Sunday, 24th November 2024

ಪರಿಸರ ಹೋರಾಟಕ್ಕೆ ಜೀವನ ಮುಡಿಪಾಗಿಟ್ಟ ಹಿರಿಯ ಚೇತನ ಪರಿಸರ ರಕ್ಷಣೆಯ ಬಹುಗುಣ

ಶಶಿಧರ ಹಾಲಾಡಿ

ನಮ್ಮ ದೇಶದ ಪರಿಸರ ಹೋರಾಟಗಾರರಲ್ಲಿ ಸುಂದರಲಾಲ್ ಬಹುಗುಣ ಅವರದು ದೊಡ್ಡ ಹೆಸರು. ಪರಿಸರ ರಕ್ಷಣೆ ಗಾಗಿ, ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ಹಿಮಾಲಯದುದ್ದಕ್ಕೂ 5000 ಕಿಮೀ ಪಾದಯಾತ್ರೆ ನಡೆಸಿದ ಸಾಹಸಿ ಅವರು. ಅವರ ಅಭಿಯಾನದಲ್ಲಿ ಕರ್ನಾಟಕಕ್ಕೂ ಹಲವು ಬಾರಿ ಬಂದು, ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ಮರಗಳನ್ನು ತಬ್ಬಿ ಹಿಡಿದು ಸ್ಥಳೀಯರೇ ರಕ್ಷಿಸಲು ಪ್ರಯತ್ನ ನಡೆಸಿದ ‘ಚಿಪ್ಕೊ’ ಚಳವಳಿಯ ರೀತಿಯಲ್ಲೇ ಕರ್ನಾಟಕ ದಲ್ಲೂ ‘ಅಪ್ಪಿಕೋ’ ಚಳವಳಿ ಪಸರಿಸಲು ಬಹುಗುಣ ಅವರ ಕೊಡುಗೆಯೂ ಇದೆ. ಚಿಪ್ಕೊ ಹೋರಾಟದ ಸಮಯದಲ್ಲಿ ಬಹುಗುಣ ಅವರು ರೂಪಿಸಿದ ಈ ಘೋಷವಾಕ್ಯ ಬಹು ಅರ್ಥಪೂರ್ಣ. ‘ಇಕಾಲಜಿ ಈಸ್ ಪರ್ಮನೆಂಟ್ ಇಕಾನಮಿ’.

ನಮ್ಮ ದೇಶದ ಪರಿಸರವನ್ನು ರಕ್ಷಿಸುವುದೇ ಅವರ ಜೀವನದ ಧ್ಯೇಯವಾಗಿತ್ತು. ಹಳ್ಳಿ ಜನರ, ಸ್ಥಳೀಯರ ಸ್ವಾಸ್ಥ್ಯವೇ ಅವರ ಜೀವನದ ಗುರಿಯಾಗಿತ್ತು. ಪರಿಸರದ ಕುರಿತು ಅವರ ಬದ್ಧತೆಯನ್ನು, ಕಳಕಳಿಯನ್ನು ವರ್ಣಿಸಲು ಸರಿಯಾದ ಪದಗಳು ಸಿಗವು. ಪರಿಸರ ರಕ್ಷಿಸುವ ಹೋರಾಟ ಅವರಿಗೆ ಫ್ಯಾಶನ್ ಆಗಿರಲಿಲ್ಲ, ಪ್ಯಾಶನ್ ಆಗಿತ್ತು.

ಹಿಮಾಲಯದ ಘರ್ವಾಲ್ ಪ್ರದೇಶದಲ್ಲಿ ಮರಗಳನ್ನು ರಕ್ಷಿಸಲು ಸ್ಥಳೀಯ ಮಹಿಳೆಯರು ಕಂಟ್ರಾಕ್ಟರ್‌ಗಳ ವಿರುದ್ಧ ನಡೆಸಿದ ಹೋರಾಟವನ್ನೇ ಮಾದರಿ ಯನ್ನಾಗಿ ಸ್ವೀಕರಿಸಿ, “ಚಿಪ್ಕೊ” ಚಳವಳಿ ರೂಪುಗೊಳ್ಳಲು ಕಾರಣೀಕರ್ತ ರಾದರು. “ಚಿಪ್ಕೊ”’ ಚಳವಳಿಯ ಹಿಮಾಲಯದುದ್ದಕ್ಕೂ ಹಬ್ಬಿ, ಸ್ಥಳೀಯ ಮಹಿಳೆಯರೇ ಮರಗಳನ್ನು ರಕ್ಷಿಸುವ ಆಂದೋಲನವಾಗಿ ಬೆಳೆಯುವಲ್ಲಿ
ಸುಂದರಲಾಲ್ ಬಹುಗುಣ ಅವರ ಕೊಡುಗೆ ಹಿರಿದು.

ಹಿಮಾಲಯದ ಘರ್ವಾಲ್ ಪ್ರಾಂತ್ಯದಲ್ಲಿ 1927ರಲ್ಲಿ ಜನಿಸಿದ ಸುಂದರಲಾಲ್ ಬಹುಗುಣ ಅವರು ಗಾಂಧಿಯಿಂದ ಪ್ರೇರಣೆ ಪಡೆದ ಪರಿಸರ ಹೋರಾಟಗಾರರೆಂದೇ ಹೆಸರುವಾಸಿಯಾದವರು. ಪರಿಸರ ಉಳಿಸಲು ಯಾವ ಮಟ್ಟಕ್ಕಾದರೂ ಹೋಗಲು ಸಿದ್ಧರಿದ್ದ ಬಹುಗುಣ ಅವರು ಚಿಪ್ಕೊ’ಚಳವಳಿಯಿಂದ ಮಾಡಿದ ಕ್ರಾಂತಿ ವಿಶೇಷ ಸ್ವರೂಪದ್ದು. “ಚಿಪ್ಕೊ” ಎಂದರೆ ಹಿಂದಿಯಲ್ಲಿ ಮರಗಳನ್ನು ತಬ್ಬಿ ಹಿಡಿಯುವುದು ಎಂದರ್ಥ. ಈ ಅರ್ಥಪೂರ್ಣ ಪ್ರತಿಭಟನೆಯು ನಮ್ಮ ರಾಜ್ಯದಲ್ಲೂ “ಅಪ್ಪಿಕೋ” ಚಳವಳಿಗೆ ಸೂರ್ತಿ ನೀಡಿದ ವಿದ್ಯಮಾನವೇ ಅಭೂತ ಪೂರ್ವ.

ನಮ್ಮ ರಾಜ್ಯದಲ್ಲಿ 1980ರ ದಶಕದಲ್ಲಿ ನಡೆಯುತ್ತಿದ್ದ ಪರಿಸರ ಹೋರಾಟವನ್ನು ಗಮನಿಸಿ, ಅದಕ್ಕೆ ಬೆಂಬಲ ನೀಡಲು ಇಲ್ಲಿಗೂ ಬಂದು “ಅಪ್ಪಿಕೋ” ಚಳವಳಿಗೆ ಬೆಂಬಲ ನೀಡಿದರು. ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದ ಬಹುಗುಣ ಅವರು, ಹೆಚ್ಚಾಗಿ ಭೇಟಿ ನೀಡುತ್ತಿದ್ದುದು ಹಳ್ಳಿಗಳಿಗೆ. ಕಾಡಂಚಿನ ಊರುಗಳ ಜನರನ್ನು ಮಾತನಾಡಿಸಿ, ಅವರ ಜತೆ ನೆಲದ ಮೇಲೆ ಕುಳಿತು, ವಿಚಾರ ವಿನಿಮಯ ಮಾಡುತ್ತಿದ್ದರು. ಪರಿಸರ ರಕ್ಷಣೆ ನಡೆಯಬೇಕಾಗಿರುವುದು ಜನರಿಂದ, ಜನರ ಪಾಲ್ಗೊಳ್ಳುವಿಕೆಯಿಂದ ಎಂಬುದನ್ನು ಒತ್ತಿ ಹೇಳಿದ್ದಷ್ಟೇ ಅಲ್ಲ, ತಾವೂ ಮಾಡಿ ತೋರಿಸಿದರು.

ಗಾಂಧಿವಾದಿ
ಹಾಗೆ ನೋಡಿದರೆ, ಸುಂದರಲಾಲ್ ಬಹುಗುಣ ಅವರು ಹಿರಿಯ ಗಾಂಧಿವಾದಿ. ಗಾಂಧಿಜಿಯವರು ಪ್ರತಿಪಾದಿಸುತ್ತಿದ್ದ ಸರಳ ಜೀವನ, ಅಹಿಂಸಾತ್ಮಕ ಹೋರಾಟ ಮತ್ತು ಸತ್ಯಾಗ್ರಹಗಳನ್ನು ಜೀವಮಾನದುದ್ದಕ್ಕೂ ಆಚರಿಸಿದವರು. ವಿದ್ಯಾರ್ಥಿ ದೆಸೆಯಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿದವರು.

ಗಾಂಧೀಜಿಯವರ ಕರೆಗೆ ಓಗೊಟ್ಟು, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. 17ನೆಯ ವಯಸ್ಸಿನಲ್ಲಿ ಅಂದರೆ 1944ರಲ್ಲಿ ಮೊದಲ ಬಾರಿ ಬಂಧನಕ್ಕೆ ಒಳಗಾದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ತೆಹ್ರಿ ಪ್ರದೇಶ ಭಾರತದೊಂದಿಗೆ ಐಕ್ಯವಾ ಗಿರಲಿಲ್ಲ. ಮತ್ತೆ ಹೋರಾಟ. 1949ರಲ್ಲಿ ಆ ಪ್ರದೇಶವು ಯುನೈಟೆಡ್ ಪ್ರಾವಿನ್ಸ್ (ಹಿಂದಿನ ಉತ್ತರ ಪ್ರದೇಶ)ದೊಂದಿಗೆ ಐಕ್ಯವಾಗು ವಲ್ಲಿ ಬಹುಗುಣ ಅವರ ಪಾತ್ರವೂ ಇದೆ.

ಬಹುಗುಣ ಅವರು ಗಂಭೀರವಾಗಿ ಆಚರಿಸುತ್ತಿದ್ದ ಇನ್ನೊಂದು ಸಿದ್ಧಾಂತವೆಂದರೆ ದಲಿತೋದ್ಧಾರ. ದಲಿತರಿಗಾಗಿ ಶಾಲೆಗಳನ್ನು ತೆರೆದರು. 1950ರ ದಶಕದಲ್ಲಿ ಬುಡಾಕೇದಾರ್‌ನಲ್ಲಿ ದಲಿತರನ್ನು ದೇವಾಲಯಕ್ಕೆ ಪ್ರವೇಶ ಮಾಡಿಸಿದಾಗ, ಸ್ಥಳೀಯರಿಂದ ಪ್ರತಿರೋಧ ಎದುರಿಸಬೇಕಾಗಿ ಬಂತು. ತನ್ನ 29ನೆಯ ವಯಸ್ಸಿನಲ್ಲಿ ವಿಮಲಾ ಅವರನ್ನು ವಿವಾಹವಾದರು. ಮಡದಿ ಸಹ ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಪತಿಯ ಹೋರಾಟಕ್ಕೆ ಬೆಂಬಲ ನೀಡಿದ್ದರು. ಬಹುಗುಣ ದಂಪತಿಗಳು 1980ರ ದಶಕದಲ್ಲಿ ಕರ್ನಾಟಕಕ್ಕೆ ಬಂದು ಇಲ್ಲಿನ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಚಿಪ್ಕೊ ಚಳವಳಿಯ ರೀತಿಯಲ್ಲೇ ಕರ್ನಾಟಕದಲ್ಲೂ ಅಪ್ಪಿಕೋ ಚಳವಳಿ ಪಸರಿಸಲು ಬಹುಗುಣ ಅವರ ಕೊಡುಗೆಯೂ ಇದೆ. ಚಿಪ್ಕೊ ಹೋರಾಟದ ಸಮಯದಲ್ಲಿ ಬಹುಗುಣ ಅವರು ರೂಪಿಸಿದ ಘೋಷವಾಕ್ಯ ಬಹು ಅರ್ಥಪೂರ್ಣ. “ಇಕಾಲಜಿ ಈಸ್ ಪರ್ಮನೆಂಟ್ ಇಕಾನಮಿ”. ಪರಿಸರವೇ ಖಾಯಂ ಅರ್ಥವ್ಯವಸ್ಥೆ!

ಗಾಂಧಿ ತತ್ವವನ್ನು ಪಾಲಿಸುತ್ತ, ಭಾರತದ ಉದ್ದಗಲಕ್ಕೂ ಸಂಚರಿಸಿ, ಪರಿಸರದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿ ಹೇಳುತ್ತಿದ್ದ ಸುಂದರಲಾಲ್ ಬಹುಗುಣ ಅವರ ಜೀವನದ ಅತಿ ದೊಡ್ಡ ಆಘಾತವೆಂದರೆ ತೆಹರಿ ಅಣೆಕಟ್ಟು. ಅವರು ವಾಸಿವಿದ್ದ ಸ್ಥಳವನ್ನೇ ಮುಳುಗಿಸುವ ತೆಹ್ರಿ ಅಣೆಕಟ್ಟು ಗಂಗೆಯ ಹರಿವನ್ನೇ ಮೊಟಕುಗೊಳಿಸುವಂತಿತ್ತು. ಹಿಮಾಲಯದ ಆ ಸೂಕ್ಷ್ಮ ಪ್ರದೇಶದಲ್ಲಿ, ನದಿ ಕಣಿವೆಗಳನ್ನು ಮುಳುಗಿಸಿ ತಲೆ ಎತ್ತಲ ಹೊರಟಿದ್ದ ಆ ಅಣೆಕಟ್ಟಿನ ವಿರುದ್ಧ ಸುಂದರಲಾಲ್ ಬಹುಗುಣ
ಅವರು ಸಮರ ಸಾರಿದರು, ಹೋರಾಟ ನಡೆಸಿದರು.

ಮನೆಯನ್ನೇ ಮುಳುಗಿಸಿದ ಅಣೆಕಟ್ಟು
1995ರಲ್ಲಿ ಪಿ.ವಿ.ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ, ತೆಹ್ರಿ ಅಣೆಕಟ್ಟಿನ ನಿರ್ಮಾಣವನ್ನು ಪ್ರತಿಭಟಿಸಿ, ಬಹುಗುಣ ಅವರು 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಇವರ ಪ್ರತಿಭಟನೆಯನ್ನು ಗೌರವಿಸಿದ ಪ್ರಧಾನಿಯವರು, ಅಣೆಕಟ್ಟೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ಸಮಿತಿ ರಚಿಸಿ, ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವೊಲಿಸಿದರು.

ಆದರೆ, ಅಣೆಕಟ್ಟಿನ ಕಾಮಗಾರಿ ಮುಂದುವರಿಯಿತು. ಅಧಿಕಾರದಲ್ಲಿರುವ ಪಕ್ಷ ಯಾವುದೇ ಆಗಿರಲಿ, ಸರಕಾರಗಳು ಮಾತ್ರ ಕಾಮಗಾರಿ ಮುಂದುವರಿಯ ಬೇಕೆಂದೇ ವಾದಿಸುತ್ತಿದ್ದವು. ಬಹುಗುಣ ಅವರು ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಬಾರಿ ದೆಹಲಿಯ ರಾಜ್‌ಘಾಟ್‌ನಲ್ಲಿ 75 ದಿನಗಳ ಉಪವಾಸ ಸತ್ಯಾಗ್ರಹ. ಎಚ್.ಡಿ.ದೇವೇಗೌಡರು ಆಗ ಪ್ರಧಾನಿಯಾಗಿದ್ದರು.

ತೆಹರಿ ಯೋಜನೆಯನ್ನು ಪುನರ್‌ಪರಿಶೀಲಿಸಲಾಗುವುದು ಎಂದು ಬಹುಗುಣ ಅವರಿಗೆ ಮನವರಿಕೆ ಮಾಡಿಕೊಟ್ಟನಂತರ, ಉಪವಾಸ ಸತ್ಯಾಗ್ರಹ ಕೊನೆಗೊಂಡಿತು. ಆದರೆ ಸುದೀರ್ಘ ಕಾನೂನು ಹೋರಾಟ ನಡೆದು, ೨೦೦೧ರಲ್ಲಿ ತೆಹ್ರಿ ಅಣೆಕಟ್ಟಿನ ಕಾಮಗಾರಿ ಮುಂದುವರಿಯಿತು. 2004ರಲ್ಲಿ ನೀರು ಮೇಲೆ ಬಂದು, ಬಹುಗುಣ ಅವರು ವಾಸಿಸಿದ್ದ ಆಶ್ರಮ ಮುಳುಗಿ ಹೋಯಿತು. ಅವರನ್ನು ಕೋಟಿ ಎಂಬಲ್ಲಿಗೆ ಸ್ಥಳಾಂತರಿಸಲಾಯಿತು.

ನಂತರ ಅವರು ಉತ್ತರಾಖಂಡದ ರಾಜಧಾನಿ ಡೆಹರಾಡೂನ್‌ನಲ್ಲಿ ವಾಸಿಸತೊಡಗಿದರು. ಈ ಮೇ ತಿಂಗಳಲ್ಲಿ ಕೋವಿಡ್
ಸೋಂಕಿಗೆ ಗುರಿಯಾದರು. ಕ್ರಮೇಣ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ, 21.5.2021ರಂದು ನಿಧನರಾದಾಗ ಬಹುಗುಣ ಅವರಿಗೆ 94 ವರ್ಷ. ಈ ಭೂಮಿಗೆ ಆಮ್ಲಜನಕ ನೀಡುವ ಮರಗಳನ್ನು, ಪರಿಸರವನ್ನು ರಕ್ಷಿಸಬೇಕು ಎಂದು ಜೀವನಮಾನ ದುದ್ದಕ್ಕೂ ಹೋರಾಡುತ್ತಾ ಬಂದಿದ್ದ ಈ ಹಿರಿಯ ಜೀವ, ಆಮ್ಲಜನಕದ ಕೊರತೆಯಿಂದ ಮೃತಪಟ್ಟದ್ದು ಕೇವಲ ಕಾಕತಾಳೀಯ ವಲ್ಲ.

ಬಹುಗುಣ ಅವರ ನಿಧನದಿಂದ ಪರಿಸರ ಹೋರಾಟದ ಹಿರಿಯ ಒಂದು ಕೊಂಡಿ ಕಳಚಿದಂತಾಗಿದೆ. ಅವರ ವಾಸಸ್ಥಳವನ್ನೇ ಮುಳುಗಿಸಿದ ತೆಹ್ರಿ ಅಣೆಕಟ್ಟಿನ ನಿರ್ಮಾಣವನ್ನು ತಡೆಯಲು ಅವರಿಂದ ಸಾಧ್ಯವಾಗಲೇ ಇಲ್ಲ. ಈ ಒಂದು ದುರಂತವನ್ನು ಬಹುಗುಣ ಅವರ ವೈಫಲ್ಯ ಎನ್ನುವುದಕ್ಕಿಂತ, ನಮ್ಮ ದೇಶದ ಪರಿಸರ ರಕ್ಷಣಾ ವ್ಯವಸ್ಥೆಯ ಕುಸಿತ ಎಂದೇ ಹೇಳಬಹುದು. ಪರಿಸರವನ್ನು ರಕ್ಷಿಸದೇ ಇದ್ದರೆ ವಿಶ್ವಕ್ಕೆ ದುರಂತ ಕಾದಿದೆ ಎಂಬುದರ ಸೂಚನೆ ಎಂದು ಸಹ ಇದನ್ನು ಅರ್ಥೈಸಬಹುದು.