Saturday, 14th December 2024

ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳು ಮೌನ

ಆಹಾರ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಅವರಿಗೆ ರೈತನೊಬ್ಬ ಕರೆ ಮಾಡಿ 5ಕೆ.ಜಿ. ಅಕ್ಕಿ ಬದಲಾಗಿ 3 ಕೆ.ಜಿ ನೀಡಿದರೆ ಹೇಗೆ? ನಾವೇನು ಸಾಯಬೇಕಾ? ಎಂಬ ಪ್ರಶ್ನೆಗೆ ಸಚಿವರು ‘ಸತ್ತರೇ ಒಳ್ಳೆಯದು’ ಎಂಬ ಉದ್ಧಟ ತನದ ಹೇಳಿಕೆಯನ್ನು ನೀಡಿ ವಿವಾದಕ್ಕೊಳಗಾಗಿದ್ದಾರೆ.

ಕರೋನಾದಂಥ ಸಂಕಷ್ಟ ಸಮಯದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಯಕತ್ವ ಬದಲಾವಣೆ
ಬಗ್ಗೆ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು. ಇದೀಗ ಉಮೇಶ್ ಕತ್ತಿ ಉದ್ಧಟತನದ ಹೇಳಿಕೆ ಮೂಲಕ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ. ಯಾವುದೇ ಪಕ್ಷದ ಜನಪ್ರತಿನಿಧಿಗಳು ಈ ಉದ್ಧಟತನ
ಪ್ರದರ್ಶಿಸುತ್ತಾರೆ ಎಂದರೆ, ಅಲ್ಲಿ ವಿಪಕ್ಷಗಳು ಶಕ್ತಿಹೀನ ಗೊಂಡಿವೆ ಎಂದರ್ಥ.

ರಾಜ್ಯದ ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ಸಮಸ್ಯೆಗಳಿವೆ. ಕರೋನಾ ಸೋಂಕಿನ ಹರಡುವಿಕೆಯ ಈ ಸಂದರ್ಭ ದಲ್ಲಿ ರಾಜ್ಯವು ಅನೇಕ ರೀತಿಯ ಸಂಕಷ್ಟದ ಸ್ಥಿತಿ ಅನುಭವಿಸುತ್ತಿರುವ ವೇಳೆಯಲ್ಲಿ ವಿಪಕ್ಷಗಳ ಪಾತ್ರವೂ ಸಹ ಪ್ರಮುಖವಾಗಿದೆ. ಆದರೆ ರಾಜ್ಯದಲ್ಲಿ ವಿಪಕ್ಷಗಳು ಇದ್ದೂ ಇಲ್ಲದಂತಾಗಿರುವ ಕಾರಣ ಆಡಳಿತ ಪಕ್ಷದ ಕೆಲವು ಸಚಿವರು ತಮ್ಮ ನಡೆ -ನುಡಿಗಳನ್ನು ಯಾರೂ ಗಮನಿಸುವುದಿಲ್ಲ ಎಂಬಂಥ ಸ್ಥಿತಿಗೆ ತಲುಪಿದ್ದಾರೆ.

ಇಂಥ ಒಂದು ಸಂಗತಿಗೆ ಪ್ರಸ್ತುತ ಸಚಿವ ಉಮೇಶ್ ಕತ್ತಿಯವರ ವರ್ತನೆಯೇ ಸಾಕ್ಷಿ. ನಂತರ ಈ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದು, ಉಮೇಶ್ ಕತ್ತಿಯವರೂ ಈ ರೀತಿ ಮಾತನಾಡಬಾರದಿತ್ತು
ಎಂಬಂಥ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಂಡುಬರುತ್ತಿರುವ ಅನೇಕ ಸಮಸ್ಯೆಗಳಿಗೆ ಆಡಳಿತ ಪಕ್ಷ ಎಷ್ಟು ಕಾರಣವೋ, ವಿಪಕ್ಷಗಳ ಮೌನವೂ ಅಷ್ಟೇ ಕಾರಣ.

ಆಡಳಿತ ಪಕ್ಷಗಳ ಲೋಪದೋಷಗಳನ್ನು ಪ್ರಶ್ನಿಸಬೇಕಿರುವುದು ವಿಪಕ್ಷಗಳ ಜವಾಬ್ದಾರಿ. ಆದರೆ ರಾಜ್ಯದಲ್ಲಿ
ವಿಪಕ್ಷಗಳು ಸಮಸ್ಯೆಗಳನ್ನು ಪ್ರಶ್ನಿಸುವುದನ್ನು ಹೊರತುಪಡಿಸಿ ಪಕ್ಷಗಳನ್ನು ಟೀಕಿಸುತ್ತಾ ಕುಳಿತಿರುವುದನ್ನು ಗಮನಿಸಿದರೆ, ವಿಪಕ್ಷಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿವೆಯೇ ಎಂಬ ಅನುಮಾನ ಮೂಡುತ್ತಿದೆ.
ಒಟ್ಟಾರೆ ರಾಜ್ಯ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿಪಕ್ಷಗಳು ತೋರುತ್ತಿರುವ ಮೌನ ರಾಜ್ಯದ ಪಾಲಿಗೆ ಬಹುದೊಡ್ಡ ದುರಂತದ ಸಂಗತಿ.