Sunday, 24th November 2024

ನನ್ನ ಕ್ಯಾಮೆರಾದಲ್ಲಿ ಶ್ವೇತವಸ್ತ್ರಧಾರಿ

ವಿನಾಯಕ ಭಟ್‌ ನರೂರು

2008 ರ ಸೆಪ್ಟೆಂಬರ್ ತಿಂಗಳ ಆರನೇ ತಾರೀಕು. ಡಿಜಿಟಲ್ ಚಿತ್ರದಲ್ಲಿ ದಾಖಲಾದ ವಿವರ ಅದು. ಮಾಮೂಲಿನಂತೆ ಮಗಳೊಡನೆ ಗುಡವಿ ಪಕ್ಷಿಧಾಮಕ್ಕೆ ಭೇಟಿ ಕೊಟ್ಟು ಆಗಷ್ಟೇ ಮನೆ ಸೇರಿದ್ದೆ. ಕುಟುಂಬದ ಆತ್ಮೀಯ ಪಾಂಡುರಂಗಣ್ಣನ (ಪಾಂಡುರಂಗ ಹೆಗಡೆ) ಅಪರೂಪದ ಕರೆ. ‘ಬಹುಗುಣ ಅವರನ್ನು ಗುಡವಿಗೆ ಕರ್ಕಂಡು ಹೋಗ್ತಾ ಇದ್ದಿ.

ಫೋಟೋ ತೆಗಿಯದಾದ್ರೆ ಬಾ’. ಪಾಂಡುರಂಗ ಹೆಗಡೆ ದೆಹಲಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವಾಗ ಬಹುಗುಣರ ಚಿಪ್ಕೊ ಚಳುವಳಿಯ ಪ್ರಭಾವಕ್ಕೆ ಸಿಲುಕಿ ಪರಿಸರ ಚಟುವಟಿಕೆಗೆ ಇಳಿದವರು. ನನಗೆ ಇಷ್ಟು ಸೂಚನೆ ಸಾಕಿತ್ತು. ಇಂಥ ಸುವರ್ಣಾವಕಾಶ ತಪ್ಪಿಸಿಕೊಳ್ಳುವುದುಂಟೆ? ಸಣ್ಣಗೆ ಮಳೆ ಬರುತ್ತಿತ್ತು. ಜರ್ಕಿನ್ ತೊಟ್ಟು ಮತ್ತೆ ಹೋಗಿ ಮುಖ್ಯ ರಸ್ತೆಯಲ್ಲಿ ಅವರ ಕಾರಲ್ಲಿ ಸೇರಿ ಕೊಂಡೆ.

ಆಗಲೇ ನೋಡಿದ್ದು – ಹಿಂದಿನ ಸೀಟಿನಲ್ಲಿ ವಿಮಲಾ ಮತ್ತು ಸುಂದರಲಾಲ ಬಹುಗುಣ ದಂಪತಿ ಆಸೀನರಾಗಿದ್ದರು. ಕೈಜೋಡಿಸಿ ನಮಸ್ಕರಿಸಿದೆ. ಅವರೂ ಮುಗುಳ್ನಗೆ ಬೀರಿ ಪ್ರತಿಕ್ರಿಯಿಸಿದರು. ನೀಳ ಕೃಶಕಾಯ, ಶ್ವೇತವಸ್ತ್ರಧಾರಿ, ಬಿಳಿ ಗಡ್ಡದ ಅಜ್ಜ ಥೇಟ್ ಪುರಾಣ ಕಥೆಗಳಲ್ಲಿ ಬರುವ ಋಷಿಯಂತಿದ್ದರು. ಹಿಮಾಲಯದ ಕಣಿವೆ, ತಪ್ಪಲಿನಲ್ಲಿ ಅಭಿವೃದ್ಧಿಯ ನೆಪದಲ್ಲಿ ಯದ್ವಾತದ್ವಾ
ಪರಿಸರ ನಾಶಕ್ಕೆ ತೊಡಗಿದಾಗ ಗ್ರಾಮೀಣ ಜನರನ್ನು ಸಂಘಟಿಸಿ ಬಿಸಿ ಮುಟ್ಟಿಸಿ ದವರು ಇವರೇನಾ ಎಂಬ ಅಚ್ಚರಿ ಮನದಲ್ಲಿ. ಭಾರತದ ಪರಿಸರ ಚರಿತ್ರೆಯಲ್ಲಿ ಸುಂದರಲಾಲರು ಮೇರುವ್ಯಕ್ತಿ.

ಅವರೊಡನೆ ಇದ್ದರು, ನಮ್ಮಲ್ಲಿಯ ಇಳಿವಯಸ್ಸಿನ ಮಹಿಳೆಯಂತೆ ಕಾಣುವ ವಿಮಲಮ್ಮ. ಇಬ್ಬರದೂ ತೀರಾ ಸರಳ ವ್ಯಕ್ತಿತ್ವ, ಮಂದಸ್ಮಿತ ಮೆಲುನುಡಿ. ಅಪರಿಚಿತ ಕಿರಿಯನೊಡನೆ ಅವರ ಆಪ್ತ ನಡವಳಿಕೆ ನನ್ನ ಹಿಂಜರಿಕೆಯನ್ನು ದೂರಮಾಡಿತು.
ಗುಡವಿ ಪಕ್ಷಿಧಾಮ ಬಹುತೇಕ ನಿರ್ಜನವಾಗಿತ್ತು. ಅವರೊಡನೆ ಹೆಜ್ಜೆ ಹಾಕುವಾಗ ವಲಸೆ ಹಕ್ಕಿ ಗಳು ಮತ್ತು ಮರಿ ಮಾಡುವ ಋತುವಿನ ಬಗ್ಗೆ ನನಗೆ ಗೊತ್ತಿರುವ ಮಾಹಿತಿ ಹಂಚಿಕೊಂಡೆ. ಪಶ್ಚಿಮ ಘಟ್ಟದ ಕಾಡು ಹಣ್ಣುಗಳ ಕುರಿತ ನಮ್ಮ ಕೈಪಿಡಿಯನ್ನು ಅವರ ಕೈಗಿತ್ತೆ. ಪುಸ್ತಕ ಕನ್ನಡದಲ್ಲಿದ್ದರೂ ಆಸಕ್ತಿಯಿಂದ ತಿರುವಿಹಾಕಿದರು.

ವಿಮಲಮ್ಮ ಕೆಲವು ಹಣ್ಣುಗಳ ಆಹಾರ ಹಾಗೂ ಔಷಧಿಯ ಉಪಯೋಗದ ಕುರಿತು ಕುತೂಹಲ ತೋರಿದರು. ಬಳಲಿಕೆಯ ಕಾರಣ ನಮ್ಮ ಮನೆಗೆ ಅವರನ್ನು ಕರೆತರುವ ಯತ್ನ ಫಲಿಸಲಿಲ್ಲ. ತಿರುಗಿ ಕಾರು ಏರುವ ಮುನ್ನ ವಿನಂತಿಸಿ ಅವರ ಒಂದು ಭಾವಚಿತ್ರ ತೆಗೆದುಕೊಂಡೆ. ಇದು ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲೊಂದು. ಆಕಸ್ಮಿಕವಾಗಿ ಬಹುಗುಣ ದಂಪತಿಯ ಏಕೈಕ ಭೇಟಿಯ ಅವಕಾಶ ಒದಗಿಸಿದ ಪಾಂಡುರಂಗಣ್ಣನಿಗೆ ಧನ್ಯವಾದ ಹೇಳಿ ವಾಪಸಾದೆ.

ಕೋವಿಡ್ ಪಿಡುಗಿನ ಕಾರಣಕ್ಕೆ ದೇಶದ ಪರಿಸರದ ಸ್ಥಿತಿಗತಿ ಮತ್ತೆ ಚರ್ಚೆಯಲ್ಲಿದೆ. ಅತ್ತ ಪರಿಸರ ಸಂರಕ್ಷಣೆಗೆ ಜೀವ ಸವೆಸಿದ ಹಿರಿಯಜ್ಜ ಕಣ್ಮರೆಯಾಗಿದ್ದಾರೆ. ಅಗಲಿದ ಸಂತನಿಗೆ ಗೌರವಪೂರ್ಣ ಅಂತಿಮ ಪ್ರಣಾಮಗಳು.

ಹಿಮಾಲಯದಲ್ಲಿ ಪಾದಯಾತ್ರೆ
ಜನಸಾಮಾನ್ಯರಲ್ಲಿ ಪರಿಸರದಕುರಿತಾದ ಅರಿವು ಮೂಡಿಸಲು, ಹಿಮಾಲಯದ ಕಾಶ್ಮೀರದಿಂದ ನಾಗಾಲ್ಯಾಂಡ್‌ನಕೊಹಿಮಾದ ತನಕ ಸುಮಾರು 5000 ಕಿಮೀಗಳ ಪಾದಯಾತ್ರೆಯನ್ನು ಬಹುಗುಣ ಅವರುಕೈಗೊಂಡದ್ದು 1980ರಲ್ಲಿ. ಅದೇ ವರ್ಷ ನೈರೋಬಿ ಯಲ್ಲಿ ನಡೆದ ವಿಶ್ವಸಂಸ್ಥೆ ಪ್ರಾಯೋಜಿತ ಶಕ್ತಿ ಸಮ್ಮೇಳನದಲ್ಲಿ ಭಾಗವಹಿಸಿ, ಭಾರತದ ಪರಿಸರದ ಸಮಸ್ಯೆಗಳನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆ ಸಮ್ಮೇಳನದಲ್ಲಿ ಮಾಧ್ಯಮಗಳ ಗಮನ ಸೆಳೆಯಲೆಂದೇ, ಬೆನ್ನಿಗೆ ಸೌದೆಯ
ಹೊರೆಯೊಂದನ್ನುಕಟ್ಟಿಕೊಂಡು, ಸಮ್ಮೇಳನದಲ್ಲಿ ಅಡ್ಡಾಡಿದರು. ನಮ್ಮ ದೇಶದ ಮಹಿಳೆಯರು ಅಡುಗೆ ಮಾಡುವ ಸೌದೆಗಾಗಿ ಪಡುವ ಪಾಡನ್ನು ಬಿಂಬಿಸುವ ಆ ದೃಶ್ಯ ಎಲ್ಲರ ಗಮನ ಸೆಳೆಯಿತು.