Saturday, 21st September 2024

ಮಾನವೀಯತೆಗೆ ದೊರೆತ ಮನ್ನಣೆ

ದೆಹಲಿಯಲ್ಲಿ ಪ್ಯಾಕೇಜ್ ಘೋಷಣೆ ಆಗುತ್ತಿದ್ದಂತೆ ರಾಜ್ಯದಲ್ಲಿಯೂ ಪ್ಯಾಕೇಜ್ ಕುರಿತ ಆಗ್ರಹ ಹೆಚ್ಚಾಯಿತು. ಇದೀಗ ರಾಜ್ಯ ದಲ್ಲಿಯೂ ಪ್ಯಾಕೇಜ್ ಘೋಷಣೆಯಾಗಿದೆ. ಪ್ಯಾಕೇಜ್ ಮೊತ್ತ ಕಡಿಮೆಯಾಗಿದೆ, ಇನ್ನಷ್ಟು ವಲಯಗಳನ್ನು ಸೇರಿಸಬೇಕಿದೆ ಎಂಬ ಕೂಗು ಕೇಳಿಬರಲಾರಂಭಿಸಿದೆ. ಆದರೆ ನಮ್ಮ ಶಕ್ತಿಮೀರಿ ನೆರವು ನೀಡಿದ್ದೇವೆ ಎಂಬುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ.

ಸರಕಾರದ ಪ್ಯಾಕೇಜ್ ಜತೆಗೆ ಹಲವರ ಸೇವೆಯೂ ಗಮನ ಸೆಳೆಯುತ್ತಿದೆ. ಸಂಕಷ್ಟಕ್ಕೆ ಸಿಲುಕಿದ್ದ ಹಂಪಿಯ ನೂರು ಜನ ಗೈಡ್‌ಗಳ ಖಾತೆಗೆ 10000 ಹಣವನ್ನು ನೇರವಾಗಿ ವರ್ಗಾಯಿಸುವುದರ ಮೂಲಕ ಇನೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ನೆರವಾಗಿದ್ದಾರೆ. ಜನ್ಮದಿನಗಳಲ್ಲಿ ರೋಗಿಗಳಿಗೆ ಹಾಲು – ಹಣ್ಣು ವಿತರಿಸಿ, ಅದನ್ನೇ ದೊಡ್ಡ ಸಹಾಯ ಎಂದು ಭಾವಿಸುವವರ ನಡುವೆ ಸುಧಾಮೂರ್ತಿ ಭಿನ್ನವಾಗಿ ಕಾಣುತ್ತಾರೆ.

ಒಮ್ಮೊಮ್ಮೆ ಇಂಥ ಸಹಾಯಕ್ಕೆ ನಿಜವಾಗಲೂ ಗೌರವ ದೊರೆಯುತ್ತದೆಯೇ ಅನ್ನುವ ಭಾವನೆ ಕಾಡುತ್ತದೆ. ಗೌರವ ದೊರೆಯಲಿ ಎಂಬ ಕಾರಣಕ್ಕೆ ಸಹಾಯ ಮಾಡದಿದ್ದರೂ, ಇಂಥವರ ಸೇವೆಯನ್ನು ಸಮಾಜ ಗೌರವಿಸಬೇಕು. ಇಲ್ಲವಾದರೆ, ಅದು ಮಾನವೀ ಯತೆಗೆ ಮಾಡುವ ಅಪಮಾನ. ರಾಜ್ಯದಲ್ಲಿ ಸುಧಾಮೂರ್ತಿಯವರ ಸೇವೆಯಂತೆಯೇ ಕೇರಳದಲ್ಲಿ ಕಣ್ಣೂರಿನ ಬೀಡಿ ಕಾರ್ಮಿಕ ನೋರ್ವನ ಸೇವೆಯೂ ಮಹತ್ವದ್ದಾಗಿ ಕಾಣುತ್ತದೆ. ಬೀಡಿ ಕಾರ್ಮಿಕ ಚಲಾದನ್ ಅವರು ಕೋವಿಡ್ ಲಸಿಕಾ ಅಭಿಯಾ ನಕ್ಕೆ ನೆರವಾಗಲು ಆಸಕ್ತಿಹೊಂದಿದ್ದರು. ಇದಕ್ಕಾಗಿ ಅವರು ತಮ್ಮ ಉಳಿತಾಯ ಖಾತೆಯಲ್ಲಿದ್ದ 200850 ರುಪಾಯಿಗಳಲ್ಲಿ ಎರಡು ಲಕ್ಷವನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ಸಮರ್ಪಿಸಿದ್ದಾರೆ.

ಎರಡನೆ ಬಾರಿಗೆ ಮುಖ್ಯಮಂತ್ರಿಯಾಗುತ್ತಿರುವ ಪಿಣರಾಯಿ ವಿಜಯನ್ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ 500 ಜನ ಗಣ್ಯರಲ್ಲಿ ಬೀಡಿ ಕಾರ್ಮಿಕ ಚಲಾದನ್‌ಗೂ ಆಹ್ವಾನ ನೀಡಿದ್ದಾರೆ. ಈ ಬೆಳವಣಿಗೆ ಗಮನಿಸಿದಾಗ ಇದೊಂದು ಮಾನವೀಯತೆಗೆ ದೊರೆತ ಮನ್ನಣೆ ಎಂಬುದಾಗಿ ಭಾವಿಸಬಹುದು.