Saturday, 23rd November 2024

ರಾಜ್ಯ ಸರ್ಕಾರ ಜಾರಿ ಮಾಡುವ ನಿಯಮಗಳು ನಮಗೇ ಅರ್ಥವಾಗಿಲ್ಲ: ಡಿಕೆಶಿ ಕಿಡಿ

ಬೆಂಗಳೂರು: ಕಳೆದ ಗುರುವಾರ ಏಕಾಏಕಿ ಅಂಗಡಿಗಳನ್ನು ಬಂದ್ ಮಾಡಿಸಿದರು. ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಜಾರಿಯಾಗಿದೆ. ಪ್ರತಿದಿನ ನಿಯಮಗಳನ್ನು ಬದಲಿಸುತ್ತಿದ್ದಾರೆ. ಕರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡುವ ನಿಯಮಗಳು ನಮಗೇ ಅರ್ಥವಾಗಿಲ್ಲ. ಮಾರ್ಗಸೂಚಿ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿ, ಯಾವುದು ಓಪನ್, ಯಾವುದು ಬಂದ್ ಎಂದು ಸರ್ಕಾರ ಸರಿಯಾಗಿ ಹೇಳಲಿ, ನಿಯಮದ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ವರ್ತಕರು, ಬಡವರು, ಆರ್ಥಿಕ ಪರಿಸ್ಥಿತಿ ಬಗ್ಗೆ ಸರ್ಕಾರ ಯೋಚನೆ ಮಾಡಿಲ್ಲ. ಜನರು ಆತಂಕಕ್ಕಿಡಾಗಿದ್ದಾರೆ ಎಂದು ಕಿಡಿಕಾರಿದರು.

ಮೊನ್ನೆ ಮುಖ್ಯಕಾರ್ಯದರ್ಶಿ ಹೇಳಿದ್ದೇನು? ನಿನ್ನೆ ಸರ್ಕಾರ ಮಾಡಿದ್ದೇನು? ಜನಸಾಮಾನ್ಯರ ಆರೋಗ್ಯದ ಬಗ್ಗೆಯೂ ಸರ್ಕಾರ ಯೋಚನೆ ಮಾಡುತ್ತಿಲ್ಲ, ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಚಿಂತಿಸುತ್ತಿಲ್ಲ. ಲಾಕ್ ಡೌನ್ ಎಂದು ಘೋಷಿಸಿಲ್ಲ. ಆದರೆ ದಿಢೀರ್ ಆಗಿ ಎಲ್ಲವನ್ನು ಬಂದ್ ಮಾಡಿಸಿದ್ದಾರೆ. ಸರ್ಕಾರದ ನಿಯಮಗಳು ನಮಗೇ ಅರ್ಥವಾಗುತ್ತಿಲ್ಲ ಇನ್ನು ಇದರಿಂದ ಜನರ ಪರಿಸ್ಥಿತಿ ಏನಾಗಬೇಡ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಸಚಿವ ಶ್ರೀರಾಮುಲು ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.