಕಾಡುವ ಪ್ರಶ್ನೆ, ತಮಗಾದರೆ ಅಷ್ಟೊಂದು ಹಣ ಬೇಕು, ಈ ಬಡಪಾಯಿಗಳಿಗೆ ಬರುವ ಚಿಕ್ಕ ಸಂಬಳದ ಬಗ್ಗೆ ಯೋಚನೆ ಮಾಡಬಾರದೇ? ಅದರಲ್ಲಿಯೂ ಕಿತ್ತುಕೊಂಡು ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಯಾಕೆ ಮಾಡ್ತಾರೆ? ಅವರಿಗೆ ಪ್ರತೀವರ್ಷ ಶೇ.10 ಸಂಬಳ ಜಾಸ್ತಿ ಮಾಡಿ, ಅವರೂ ಹುರುಪಿನಿಂದ, ನಿಷ್ಠೆಯಿಂದ ಕೆಲಸ ಮಾಡಲು ಅನುವು ಮಾಡಿಕೊಡಿ.

ನಿಜ ಹೇಳಬೇಕೆಂದರೆ, ನಮ್ಮಂಥ ಪ್ರಯಾಣಿಕರಿಂದ ವಸೂಲಾಗುತ್ತಿರುವ ಹಣಕ್ಕೆ ಹೋಲಿಸಿದರೆ, ಸಾರಿಗೆ ಸಂಸ್ಥೆ ಖಂಡಿತವಾಗಿ ನಷ್ಟ ಅನುಭ ವಿಸಲು ಸಾಧ್ಯವೇ ಇಲ್ಲ. ಸುಮಾರು 6500 ಬಸ್ ಗಳು ಓಡಾಡುತ್ತಿವೆ. ಅವುಗಳಲ್ಲಿ ಓಡಾಡುವ ಪ್ರಯಾಣಿಕರು ತೆಗೆದುಕೊಳ್ಳುವ ಟಿಕೆಟ್ ಮತ್ತು ಪಾಸ್ ಹಣವನ್ನು ಲೆಕ್ಕ ಹಾಕಿದರೆ, ನಿರ್ವಹಣೆ ಸರಿಯಾಗಿದ್ದರೆ, ಖಂಡಿತ ನಷ್ಟದ ಮಾತೇ ಇಲ್ಲ. ಅಶೋಕ್ ಲೀ ಲ್ಯಾನ್ಡ್ ಬಸ್‌ಗಳು ಬಹಳ ಒಳ್ಳೆಯ ರೀತಿಯಲ್ಲಿ ಬಾಡಿ ಬಿಲ್ಡ್ ಆಗಿರುತ್ತವೆ.

ಬಾಳಿಕೆ ಬರುತ್ತವೆ. ಅದನ್ನು ಇದ್ದಕ್ಕಿದ್ದಂತೆ ಬದಲಿಸಿ, ಕಮಿಷನ್ ಆಸೆಗೆ ಟಾಟಾ ಕಂಪನಿಯ ಬಸ್ಸುಗಳ ಮೊರೆ ಹೊಕ್ಕು, ಕಳಪೆ ಬಾಡಿ ಬಿಲ್ಡಿಂಗ್ ನಿಂದಾಗಿ ನಷ್ಟವಾದರೆ ಅದಕ್ಕೆ ಹೊಣೆ ಸಂಪೂರ್ಣವಾಗಿ ಸಾರಿಗೆ ಸಚಿವರದು. ಅದಕ್ಕೆ ಅನುಮತಿ ಕೊಟ್ಟು, ತಮ್ಮ ಜೇಬು ತುಂಬಿಸಿಕೊಂಡವರದ್ದು. ಹಾಗೆಯೇ ಟಿಕೆಟ್ ಕೊಡುವ ಸಣ್ಣ ಯಂತ್ರದಲ್ಲೂ ಲಾಬಿ. ಅದರ ನಿಜವಾದ ಬೆಲೆ
ಬೇರೆ, ಇವರು ಕೊಂಡುಕೊಳ್ಳುವ ಬೆಲೆಯೇ ಬೇರೆ. ನಿಮ್ಮ ಎ ವಿಷಯಗಳು, ಪಡಪೋಷಿತನ ಎಲ್ಲರಿಗೂ ತಿಳಿದಿದೆ.

ಸಾರ್ವಜನಿಕರ ಹಣ ಹೇಗೆ ಪೋಲಾಗ್ತಾ ಇದೆ ನೋಡಿ. ನಾವು ಬೆವರು ಸುರಿಸಿ ಜೀವನ ನಡೆಸಲು ಹಣಗಳಿಸಿದರೆ, ಅದನ್ನು ತಮ್ಮ ಐಶಾರಾಮಿ ಜೀವನಕ್ಕೆ ಪೋಲು ಮಾಡುವ ಲಂಚಗುಳಿ ಅಧಿಕಾರಿಗಳಿಗೆ ಧಿಕ್ಕಾರವಿರಲಿ. ಪ್ರಯಾಣಿಕರೆ ದಂಗೆ ಎದ್ದು ಬಸ್ ಪ್ರಯಾಣವನ್ನೇ ನಿಲ್ಲಿಸಿದರೆ? ಸ್ವಲ್ಪ ಬೇರೆಯವರ ಬಗ್ಗೆಯೂ ಯೋಚಿಸಿ. ಇನ್ನಾದರೂ ಎಚ್ಚೆತ್ತುಕೊಂಡು, ಒಳ್ಳೆಯ ಸಾರಿಗೆ ವ್ಯವಸ್ಥೆ ಹಾಗೂ ಸಿಬ್ಬಂದಿವರ್ಗಕ್ಕೆ ಒಳ್ಳೆಯ ಸಂಬಳ ಕೊಡಿ. ಅವರ ಜೀವನವೂ ಸುಧಾರಿಸಲಿ.

Leave a Reply

Your email address will not be published. Required fields are marked *