Friday, 18th October 2024

ಬಹಿರಂಗ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ

ವಿಶೇಷ ಕೋರಿಕೆ
ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ನೀಡಿ. ತಜ್ಞರು ಹೇಳಿದಂತೆ ಕೇಳಿ. ಕರೋನಾ ನಿರ್ಮೂಲನೆ ಮಾಡಿ. ಕರೋನಾ ನಿಸರ್ಗ
ಸಹಜ ವಿಕೋಪ ನಿಜ. ಆದರೆ ಅದನ್ನು ನಿರ್ವಹಿಸಲು ವಿಫಲವಾದ್ದರಿಂದ ಈಗ ಅದು ರಾಜಕೀಯ ವಿಕೋಪವಾಗಿದೆ. ಸುಳ್ಳುಗಳನ್ನು ನಂಬಬೇಡಿ. ಯಾರು ಏನೇ ಹೇಳಿದರೂ ಪರಿಶೀಲಿಸಿ ನೋಡಿ, ಪ್ರಶ್ನಿಸಿ, ದೇಶ ಉಳಿಸಿ.

ಪ್ರೀತಿಯ ನಾಡ ಬಾಂಧವರೇ,

ಕೋವಿಡ್-19 ಲಸಿಕೆಗಳನ್ನು ಸಮರ್ಪಕವಾಗಿ ನೀಡಲಾಗದೇ, ಸಮಸ್ಯೆಗಳನ್ನು ನಿರ್ವಹಿಸಲಾಗದೇ ಜನರ ಮಾರಣ ಹೋಮಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳು ಅಪರಾಧಿ ಸ್ಥಾನದಲ್ಲಿ ನಿಂತಿವೆ. ಈ ಅಪರಾಧ ಸಾಧಾರಣವಲ್ಲ. ತನ್ನದೇ ದೇಶದ ಮಕ್ಕಳಿಗೆ ಲಸಿಕೆ ನಿರಾಕರಿಸಿ ಲಕ್ಷಾಂತರ ಜನರನ್ನು ಕೊಂದ ಕೊಲೆಗಾರರು ಹೊರ ಬೇಕಾದ ಅಪರಾಧ.

ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿರುವ ಬಿಜೆಪಿ, ಈಗ ಲಸಿಕೆಯ ಕುರಿತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿದರು,
ಅದಕ್ಕಾಗಿ ಜನರು ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ. ನಿಜವಾದ ಸಂಗತಿಗಳನ್ನು ಮರೆಮಾಚಲು ಪ್ರಾರಂಭಿಸಿದ್ದಾರೆ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಥವಾ ಜನತೆ ಉತ್ತರಿಸಬೇಕಾಗಿಲ್ಲ. ಆಡಳಿತ ನಡೆಸುವ ಬಿಜೆಪಿ ಈಗ ದೇಶದ ಜನರಿಗೆ ಉತ್ತರಿಸಬೇಕಾಗಿದೆ.

ದೇಶದ ಜನ ಪ್ರಶ್ನೆ ಕೇಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ದನಿಗೂಡಿಸಿದೆ ಅಷ್ಟೆ. ಪ್ರಶ್ನೆ ಕೇಳುವುದು, ಸಲಹೆ ನೀಡುವುದು, ಪ್ರತಿಭಟಿಸುವುದು ಜನರ ಹಕ್ಕು. ಜನರ ದನಿಗೆ ಕಿವಿಗೊಟ್ಟು ಕೆಲಸ ಮಾಡಬೇಕಾಗಿರುವುದು ಸರಕಾರಗಳ ಕರ್ತವ್ಯ. ಪ್ರತಿಪಕ್ಷಗಳು, ನಾಡಿನ ಜನರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿರುವುದೂ ಸರಕಾರದ ಕರ್ತವ್ಯವೇ.

1) ವಿಶ್ವ ಆರೋಗ್ಯ ಸಂಸ್ಥೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿಯೇ ಭಾರತದಲ್ಲಿ ರೂಪಾಂತರ ಹೊಂದಿದ ಮಾರಣಾಂತಿಕ
ಕರೋನಾ ವೈರಸ್ ತಳಿ ಬಿ.1.617 ಪತ್ತೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರಿ ಹಾನಿ ಮಾಡಬಹುದು ಎಂದು ಹೇಳಿರ ಲಿಲ್ಲವೆ?

2)ನಮ್ಮ ದೇಶದ, ವಿಶ್ವದ ವೈರಾಣು ತಜ್ಞರು, ವಿಜ್ಞಾನಿಗಳು ಫೆಬ್ರವರಿ, ಮಾರ್ಚ್ ವೇಳೆಗೆ ಭೀಕರ ಮಾರಣಾಂತಿಕವಾಗುವ
ಕರೋನಾದ ಎರಡನೇ ಅಲೆ ಭಾರತಕ್ಕೆ ಬರುತ್ತದೆ ಎಂದು ಹೇಳಿರಲಿಲ್ಲವೆ?

3)ಬಿಜೆಪಿಯವರಿಗೆ ಆತ್ಮಸಾಕ್ಷಿ ಇದ್ದರೆ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಪ್ರಧಾನ ಮಂತ್ರಿಯವರು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತವು ಕರೋನಾ ವಿರುದ್ಧ ಏಕಾಂಗಿಯಾಗಿ ಜಯ ಸಾಧಿಸಿದೆ ಎಂದು ಹೇಳಲಿಲ್ಲವೆ?

4) ಸಂಸತ್‌ನಲ್ಲಿ ಮೋದಿ ಅವರು ಏಕಾಂಗಿಯಾಗಿ ಅದೃಶ್ಯ ಶತ್ರುವಾದ ಕರೋನಾ ವಿರುದ್ಧ ಹೋರಾಟ ಮಾಡಿ ಜಯ ಸಾಧಿಸಿ ದ್ದೇವೆ ಎಂದು ಹೇಳಿದಾಗ ಬಿಜೆಪಿಯ ಸಚಿವರು, ಸಂಸದರು ಮೇಜು ಕುಟ್ಟಿ ಸಂಭ್ರಮಿಸಲಿಲ್ಲವೆ? ಹಾಗೆ ಮೇಜು ಕುಟ್ಟಿ ಸಂಭ್ರಮಿಸಿ ದವರಲ್ಲಿ ಕರ್ನಾಟಕದಿಂದ ಆರಿಸಿ ಹೋದ ಸಚಿವರು ಪ್ರಧಾನಿಯವರ ಹಿಂದೆಯೇ ಕುಳಿತಿರುವುದನ್ನು ಜನರು ನೋಡಿಲ್ಲವೆ?

5) ದೇಶದ ಜನರನ್ನು ದಾರಿ ತಪ್ಪಿಸಿ ಕ್ರೂರ ಕರೋನಾದ ಬಾಯಿಗೆ ದೂಡಿದವರು ಬಿಜೆಪಿಯವರಲ್ಲವೆ? ಕರೋನಾ ವಿರುದ್ಧ ಗೆಲುವು ಸಾಧಿಸಿದ್ದೇವೆ ಎಂದು ಪ್ರಧಾನಿಯವರು ಕೇವಲ ಒಂದೆರಡು ಬಾರಿ ಹೇಳಿದ್ದಲ್ಲ. ಅದಕ್ಕೆ ರಾಶಿ ರಾಶಿ ದಾಖಲೆಗಳಿವೆ. ವಿವೇಕವಂತರು, ಬುದ್ಧಿವಂತರು ಅವರ ಹೇಳಿಕೆಗಳನ್ನು ಪರಿಶೀಲಿಸಬಹುದು. ಹಾಗೆ ಪರಿಶೀಲಿಸಿ ಅಜ್ಞಾನದ, ಅವಿವೇಕದ ಆರಾಧಕರಿಗೆ ತಿಳಿಸಿ ಹೇಳಬೇಕಾಗಿದೆ.

6)ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಸ್ಸಾಂನಲ್ಲಿ ಕರೋನಾ ಇಲ್ಲ, ಮಾ ಧರಿಸುವ ಅಗತ್ಯವಿಲ್ಲವೆಂದು ಹೇಳಿದ್ದು ಸುಳ್ಳೆ?

8) ಕುಂಭಮೇಳ ನಡೆಸಿದರೆ ಕರೋನಾ ಬರುವುದಿಲ್ಲ ಎಂದು ಉತ್ತರಖಂಡ ಮುಖ್ಯಮಂತ್ರಿ ಹೇಳಿರಲಿಲ್ಲವೆ? ಪ್ರಧಾನಿಗಳು ಮತ್ತಿತರ ಕೇಂದ್ರ ಸಚಿವರು ಚುನಾವಣಾ ರ‍್ಯಾಲಿಗಳಲ್ಲಿ ಸೇರುತ್ತಿದ್ದ ಜನಸ್ತೋಮವನ್ನು ನೋಡಿ ಏನೇನು ಮಾತನಾಡಿದ್ದಾರೆಂದು ದೇಶದ ಬುದ್ಧಿವಂತ ಜನ ಮರೆಯಲು ಸಾಧ್ಯವೇ?

9)ದೇಶದ ವಿಜ್ಞಾನಿಗಳು ಎರಡನೇ ಅಲೆ ಬರುತ್ತದೆ ಎಂದು ಹೇಳಿದ್ದರು. ಇದನ್ನೇ ಸಂಸತ್ತಿನ ಉಪ ಸಮಿತಿ ಕೂಡ ಹೇಳಿತ್ತು. ಅದೇ ಸಂದರ್ಭದಲ್ಲಿ ವಿಶ್ವದ ಅನೇಕ ದೇಶಗಳು ಎರಡನೇ ಅಲೆಯಿಂದ ತತ್ತರಿಸುತ್ತಿದ್ದವು.

10) ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನ್ ತಯಾರಿಸುವ ದೇಶವಾಗಿದೆ. ಭಾರತವು ಕಳೆದ 70 ವರ್ಷಗಳಿಂದ ಸಾಧಿಸಿದ ಸಾಧನೆ ಇದು. ಇದರಿಂದಾಗಿಯೇ ದೇಶದ ಜನರಿಗೆ ಅತ್ಯಂತ ಉದಾತ್ತವಾಗಿ ಮತ್ತು ಉಚಿತವಾಗಿ ಸಿಡುಬು, ದಡಾರ, ಪೋಲಿಯೋ ಮುಂತಾದ ಲಸಿಕೆಗಳನ್ನು ಮನೆ ಮನೆಗೆ ತೆರಳಿ ಆಂದೋಲನದ ಮಾದರಿಯಲ್ಲಿ ನೀಡಿ, ಭಾರತವನ್ನು ರಕ್ಷಿಸಲು ಸಾಧ್ಯವಾಯಿತು. ಒಂದು ಅಂದಾಜಿನ ಪ್ರಕಾರ ಸೆರಂ ಔಷಧ ತಯಾರಿಕಾ ಸಂಸ್ಥೆಯೊಂದೇ ವರ್ಷಕ್ಕೆ ಸುಮಾರು 150 ಕೋಟಿ ಡೋಸ್ ವಿವಿಧ ಲಸಿಕೆ ಗಳನ್ನು ತಯಾರಿಸುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರಾದ ಆಧಾರ್ ಪೂನಾವಾಲಾ ಅವರು ಪತ್ರಿಕೆಗಳಿಗೆ ಹೇಳಿರುವಂತೆ ’ಭಾರತವು ಲಸಿಕೆ ಉತ್ಪಾದನೆಗೆ ಮತ್ತು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳ ಲಿಲ್ಲ. ಲಸಿಕೆ ಪೂರೈಸಲು ಆದೇಶಗಳನ್ನು ನೀಡಲಿಲ್ಲ’ ಪೂನಾವಾಲಾ ಹೇಳುತ್ತಿರುವುದು ನಿಜವಾದರೆ ಜನರ ಸಾವಿನ ಹೊಣೆ ಯನ್ನು ಯಾರು ಹೊರಬೇಕು? ಶಿಕ್ಷೆಗೆ ಯಾರು ಅರ್ಹರು? ನೀವೇ ತೀರ್ಮಾನಿಸಿ.

11) ಲಸಿಕೆಗಳ ಬೆಲೆಯ ಕುರಿತು ಕಂಪನಿಗಳೇ ನಿರ್ಧರಿಸಬಹುದೆಂದು ಕೇಂದ್ರ ಸರಕಾರ ಲಸಿಕಾ ನೀತಿಯೊಂದನ್ನು ಹೊರಡಿಸಿದೆ. ಇದರಿಂದಾಗಿ ರಾಜ್ಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದರೂ ನಮಗೆ ಜನರ ಜೀವ ಮುಖ್ಯ. ಎರಡನೇ ಅಲೆಯು ತಾರಕ ರೂಪದಲ್ಲಿದೆ. ಇದರ ನಡುವೆಯೇ ಮೂರನೇ ಅಲೆಯು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳಲಿದೆ ಎಂಬ ಎಚ್ಚರಿಕೆ ಮತ್ತು ಸೂಚನೆಗಳನ್ನು ತಜ್ಞರು ನೀಡುತ್ತಿದ್ದಾರೆ. ಕೇಂದ್ರ ಸರಕಾರ ಈಗ ಕೆಲವು ಹೊಸ ಕಂಪನಿಗಳಿಗೆ ಆದೇಶ ನೀಡಿದೆ. ಅವು ಲಸಿಕೆಯ ಟ್ರಯಲ್‌ಗಳನ್ನು ನಡೆಸಿ ಉತ್ಪಾದನೆ ಪ್ರಾರಂಭಿಸುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುತ್ತವೆ. ತಜ್ಞರು ಹೇಳುವಂತೆ ಒಂದು ವರ್ಷವೇ ಬೇಕಾಗಬಹುದು.

12) ಬಿಜೆಪಿಯವರು ಮತ್ತು ಭಟ್ಟಂಗಿಗಳು ಯೋಚನೆ ಮಾಡಿ ಮಾತನಾಡಬೇಕು. ಕೇಂದ್ರ ಸರಕಾರವು ಮಾರ್ಚ್ ತಿಂಗಳ ಒಳಗೆ ದೇಶದಲ್ಲಿರುವ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿ ಮುಗಿಸುವ ಗುರಿ ನಿಗದಿಪಡಿಸಿಕೊಂಡಿತ್ತು. ಆದರೆ ಸಾಧ್ಯವಾಗಿದ್ದು ಮಾತ್ರ 1.4 ಕೋಟಿ ಮಾತ್ರ. ಯಾಕೆ ಗುರಿ ಸಾಧಿಸಲಾಗಲಿಲ್ಲ?

13) ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರದೇಶಗಳಿಗೆ ಕೇವಲ 3 ಡಾಲರ್‌ಗಳ ಬೆಲೆಗೆ ರಫ್ತು ಮಾಡಲಾಗಿದೆ. ಆದರೆ ನಮ್ಮ ದೇಶದ ಜನರಿಗೆ 1200 ರು.ಗಳವರೆಗೆ ಬೆಲೆ ನಿಗದಿಪಡಿಸಲಾಗಿದೆ. ಬಡ ದೇಶಗಳಿಗೆ ಹೋಗಲಿ ಇಂಗ್ಲೆಂಡಿಗೂ 5.5 ದಶ ಲಕ್ಷ ವ್ಯಾಕ್ಸಿನ್‌ ಗಳನ್ನು ನಿಯಮ ಬಾಹಿರವಾಗಿ ರಫ್ತು ಮಾಡಲಾಗಿದೆ.

14) ಬಿಜೆಪಿಯವರು ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ಜನರ ಮೇಲೆ ಆರೋಪ ಮಾಡುತ್ತಾರಲ್ಲ ಆ ಅವಧಿಯಲ್ಲಿ ಮಾರ್ಚ್ 7 ರಿಂದ ಏಪ್ರಿಲ್ 25 ರವರೆಗೆ ಪ್ರತಿ ದಿನ 25 ಲಕ್ಷ ಡೋಸ್ ನಿಂದ ಹಿಡಿದು 45 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ
ನೀಡಲಾಗಿದೆ. ಮೇ 1 ರಿಂದ 18 ವರ್ಷ ತುಂಬಿದವರಿಗೂ ಲಸಿಕೆ ನೀಡಲಾಗುವುದೆಂದು ಹೇಳಿ ಕಡೆಗೆ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಇನ್ನೂ ಸಮರ್ಪಕವಾಗಿ ಪ್ರಾರಂಭಿಸಿಲ್ಲ ಏಕೆ? ಖಾಸಗಿ ಆಸ್ಪತ್ರೆಗಳಿಗೆ ಹೋಗಿ 1000 ರು.ಗಳಿಗೂ ಅಧಿಕ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಲಿ ಎಂದು ತೀರ್ಮಾನಿಸಿ ಸರಕಾರ ಲಸಿಕೆ ನೀಡುತ್ತಿಲ್ಲವೆ? ಇದನ್ನೆಲ್ಲ ನೋಡಿದರೆ ಕೇಂದ್ರ ಸರಕಾರ
ಜನಪರವಾಗಿದೆ ಎನ್ನಿಸುತ್ತದೆಯೇ?

15)ಇದೇ ಪೂನಾವಾಲಾ ಅವರು ವ್ಯಾಕ್ಸಿನ್ ಉತ್ಪಾದಿಸಲು ಹಣ ಬಿಡುಗಡೆ, ಹಣ ಬಿಡುಗಡೆ ಎಂದು ಒತ್ತಾಯ ಮಾಡಿದ್ದು ನಿಜ ಅಲ್ಲವೆ? ಮಾತೆತ್ತಿದರೆ ಕನಿಷ್ಟ ಸರಕಾರ, ಗರಿಷ್ಟ ಆಡಳಿತ ಎಂದು ಹೇಳುವ ಕೇಂದ್ರ ಸರಕಾರದಿಂದ ಒಬ್ಬ ಕಾರ್ಪೊರೇಟ್ ಔಷಧಗಳ ಉದ್ಯಮಿ ಯನ್ನು ನಿಭಾಯಿಸಲಾಗಲಿಲ್ಲ. ಮೊದಲು ಹಣ ನೀಡಲು ನಿರಾಕರಿಸಿ ನಂತರ ಹಣ ಬಿಡುಗಡೆ ಮಾಡಿದ್ದು
ನಿಜವಲ್ಲವೆ?

17)ಈಗಾಗಲೇ ಅನೇಕ ದೇಶಗಳು ತಮ್ಮ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿವೆ. ಸಂಗ್ರಹಿಸಿಟ್ಟುಕೊಂಡಿವೆ. ವಿಶ್ವದ ಅನೇಕ ಕಂಪನಿಗಳು ವ್ಯಾಪಕ ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಸಾಧ್ಯವಾದ ಕಡೆಗಳಿಂದೆಲ್ಲ ಅವುಗಳನ್ನು ಪಡೆದು ಕೇಂದ್ರ ಸರಕಾರ ಉಚಿತವಾಗಿ ಜನರಿಗೆ ಆಂದೋಲನದ ಮಾದರಿಯಲ್ಲಿ ನೀಡಬೇಕು.

18)ಕರೋನಾ ನಿರೋಧಕ ಲಸಿಕೆಗಳನ್ನು ನೀಡುವುದಕ್ಕೆಂದೇ ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ 35000 ಕೋಟಿ ರು.ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರಲ್ಲಿ ಒಂದು ಭಾಗದಷ್ಟು ಹಣವನ್ನೂ ಖರ್ಚು ಮಾಡಿಲ್ಲ ಏಕೆ? ರಾಜ್ಯಗಳು ಒಂದು ಲಸಿಕೆಗೆ 300 ರು.ಗಳನ್ನು ನೀಡಿ ಯಾಕೆ ಕೊಂಡುಕೊಳ್ಳಬೇಕು? ಕರ್ನಾಟಕದಿಂದ ವರ್ಷಕ್ಕೆ 2.5 ಲಕ್ಷ ಕೋಟಿಗಳಷ್ಟು ತೆರಿಗೆಯನ್ನು ದೋಚಿಕೊಳ್ಳುವ ಕೇಂದ್ರ ಸರಕಾರ, ನಮಗೆ ವಾಪಸ್ಸು ನೀಡುತ್ತಿರುವುದು ಮಾತ್ರ ಕೇವಲ 50 ಸಾವಿರ ಕೋಟಿ ಮಾತ್ರ. ರಾಜ್ಯಗಳು ಭಿಕಾರಿಗಳಾಗುತ್ತಿವೆ.

ನಮ್ಮ ರಾಜ್ಯದ ಸಂಸದರು ಇದೆಲ್ಲದರ ಕುರಿತು ಕೇಂದ್ರ ಸರಕಾರಕ್ಕೆ ಜೋರು ಮಾಡಿ ಕೇಳಬೇಕಲ್ಲವೆ? ಅವರು ಕೇಳುತ್ತಿಲ್ಲ. ಆದ್ದರಿಂದ ರಾಜ್ಯ ಸರಕಾರವೇ ವಿವಿಧ ಮೂಲಗಳಿಂದ ಲಸಿಕೆ ಖರೀದಿಸಿ ಕೂಡಲೇ ಲಸಿಕೆ ನೀಡಿ, ರಾಜ್ಯದ ಜನರನ್ನು ರಕ್ಷಿಸ ಬೇಕಾಗಿದೆ ಎಂದು ಒತ್ತಾಯಿಸುತ್ತಿದ್ದೇವೆ.

19) ಲಸಿಕೆಗಳ 3ನೇ ಹಂತದ ಟ್ರಯಲ್‌ಗಳ ಕುರಿತು ಬಗ್ಗೆ ಹಲವು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ ಗಗನ್ ದೀಪ್ ಎಂಬ ಪ್ರಖ್ಯಾತ ತಜ್ಞರು ಹಲವು ಸ್ಪಷ್ಟನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಕೇಂದ್ರದ ಆಡಳಿತಗಾರರು ಉತ್ತರಿಸಬೇಕಾಗುತ್ತದೆ.
ಲಸಿಕೆಗಳ ಕುರಿತು ಅನುಮಾನಗಳಿದ್ದರೆ ಅವುಗಳನ್ನು ಬಗೆಹರಿಸಲು ಪ್ರಧಾನಿಗಳು, ಆರೋಗ್ಯ ಸಚಿವರು, ಸರಕಾರದ ವಿವಿಧ ಹಂತಗಳ ತಜ್ಞರು, ಮುಖಂಡರು ಮೊಟ್ಟ ಮೊದಲಿಗೆ ಲಸಿಕೆ ಹಾಕಿಸಿಕೊಂಡು ಏನೂ ಆಗಿಲ್ಲ ನೋಡಿ ಎಂದು ದೇಶದ ಜನರಿಗೆ ತೋರಿಸಿ ಹೇಳಬೇಕಾಗುತ್ತದೆ. ಇದನ್ನೇ ನಾಯಕತ್ವ ಎನ್ನುವುದು.

20) ದೇಶದಲ್ಲಿ ಜ.16ರಿಂದಲೇ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಆದರೆ ಪ್ರಧಾನಿಗಳು ಮತ್ತು ಗೃಹ ಸಚಿವರು ಲಸಿಕೆ ಹಾಕಿಸಿಕೊಂಡಿದ್ದು ಮಾರ್ಚ್ 1 ರಂದು. ಆರೋಗ್ಯ ಸಚಿವರು ಹಾಕಿಸಿಕೊಂಡಿದ್ದು ಮಾರ್ಚ್ 2ರಂದು. ಇವರೆಲ್ಲ ಯಾಕೆ ಹೀಗೆ ಮಾಡಿದರು? ಇವರಿಗೆಲ್ಲ 60 ವರ್ಷ ವಯಸ್ಸಾಗಿರಲಿಲ್ಲ ಎಂದು ಹೇಳಿ ಜಾರಿಕೊಳ್ಳಬಹುದು.

ಆದರೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ವಯಸ್ಸಿನ ನಿರ್ಬಂಧಗಳಿರಲಿಲ್ಲ. ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವವರೆಲ್ಲ ಮುಂಚೂಣಿ ಕಾರ್ಯಕರ್ತರೇ ಅಲ್ಲವೆ? ಪ್ರಧಾನಿ ಮುಂತಾದವರು ಲಸಿಕೆಗಳಿಂದ ಜನರ ಮೇಲೆ ಯಾವ ಪರಿಣಾಮವಾಗುತ್ತಿದೆ ಎಂದು ಕಾದು ನೋಡಿ ಹಾಕಿಸಿಕೊಂಡರು ಎಂದು ಬಹುಪಾಲುಜನ ಆಪ ಮಾಡುತ್ತಿದ್ದಾರೆ. ಜನರು ಮಾಡುತ್ತಿರುವ ಈ ಆರೋಪ ಸುಳ್ಳೆ?

21) ನನಗೆ ತಿಳಿದ ಮಟ್ಟಿಗೆ ಕಾಂಗ್ರೆಸ್‌ನ ಯಾವ ನಾಯಕರೂ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳಿಲ್ಲ. ತಜ್ಞರು ಎತ್ತಿರುವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ. ಲಸಿಕೆಗಳ ಟ್ರಯಲ್‌ಗಳನ್ನು ಪೂರ್ಣಗೊಳಿಸಿ ಎಂದು ಹೇಳಿದ್ದರೆ ಅದು ತಪ್ಪೆ? ನಾನಂತೂ ಅಧಿವೇಶನಗಳಲ್ಲಿ ಮತ್ತು ಸುದ್ದಿಗೋಷ್ಠಿಗಳಲ್ಲಿ ಎಲ್ಲ ಕಡೆಯೂ ಕರೋನಾ ನಿಯಂತ್ರಿಸಬೇಕಾದರೆ ಲಸಿಕೆಯೊಂದೇ ಪರಿಹಾರ ಎಂದು ಹೇಳುತ್ತಾ ಬಂದಿದ್ದೇನೆ.

22) ಅಮೆರಿಕದಂತಹ ದೇಶ ಕೂಡ ಒಂದೇ ಒಂದು ಡೋಸ್ ಲಸಿಕೆಯನ್ನು ರಫ್ತು ಮಾಡಲಿಲ್ಲ ಅಲ್ಲವೇ? 2020ರ ಜುಲೈ, ಆಗ ತಿಂಗಳುಗಳಲ್ಲೇ ಜಗತ್ತಿನ ವಿವಿಧ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿದ್ದರು.
ಉತ್ಪಾದಿಸಿ ಕೊಡುವಂತೆ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದರು. ಕೆನಡಾ, ಯೂರೋಪಿಯನ್ ಒಕ್ಕೂಟ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಎರಡರಿಂದ 5 ಪಟ್ಟು ಹೆಚ್ಚು ಲಸಿಕೆಗಳಿಗಾಗಿ ಆದೇಶ ನೀಡಿದ್ದವು. ಮುಂದುವರೆಯುತ್ತಿರುವ ದೇಶಗಳಾದ ಇಂಡೋನೇಶಿಯಾ, ಬ್ರೆಜಿಲ, ಆಫ್ರಿಕಾದ ಒಕ್ಕೂಟದ ದೇಶಗಳೂ ತನ್ನ ಜನಸಂಖ್ಯೆಯ ಶೇ.40ಕ್ಕೂ ಹೆಚ್ಚು ಲಸಿಕೆಗಳಿಗೆ ಆದೇಶ ನೀಡಿದ್ದವು.

23)ಬಿಜೆಪಿಯವರು ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ಜನರ ಮೇಲೆ ಆರೋಪ ಮಾಡುತ್ತಾರಲ್ಲ. ಆ ಅವಧಿಯಲ್ಲಿ ಮಾರ್ಚ್ 7ರಿಂದ ಏಪ್ರಿಲ್ 25ರವರೆಗೆ ಪ್ರತಿ ದಿನ 25 ಲಕ್ಷ ಡೋಸ್ ನಿಂದ ಹಿಡಿದು 45 ಲಕ್ಷ ಡೋಸ್ ಲಸಿಕೆಗಳನ್ನು ಜನರಿಗೆ
ನೀಡಲಾಗಿದೆ. ಆದರೆ ಜನ ಲಸಿಕೆ ಬೇಕು ಎಂದು ಏಪ್ರಿಲ್ 25 ರಿಂದ ಇತ್ತೀಚಿನ ದಿನದವರೆಗೂ ಕೇವಲ 10ರಿಂದ 13 ಲಕ್ಷಕ್ಕೆ ಇಳಿಸಿರುವುದು ಏಕೆ?

24) ಕರೋನಾ ಎರಡನೇ ಅಲೆಯ ಸಾವು-ನೋವುಗಳಿಗೆ, ಲಸಿಕೆ ಅಭಾವಕ್ಕೆ ಕೇಂದ್ರದ ಬಿಜೆಪಿ ನಾಯಕರು ಅವೈಜ್ಞಾನಿಕ, ದೂರದೃಷ್ಟಿ ಇಲ್ಲದ, ವಿeನಿಗಳ, ತಜ್ಞರ ಮಾತು ಕೇಳದ ಸರ್ವಾಧಿಕಾರಿ, ಹೆಸರಿಗೆ, ಕೀರ್ತಿಗೆ ಹಪ ಹಪಿಸುವಿಕೆಯೇ ಕಾರಣ. ಜನರ ಕಗ್ಗೊಲೆಗಳಿಗೂ ಇದೇ ಕಾರಣ.

ಧನ್ಯವಾದಗಳೊಂದಿಗೆ,
ತಮ್ಮ ವಿಶ್ವಾಸಿ
ಸಿದ್ದರಾಮಯ್ಯ