Friday, 18th October 2024

ಯೋಗಗುರು ಬಾಬಾ ರಾಮ್‌ದೇವ್‌ಗೆ ಲೀಗಲ್ ನೋಟಿಸ್

ನವದೆಹಲಿ: ಅಲೋಪತಿ ವೈದ್ಯಕೀಯ ಪದ್ದತಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಆರೋಪದ ಹಿನ್ನೆಲೆಯಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ಗೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ.

ರಾಮ್‌ದೇವ್ ಮಾತನಾಡಿದ ವಿಡಿಯೋದಲ್ಲಿ ಅಲೋಪತಿ ಮತ್ತು ವೈಜ್ಞಾನಿಕ ವೈದ್ಯಕೀಯ ಪದ್ದತಿಗೆ ಅವಮಾನಕರ ಮಾತು ಗಳನ್ನು ಆಡಿದ್ದಾರೆ ಎಂದು ಲೀಗಲ್ ನೋಟಿಸ್ ಕಳುಹಿಸಲಾಗಿದೆ. ವೈರಲ್ ಆದ ವಿಡಿಯೋದಲ್ಲಿ ಬಾಬಾ ರಾಮ್‌ದೇವ್ ಅಲೋಪತಿ ಚಿಕಿತ್ಸೆಯನ್ನು ‘ಮೂರ್ಖತನದ ವಿಜ್ಞಾನ’ ಎಂದು ಜರಿದಿದ್ದರು. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದಿಸಿದ ರೆಮ್‌ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿ ಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂಬ ಮಾತುಗಳು ಈ ವಿಡಿಯೋದಲ್ಲಿದೆ.

ಐಎಂಎ ಜೊತೆಗೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವೈದ್ಯರ ಸಂಘಗಳು, ಸಫ್ದರ್ಜಂಗ್ ಆಸ್ಪತ್ರೆಯ ಆರ್‌ಡಿಎ ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಲ್ಲಿ ರಾಮ್‌ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿನಂತಿಸಿವೆ.

ಆದರೆ ಆರೋಪಗಳನ್ನು ಪತಂಜಲಿ ಯೋಗಪೀಠ ಟ್ರಸ್ಟ್ ನಿರಾಕರಿಸಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ ಎಂದು ಹೇಳಿಕೊಂಡಿದೆ.