ಕೋವಿಡ್ ಸಮಸ್ಯೆಯ ನಡುವೆ ಅನೇಕ ಸಂಗತಿಗಳು ಹಿನ್ನೆಲೆಗೆ ಸರಿದಿವೆ. ಇಂಥ ಅನೇಕ ಸಂಗತಿಗಳಲ್ಲಿ ಹವಾಮಾನ ವೈಪರೀತ್ಯ ಮುಖ್ಯವಾದದ್ದು. ಇತ್ತೀಚೆಗೆ ಅಮೆರಿಕ ಆಯೋಜಿಸಲ್ಪಟ್ಟಿದ್ದ ವಿಶ್ವದ ಸುಮಾರು 40 ನಾಯಕರು ಪಾಲ್ಗೊಂಡಿದ್ದ ವರ್ಚುಯೆಲ್
ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಹವಾಮಾನ ವೈಪರೀತ್ಯ ಸಮಸ್ಯೆ ಎದುರಿಸಲು ಜಾಗತಿಕ ಮಟ್ಟದಲ್ಲಿ ನಿರ್ದಿಷ್ಟ ಕಾರ್ಯಸೂಚಿಯ ಅಗತ್ಯತೆ ಇದೆ ಎಂಬ
ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹವಾಮಾನ ಸಮಸ್ಯೆ ಎದುರಿಸಲು ಭಾರತ – ಅಮೆರಿಕ ಕ್ಲೈಮೇಟ್ ಆಂಡ್ ಕ್ಲೀನ್ ಎನರ್ಜಿ ಅಜೆಂಡಾ-2030 ಪಾರ್ಟನರ್ ಶಿಪ್ ಎಂಬ ಕಾರ್ಯಕ್ರಮ ಆರಂಭಿಸಲು ತಾವು ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಉತ್ಸುಕ ರಾಗಿದ್ದೇವೆ ಎಂದು ತಿಳಿಸಿದ್ದಾರೆ.
ದೇಶದ ಪಾಲಿಗೆ ಇದೊಂದು ಉನ್ನತ ಚಿಂತನೆ. ಆದರೆ ಯೋಜನೆಗಳು ರೂಪುಗಳ್ಳುವಂತೆಯೇ ಅವುಗಳ ಅನುಷ್ಠಾನಗಳು ಸರಿಯಾದ ವೇಳೆಗೆ ಆಗಬೇಕು. ಪ್ರಸ್ತುತ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹವಾಮಾನ ವೈಪರೀತ್ಯವನ್ನು ಕಾಣಬಹುದು. ಅಲ್ಲದೆ ರಾಜ್ಯದಲ್ಲಿಯೂ ಅಭಿವೃದ್ಧಿ ಚಟುವಟಿಕೆಗಳು, ಕೈಗಾರಿಕೆಗಳು ಹೆಚ್ಚಿದಂತೆ ವಾಯು,ಜಲ,ಶಬ್ದ ಮಾಲಿನ್ಯಗಳೂ ಹೆಚ್ಚುತ್ತಿದೆ.
ಇಂದು ಅಭಿವೃದ್ಧಿ ಜತೆಯಲ್ಲಿಯೇ ಆರೋಗ್ಯ ಕಾಳಜಿ ನಿಟ್ಟಿನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ನೀಡಬೇಕಿರು ವುದು ಪ್ರಮುಖ ಜವಾಬ್ದಾರಿ. ರಾಜ್ಯದಲ್ಲಿ ಇಂದಿನ ಜನಸಂಖ್ಯೆಗೆ ಹೋಲಿಸಿದರೆ ಮರಗಳ ಪ್ರಮಾಣ ಕ್ಷೀಣಿಸಿವೆ. ಇಂಥ ಬೆಳವಣಿಗೆ ಯಿಂದ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ವಾತವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ವನಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿರುವ ಅಗತ್ಯತೆ ಹೆಚ್ಚಿದೆ.
ಅಭಿವೃದ್ಧಿಯಷ್ಟೇ ಮುಖ್ಯ ಉತ್ತಮ ಪರಿಸರ ಹೊಂದುವುದು ಎಂಬ ಅರಿವು ಜನರಲ್ಲಿ ಮತ್ತಷ್ಟು ಜಾಗೃತಗೊಳ್ಳಬೇಕಿದೆ.