Sunday, 24th November 2024

ಮಾನವೀಯತೆಯ ಮಧುರಗಾನ

ಮಂಜುಳಾ ಡಿ.

ಇಂದಿಗೂ, ಎಂದಿಗೂ ನಮ್ಮ ಸಮಾಜದಲ್ಲಿ ಸದಾ ಗುನುಗುನಿಸತ್ತಾ ಇರಬೇಕಾದ ರಾಗವೆಂದರೆ, ಅದುವೇ ಮಾನವೀ ಯತೆಯ ರಾಗ.

ಇದು ಡಿಸೆಂಬರ್ 2012ರಲ್ಲಿ ನಡೆದ ಘಟನೆ. ಸ್ಪೇನ್‌ನ ಬುರ್ಲಾಡದ ತುಂಬಿದ ಕ್ರೀಡಾಂಗಣ. ಕೀನ್ಯಾದ ದೂರ ಓಟಗಾರ ಅಬೆಲ್ ಮಟಾಯಿ ಇನ್ನೇನು ಫಿನಿಷ್ ಲೈನ್ ತಲುಪಬೇಕು, ಕೊಂಚ ಅಲ್ಲಿನ ಮಾರ್ಕರ್ ಲೈನ್ ಗಳಿಂದ ಗೊಂದಲಗೊಡು ತಾನಾಗಲೇ ಓಟ
ಪೂರ್ಣಗೊಳಿಸಿದ್ದೇನೆ ಎಂದು ತಿಳಿದು ಓಟ ನಿಧಾನಗೊಳಿಸಿಕೊಳ್ಳುತ್ತಾನೆ. ಇಡೀ ಕ್ರೀಡಾಂಗಣಕ್ಕೆ ಆತ ಗೊಂದಲಗೊಂಡದ್ದು ಅರಿವಾಗುತ್ತದೆ. ಆತನಿಗಿಂತ ಸ್ವಲ್ಪ ಹಿಂದೆ ಓಡುತ್ತಿದ್ದ ಸ್ಪೇನ್ ನ ದೂರದ ಓಟಗಾರ ಇವಾನ್ ಫೆರ್ನಾಂಡೀಸ್ ಗೂ ಮಟಾಯ್ ಗೊಂದಲಗೊಂಡದ್ದು ಅರಿವಿಗೆ ಬರುತ್ತದೆ. ಇಂಥ ಸಮಯದಲ್ಲಿ ಯಾರಾದರೂ ಸರಿ ಅವರ ಗೊಂದಲ ಅಥವಾ ಅಸಾಹಯಕತೆ ಯನ್ನು ಇನ್ನಿಲ್ಲದಂತೆ ಉಪಯೋಗಿಸಿಕೊಂಡು ಬೀಗುತ್ತಾರೆ. ಆದರೆ ಇಲ್ಲಿ ಇವಾನ್ ನ ವರ್ತನೆ ಇಂದಿಗೂ ಎಂದೆಂದಿಗೂ ದಂತಕಥೆಯಾಗಿ ಉಳಿಯಿತು.

ಓಟ ನಿಧಾನಗೊಳಿಸಿದ ಮಟಾಯ್ ಗೆ ‘ಫೀನಿಷ್ ಲೈನ್ ಇನ್ನೂ ತುಸು ದೂರದಲ್ಲಿದೆ ಓಡು… ’ ಎಂದು ಹಿಂದಿನಿಂದ ಜೋರಾಗಿ
ಅರಚುತ್ತಾನೆ. ಆದರೆ ಮಟಾಯ್ ಗೆ ಸ್ಪೇನ್ ತಿಳಿಯುವುದಿಲ್ಲವಾದ್ದರಿಂದ ಅರ್ಥವಾಗುವುದಿಲ್ಲ. ಹಿಂದಿನಿದ ಓಡಿ ಬಂದ
ಇವಾನ್ ಆತನನ್ನು ಫೀನಿಷ್ ಲೈನ್ ದಾಟಿಸುತ್ತಾನೆ.

ಇಡೀ ಕ್ರೀಡಾಂಗಣ ದಿಗ್ಭ್ರಮೆಗೊಳ್ಳುತ್ತದೆ. ಅಸಲಿಗೆ ಗೆದ್ದದ್ದು ಯಾರು?
ಇದಾದ ನಂತರ ವರದಿಗಾರರು ಇವಾನ್‌ನ ಬೆನ್ನು ಬೀಳುತ್ತಾರೆ. ‘ಗೆಲುವು ನಿಮ್ಮ ಅತೀ ಸನಿಹದಲ್ಲಿತ್ತು. ಆದರೆ ನಿಮ್ಮ ಈ ವರ್ತನೆಗೆ ಕಾರಣವೇನು…?’ ಅತ್ಯಂತ ಸಹಜ ಪ್ರಶ್ನೆ ಕೇಳುತ್ತಾರೆ. ಇಲ್ಲಿ ಎಲ್ಲಾ ಮನುಷ್ಯರನ್ನು ಅತೀವ ಯೋಚನೆಗೆ ಹಚ್ಚುವುದು ಮತ್ತು ನಮ್ಮನ್ನು ನಾವು ಅವಲೋಕಿಸಿಕೊಳ್ಳುವಂತೆ ಮಾಡುವುದು ಇವಾನ್ ನ ಜವಾಬುಗಳು.

ಇವಾನ್ ಹೇಳುತ್ತಾನೆ ‘ನನಗಿರುವ ಕನಸು, ಒಂದಲ್ಲ ಒಂದು ದಿನ ನಮ್ಮ ಸಮಾಜ ಬದಲಾಗುತ್ತದೆ. ನಮ್ಮೊಂದಿಗೆ ನಮ್ಮ
ಸುತ್ತಲಿನವರನ್ನು ಕರೆದೊಯ್ಯುವ ಮುನ್ನೆಡೆಸುವಂಥ ವಾತಾವರಣ ಮೂಡುತ್ತದೆ ಎನ್ನುವುದು. ನಿಜಕ್ಕೂ ಆತ ನನಗಿಂತ ಮೊದಲಿದ್ದ ಮತ್ತು ಅರ್ಹನಾಗಿದ್ದ’.

ಇವಾನ್‌ನ ಇಷ್ಟು ಉತ್ತರಕ್ಕೆ ಸಮಾಧಾನಗೊಳ್ಳದ ರಿಪೋರ್ಟರ್ ಮತ್ತೆ ಪ್ರಶ್ನಿಸುತ್ತಾನೆ. ‘ಆತ ಪೂರ್ತಿ ಗೊಂದಲದಲ್ಲಿದ್ದ, ನಿಮ್ಮ ಹಾದಿ ಸುಗಮವಿತ್ತು. ಇಂಥ ಅವಕಾಶ ನೀವು ಹೇಗೆ ಬಿಟ್ಟದ್ದಾದರೂ ಯಾತಕ್ಕಾಗಿ?’
‘ಆತ ಫಿನಿಷ್ ಲೈನ್ ಗೆ ತುಸು ದೂರದಲ್ಲಿ ಗೊಂದಲಕ್ಕೀಡಾದ. ನಿಜಕ್ಕೂ ಆತನೇ ತಲುಪಬೇಕಾದವ ಮತ್ತು ಅರ್ಹ. ಆತನ
ಗೊಂದಲದ ಸ್ಥಿತಿಯನ್ನು ತಿಳಿದು ನಾನು ಮುಂದೆ ಸಾಗಿದ್ದರೆ ಅದು ಅಸಹಾಯಕತೆಯ ದುರುಪಯೋಗವಾಗುತ್ತಿತ್ತು. ಇಂಥ
ಅವನ ಸ್ಥಿತಿ ಉಪಯೋಗಿಸಿ ನಾನು ಗೆದ್ದರೆ ಆ ಗೆಲುವಿಗೆ ಯಾವ ಅರ್ಥವಿರುತ್ತಿತ್ತು. ಆ ಪದಕ ನಾನು ತೊಡುವಾಗ ಯಾವ ರೀತಿ
ಅನ್ನಿಸಬಹುದಿತ್ತು ಹೋಗಲಿ ಅದು ನನಗೆ ಗೌರವವಾ, ನನ್ನ ತಾಯಿ ನನ್ನ ವರ್ತನೆ ಬಗ್ಗೆ ಏನೆನ್ನುತ್ತಿದ್ದಳು, ಇಂಥ ಗೆಲುವು
ನನ್ನ ನೆಲಕ್ಕಾದರೂ ಹೇಗೆ ಗೌರವ ತಂದೀತು’.

ಪತ್ರಕರ್ತರು ಮುಂದೆ ಮಾತಾಡಲಿಲ್ಲ. ಈ ರೇಸ್ ಗೆದ್ದಿದ್ದರೆ ಆತ ಒಂದು ಹಂತ ದಾಟಿರುತ್ತಿದ್ದ. ಏಕೆಂದರೆ ಮಟಾಯ್
ಇಂಗ್ಲೆಂಡ್ ಒಲಂಪಿಕ್ಸ್ ನಲ್ಲಿ ಬ್ರೋನ್ಜ್ ಮೆಡಲಿಸ್ಟ್. ಇಷ್ಟೆಲ್ಲಾ ಅವಕಾಶಗಳಿದ್ದೂ ಆತ ಆಯ್ದಕೊಂಡ ಹಾದಿ ಮಾತ್ರ ಎಲ್ಲರೂ
ಒಮ್ಮೆ ಅವಲೋಕಿಸಿಕೊಳ್ಳುವಂತದ್ದು. ಆತ ರೇಸ್ ನಲ್ಲಿ ಗೆಲ್ಲಲಿಲ್ಲ ನಿಜ. ಆದರೆ ಮಾನವೀಯತೆಯ ಸೆಲೆಯಾಗಿ ಸದಾ ಕಾಲಕ್ಕೂ
ಜೀವಂತವಿರುವ ಕತೆಯಾಗಿದ್ದಾನೆ. ಅಲ್ಲಿನ ಶಾಲೆಗಳಲ್ಲೂ- ಯುವತೆಗೂ ಈತನ ನಡವಳಿಕೆ ಒಂದು ಮಾದರಿ.

ಇಂತಹದೇ ಚಕಿತಗೊಳಿಸುವ ಇನ್ನೊಂದು ಘಟನೆ. 2008 ರ ಬೀಜಿಂಗ್ ನ ಬೇಸಿಗೆಯ ಒಲಂಪಿಕ್ಸ್ ನಲ್ಲಿ 200 ಮೀಟರ್
ಓಟದಲ್ಲಿ ಅಮೇರಿಕಾದ ಖ್ಯಾತ ಅತ್ಲೀಟ್ ಶಾನ್ ಕ್ರಾಫರ್ಡ ನಾಲ್ಕನೇ ಸ್ಥಾನ ಪಡೆಯುತ್ತಾನೆ. ಆದರೆ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ ಮಾರ್ಟೀನಾ ಮತ್ತು ವ್ಯಾಲೇಸ್ ಇವರು ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಇವರನ್ನು ಬಿಟ್ಟು ಕ್ರಾಫರ್ಡ ನನ್ನು ಎರಡನೇ ಸ್ಥಾನ ನೀಡಲಾಗುತ್ತದೆ.

ಒಂದು ವಾರದ ನಂತರ ಮಾರ್ಟಿನಾಗೆ ಈ ಕೆಳಗಿನ ಹೃದಯವಂತಿಕೆ, ಮಾನವೀಯ ಸ್ಪರ್ಶದ, ಸ್ಮರಣೀಯ ಸಾಲುಗಳೊಂದಿಗೆ ಬಂದ ಪಾರ್ಸೆಲ್ ನಲ್ಲಿ ಸಿಲ್ವರ್ ಮೆಡಲ್ ತಲುಪಿತ್ತು. ‘ಕಳೆದ ಕ್ಷಣಗಳನ್ನು ಇದು ಮರಳಿಸುವುದಿಲ್ಲ. ಆದರೆ ನನಗೆ ನಿನಗೆ ಇದನ್ನು ಕೊಡಬೇಕೆಂದಿದೆ. ನಿಜಕ್ಕೂ ಇದು ನಿನ್ನದು…!’

ಇವೆರಡೂ ಘಟನೆಗಳನ್ನು ನೋಡಿದರೆ ಅರಿವಿಲ್ಲದೇ ಭಾರತದ ಯುದ್ಧ ನೀತಿ ಮನಪಟಲದಲ್ಲಿ ತೆರೆದು ನಿಲ್ಲುವುದು. ಮಿತ್ರ ವತ್ಸಲ, ಪಿತೃ ವತ್ಸಲ, ಭಕ್ತವತ್ಸಲ ಎಲ್ಲಾ ದೇಶಗಳಲ್ಲೂ ಎಲ್ಲಾಕಾಲಕ್ಕೂಕಾಣಬಹುದು. ಆದರೆ ಶತ್ರು ವತ್ಸಲ?
ಇಹ ತ್ಯಜಿಸುವ ಶತ್ರುವಿಗೂ ಮೋಕ್ಷ ಬಯಸುವ ಪರಿಭಾಷೆ, ಅದು ಭಾರತದ ಯುದ್ಧದ್ದ ಪರಿಭಾಷೆಯಲ್ಲಿ ಮಾತ್ರ. ಅಸಲಿಗೆ
ನಿಜವಾದ ಯುದ್ಧದಲ್ಲಿ ಇಬ್ಬರೂ ಗೆಲ್ಲುವವರೆ. ಒಬ್ಬ ಯುದ್ಧದಲ್ಲಿ ನಿಜನಾಗಿ ಗೆದ್ದರೆ ಇನ್ನೊಬ್ಬ ಇಹ ತ್ಯಜಿಸಿ ಪರದಲ್ಲಿ
ಪರಮೋಚ್ಛ ಸ್ಥಾನ ಕಟ್ಟಿಕೊಡುವ ಯುದ್ಧವಿಜ್ಞಾನ. ಭಾರತದ ಯುದ್ಧ ನಿಯಮದ ಪ್ರಕಾರ ಶಸ್ರ್ತ ಕೆಳಗಿಟ್ಟವನೊಂದಿಗೆ
ಯುದ್ಧ ನಿಷಿದ್ಧ. ಹಾಗೊಂದು ವೇಳೆ ಶಸ ಕೆಳಗೆ ಬಿದ್ದರೂ ಎದುರಾಳಿ ಶಸ್ತ್ರ ಮತ್ತೆ ಸನ್ನದ್ದನಾಗುವವರೆಗೂ ಕಾದು ಯುದ್ಧ
ಆರಂಭಿಸುವುದು ನಿಯಮ.

ಇವೆಲ್ಲಾ ಯಾವುದೋ ಶತಮಾನದ ಶಬ್ದಗಳಂತೆ ತೋಚುವುದು ಪ್ರಸ್ತುತ ದಿನಗಳನ್ನು ನೋಡಿದಾಗ. ಜಾತಿ ಧರ್ಮ, ವಿದ್ಯೆ, ವೈದ್ಯ ಇಷ್ಟೇಕೆ ಎಲ್ಲಾ ಮನುಷ್ಯ ಬಂಧಗಳೂ ವ್ಯವಹಾರವೇ. ನಮ್ಮ ಇರವಿನ ಅರಿವು ಇರುವುದೆ ಅನುಭವದಲ್ಲಿ, ಮತ್ತು ಅನುಭವ ಕ್ರಿಯಾಶೀಲವಾಗುವುದೇ ಮಾನವೀಯ ಸಂದರ್ಭದಲ್ಲಿ. ಭಾವನೆ, ಈರ್ಷ್ಯೆ, ಸೆಳೆತ, ವಿಚಾರ, ಸ್ಪಂದನಗಳಲ್ಲೇ ಮನುಷ್ಯನ ಜೀವಂತಿಕೆ ಇದ್ದು, ಈ ಸ್ಪಂದನಗಳು ಅನ್ಯ ಜೀವಿಗಳ ಸಂಧರ್ಭದಲ್ಲಿ ಮಾತ್ರ ಸಾಧ್ಯವಾಗುವಂತದ್ದು ಎನ್ನುವ ಅತೀ ಸರಳ ಸತ್ಯ.

ವ್ಯವಹಾರಿಕ ಲೋಕಜ್ಞಾನದ ಬಿಸಿ ಉಸಿರಿನಲ್ಲಿ ಬೇಯುತ್ತಿರುವ ಮನುಷ್ಯ ಅದೆಷ್ಟು ಸಹಜ ಸಂತಸಗಳನ್ನು ವ್ಯವಹಾರಿಕವಾಗಿ ನೋಡುವ ರೂಢಿಗೆ ಬೆರೆತಿದ್ದಾನೆ. ಒಬ್ಬ ಮನುಷ್ಯ ನಮ್ಮೊಡನೆ ಚನ್ನಾಗಿ ಮಾತಾಡಿದರೆ ಆ ಸಹಯೋಗವನ್ನು ಮತ್ತೆ
ಮರಳಿಸಬೇಕಾಗುತ್ತದೆ ಎಂಬ ಮಾನಸಿಕ ಒತ್ತಡದಲ್ಲೇ ಹಿಂದೆಗೆದು ಬಿಡುತ್ತೇವೆ.

ಮನುಷ್ಯ ಮನುಷ್ಯರನ್ನೇ ತಮ್ಮ ಸ್ವಾರ್ಥಗಳಿಗಾಗಿ ಹೊಡೆದು ಉರುಳಿಸುವ, ಸ್ನೇಹಿತರ ರೂಪದಲ್ಲಿರುವವರು ಬೆನ್ನಿಗೇ ಚೂರಿ
ಇರಿಯುವ ಈ ಕಾಲಘಟ್ಟದಲ್ಲಿ ‘ಮಾನವೀಯತೆ ಮೆರೆದ ಪ್ರಕರಣಗಳು’ ಬೋಲ್ಡ್ ಲೈನ್ ನ್ಯೂಸ್ ಗಳಂತೆ ಅಪರೂಪದ ಸಂಗತಿ ಗಳಂತೆ ಪ್ರಕಟಗೊಳ್ಳುತ್ತಿವೆ. ವೈದ್ಯನೊಬ್ಬ ಪೇಷಂಟ್ ನ ಅಗತ್ಯ ಚಿಕಿತ್ಸೆಗಾಗಿ ತಾನೇ ಹೊತ್ತೊಯ್ದದ್ದು , ಬಸ್ಸಿನಲ್ಲಿ ಬಿಟ್ಟು ಹೋದ ಬ್ಯಾಗ್ ಹಿಂದಿರುಗಿಸಿದ್ದು, ಬಹು ಬೆಲೆಯ ವಡವೆ ವಸ್ತು ತನ್ನದಲ್ಲವೆಂದು ಪ್ರಾಮಾಣಿಕತೆಯಿಂದ ಹಿಂದಿರುಗಿಸಿದ್ದು ಹೀಗೆ ಇಂಥ ಅತೀ ಚಿಕ್ಕ ಸಾಮಾಜಿಕ ಜವಾಬ್ದಾರಿಗಳೂ ಕೂಡ ಇಂದು ದೊಡ್ಡ ಮಟ್ಟದಲ್ಲಿ ‘ಮಾನವೀಯತೆ ಮೆರೆದ ಪ್ರಕರಣ ಗಳಾಗುತ್ತವೆ’ ಎಂದರೆ ನಾವೆಷ್ಟು ನಿರ್ಗುಣ ನಿರಾಕಾರಾಗುತ್ತಿದ್ದೇವೊ, ಮಾನವೀಯತೆಯ ಮಟ್ಟ ಯಾವ ಪಾತಾಳ ಹತ್ತಿದೆಯೋ ಕಲ್ಪಿಸ ಬಹುದು.

ಎಲ್ಲಾ ಬಗೆಯ ಸಂಬಂಧಗಳೂ ಮುರಿದು ಬೀಳುತ್ತಿರುವ, ಅಭದ್ರತೆಯೇ ಚಿರಂತನ ಸ್ಥಾಯಿ ಭಾವವಾಗುತ್ತಿರುವ ಈ ದಿನಗಳಲ್ಲಿ ಮಾನವೀಯತೆಯ ಸಾಮೂಹಿಕ ರಾಗವೊಂದು ಎಲ್ಲರಲ್ಲೂ ಪ್ರವಹಿಸಬೇಕಾದದ್ದು ಅನಿವಾರ್ಯವಾಗಿದೆ.